ಹಾಕಿ ಸಹಾಯಕ ಕೋಚ್ ಸಂದರ್ಶನ: ಜಗತ್ತಿನೆದುರು ನಮ್ಮ ಶಕ್ತಿ, ಸಾಮರ್ಥ್ಯ ಅನಾವರಣಗೊಳಿಸಿದ್ದೇವೆ..!

By Kannadaprabha News  |  First Published Aug 7, 2021, 1:11 PM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಭಾರತೀಯ ಮಹಿಳಾ ಹಾಕಿ ತಂಡ

* ಕಂಚು ಗೆಲ್ಲದಿದ್ದರೂ ಭಾರತೀಯರ ಹೃದಯ ಗೆದ್ದಿರುವ ರಾಣಿ ರಾಂಪಾಲ್ ಪಡೆ

* ಮಹಿಳಾ ಹಾಕಿ ತಂಡದ ಸಹಾಯಕ ಕೋಚ್‌ ಅಂಕಿತಾ ಸುರೇಶ್ ಎಕ್ಸ್‌ಕ್ಲೂಸಿವ್ ಸಂದರ್ಶನ


ವಿಘ್ನೇಶ್ ಎಂ ಭೂತನಕಾಡು, ಕನ್ನಡಪ್ರಭ

ಮಡಿಕೇರಿ(ಆ.07): ಟೋಕಿಯೋ ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತ ಮಹಿಳೆಯರ ಹಾಕಿ ತಂಡ ಕಂಚು ಗೆಲ್ಲದಿದ್ದರೂ ಭಾರತದ ಜನರ ಹೃದಯ ಗೆದ್ದು ಸಾಧನೆ ಮಾಡಿದೆ. ತಂಡವನ್ನು ಇಡಿ ದೇಶವೇ ಕೊಂಡಾಡಿದೆ. ಭಾರತ ತಂಡವನ್ನು ಬಲಿಷ್ಠಗೊಳಿಸುವಲ್ಲಿ ಕೋಚ್‌ಗಳ ಪಾತ್ರ ಕೂಡಾ ಅತಿ ಮಹತ್ವದ್ದಾಗಿದೆ. ತಂಡದ ಸಹಾಯಕ ಕೋಚ್‌ ಆಗಿದ್ದವರು, ಕರ್ನಾಟಕದ ಕೊಡಗು ಜಿಲ್ಲೆಯ ಅಂಕಿತಾ ಸುರೇಶ್‌. ಅವರು ಟೋಕಿಯೋದಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Tap to resize

Latest Videos

undefined

* ಗುಂಪು ಹಂತದಲ್ಲಿ ಹ್ಯಾಟ್ರಿಕ್‌ ಸೋಲಿನ ಬಳಿಕ ತಂಡ ಪುಟಿದೆದ್ದೇಗೆ?

ಮೊದಲ 3 ಪಂದ್ಯ ಸೋತ ಬಳಿಕ ಕೊನೆ 2 ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಸತತ ಸೋಲು ನಮ್ಮನ್ನು ಕಂಗೆಡಿಸಲಿಲ್ಲ. ಹೊಸದಾಗಿ ನಮ್ಮ ಆಟ ಆರಂಭಿಸಿದೆವು. ಎಲ್ಲರೂ ಶಕ್ತಿ ಮೀರಿ ಪ್ರದರ್ಶನ ತೋರಿದರು. ನಾವು ಕೋಚ್‌ಗಳು ನಮ್ಮಿಂದ ಸಾಧ್ಯವಾಗಿದ್ದನ್ನು ಮಾಡಿದೆವು. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದವು.

ಭಾರತ ಹಾಕಿ ತಂಡದ ಯಶಸ್ಸಿನ ಹಿಂದಿದೆ ಕೋಚ್‌ ಮರಿನೆ, ಲೊಂಬಾರ್ಡ್‌ ಶ್ರಮ..!

* ಕ್ವಾರ್ಟರ್‌ನಲ್ಲಿ ಆಸೀಸ್‌ ವಿರುದ್ಧ ಗೆದ್ದ ತಂಡ, ಮುಂದಿನ 2 ಪಂದ್ಯದಲ್ಲಿ ಎಡವಿದ್ದೆಲ್ಲಿ?

ಆಸ್ಪ್ರೇಲಿಯಾ ಅತ್ಯಂತ ಬಲಿಷ್ಠ ತಂಡ. ನಮ್ಮ ತಂಡ ಆ ಪಂದ್ಯದಲ್ಲಿ ಪರಿಪೂರ್ಣ ಆಟ ಪ್ರದರ್ಶಿಸಿತು. ಸೆಮೀಸ್‌, ಕಂಚಿನ ಪದಕದ ಪಂದ್ಯದಲ್ಲಿ ನಾವು ಎಡವಿದೆವು ಎಂದು ಹೇಳಲಾಗದು. ಅರ್ಜೆಂಟೀನಾ ಕೂಡ ಬಲಿಷ್ಠ ತಂಡ. ನಾವು ಉತ್ತಮ ಫೈಟ್‌ ನೀಡಿದೆವು. ಒಂದು ಗೋಲಿನ ಅಂತರದಲ್ಲಿ ಸೋತೆವು. ಗ್ರೇಟ್‌ ಬ್ರಿಟನ್‌ ವಿರುದ್ಧವೂ ಸಾಮರ್ಥ್ಯಕ್ಕೆ ತಕ್ಕಂತೆ ತಂಡ ಆಡಿದೆ. ಆದರೆ ಅದೃಷ್ಟ ಕೈಹಿಡಿಯಲಿಲ್ಲ.

* ಟೋಕಿಯೋ ಗೇಮ್ಸ್‌ ಪ್ರದರ್ಶನ ಭಾರತೀಯ ಹಾಕಿಗೆ ಏನು ಬದಲಾವಣೆ ತರಬಹುದು?

ಕಳೆದ ಕೆಲ ವರ್ಷಗಳಲ್ಲಿ ತಂಡ ಸ್ಥಿರ ಪ್ರದರ್ಶನ ತೋರುತ್ತಿದೆ. ಸೆಮೀಸ್‌ ಪ್ರವೇಶಿಸಿ ಇತಿಹಾಸ ಬರೆದಿದೆ. ಈ ಒಲಿಂಪಿಕ್ಸ್‌ನಲ್ಲಿ ತೋರಿದ ಪ್ರದರ್ಶನದಿಂದ ದೇಶದಲ್ಲಿ ಮಹಿಳೆಯರ ಹಾಕಿಗೆ ಮರುಜನ್ಮ ಸಿಗಲಿದೆ. ಜಗತ್ತಿಗೆ ನಮ್ಮ ಬಲಿಷ್ಠತೆಯನ್ನು ತೋರಿಸಿ ಕೊಟ್ಟಿದ್ದೇವೆ. ಈ ಪ್ರದರ್ಶನ ನೂರಾರು ಯುವತಿಯರನ್ನು ಕ್ರೀಡೆಯತ್ತ ಸೆಳೆಯಲಿದೆ ಎನ್ನುವ ವಿಶ್ವಾಸವಿದೆ. ಭಾರತೀಯ ಹಾಕಿಗೆ ಇಂತದ್ದೊಂದು ಉತ್ತೇಜನ ಬೇಕಿತ್ತು.

*ಕೋರ್‌ ಟೀಂ ಉಳಿಸಿಕೊಂಡಿದ್ದು ಯಶಸ್ಸಿಗೆ ಕಾರಣವಾಯ್ತು ಅನಿಸುತ್ತಾ?

ರಿಯೋ ಒಲಿಂಪಿಕ್ಸ್‌ನಲ್ಲಿದ್ದ 8 ಆಟಗಾರ್ತಿಯರು ಟೋಕಿಯೋ ತಂಡದಲ್ಲೂ ತಂಡದಲ್ಲೂ ಇದ್ದರು. ಆದರೆ ಕೋರ್‌ ಟೀಂ ಉಳಿಸಿಕೊಂಡಿದ್ದೇ ಯಶಸ್ಸಿಗೆ ಕಾರಣನಾ? ಅನ್ನುವ ಪ್ರಶ್ನೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸೀನಿಯ​ರ್ಸ್, ಜೂನಿಯ​ರ್ಸ್ ಎಲ್ಲರೂ ಉತ್ತಮವಾಗಿ ಆಡಿದ್ದಾರೆ.

* ಗೋಲ್‌ ಕೀಪರ್‌ ಸವಿತಾ ಪೂನಿಯಾ ಕೊಡುಗೆ ಬಗ್ಗೆ ಹೇಳಿ?

ಸವಿತಾ ಅವರನ್ನು ಗೋಡೆ ಎಂದರೆ ತಪ್ಪಾಗಲಾರದು. ತಂಡದ ಯಶಸ್ಸಿಗೆ ಅವರ ಕೊಡುಗೆ ದೊಡ್ಡದಿದೆ. ಪ್ರತಿ ಪಂದ್ಯದಲ್ಲೂ ಹಲವು ಪೆನಾಲ್ಟಿ ಕಾರ್ನರ್‌ಗಳನ್ನು ತಡೆದಿದ್ದಾರೆ. ಎದುರಾಳಿಗಳ ಅನೇಕ ಫೀಲ್ಡ್‌ ಗೋಲ್‌ ಯತ್ನಗಳನ್ನೂ ವಿಫಲಗೊಳಿಸಿದ್ದಾರೆ. ಯುವ ಗೋಲ್‌ಕೀಪರ್‌ಗಳಿಗೆ ಅವರು ಸ್ಫೂರ್ತಿ.

*ತಂಡ ಯಶಸ್ಸಿನಲ್ಲಿ ಕೋಚ್‌ಗಳ ಪಾತ್ರವೇನು?

ಹಿರಿಯ ಕೋಚ್‌ಗಳು ತಂಡವನ್ನು ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟಗಾರರು ಅವರ ಸಲಹೆಯನ್ನು ಪಾಲನೆ ಮಾಡಿದ್ದಾರೆ. ನಾನು ಯುವ ಕೋಚ್‌ ಆಗಿ ಸೀನಿಯರ್‌ಗಳಿಂದ ತುಂಬಾ ಪಾಠವನ್ನು ಕಲಿತಿದ್ದೇನೆ. ಅನುಭವದ ಕೊರತೆ ಇದ್ದರೂ ಅವರೊಂದಿಗೆ ನಾನು ಕೂಡ ಸಲಹೆ ನೀಡಿದ್ದೇನೆ.

* ತಂಡಕ್ಕೆ ಮುಂದಿರುವ ಸವಾಲುಗಳೇನು?

ಮುಂದಿನ ದಿನಗಳಲ್ಲಿ ಸಾಕಷ್ಟುನಿರೀಕ್ಷೆ ಇದೆ. ಕಾಮನ್‌ವೆಲ್ತ್‌, ಏಷ್ಯನ್‌ ಚಾಂಪಿಯಸ್ಸ್‌ ಟ್ರೋಫಿ, ವಿಶ್ವಕಪ್‌ ಟೂರ್ನಿಗಳಿದೆ. ಇವುಗಳಲ್ಲಿ ಪದಕ ಗೆಲ್ಲುವ ಗುರಿ ಇದೆ. ತಂಡದಲ್ಲಿ ಸಣ್ಣಪುಟ್ಟ ಲೋಪಗಳಿದ್ದು ಅವುಗಳನ್ನು ಸರಿಪಡಿಸುವತ್ತ ಗಮನ ಹರಿಸಲಿದ್ದೇವೆ.

ನಾವು ಕಡಿಮೆ ಅಂತರದಿಂದ ಸೋತಿದ್ದೇವೆ. ಸೋಲು ಗೆಲುವಿನ ಮೆಟ್ಟಿಲು ಎಂದು ನಾವು ಪಾಸಿಟಿಗ್‌ ಆಗಿ ತೆಗೆದುಕೊಂಡಿದ್ದೇವೆ. ಭಾರತ ಮಹಿಳೆಯರ ತಂಡ ಮೂರು ಬಾರಿ ಒಲಿಂಪಿಕ್ಸ್‌ ಹಾಕಿಯಲ್ಲಿ ಪಾಲ್ಗೊಂಡಿದ್ದು, ಈ ಬಾರಿ ಸೆಮಿಸ್‌ಗೆ ಬಂದಿದ್ದು, ಇತಿಹಾಸ ನಿರ್ಮಿಸಿ ಭಾರತ ಮಹಿಳೆಯರ ಹಾಕಿ ತಂಡದ ಬಲಿಷ್ಠತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ದೇಶದ ಎಲ್ಲರೂ ಹಾಕಿ ಕ್ರೀಡೆಯನ್ನು ನೋಡುವಂತೆ ಮಾಡಿದ್ದೇವೆ. ದೇಶದ ಪ್ರಧಾನಿ ತಂಡಕ್ಕೆ ಕರೆ ಮಾಡಿ ಇಡೀ ದೇಶವೇ ನಿಮ್ಮೊಂದಿಗಿದೆ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ. ಇದು ಮುಂದೆ ಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಭಾರತ ಮಹಿಳಾ ತಂಡಕ್ಕೆ ನನ್ನಿಂದಾದಷ್ಟು ಆಟಗಾರರನ್ನು ತಯಾರು ಮಾಡುತ್ತೇನೆ - ಅಂಕಿತಾ ಸುರೇಶ್‌, ಸಹಾಯಕ ಕೋಚ್‌, ಭಾರತ ಹಿರಿಯ ಮಹಿಳೆಯರ ಹಾಕಿ ತಂಡ
 

click me!