ವಾಟ್ಸಪ್‌ ಬಳಸಿ ಮೊಬೈಲ್‌ಗೆ ಕನ್ನ! 'ನಿಗೂಢ’ ಬೇಹುಗಾರಿಕೆಗೆ ಬೆಚ್ಚಿಬಿದ್ರು ಜನ

By Kannadaprabha News  |  First Published Nov 1, 2019, 11:10 AM IST
  • ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್‌ಗೆ ಕನ್ನ
  • ಇಸ್ರೇಲ್‌ನ ಸರ್ವೇಕ್ಷಣಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ ವಿರುದ್ಧ ಅಮೆರಿಕದ ಕ್ಯಾಲಿಫೋರ್ನಿಯಾ ಕೇಂದ್ರ ನ್ಯಾಯಾಲಯದಲ್ಲಿ ಪ್ರಕರಣ
  • ಅದನ್ನು ಮಾಡಿಸಿರುವುದು ಯಾರು ಎಂಬುದು ಮಾತ್ರ ಈಗಲೂ ನಿಗೂಢ 

ನವದೆಹಲಿ (ನ.01): ದೇಶದ ರಾಜಕಾರಣದಲ್ಲಿ ದೂರವಾಣಿ ಕದ್ದಾಲಿಕೆ ಆರೋಪ- ಪ್ರತ್ಯಾರೋಪಗಳು ತಣ್ಣಗಾದ ಬೆನ್ನಿಗೇ ಪ್ರಸಿದ್ಧ ಸಾಮಾಜಿಕ ಮಾಧ್ಯಮವಾಗಿರುವ ವಾಟ್ಸಪ್‌ ಬಳಸಿ ದೇಶದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೊಬೈಲ್‌ನಲ್ಲಿರುವ ಮಾಹಿತಿ ಕಳವು ಮಾಡಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್‌ಗೆ ಕನ್ನ ಹಾಕಲಾಗಿದೆ ಎಂದು ಸ್ವತಃ ವಾಟ್ಸಪ್‌ ಬಹಿರಂಗಪಡಿಸಿದೆ.

ಹ್ಯಾಕ್‌ ಆಗಿರುವ ಮೊಬೈಲ್‌ ಬಳಕೆದಾರರಿಗೆ ವಾಟ್ಸಪ್‌ ಕಂಪನಿಯೇ ಖುದ್ದು ಈ ವಿಷಯವನ್ನು ತಿಳಿಸಿದೆ. ಜತೆಗೆ ಪೆಗಾಸಸ್‌ ಅಭಿವೃದ್ಧಿಪಡಿಸಿರುವ ಇಸ್ರೇಲ್‌ನ ಸರ್ವೇಕ್ಷಣಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ ವಿರುದ್ಧ ಅಮೆರಿಕದ ಕ್ಯಾಲಿಫೋರ್ನಿಯಾ ಕೇಂದ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.

Latest Videos

undefined

ವಾಟ್ಸಪ್‌ ನೀಡಿರುವ ಮಾಹಿತಿಯಿಂದ ವಿಶ್ವಾದ್ಯಂತ ಬಿರುಗಾಳಿ ಎದ್ದಿದೆಯಾದರೂ, ಅದನ್ನು ಮಾಡಿಸಿರುವುದು ಯಾರು ಎಂಬುದು ಮಾತ್ರ ನಿಗೂಢವಾಗಿದೆ. ಪೆಗಾಸಸ್‌ ಸಾಫ್ಟ್‌ವೇರ್‌ ಅನ್ನು ಸರ್ಕಾರಗಳು ಹಾಗೂ ತನಿಖಾ ಸಂಸ್ಥೆಗಳಿಗೆ ಮಾತ್ರವೇ ಮಾರಾಟ ಮಾಡುತ್ತೇವೆ. ಭಯೋತ್ಪಾದನೆ ಹಾಗೂ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸಲು ಈ ಸಾಫ್ಟ್‌ವೇರ್‌ ನೀಡುತ್ತೇವೆ. ಮಾನವ ಹಕ್ಕು ಕಾರ್ಯಕರ್ತರು ಹಾಗೂ ಪತ್ರಕರ್ತರ ವಿರುದ್ಧ ಬಳಸಲು ಅದನ್ನು ವಿನ್ಯಾಸ ಮಾಡಿಲ್ಲ ಎಂದು ಎನ್‌ಎಸ್‌ಒ ತಿಳಿಸಿದೆ.

ಇದರ ಬೆನ್ನಲ್ಲೇ ಭಾರತದಲ್ಲಿ ಈ ಬೇಹುಗಾರಿಕೆ ಮಾಡಿಸಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ನಡುವೆ ಎಷ್ಟುಭಾರತೀಯರ ವಾಟ್ಸಪ್‌ಗೆ ಕನ್ನ ಹಾಕಲಾಗಿದೆ, ಆ ವ್ಯಕ್ತಿಗಳು ಯಾರು ಎಂಬುದು ಅಧಿಕೃತವಾಗಿ ಗೊತ್ತಾಗಿಲ್ಲ. ಬೇಹುಗಾರಿಕೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಾಟ್ಸಪ್‌ ಕಂಪನಿಗೆ ಪತ್ರ ಬರೆದಿರುವ ಮಾಹಿತಿ ತಂತ್ರಜ್ಞಾನ ಸಚಿವಾಲಯ ನ.4ರ ಸೋಮವಾರದೊಳಗೆ ವಿವರವಾದ ವರದಿ ನೀಡುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ | ಡೇಟಾ-ಬಾಕರಿಗೆ ಇನ್ನಿಲ್ಲ ಟೆನ್ಶನ್, ಏರ್ಟೆಲ್ ತಂದಿದೆ ಹೊಸ ಇಂಟರ್ನೆಟ್ ಪ್ಲಾನ್!...

ಸ್ಫೋಟಕ ಮಾಹಿತಿ:

ವಾಟ್ಸಪ್‌ ವಿಡಿಯೋ ಕಾಲಿಂಗ್‌ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಸೈಬರ್‌ ದಾಳಿ ನಡೆಸಲಾಗಿದೆ. ರಾಜತಾಂತ್ರಿಕರು, ರಾಜಕೀಯ ವಿರೋಧಿಗಳು, ಪತ್ರಕರ್ತರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ವಾಟ್ಸಪ್‌ ಮೇಲೆ ಈ ದಾಳಿ ನಡೆದಿದೆ. ಈ ಸೈಬರ್‌ ದಾಳಿಯನ್ನು ಕಳೆದ ಮೇ ತಿಂಗಳಿನಲ್ಲಿಯೇ ತಡೆಯಲಾಗಿದೆ ಎಂದು ಫೇಸ್‌ಬುಕ್‌ ಒಡೆತನದ ವಾಟ್ಸಪ್‌ ಮಾಹಿತಿ ನೀಡಿದೆ. ಭಾರತದಲ್ಲಿ ಎಷ್ಟುಜನರ ಮೊಬೈಲ್‌ಗೆ ಕನ್ನ ಹಾಕಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ಭಾರತೀಯ ಪತ್ರಕರ್ತರು ಹಾಗೂ ಮಾನವ ಹಕ್ಕು ಹೋರಾಟಗಾರರ ಮೊಬೈಲ್‌ ಹ್ಯಾಕ್‌ ಆಗಿದೆ ಎಂದು ತಿಳಿಸಿದೆ.

ದಾಳಿ ಹೇಗೆ?

ಯಾವುದೋ ಒಂದು ಲಿಂಕ್‌ ಅನ್ನು ವಾಟ್ಸಪ್‌ ಬಳಕೆದಾರರಿಗೆ ಕಳುಹಿಸಿ ಅದನ್ನು ಕ್ಲಿಕ್‌ ಮಾಡಲು ಸೂಚನೆ ನೀಡುವುದು ಅಥವಾ ವಾಟ್ಸಪ್‌ ವಿಡಿಯೋ ಮಿಸ್ಡ್‌ ಕಾಲ್‌ ನೀಡಿ ಪೆಗಾಸಸ್‌ ಸಾಫ್ಟ್‌ವೇರ್‌ ಮೂಲಕ ಮೊಬೈಲ್‌ ಫೋನ್‌ ಹ್ಯಾಕ್‌ ಮಾಡಲಾಗಿದೆ. ಬಳಿಕ ಬಳಕೆದಾರರ ಮೊಬೈಲ್‌ ಮೇಲೆ ಕಣ್ಣಿಡಲಾಗಿದೆ. ಅದರಲ್ಲಿರುವ ರಹಸ್ಯ ಮಾಹಿತಿಗಳನ್ನು ಕದಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ | ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?...

ಯಾವ್ಯಾವ ಭಾರತೀಯರ ಮೊಬೈಲ್‌ ಹ್ಯಾಕ್‌?

ಭಾರತೀಯರ ಮೊಬೈಲ್‌ಗೂ ಕನ್ನ ಹಾಕಲಾಗಿದೆ ಎಂದು ವಾಟ್ಸಪ್‌ ಹೇಳಿದೆಯಾದರೂ ಅವರ ವಿವರ ನೀಡಿಲ್ಲ. ಆದರೆ ಕೆಲವು ಮಾಧ್ಯಮ ವರದಿಗಳ ಪ್ರಕಾರ, ಭೀಮಾ- ಕೋರೆಗಾಂವ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾನವ ಹಕ್ಕು ಹೋರಾಟಗಾರರ ಪರ ವಕೀಲರ ಮೊಬೈಲ್‌ ಫೋನ್‌ ಹ್ಯಾಕ್‌ ಮಾಡಲಾಗಿದೆ. ಛತ್ತೀಸ್‌ಗಢದ ಹಿಂಸಾಪೀಡಿತ ಬಸ್ತರ್‌ ವಲಯದ ಮಾನವ ಹಕ್ಕುಗಳ ಪರ ಹೋರಾಟಗಾರ ಬೇಲಾ ಭಾಟಿಯಾ, ಮಹಾರಾಷ್ಟ್ರದ ದಲಿತ ಮತ್ತು ಆದಿವಾಸಿ ಹಕ್ಕುಗಳ ಪರ ಹೋರಾಟಗಾರ ಹಾಗೂ ವಕೀಲ ಡಿಗ್ರಿ ಪ್ರಸಾದ್‌ ಚೌಹಾಣ್‌, ಪ್ರಾಧ್ಯಾಪಕ, ಲೇಖಕ ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರ ಆನಂದ ತೆಲ್ತುಂಬ್ಡೆ, ವಿಯಾನ್‌ ನ್ಯೂಸ್‌ ಚಾನಲ್‌ ರಕ್ಷಣಾ ವರದಿಗಾರ ಸಿದ್ಧಾಂತ್‌ ಸಿಬಲ್‌ ಅವರ ಮೊಬೈಲ್‌ ಫೋನ್‌ಗೆ ಕನ್ನ ಹಾಕಲಾಗಿದೆ.

ಹ್ಯಾಕ್‌ ಆಗಿದ್ದು ಯಾವಾಗ?

ಲೋಕಸಭೆ ಚುನಾವಣೆಗೂ ಮುನ್ನ ಈ ಹ್ಯಾಕ್‌ ನಡೆದಿದೆ. ಮೇ ತಿಂಗಳಿನಲ್ಲಿ ಇದನ್ನು ತಡೆದಿದ್ದಾಗಿ ಸ್ವತಃ ವಾಟ್ಸಪ್‌ ಹೇಳಿಕೊಂಡಿದೆ.

click me!