ಎಲ್ಲಿ ನೋಡಿದರೂ ಕೊರೋನಾ ವೈರಸ್ ಭೀತಿಯೇ ಆವರಿಸಿದೆ. ಇದೀಗ ಟೋಕಿಯೋ ಒಲಿಂಪಿಕ್ಸ್ ಮೇಲೆ ಮಾರಣಾಂತಿಕ ವೈರಸ್ ಕರಿನೆರಳು ಬೀಳುವ ಸಾಧ್ಯತೆಯಿರುವುದರಿಂದ ಕ್ರೀಡಾಕೂಟ ಮುಂದೂಡುವ ಸಾಧ್ಯತೆಗಳ ಬಗ್ಗೆಯು ಮಾತುಗಳು ಕೇಳಿ ಬರುತ್ತಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಟೋಕಿಯೋ(ಮಾ.04): 2020ರ ಟೋಕಿಯೋ ಒಲಿಂಪಿಕ್ಸ್ ವರ್ಷಾಂತ್ಯಕ್ಕೆ ಮುಂದೂಡಲ್ಪಡುವ ಸಾಧ್ಯತೆ ಇದೆ. 2020ರಲ್ಲಿ ಯಾವಾಗ ಬೇಕಾದರೂ ಕ್ರೀಡಾಕೂಟವನ್ನು ನಡೆಸಲು ಅವಕಾಶವಿದೆ ಎಂದು ಜಪಾನ್‌ನ ಒಲಿಂಪಿಕ್ ಮಂತ್ರಿ ಸೀಕೊ ಹಶಿಮೊಟೋ ಮಂಗಳವಾರ ಸಂಸತ್ತಿನಲ್ಲಿ ಉತ್ತರಿಸಿದರು.
ಸದ್ಯಕ್ಕೆ ನಿಗದಿಯಾಗಿರುವ ವೇಳಾಪಟ್ಟಿ ಪ್ರಕಾರ, ಜುಲೈ 24ರಂದು ಕ್ರೀಡಾಕೂಟ ಆರಂಭಗೊಳ್ಳಬೇಕಿದೆ. ಆಗಸ್ಟ್ 25ರಿಂದ ಪ್ಯಾರಾಲಿಂಪಿಕ್ಸ್ ನಡೆಯಬೇಕಿದ್ದು, ಎರಡೂ ಕ್ರೀಡಾಕೂಟಗಳನ್ನು ಮುಂದೂಡುವ ಸಾಧ್ಯತೆ ಇದೆ. 2020ರಲ್ಲಿ ಕ್ರೀಡಾಕೂಟವನ್ನು ನಡೆಸದಿದ್ದರೆ ಮಾತ್ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ)ಗೆ ಕ್ರೀಡಾಕೂಟವನ್ನು ರದ್ದುಗೊಳಿಸುವ ಅಧಿಕಾರವಿದೆ ಎಂದು ಹಶಿಮೊಟೋ ಹೇಳಿದರು. ‘ಕ್ರೀಡಾಕೂಟವನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ಹೆಚ್ಚಿನ ಪರಿಶ್ರಮ ವಹಿಸುತ್ತಿದ್ದೇವೆ. ಕ್ರೀಡಾಕೂಟವನ್ನು ಮುಂದೂಡಲು ಇಲ್ಲವೇ ರದ್ದುಗೊಳಿಸುವಂತಹ ಸನ್ನಿವೇಶ ಎದುರಾಗದಿರಲಿ ಎಂದು ಆಶಿಸುತ್ತೇನೆ’ ಎಂದು ಹಶಿಮೊಟೋ ಸಂಸತ್ತಿನಲ್ಲಿ ಹೇಳಿದರು. ಆದರೆ ಐಒಸಿ ಮುಖ್ಯಸ್ಥ ಥಾಮಸ್ ಬಾಚ್, ನಿಗದಿಯಾಗಿರುವ ದಿನಾಂಕಳಂದೇ ಕ್ರೀಡಾಕೂಟವನ್ನು ನಡೆಸುವ ಬಗ್ಗೆ ಇನ್ನೂ ವಿಶ್ವಾಸ ಇರಿಸಿಕೊಂಡಿದ್ದಾರೆ.
undefined
ಒಲಿಂಪಿಕ್ಸ್‌ಗೆ ಕೊರೋನಾ ಭೀತಿ: ಸ್ಪಷ್ಟನೆ ನೀಡಿದ ಆಯೋಜಕರು
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಜಪಾನ್‌ನಲ್ಲಿ 12 ಜನರನ್ನು ಬಲಿ ಪಡೆದಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಕ್ರೀಡಾಕೂಟಗಳು ಹಾಗೂ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಮುಂದೂಡಿದರೆ ಭಾರೀ ನಷ್ಟ!
ಕ್ರೀಡಾಕೂಟವನ್ನು ಮುಂದೂಡಿದರೆ ಅಂತಾರಾಷ್ಟ್ರೀಯ ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆಗಳು ಹಣಕಾಸು ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಬಗ್ಗೆ ಐಒಸಿ ಆತಂಕ ವ್ಯಕ್ತಪಡಿಸಿದೆ. ಐಒಸಿ ಗಳಿಸುವ ಒಟ್ಟು ಆದಾಯದಲ್ಲಿ ಶೇ.73ರಷ್ಟು ಪ್ರಸಾರ ಹಕ್ಕಿನಿಂದಲೇ ಬರಲಿದೆ. ಅದರಲ್ಲಿ ಅರ್ಧದಷ್ಟು ಹಣವನ್ನು ಅಮೆರಿಕದ ಎನ್‌ಬಿಸಿ ಸಂಸ್ಥೆ ನೀಡಲಿದೆ. 1964ರ ಟೋಕಿಯೋ ಒಲಿಂಪಿಕ್ಸ್ ಕೂಟವನ್ನು ಅಕ್ಟೋಬರ್‌ನಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಬೇಸಿಗೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪ್ರಸಾರ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎನ್ನುವ ಕಾರಣಕ್ಕೆ ಕ್ರೀಡಾಕೂಟವನ್ನು ಮುಂಚಿತವಾಗಿ ನಡೆಸಲಾಗುತ್ತಿದೆ.
2020 ವರ್ಷಪೂರ್ತಿ ರೋಚಕತೆ ಗ್ಯಾರಂಟಿ!
ಕ್ರೀಡಾಕೂಟವಕ್ಕಾಗಿ ಜಪಾನ್ ಸಾವಿರಾರು ಕೋಟಿ ರುಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಪ್ರಚಾರಕ್ಕಾಗೇ ದೊಡ್ಡ ಮೊತ್ತವನ್ನು ಬಳಸಲಾಗುತ್ತಿದೆ. ಒಲಿಂಪಿಕ್ಸ್ ಮುಂದೂಡಲ್ಪಟ್ಟರೆ ಆಯೋಜಕರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಲಿದೆ.
ಪರೀಕ್ಷಾರ್ಥ ಟೂರ್ನಿಗಳು ರದ್ದು
ಮಂಗಳವಾರ ಒಲಿಂಪಿಕ್ಸ್ ಆಯೋಜಕರು ಪ್ಯಾರಾಲಿಂಪಿಕ್ ಪರೀಕ್ಷಾರ್ಥ ವೀಲ್ಹ್ಚೇರ್ ರಗ್ಬಿ ಟೂರ್ನಿಯನ್ನು ರದ್ದುಗೊಳಿಸಲಾಗಿದೆ. ಇನ್ನೂ 17 ಪರೀಕ್ಷಾರ್ಥ ಟೂರ್ನಿಗಳು ಬಾಕಿ ಇದ್ದು, ಕೆಲ ಟೂರ್ನಿಗಳಲ್ಲಿ ಜಪಾನಿಯೇತರ ಕ್ರೀಡಾಪಟುಗಳು ಸಹ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ, ಬಹುತೇಕ ಟೂರ್ನಿಗಳು ರದ್ದಾಗುವ ಸಾಧ್ಯತೆ ಹೆಚ್ಚಿದೆ.