
ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ಸೆನ್ಸೇಶನಲ್ ನಟ ಕಿರಣ್ ರಾಜ್, ಏನೇ ಮಾಡಿದರೂ ಮಾನವೀಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಮಾಡುತ್ತಾರೆ ಎನ್ನಬಹುದು. ಅವರು ಇತ್ತೀಚೆಗೆ ಗಣೇಶ ಚತುರ್ಥಿ ಹಬ್ಬವನ್ನು ವಿಶೇಷ ಅರ್ಥದಲ್ಲಿ ಆಚರಿಸಿಕೊಂಡಿದ್ದಾರೆ. ಕಿರಣ್ ರಾಜ್ ಬೆಂಗಳೂರಿನ ಒಂದು ವೃದ್ಧಾಶ್ರಮದಲ್ಲಿ ಅಲ್ಲಿನ ಅನಾಥ ವೃದ್ದರ ಬಳಿಯಲ್ಲಿ ವಿಘ್ನವಿನಾಶಕ ಗಣೇಶನ ಹಬ್ಬವನ್ನು ಆಚರಿಸಿಕೊಂಡು ಅಲ್ಲಿನ ಅನಾಥ ವೃದ್ಧರ ಮುಖದಲ್ಲಿ ಮುಗುಳ್ನಗು ಮೂಡಿಸಿದ್ದಾರೆ.
ಜೀವಿತದ ಕೊನೆಗಾಲದಲ್ಲಿ ಮನೆಯಿಂದ, ಮನೆಯವರಿಂದ ದೂರವಿರುವ ವೃದ್ಧರ ಸಮ್ಮುಖದಲ್ಲಿ ನಟ ಕಿರಣ್ ರಾಜ್ ಗಣೇಶನ ಹಬ್ಬದ ದಿನ ಹಾಜರ್ ಆಗಿದ್ದರು. ಕಾರಣ, ಅವರು ಯಾವತ್ತೂ ಕರುಣೆ, ಅನುಕಂಪ ಎಂಬ ಪದಗಳನ್ನು ತಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಅನುಷ್ಠಾನಕ್ಕೆ ತಂದವರು. ಈ ಸಂಗತಿ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಕರುನಾಡಿಗೇ ಗೊತ್ತು. ಅವರ ಈ ಸದ್ಗುಣಗಳನ್ನು ಅವರ ಅಭಿಮಾನಿಗಳು ಮೆಚ್ಚಿ ಅನುಸರಿಸುತ್ತಿದ್ದಾರೆ.
ಈ ಮೊದಲು, ಕೊರೊನಾ ವೈರಸ್ ಕಾರಣಕ್ಕೆ ಜಗತ್ತೇ ಅಲ್ಲೋಲಕಲ್ಲೋಲ ಸ್ಥಿತಿ ಅನುಭವಿಸುತ್ತಿದ್ದಾಗ ಸಹ ಕಿರಣ್ ರಾಜ್ ಮಾನವೀಯತೆ ಮೆರೆದಿದ್ದರು. ತಮ್ಮಿಂದ ಸಾಧ್ಯವಾದಷ್ಟು ಸಮಾಜಸೇವೆ ಮಾಡುವ ಮೂಲಕ ನಟ ಕಿರಣ್ ರಾಜ್ ಕರ್ನಾಟಕದ ಗಮನ ಸೆಳೆದಿದ್ದರು. ಆ ಬಳಿಕ ಕೂಡ ಅಗತ್ಯವಿದ್ದಾಗ ಅಗ್ಯವಿದ್ದವರಿಗೆ ತಮ್ಮ ಕೈಲಾದ ಸಹಾಯ ಮಾಡುವುದನ್ನು ಅವರು ಮರೆಯುತ್ತಿರಲಿಲ್ಲ. ಇದೀಗ, ಗಣೇಶ ಹಬ್ಬದ ದಿನ ವೃದ್ಧಾಶ್ರಮಕ್ಕೆ ಕಾಲಿಟ್ಟು ಅಲ್ಲಿನ ಪರಿಸರದಲ್ಲಿ ಹಬ್ಬ ಆಚರಿಸಿ ಹಲವರಿಗೆ ಮಾದರಿಯಾಗಿದ್ದಾರೆ ಎನ್ನಬಹುದು.
ಅಂದಹಾಗೆ, ನಟ ಕಿರಣ್ ರಾಜ್ 'ಕನ್ನಡತಿ' ಸೀರಿಯಲ್ ಮೂಲಕ ಬಹಳಷ್ಟು ಪ್ರಸಿದ್ಧಿ ಪಡೆದವರು. ಕನ್ನಡತಿ ಧಾರಾವಾಹಿಯ ಅಭಿನಯಕ್ಕಾಗಿ ಅವರಿಗೆ 'ಜನಮೆಚ್ಚಿದ ನಾಯಕ' ಪ್ರಶಸ್ತಿ ಕೂಡ ಪಡೆದಿದ್ದಾರೆ. ಅವರು ಕನ್ನಡದ ಕಿನ್ನರಿ, ದೇವತೆ, ಕನ್ನಡತಿ ಸೇರಿದಂತೆ ಹಿಂದಿಯ 'ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲತಾ ಹೈ ಮತ್ತು ಹೀರೋಸ್' ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಲೋಕದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಕಿರಣ್ ರಾಜ್, ಸಿನಿಪ್ರೇಕ್ಷಕರನ್ನು ಸಹ ತಲುಪುತ್ತ ಕರ್ನಾಟಕದ ಮನೆಮಾತಾಗುವತ್ತ ಹೆಜ್ಜೆಹಾಕುತ್ತಿದ್ದಾರೆ.
ಸ್ಯಾಂಡಲ್‌ವುಡ್ ಲೋಕದಲ್ಲಿ ಕಿರಣ್ ರಾಜ್ 'ಮಾರ್ಚ್ 22, ಅಸತೋಮಾ ಸದ್ಗಮಯ, ಜೀವ್ನಾನೇ ನಾಟ್ಕ, ಸ್ವಾಮಿ' ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಕಿರಣ್ ರಾಜ್ ಕನ್ನಡ ಚಿತ್ರರಂಗ ಮತ್ತು ತೆಲುಗು ಚಿತ್ರಂಗದ ಉದಯೋನ್ಮುಖ ಯುವನಟ. ತೆಲುಗಿನಲ್ಲಿ 'ನುವ್ವೇ ನಾ ಪ್ರಾಣಂ, ವಿಕ್ರಮ್ ಗೌಡ' ಚಿತ್ರಗಳಲ್ಲಿ ನಟಿಸಿ ಕನ್ನಡದಾಚೆಯೂ ಕಾಲಿಟ್ಟು ಸೈ ಎನಿಸಿಕೊಂಡಿದ್ದಾರೆ. ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ರೋನಿ (Ronny)ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಕಿರಣ್ ರಾಜ್, ಈ ಚಿತ್ರದ ಮೂಲಕ ಇಡೀ ಇಂಡಿಯಾದ ಗಮನಸೆಳೆಯುವ ಹಾದಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.