
ಬೆಂಗಳೂರು (ಡಿ.20): ಫುಟ್‌ಬಾಲ್ ದಿಗ್ಗಜ ಹಾಗೂ ಹಾಲಿ ಫಿಫಾ ವಿಶ್ವಕಪ್ ವಿಜೇತ ತಂಡ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಭಾರತಕ್ಕೆ ಆಗಮಿಸಿ ಹಲವು ನಗರಗಳಲ್ಲಿ ಫುಟ್‌ಬಾಲ್ ಪಂದ್ಯ ಆಡಿದ್ದರು. ಈ ಹಂತದಲ್ಲಿ ಅವರು ಮುಂಬೈಗೂ ಭೇಟಿ ನೀಡಿದ್ದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದ ವೇಳೆ, ಮೆಸ್ಸಿ ಸ್ವಾಗತ ಮಾಡುವಾಗ ಗಣಪತಿ ಬಪ್ಪಾ ಮೋರಿಯಾ ಎಂದು ನಿರೂಪಕ ಎರಡು ಬಾರಿ ಘೋಷಣೆ ಕೂಗಿದ್ದರು. ಈಗ ಇದೇ ವಿಚಾರದ ಬಗ್ಗೆ ನಟ ಕಿಶೋರ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪ ಮಾಡುವ ಕೆಲಸ ಬೇಕಿತ್ತೇ ಎಂದು ಕೇಳಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಇಡೀ ಸರ್ಕಾರದ ಪ್ರಮುಖ ಮಂತ್ರಿಗಳು ಹಾಗೂ ಅಧಿಕಾರಿಗಳು ಇದ್ದರು. ಈ ವೇಳೆ ಮೈದಾನದಲ್ಲಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇದ್ದಿರಲಿಲ್ಲ. ಮೆಸ್ಸಿ ಮೆಸ್ಸಿ ಎಂದು ಜನ ಕೂಗುತ್ತಿದ್ದರು. ಈ ವೇಳೆ ಜನರ ಗಮನಸೆಳೆಯಲು ಮುಂದಾಗಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಾವೂ ಸಹ, ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆ ಕೂಗಿ ಜನರನ್ನು ಸೆಳೆಯಲು ಮುಂದಾದರು. ಈ ಬಗ್ಗೆ ಕಿಶೋರ್ ಟೀಕೆ ಮಾಡಿದ್ದಾರೆ.
'ದೇವರ ಹೆಸರಲ್ಲಿ ಮೂರ್ಖರಾಗಿಸುವ, ಮೂರ್ಖರಾಗುವ ಮತ್ತು ಬಾಯಿ ಮುಚ್ಚಿಸುವ, ಬಾಯಿ ಮುಚ್ಚಿಕೊಳ್ಳುವ ರಾಜಕೀಯದ ಸೂಪರ್ ನಿದರ್ಶನ. ಒಬ್ಬ ಮುಖ್ಯಮಂತ್ರಿಯ ವಿರುದ್ಧವೇ ತಿರುಗಿ ಬೀಳುವ ಧೈರ್ಯ ಮಾಡಿದ ಜನರ ದನಿ ಬಿಜೆಪಿ ಟ್ರೇಡ್ ಮಾರ್ಕ್. ಡೈವರ್ಟ್ ಪಾಲಿಟಿಕ್ಸ್ ಗೆ ಬಲಿಯಾಗಿ ಕ್ಷಣದಲ್ಲಿ ಸದ್ದಡಗಿದ್ದು ನಮ್ಮ ದೇಶದ ಇಂದಿನ ಮುಂದಿನ ದುರಂತಕ್ಕೆ ಹಿಡಿದ ಕನ್ನಡಿ.. ಇನ್ನೂ ಸಾಕ್ಷಿ ಬೇಕಿದ್ದರೆ ಕಳೆದ ದಶಕದ ದೇಶದ ವಿದ್ಯಮಾನಗಳನ್ನು ಗಮನಿಸಿ ಪ್ಲೀಸ್' ಎಂದು ಅವರು ಬರೆದುಕೊಂಡಿದ್ದಾರೆ.
ಮುಂಬೈಗೆ ಬರುವ ಮುನ್ನ ಭಾರತ ಪ್ರವಾಸದ ಮೊದಲ ದಿನ ಅವರು ಕೋಲ್ಕತ್ತಾದ ಸಾಲ್ಟ್ ಲೇಕ್ ಮೈದಾನದಲ್ಲಿ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಜನಸಂದಣಿಯನ್ನು ಕಂಡು ನಿಗದಿತ ಸಮಯಕ್ಕಿಂತ ಮುನ್ನವೇ ಸ್ಟೇಡಿಯಂನಿಂದ ಹೊರಟಿದ್ದರು. ಇದರಿಂದ ಜನರು ಸಿಟಟಾಗಿದ್ದರು. ಮೆಸ್ಸಿ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದ ಕುರ್ಚಿಗಳನ್ನು ಒಡೆದು ಹಾಕಿ, ಕೈಲಿದ್ದ ಬಾಟಲ್‌ಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದರು. ಆ ಬಳಿಕ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ನಿರ್ಮಾಣ ಮಾಡಿವ ವಂತರಾಕ್ಕೆ ಭೇಟಿ ನೀಡಿದ್ದರು. ಅಲ್ಲಿನ ವ್ಯವಸ್ಥೆಗಳನ್ನು ಕಂಡು ಅವರ ಅಚ್ಚರಿ ಪಟ್ಟಿದ್ದರು. ಈ ವೇಳೆ ಮುಖೇಶ್ ಅಂಬಾನಿ ಕುಟುಂಬ, ಮೆಸ್ಸಿಗೆ 10 ಕೋಟಿ ರೂಪಾಯಿ ಮೌಲ್ಯದ ವಾಚ್‌ಅನ್ನು ಉಡುಗೊರೆಯಾಗಿ ನೀಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.