ಗೂಗಲ್‌ಗೆ ಡಕ್‌ಡಕ್‌ಗೋ ಸೆಡ್ಡು? ಇಂಟರ್ನೆಟ್ಟಲ್ಲಿ ಇದರದ್ದೇ ಸದ್ದು!

By Suvarna NewsFirst Published Jan 1, 2020, 4:32 PM IST
Highlights
  • ಗೂಗಲ್ ಬಿಟ್ಟು ಡಕ್‌ಡಕ್‌ಗೋ ಮೊರೆ ಹೋದ ಟ್ವಿಟರ್ ಸಿಇಓ!
  • ಗೂಗಲ್‌ಗಿಂತ ಹೇಗಿದು ಭಿನ್ನ? 
  • ಗೂಗಲ್‌ನಲ್ಲಿಲ್ಲದ 5 ಫೀಚರ್‌ ಡಕ್‌ಡಕ್‌ಗೋನಲ್ಲಿ

ಬಂಗಳೂರು (ಜ.01): ಕಳೆದ ತಿಂಗಳು ಸೋಶಿಯಲ್ ಮೀಡಿಯಾ ಲೋಕಕ್ಕೆ ಕಾಲಿಟ್ಟ ಮಾಸ್ಟೊಡಾನ್ ಬಗ್ಗೆ ಓದಿದ್ದೀರಿ.  ದಿಗ್ಗಜ ಸೋಶಿಯಲ್ ಮೀಡಿಯಾ ತಾಣಗಳ ಅರ್ಭಟದ ನಡುವೆ ತೆರೆಮರೆಯಲ್ಲಿದ್ದ ಮಾಸ್ಟೊಡಾನ್ ರಾತೋರಾತ್ರಿ ಜನಪ್ರಿಯವಾಗಿತ್ತು. ಸುಪ್ರೀಂ ಕೋರ್ಟ್ ಹಿರಿಯ ವಕೀಲರೊಬ್ಬರು ಇದನ್ನು ಉಲ್ಲೇಖಿಸಿದ್ದೇ ತಡ, ಮಾಸ್ಟೊಡಾನ್ ಹವಾ ಶುರುವಾಗಿತ್ತು.

ಈಗ, ಅದೇ ರೀತಿ ಟ್ವಿಟರ್ ಸಿಇಒ ಜ್ಯಾಕ್ ಡೋರ್ಸಿ ತಾನು ಗೂಗಲ್‌ ಬಳಕೆ ಬಿಟ್ಟುಬಿಡುವುದಾಗಿ  ಹೇಳಿದ್ದೇ ತಡ,  ಇಂಟರ್ನೆಟ್ ಲೋಕದಲ್ಲಿ ಡಕ್‌ಡಕ್‌ಗೋ ಸದ್ದು ಮಾಡತೊಡಗಿದೆ.

ಇದನ್ನೂ ಓದಿ | 2020ರಲ್ಲಿ ಈ ಟೆಕ್ನಾಲಜಿಯೆಲ್ಲ ನಿಜವಾಗುತ್ತಾ?...

ಏನಿದು ಡಕ್‌ಡಕ್‌ಗೋ?

ಗೂಗಲ್‌ನಂತೆಯೇ ಡಕ್‌ಡಕ್‌ಗೋ (duckduckgo) ಕೂಡಾ ಒಂದು ಸರ್ಚ್ ಇಂಜಿನ್.  ಬಳಕೆದಾರರ ಬ್ರೌಸಿಂಗ್ ಅಥವಾ ಇನ್ನಿತರ ವಿಷಯಗಳನ್ನು ಟ್ರ್ಯಾಕ್ ಮಾಡಲ್ಲ ಎಂದು ಇದು ಹೇಳಿಕೊಂಡಿದೆ. ಸಾಮಾನ್ಯವಾಗಿ, ಗೂಗಲ್ ಸೇರಿದಂತೆ ಬಹುತೇಕ ಸರ್ಚ್ ಇಂಜಿನ್‌ಗಳು  ಬಳಕೆದಾರರ  ಮಾಹಿತಿಯನ್ನು ಟ್ರ್ಯಾಕ್ ಮಾಡಿ ಸಂಗ್ರಹಿಸಿಡುತ್ತವೆ.

2008ರಲ್ಲಿ ಅಸ್ತಿತ್ವಕ್ಕೆ ಬಂದ ಡಕ್‌ಡಕ್‌ಗೋ ಅನ್ನು ಪ್ರತಿನಿತ್ಯ 38.8 ಮಿಲಿಯನ್ ಮಂದಿ ಬಳಸುತ್ತಿದ್ದಾರೆ. ಕಳೆದ ಜೂನ್‌ವರೆಗೆ 31 ಬಿಲಿಯನ್ ಸರ್ಚ್‌ಗಳನ್ನು ಪಡೆದಿದೆ. ಸರ್ಚ್ ಇಂಜಿನ್ ಲೋಕದಲ್ಲಿ 81.5% ಪಾಲು ಹೊಂದಿರುವ ಗೂಗಲ್‌ ಈಗಲೂ ದೈತ್ಯನೇ ಆಗಿದೆ. ಡಕ್‌ಡಕ್‌ಗೋ ಪಾಲು ಬರೇ 0.28 ಮಾತ್ರ!

ಅದಾಗ್ಯೂ ಡಕ್‌ಡಕ್‌ಗೋ ಈ 5 ವಿಷಯಗಳಲ್ಲಿ ಗೂಗಲ್‌ಗಿಂತ ಭಿನ್ನವಾಗಿದೆ.

1.ಗೂಗಲ್ ಸರಚ್ ಇಂಜಿನ್ ಬಳಕೆದಾರರ ಐಪಿ ವಿಳಾಸ, ಬ್ರೌಸಿಂಗ್ ಅಭ್ಯಾಸ, ಭೇಟಿ ನೀಡುವ ವೆಬ್‌ಸೈಟ್ ಅಥವಾ ಆ್ಯಪ್‌ಗಳ ಮಾಹಿತಿಯನ್ನು ಗೂಗಲ್‌ಗೆ ರವಾನಿಸುತ್ತದೆ. ಅದರ ಆಧಾರದಲ್ಲಿ ಗೂಗಲ್ ವೈಯುಕ್ತಿಕ ರುಚಿಗೆ ಸಂಬಂಧಿಸಿದಂತೆ ಜಾಹೀರಾತುಗಳನ್ನು ನೀಡುತ್ತದೆ.  ಡಕ್‌ಡಕ್‌ಗೋ ಬಳಕೆದಾರರ ಐಪಿ ಅಡ್ರೆಸ್‌ ಆಗಲಿ ಅಥವಾ ಇನ್ನಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. 

2. ಡಕ್‌ಡಕ್‌ಗೋ, ಎಲ್ಲೆಲ್ಲೋ ಸಾಧ್ಯವೋ ಅಲ್ಲಲ್ಲಿ ವೆಬ್‌ಸೈಟ್‌ಗಳು ಎನ್‌ಕ್ರಿಪ್ಟೆಡ್ ಸಂಪರ್ಕವನ್ನು ಬಳಸುವಂತೆ  ಮಾಡುತ್ತದೆ.  ಆ ಮೂಲಕ ಬಳಕೆದಾರರ ಮಾಹಿತಿಯನ್ನು ರಕ್ಷಿಸುತ್ತದೆ. ಗೂಗಲ್‌ನಲ್ಲಿ ಈ ವ್ಯವಸ್ಥೆ ಇಲ್ಲ.

ಇದನ್ನೂ ಓದಿ | 2019ರಲ್ಲಿ ಭಾರತದ ಟಾಪ್ 10 ಟ್ರೆಂಡ್ಸ್; 10ನೇಯದ್ದು ತುಂಬಾ ಇಂಟ್ರೆಸ್ಟಿಂಗ್!...

3. ಡಕ್‌ಡಕ್‌ಗೋನಲ್ಲಿ ಸರ್ಚ್‌ನ ಜಾಡು ಇರಲ್ಲ. ಪ್ರತಿ ಬಾರಿ ಸರ್ಚ್ ಮಾಡಿದಾಗ ಹಿಸ್ಟ್ರಿ ಕ್ಲಿಯರ್‌ ಆಗಿರುತ್ತೆ. ಆದರೆ, ಗೂಗಲ್‌ ಬಳಕೆದಾರರ ಸರ್ಚ್ ಹಿಸ್ಟ್ರಿಯನ್ನು ಸಂಗ್ರಹಿಸುತ್ತದೆ.

4. ಡಕ್‌ಡಕ್‌ಗೋನಲ್ಲಿ ಸ್ಮಾರ್ಟರ್ ಎನ್ಕ್ರಿಪ್ಶನ್ ಎಂಬ ವ್ಯವಸ್ಥೆ ಇದೆ.  ಹ್ಯಾಕರ್‌ಗಳ ಹಾವಳಿಯಿಂದ  ಬಳಕೆದಾರರ ಮಾಹಿತಿಯನ್ನು ರಕ್ಷಿಸುತ್ತದೆ.

5. ಡಕ್‌ಡಕ್‌ಗೋನಲ್ಲಿ ಸರ್ಚ್‌ ರಿಸಲ್ಟ್‌ಗಳು ಒಂದೇ ಪೇಜಿನಲ್ಲಿ ಕಾಣಿಸಿಕೊಳ್ಳುತ್ತೆ. ಬಳಕದಾರರು ಸ್ಕ್ರಾಲ್‌ ಮಾಡುತ್ತಾ ಕೆಳಗೆ ಹೋದಂತೆ ಹೊಸ ಹೊಸ ರಿಸಲ್ಟ್‌ಗಳು ಕಾಣಿಸಿಕೊಳ್ಳುತ್ತವೆ. ಗೂಗಲ್‌ನಲ್ಲಿ ಹೆಚ್ಚಿನ ರಿಸಲ್ಟ್‌ಗಳಿಗಾಗಿ ಮುಂದಿನ ಪೇಜ್‌ಗಳನ್ನು ಆಯ್ಕೆಮಾಡಬೇಕು.

click me!