
ಚಿತ್ರರಂಗದ ಬೆಳ್ಳಿಪರದೆಯ ಮೇಲೆ ನಗುತ್ತಾ ಕಾಣಿಸಿಕೊಳ್ಳುವ ತಾರೆಯರ ಜೀವನದ ಹಿಂದೆ ಕರಾಳ ಕಥೆಗಳಿರುತ್ತವೆ ಎಂಬುದಕ್ಕೆ ಮಲಯಾಳಂ ಮತ್ತು ತಮಿಳು ಚಿತ್ರರಂಗದ ಜನಪ್ರಿಯ ನಟಿ ಮೋನಿಷಾ ಅವರ ಜೀವನವೇ ಸಾಕ್ಷಿ. ಮಲಯಾಳಂನ ಸೂಪರ್ ಹಿಟ್ ಸೀರಿಯಲ್ 'ಮಂಜುರುಕುಂ ಕಾಲಂ' ಮೂಲಕ ಮನೆಮಾತಾಗಿದ್ದ ಮೋನಿಷಾ, ಇತ್ತೀಚೆಗೆ ತಮಿಳಿನ 'ಸೆಕೆಂಡ್ ಲವ್' ರಿಯಾಲಿಟಿ ಶೋನಲ್ಲಿ ತಮ್ಮ ವೈವಾಹಿಕ ಜೀವನದ ಭೀಕರ ಸತ್ಯಗಳನ್ನು ಬಿಚ್ಚಿಟ್ಟು ಕಣ್ಣೀರು ಹಾಕಿದ್ದಾರೆ.
ರಿಯಾಲಿಟಿ ಶೋನಲ್ಲಿ ಮಾತನಾಡುತ್ತಾ ಮೋನಿಷಾ ತನ್ನ ಮಾಜಿ ಪತಿಯ ಕ್ರೂರ ವರ್ತನೆಯ ಬಗ್ಗೆ ಬಾಯಿಬಿಟ್ಟಿದ್ದಾರೆ. 'ನಾನು ಬಟ್ಟೆ ಬದಲಾಯಿಸುವಾಗ ಮತ್ತು ನಾವು ಹಾಸಿಗೆ ಹಂಚಿಕೊಳ್ಳುವ ಖಾಸಗಿ ಕ್ಷಣಗಳ ಫೋಟೋಗಳನ್ನು ಆತ ರಹಸ್ಯವಾಗಿ ತೆಗೆದಿದ್ದ. ಅಷ್ಟಕ್ಕೇ ನಿಲ್ಲದೆ, ಆ ಫೋಟೋಗಳನ್ನು ತನ್ನ ಸ್ನೇಹಿತನಿಗೆ ಕಳುಹಿಸಿಕೊಟ್ಟಿದ್ದ. ಈ ವಿಷಯ ನನಗೆ ತಿಳಿದಿರಲೇ ಇಲ್ಲ. ಒಂದು ದಿನ ಆತನ ಸ್ನೇಹಿತನೇ ನನಗೆ ಫೋನ್ ಮಾಡಿ, 'ನಾವು ನಿನ್ನ ಫೋಟೋಗಳನ್ನೆಲ್ಲ ನೋಡಿದ್ದೇವೆ' ಎಂದು ಹೇಳಿದಾಗ ನಾನು ನಿಂತಿದ್ದ ಭೂಮಿ ಕುಸಿದಂತಾಯಿತು' ಎಂದು ಮೋನಿಷಾ ಆಘಾತಕಾರಿ ವಿಷಯ ಹಂಚಿಕೊಂಡಿದ್ದಾರೆ. ಈ ಘಟನೆಯ ನಂತರ ತನಗೆ ಯಾರನ್ನೂ ನಂಬಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಮೋನಿಷಾ ಅವರ ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಅವರ ತಂದೆ ನಿಧನರಾದರು. ತಂದೆಯ ಸಾವಿನ ನಂತರ ತನ್ನನ್ನು ಕೇಳುವವರು ಯಾರೂ ಇಲ್ಲ ಎಂದು ತಿಳಿದ ಮಾಜಿ ಪತಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದನಂತೆ. 'ಮನೆಯಲ್ಲಿ ನಡೆಯುವ ಕಷ್ಟಗಳನ್ನು ಅಮ್ಮನಿಗೆ ಹೇಳಿ ಅವರಿಗೆ ಬೇಜಾರು ಮಾಡಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆತ ನನ್ನೊಂದಿಗೆ ಜಗಳವಾಡಲು ಯಾವಾಗಲೂ ಸಣ್ಣಪುಟ್ಟ ಕಾರಣಗಳನ್ನು ಹುಡುಕುತ್ತಿದ್ದ' ಎಂದು ಅವರು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಡಿವೋರ್ಸ್ ಪಡೆಯಲು ಮೋನಿಷಾ ಬರೋಬ್ಬರಿ 8 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದಾರೆ. 'ನನಗೆ ಮದುವೆಯ ಸಮಯದಲ್ಲಿ 100 ಪವನ್ ಚಿನ್ನ ಹಾಕಿದ್ದರು. ಆ ಚಿನ್ನವನ್ನು ತನಗೆ ನೀಡಿದರೆ ಮಾತ್ರ ವಿಚ್ಛೇದನ ನೀಡುವುದಾಗಿ ಆತ ಪಟ್ಟು ಹಿಡಿದಿದ್ದ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಕೊನೆಗೆ ನಾನೇ ಹಣ ಖರ್ಚು ಮಾಡಿ ಆತನಿಂದ ಮುಕ್ತಿ ಪಡೆದೆ. ಕೋರ್ಟ್‌ನಲ್ಲಿ ಜಡ್ಜ್ ಮುಂದೆ ನಾನು ಡಿವೋರ್ಸ್ ಪೇಪರ್‌ಗೆ ಸಹಿ ಮಾಡುವಾಗ ತುಂಬಾ ಖುಷಿಯಾಗಿದ್ದೆ. ಅದನ್ನು ನೋಡಿ ಜಡ್ಜ್ ಕೂಡ 'ಯಾಕೆ ಇಷ್ಟು ಸಂತೋಷವಾಗಿದ್ದೀಯಾ?' ಎಂದು ಕೇಳಿದ್ದರು. ಅಷ್ಟು ಒತ್ತಡದ ಜೀವನದಿಂದ ಹೊರಬಂದಾಗ ನನಗೆ ಹೇಳಲಾಗದಷ್ಟು ನಿರಾಳತೆ ಸಿಕ್ಕಿತ್ತು' ಎಂದು ಮೋನಿಷಾ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೋನಿಷಾ ಅವರ ಧೈರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಬ್ಬ ಪತಿ ತನ್ನ ಪತ್ನಿಯ ಖಾಸಗಿ ಫೋಟೋಗಳನ್ನು ಸ್ನೇಹಿತರಿಗೆ ಕಳುಹಿಸುವಷ್ಟು ನೀಚ ಮಟ್ಟಕ್ಕೆ ಇಳಿಯಬಾರದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.