ನೋಡಬನ್ನಿ ವಿಶ್ವದ ಅತ್ಯಂತ ದೊಡ್ಡ ನಕ್ಷತ್ರ ಯುವೈ ಸ್ಕೂಟಿ| ಸ್ಕೂಟಮ್ ತಾರಾಪುಂಜದಲ್ಲಿರುವ ಕೆಂಪು ದೈತ್ಯ ಯುವೈ ಸ್ಕೂಟಿ| ಯುವೈ ಸ್ಕೂಟಿ ಇದುವರೆಗೂ ನಮಗೆ ಗೊತ್ತಿರುವ ಅತಿ ದೊಡ್ಡ ನಕ್ಷತ್ರ| ಸರಾಸರಿ 1,708 ಸೌರ ವ್ಯಾಸಗಳಷ್ಟು ಅಗಾಧ ವಿಸ್ತೀರ್ಣ| ಬರೋಬ್ಬರಿ 2.4 ಶತಕೋಟಿ ಕಿ.ಮೀಯಷ್ಟು ಬೃಹತ್ ವ್ಯಾಸ| 15.9 ಖ.ಮಾ. ಅಥವಾ 1.5 ಶತಕೋಟಿ ಮೈಲಿ ವ್ಯಾಸ| 5 ಬಿಲಿಯನ್‌ಗೂ ಅಧಿಕ ಸೂರ್ಯ ಹಿಡಿಸುವಷ್ಟು ಅಗಾಧವಾಗಿದೆ ಯುವೈ ಸ್ಕೂಟಿ| ಯುವೈ ಸ್ಕೂಟಿಯ ಮೇಲ್ಮೈ ತಾಪಮಾನ ಕೇವಲ 3000 ಕೆಲ್ವಿನ್| ಭೂಮಿಯಿಂದ ಸುಮಾರು 1.55 ಕಿಲೋಪಾರಸೆಕ್ (5,100 ಜ್ಯೋತಿವರ್ಷ) ದೂರ| ಗುರುವಿನ ಕಕ್ಷೆಯನ್ನು ಮೀರಿ ಸಾಗುವ ವಿಸ್ತಾರ ದ್ಯುತಿಗೋಳ| 1860 ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಯುವೈ ಸ್ಕೂಟಿ ದೈತ್ಯ ನಕ್ಷತ್ರ|
ಬೆಂಗಳೂರು(ನ.16): ಬ್ರಹ್ಮಾಂಡ ನಿಜಕ್ಕೂ ನಾವು ಊಹಿಸಿದ್ದಕ್ಕಿಂತಲೂ ಅಗಾಧವಾದುದು. ಬ್ರಹ್ಮಾಂಡದ ಮುಂದೆ ಭೂಮಿಯಷ್ಟೇ ಅಲ್ಲ, ಜೀವನದ ಮೂಲಾಧಾರವಾಗಿರುವ ಸೂರ್ಯ ಕೂಡ ಕುಬ್ಜ. ಸೂರ್ಯನಿಗಿಂತ ಲಕ್ಷಾಂತರ ಪಟ್ಟು ದೊಡ್ಡದಾದ ನಕ್ಷತ್ರಗಳು ಈ ವಿಶ್ವದ ಮೂಲೆಯಲ್ಲಿ ಬೆಳಗುತ್ತಿವೆ.
ವಿಶ್ವದ ಅಧ್ಯಯನದಲ್ಲಿ ನಿರತವಾಗಿರುವ ಖಗೋಳಶಾಸ್ತ್ರಜ್ಞರು, ನಮಗೆ ಗೊತ್ತಿರುವ ವಿಶ್ವದ ಅತ್ಯಂತ ದೊಡ್ಡ ನಕ್ಷತ್ರವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಕೂಟಮ್ (Scutum) ತಾರಾಪುಂಜದಲ್ಲಿರುವ ಯುವೈ ಸ್ಕೂಟಿ (UY Scuti) ಅನಂತ ವಿಶ್ವದ ಅತ್ಯಂತ ದೊಡ್ಡ ನಕ್ಷತ್ರ ಎಂಬುದು ಇದೀಗ ಸಾಬೀತಾಗಿದೆ.
ಪ್ರಕಾಶಮಾನವಾದ ಕೆಂಪು ದೈತ್ಯ ತಾರೆಯಾಗಿರುವ ಯುವೈ ಸ್ಕೂಟಿ, ಇದುವರೆಗೂ ನಮಗೆ ಗೊತ್ತಿರುವ ಅತಿ ದೊಡ್ಡ ನಕ್ಷತ್ರ. ಅಲ್ಲದೇ ಅತ್ಯಂತ ಹೆಚ್ಚು ಹೊಳೆಯುವ ನಕ್ಷತ್ರ ಎಂಬ ಹೆಗ್ಗಳಿಕೆಯೂ ಯುವೈ ಸ್ಕೂಟಿ ಮುಡಿಗೇರಿಸಿಕೊಂಡಿದೆ.
ಏನಿದು ಮಲ್ಟಿವರ್ಸ್?: ತರ್ಕದ ಅನಂತ ಆಕಾಶಕ್ಕೆ ಸ್ವಾಗತ!
ಅಂದಾಜು ಸರಾಸರಿ 1,708 ಸೌರ ವ್ಯಾಸ(Solar Radius)ಗಳಷ್ಟು ಅಗಾಧ ವಿಸ್ತೀರ್ಣ ಹೊಂದಿರುವ ಯುವೈ ಸ್ಕೂಟಿ, ಬರೋಬ್ಬರಿ 2.4 ಶತಕೋಟಿ ಕಿ.ಮೀ ಪ್ರದೇಶವನ್ನು ವ್ಯಾಪಿಸಿದೆ. 15.9 ಖ.ಮಾ. ಅಥವಾ 1.5 ಶತಕೋಟಿ ಮೈಲಿಯ ವ್ಯಾಸ ಹೊಂದಿರುವ ಈ ಯುವೈ ಸ್ಕೂಟಿ ಮುಂದೆ ಸೂರ್ಯ ಲೆಕ್ಕಕ್ಕೂ ಸಿಗದ ಅತ್ಯಂತ ಚಿಕ್ಕ ನಕ್ಷತ್ರ ಎಂದು ಹೇಳಬಹುದು.
ಯುವೈ ಸ್ಕೂಟಿ ಅದೆಷ್ಟು ವಿಶಾಲವಾಗಿದೆ ಎಂದರೆ ಇದರಲ್ಲಿ ಸುಮಾರು 5 ಬಿಲಿಯನ್‌ಗೂ ಅಧಿಕ ಸೂರ್ಯ ಒಳಗೊಳ್ಳಬಲ್ಲದು. ಸರಳವಾಗಿ ಹೇಳುವುದಾದರೆ, ಸೂರ್ಯ ಒಂದು ಬಟಾಣಿ ಕಾಳಿನಷ್ಟು ದೊಡ್ಡದಿದ್ದರೆ, ಯುವೈ ಸ್ಕೂಟಿ ಫುಟ್ಬಾಲ್ ಗಾತ್ರದಷ್ಟು ದೊಡ್ಡದು.
ಭೂಮಿಯಿಂದ ಸುಮಾರು 1.55 ಕಿಲೋಪಾರಸೆಕ್ (5,100 ಜ್ಯೋತಿವರ್ಷ) ದೂರದಲ್ಲಿರುವ ಈ ನಕ್ಷತ್ರ, 7 ಸೌರವರ್ಷಗಳಷ್ಟು ವ್ಯಾಸವನ್ನು ಹೊಂದಿದೆ. ಯುವೈ ಸ್ಕೂಟಿಯನ್ನು ನಮ್ಮ ಸೌರವ್ಯೂಹದ ಕೇಂದ್ರದಲ್ಲಿ ಇರಿಸಿದರೆ, ಅದರ ದ್ಯುತಿಗೋಳವು ಕನಿಷ್ಠ ಗುರುವಿನ ಕಕ್ಷೆಯನ್ನು ಮೀರುತ್ತದೆ.
ಆದರೆ ಯುವೈ ಸ್ಕೂಟಿಯ ಮೇಲ್ಮೈ ತಾಪಮಾನ ಕೇವಲ 3000 ಕೆಲ್ವಿನ್‌ಷ್ಟಿದ್ದು, ಸೂರ್ಯನ ಮೇಲ್ಮೈ ತಾಪಮಾನ 5,778 ಕೆಲ್ವಿನ್‌ಷ್ಟಿದೆ. ಪೋಟಾನ್ ಕಣಗಳು ಬೆಳಕಿನ ವೇಗದಲ್ಲಿ ಸೂರ್ಯನನ್ನು ಸುತ್ತಲು 14. 5 ಸೆಕೆಂಡ್ ಸಮಯ ತೆಗೆದುಕೊಂಡರೆ, ಯುವೈ ಸ್ಕೂಟಿಯನ್ನು ಸುತ್ತಲು ಬರೋಬ್ಬರಿ 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಒಂದು ವೇಳೆ ಮಾನವ ನಿರ್ಮಿತ ಬೋಯಿಂಗ್ 777 ವಿಮಾನ ಯುವೈ ಸ್ಕೂಟಿಯಲ್ಲಿ ಹಾರಟ ನಡೆಸಿದರೆ, ಇಡೀ ನಕ್ಷತ್ರವನ್ನು ಒಂದು ಸುತ್ತಲೂ ಬರೋಬ್ಬರಿ 1,200 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ನಕ್ಷತ್ರದ ಪತ್ತೆ:
ಬೊನ್ನರ್ ಅಬ್ಸರ್ವೇಟರಿಯಲ್ಲಿ ಜರ್ಮನ್ ಖಗೋಳಶಾಸ್ತ್ರಜ್ಞರು ಯುವೈ ಸ್ಕೂಟಿಯನ್ನು ಮೊದಲ ಬಾರಿಗೆ 1860 ರಲ್ಲಿ ಪಟ್ಟಿಮಾಡಿದರು. ವೇರಿಯಬಲ್ ನಕ್ಷತ್ರಗಳ ಹೆಸರಿಗಾಗಿ ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ, ಇದನ್ನು ಯುವೈ ಸ್ಕೂಟಿ ಎಂದು ಕರೆಯಲಾಯಿತು, ಇದನ್ನು ಸ್ಕುಟಮ್ ನಕ್ಷತ್ರಪುಂಜದ 38 ನೇ ವೇರಿಯಬಲ್ ನಕ್ಷತ್ರ ಎಂದು ಗುರಿತಿಸಲಾಗಿದೆ.
ಗ್ರಹ ವ್ಯವಸ್ಥೆ:
ಯುವೈ ಸ್ಕೂಟಿ ನಕ್ಷತ್ರಕ್ಕೆ ಗ್ರಹ ವ್ಯವಸ್ಥೆ ಇರುವ ಕುರಿತು ಯಾವುದೇ ಕುರುಹು ಪತ್ತೆಯಾಗಿಲ್ಲ. ಒಂದು ವೇಳೆ ಯಾವುದೇ ಗ್ರಹ ಇದನ್ನು ಸುತ್ತುವರೆಯುತ್ತಿದ್ದರೂ, ಜೀವನವನ್ನು ಸಲುಹಲು ಅದು ಈ ನಕ್ಷತ್ರದಿಂದ ಬರೋಬ್ಬರಿ 1.5 ಟ್ರಿಲಿಯನ್ ಕಿ.ಮೀ. ದೂರದಲ್ಲಿರಬೇಕಾಗುತ್ತದೆ. ನಮ್ಮ ಭೂಮಿ ಸೂರ್ಯನಿಂದ ಕೇವಲ 150 ಮಿಲಿಯನ್ ಕಿ.ಮೀ ದೂರದಲ್ಲಿದೆ.
ಯುವೈ ಸ್ಕೂಟಿಯನ್ನು ಗ್ರಹವೊಂದು ಒಂದು ಸುತ್ತು ಸುತ್ತಲೂ ಬರೋಬ್ಬರಿ 10 ಸಾವಿರ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಮೂರು ಋತುಗಳು ತಲಾ 2,500 ವರ್ಷಗಳವರೆಗೆ ಅಸ್ತಿತ್ವದಲ್ಲಿರುತ್ತವೆ.
ಇದು ಚೌಕ, ಅಲ್ಲಲ್ಲ ಗೋಳ: ಶುರುವಾಗಿದೆ ‘ವಿಶ್ವ’ಕ್ಕಾಗಿ ಜಗಳ!
ಅಂತ್ಯ:
ಇಷ್ಟು ಅಗಾಧ ನಕ್ಷತ್ರವಾಗಿರುವ ಯುವೈ ಸ್ಕೂಟಿ, ಇನ್ನು ಕೇವಲ 1 ಮಿಲಿಯನ್ ವರ್ಷಗಳವರೆಗೆ ಮಾತ್ರ ಉರಿಯಲಿದೆ. ಈ ನಕ್ಷತ್ರದಿಂದ ಅಗಾಧ ಪ್ರಮಾಣದಲ್ಲಿ ಶಕ್ತಿ ಹೊರಸೂಸುತ್ತಿದ್ದು ಮುಂದಿನ ಒಂದು ಮಿಲಿಯನ್ ವರ್ಷಗಳಲ್ಲಿ ಹೈಡ್ರೋಜನ್ ಅನಿಲ ಖಾಲಿಯಾಗಲಿದೆ. ಅಂದರೆ ಕೇವಲ ಒಂದು ಮಿಲಿಯನ್ ವರ್ಷಗಳಲ್ಲಿ ಯುವೈ ಸ್ಕೂಟಿಯ ಸಾವು ಸಂಭವಿಸಲಿದೆ. ಈ ನಕ್ಷತ್ರ ಸ್ಫೋಟಗೊಂಡಾಗ ಸುಮಾರು 100 ಸೂಪರ್‌ನೋವಾದಷ್ಟು ಶಕ್ತಿ ಹೊರಸೂಸಲಿದೆ ಎನ್ನಲಾಗಿದೆ.