ನಡುರಾತ್ರಿ ಏಕಾಏಕಿ ಫ್ಯಾನ್ ತಿರುಗಿ, ಗೊಂಬೆ ಚಲಿಸಿದಾಗ... ಭಯಾನಕ ಅನುಭವ ತೆರೆದಿಟ್ಟ ನಟ ವಿಶ್ವಾಸ್​ ​

By Suchethana DFirst Published Sep 24, 2024, 12:38 PM IST
Highlights

ಭೂತ, ಪ್ರೇತ, ಆತ್ಮಗಳ ಇರುವಿಕೆಯ ಕುರಿತು ವಾದ-ಪ್ರತಿವಾದಗಳು ಏನೇ ಇದ್ದರೂ, ಕೆಲವೊಮ್ಮೆ ಯಾರ ಊಹೆಗೂ ನಿಲುಕದ ಅಗೋಚರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಘಟನೆಗಳನ್ನು ತಿಳಿಸಿದ್ದಾರೆ ನಟ, ಖ್ಯಾತ ರೇಡಿಯೋ ಜಾಕಿ ವಿಶ್ವಾಸ್​ ಕಾಮತ್​.
 

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಆದರೆ ಇದೀಗ ಖ್ಯಾತ ರೇಡಿಯೋ ಜಾಕಿ, ನಟ ವಿಶ್ವಾಸ್​ ಕಾಮತ್​ ಅವರು ತಮಗಾಗಿರುವ ಭಯಾನಕ ಅನುಭವವನ್ನು ಯೂಟ್ಯೂಬರ್​ ರಾಜೇಶ್​ ಗೌಡ ಅವರ ಜೊತೆ ಶೇರ್​ ಮಾಡಿಕೊಂಡಿದ್ದಾರೆ.

ವಿಶ್ವಾಸ್​ ಕಾಮತ್​ ಅವರು, 1995 ರಲ್ಲಿ ರಿಲೀಸ್​ ಆದ ಕ್ರೌರ್ಯ ಚಿತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದರಾಗಿದ್ದಾರೆ. ಜೊತೆಗೆ, ನಿರಂತರ 102 ಗಂಟೆಗಳ ಕಾಲ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಷ್ಟೇ ಅಲ್ಲದೇ, ವಿಶ್ವಾಸ್​ ಅವರು,  ಸಂಗೀತ ಕ್ಷೇತ್ರದಲ್ಲಿಯೂ ಪರಿಚಿತ ಹೆಸರು.  ಅನುಭವಿ ಪ್ರೋಗ್ರಾಮಿಂಗ್ ನಿರ್ದೇಶಕ. ಕಾಪಿರೈಟಿಂಗ್, ಬ್ರಾಡ್‌ಕಾಸ್ಟಿಂಗ್, ಜಾಹೀರಾತು, ರಿಟೇಲ್ ಮತ್ತು ಮಾರ್ಕೆಟಿಂಗ್ ಸ್ಟ್ರಾಟಜಿಯಲ್ಲಿ ನುರಿತ ಮತ್ತು ರೇಡಿಯೊಸಿಟಿ 91.1 ಎಫ್‌ಎಂನಲ್ಲಿ ಪ್ರಮುಖ ರೇಡಿಯೋ ಜಾಕಿ. ಇದೀಗ ಅವರು ರಾಜೇಶ್​ ಗೌಡ ಅವರ ಜೊತೆ ತಮ್ಮ ಜೀವನದ ಹಲವಾರು ಘಟನೆಗಳ ಬಗ್ಗೆ ಮಾತನಾಡಿದ್ದು, ಅದರಲ್ಲಿ ತಾವು ಮತ್ತು ಪತ್ನಿ ಬೆಂಗಳೂರಿನ ಮನೆಯೊಂದರಲ್ಲಿ ಅನುಭವಿಸಿದ ಭಯಾನಕ ಘಟನೆಗಳ ಕುರಿತೂ ಹೇಳಿಕೊಂಡಿದ್ದಾರೆ. 

Latest Videos

ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?

 
'ಬೆಂಗಳೂರಿನ ಬನ್ನೇರಘಟ್ಟ ರಸ್ತೆಯಲ್ಲಿರುವ ಒಂದು ಮನೆಯಲ್ಲಿ ನಾವು ಬಾಡಿಗೆಗೆ ಇದ್ದೆವು. ಅದು ಬಾಡಿಗೆ ಮನೆ. ಹೋಗುವಾಗ ಪೂಜೆ, ಹೋಮ ಏನೂ ಮಾಡಿರಲಿಲ್ಲ. ಅದೊಂದು ದಿನ ನಾನೊಬ್ಬನೇ ಮನೆಯಲ್ಲಿ ಇದ್ದೆ. ಪತ್ನಿ ಡೆಲವರಿಗೆ ಎಂದು ತವರಿಗೆ ಹೋಗಿದ್ದಳು. ಫ್ಯಾನ್​ ಹಾಕಿರಲಿಲ್ಲ. ಕಿಟಕಿ ಓಪನ್​ ಇರಲಿಲ್ಲ. ಎಲ್ಲಿಯೂ ಗಾಳಿ ಬರುವ ಅವಕಾಶವೇ ಇರಲಿಲ್ಲ. ರೂಮ್​ ಬಾಗಿಲು ಕೂಡ ಹಾಕಿತ್ತು. ಇದ್ದಕ್ಕಿದ್ದಂತೆಯೇ ನಡುರಾತ್ರಿ 2 ಗಂಟೆ ಸುಮಾರಿಗೆ ಕಿಟಕಿಗೆ ಹಾಕಿದ್ದ ಕರ್ಟನ್​ ಜೋರಾಗಿ ಅಲ್ಲಾಡಲು ಶುರುವಾಯ್ತು. ಅದರ ಶಬ್ದವೂ ಆಗಿ ನನಗೆ ಎಚ್ಚರವಾಯಿತು. ಭಯದಲ್ಲಿ ಎದ್ದು ನೋಡಿದಾಗ ವಿಚಿತ್ರ ಫೀಲ್​ ಆಗಲು ಶುರುವಾಯಿತು. ಎದೆ ಜೋರಾಗಿ ಬಡಿದುಕೊಂಡಿತು. ಭಯಾನಕ ವಾತಾವರಣ ಅಲ್ಲಿತ್ತು. ನನಗೆ ಭಯವಾಗಿ ಕೂಡಲೇ ನನ್ನ ಫ್ರೆಂಡ್​ಗೆ ಮಧ್ಯರಾತ್ರಿಯೇ ಕಾಲ್​ ಮಾಡಿ, ಅವನ ಮನೆಗೆ ಹೋಗಿ ಉಳಿದುಕೊಂಡೆ. ಅದ್ಹೇಗೆ ಆ ರಾತ್ರಿ ಹೋದೆ ಎನ್ನುವುದನ್ನೂ ನೆನೆಸಿಕೊಂಡರೆ ಈಗಲೂ ವಿಚಿತ್ರ ಅನಿಸುತ್ತದೆ' ಎಂದಿದ್ದಾರೆ ವಿಶ್ವಾಸ್​. 

ಅದಾದ ಬಳಿಕ, ತಾವು ಇಲ್ಲದೇ ಇರುವ ಸಂದರ್ಭದಲ್ಲಿ, ಮಧ್ಯಾಹ್ನ 2-2.30ರ ಸುಮಾರಿಗೆ ತಮ್ಮ ಪತ್ನಿ ಮಗುವಿಗೆ ಊಟ ಮಾಡಿಸುತ್ತಿದ್ದಾಗ ಇದ್ದಕ್ಕಿಂದ್ದಂತೆಯೇ ಫ್ಯಾನ್​ ಜೋರಾಗಿ ತಿರುಗಲು ಶುರು ಮಾಡಿದ್ದನ್ನೂ ಹೇಳಿಕೊಂಡಿದ್ದಾರೆ. ಇದಾದ ಬಳಿಕ ನಮ್ಮ ಸಂಬಂಧಿಕರೊಬ್ಬರ ಬಳಿ ವಿಷಯ ತಿಳಿಸಿದಾಗ, ಅವರು ಮನೆಯ ವಾಸ್ತು ನೋಡಿ ಅಲ್ಲಿ ಹಿಂದೆ ಏನಾಗಿತ್ತು ಎನ್ನೋದನ್ನು ಹೇಳಿದರು. ನೀವು ಇರುವುದೇ ಆಗಿದ್ದರೆ  ಕುಂಕುಮ, ಉಪ್ಪು ಎಲ್ಲಾ ಇಡುವಂತೆ ಹೇಳಿದರು. ಹಾಗೆಯೇ ಮಾಡಿದ್ವಿ. ಸ್ವಲ್ಪ ದಿನ ಏನೂ ಆಗಲಿಲ್ಲ. ಆದರೆ ನನ್ನ ಮಗಳಿಗೆ ಸುಮಾರು ಆರು ತಿಂಗಳು ಇರುವಾಗ ಆದ ಘಟನೆ ಮಾತ್ರ ಭಯಾನಕವಾದದ್ದು ಎಂದು ಅವರು ಹೇಳಿದ್ದಾರೆ. 

ರೈಲು ಪ್ರಯಾಣಿಕರೇ ಎಚ್ಚರ! ಬೋಗಿಯಲ್ಲಿತ್ತು ಐದು ಅಡಿ ಉದ್ದದ ಹಾವು... ಪ್ರಯಾಣಿಕರು ಕಕ್ಕಾಬಿಕ್ಕಿ!
 
ನಾವು ಮೂವರೂ ಕೋಣೆಯಲ್ಲಿ ಮಲಗಿದ್ವಿ. ನನ್ನ ಮಗಳಿಗೆ ತಂದುಕೊಟ್ಟಿದ್ದ ಮ್ಯೂಸಿಕ್​ ಮಾಡುವ ಗೊಂಬೆ ಹೊರಗಡೆ ಕೋಣೆಯಲ್ಲಿ ಇತ್ತು. ಮಧ್ಯರಾತ್ರಿ ಇದ್ದಕ್ಕಿದ್ದಂತೆಯೇ ಅದರಿಂದ ಮ್ಯೂಸಿಕ್​ ಬಂತು. ನನಗೆ ಮತ್ತು ಪತ್ನಿ ಇಬ್ಬರಿಗೂ ಎಚ್ಚರವಾಯಿತು. ನೋಡಿದಾಗ ಸೀಲಿಂಗ್​ಗೆ ಹಾಕಿದ್ದ ನೀಲಿ ಬಣ್ಣದ ಲೈಟ್​ ಝಗಮಗಿಸಲು ಶುರುವಾಯ್ತು. ಗೊಂಬೆಯ ಮ್ಯೂಸಿಕ್​ ಜೋರಾಗಿ ಕೇಳಿಸಲು ಶುರುವಾಯ್ತು. ಇದರಿಂದ ಇಬ್ಬರೂ ಸಿಕ್ಕಾಪಟ್ಟೆ ಭಯಪಟ್ಟು ಆ ರಾತ್ರಿ ಕಳೆದವು ಎಂದಿದ್ದಾರೆ. ನನ್ನ ಪತ್ನಿ ನನಗಿಂತ ತುಂಬಾ ಸ್ಟ್ರಾಂಗ್​. ನೀವು ಭಯಪಟ್ಟಷ್ಟೂ ಅದು ಹೆಚ್ಚಾಗುತ್ತದೆ. ವೀಕ್​ ಮೈಂಡ್​ ಇದ್ದರೆ ಇಂಥ ಶಕ್ತಿಗಳು ಬೇಗನೇ ಅಟ್ರಾಕ್ಟ್​ ಆಗುತ್ತದೆ ಎಂದಳು. ಹಾಗೂ ಹೀಗೂ ಇದೇ ಭೀತಿಯಲ್ಲಿ ಐದು ವರ್ಷ ಆ ಮನೆಯಲ್ಲಿಯೇ ಕಳೆದವು ಎಂದಿದ್ದಾರೆ ವಿಶ್ವಾಸ್​. ನಂತರ ತಮಗಾಗಿರುವ ಇದೇ ಅನುಭವದ ಜೊತೆಗೆ ಒಂದಿಷ್ಟು ಫಿಕ್ಷನ್​ ಸ್ಟೋರಿ ಮಾಡಿ ರೇಡಿಯೋದಲ್ಲಿ ಬಿತ್ತರಿಸಿದೆ. ಅದಕ್ಕೆ ಇಂಡಿಯಾ ಫೋರಮ್​ ಅವಾರ್ಡ್​  ಕೂಡ ಸಿಕ್ಕಿತು ಎಂದು ತಿಳಿಸಿದ್ದಾರೆ. 

click me!