ಗೂಗಲ್ ಪಿಚ್ಚೈಗೆ ಅಲ್ಫಾಬೆಟ್ ಮಣೆ ; ಭಾರತೀಯನ ಹೆಗಲಿಗೆ ಮಾತೃಕಂಪನಿಯ ಹೊಣೆ/ ತಂತ್ರಜ್ಞಾನ- ಕಾರ್ಪೊರೇಟ್ ವಲಯದಲ್ಲಿ ಪ್ರಭಾವ ಹೆಚ್ಚಿಸಿಕೊಂಡ ಭಾರತೀಯ ಸುಂದರ್ ಪಿಚ್ಚೈ/ ಗೂಗಲ್ ಸಿಇಓಗೆ ಪ್ರಮೋಶನ್, ಮಾತೃಕಂಪನಿಯ ಹೊಣೆ/ ಅಧ್ಯಕ್ಷ- ಸಿಇಓ ಹುದ್ದೆಗಳಿಂದ ಕೆಳಗಿಳಿದ ಸಂಸ್ಥಾಪಕ ಜೋಡಿ ಪೇಜ್-ಬ್ರಿನ್
ಬೆಂಗಳೂರು (ಡಿ.04): ಗೂಗಲ್ ಸಿಇಒ ಗೂಗಲ್ ಪಿಚ್ಚೈಗೆ ಪ್ರಮೋಶನ್ ಭಾಗ್ಯ ಸಿಕ್ಕಿದೆ. ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ಕಂಪನಿಯ ಹುದ್ದೆಗಳಿಗೆ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್ ರಾಜೀನಾಮೆ ಪ್ರಕಟಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಆಲ್ಫಾಬೆಟ್ ಸಿಇಓ ಆಗಿ ನಮ್ಮ ಸುಂದರ್ ನೇಮಕವಾಗಿದ್ದಾರೆ. ಸಾಫ್ಟ್‌ವೇರ್ ಮತ್ತು ಇಂಟರ್ನೆಟ್ ದೈತ್ಯ ಕಂಪನಿ ಆಲ್ಫಾಬೆಟ್ ಕಂಪನಿಗೆ ಲ್ಯಾರಿ ಪೇಜ್ ಅಧ್ಯಕ್ಷರಾಗಿದ್ದರೆ, ಬ್ರಿನ್ ಸಿಇಓ ಆಗಿದ್ದರು. 47 ವರ್ಷದ ಸುಂದರ್ , ಗೂಗಲ್‌ನ ಸಿಇಓ ಆಗಿಯೂ ಮುಂದುವರಿಯಲಿದ್ದಾರೆ.
ಕಂಪನಿಯ ಗಾತ್ರ, ಡೇಟಾ ಪ್ರೈವೆಸಿ ಮತ್ತು ಸಾಮಾಜಿಕ ಪರಿಣಾಮಗಳಿಗೆ ಸಂಬಂಧಿಸಿದಂತೆ ಗೂಗಲ್ ಸವಾಲುಗಳನ್ನು ಎದುರಿಸುತ್ತಿದೆ. ಈ ವೇಳೆ, ಹೊಸ ಬದಲಾವಣೆ ಸಿಲಿಕಾನ್ ಕಣಿವೆಯಲ್ಲಿ ತೀವ್ರ ಸಂಚಲನವನ್ನು ಹುಟ್ಟುಹಾಕಿದೆ.
ಕಂಪನಿ ನಡೆಸಲು ಉತ್ತಮ ಆಯ್ಕೆಗಳು ನಮ್ಮ ಮುಂದಿರುವಾಗ, ಹುದ್ದೆಗಳಿಗೆ ಅಂಟಿಕೊಂಡಿರುವ ಜಾಯಮಾನ ನಮ್ಮದಲ್ಲ. ಆಲ್ಫಾಬೆಟ್ ಮತ್ತು ಗೂಗಲ್ ಕಂಪನಿಗಳಿಗೆ ಇಬ್ಬರು ಪ್ರತ್ಯೇಕ ಸಿಇಓ ಮತ್ತು ಅಧ್ಯಕ್ಷರ ಅವಶ್ಯಕತೆಯಿಲ್ಲ. ಗೂಗಲ್ ಮತ್ತು ಆಲ್ಫಾಬೆಟ್ ಎರಡನ್ನೂ ಸುಂದರ್ ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ಸಂಸ್ಥಾಪಕರಿಬ್ಬರು ತಾವು ಬರೆದ ಸಾರ್ವಜನಿಕ ಪತ್ರದಲ್ಲಿ ಹೇಳಿದ್ದಾರೆ.
ನಾಸಾಗೂ ಮೊದಲೇ ಲ್ಯಾಂಡರ್ ಪತ್ತೆ ಮಾಡಿದ್ದೇವು: ಶಿವನ್ ಮಾತುಗಳಿವು!
ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್ ಆಲ್ಪಾಬೆಟ್‌ನ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ನಿರ್ದೇಶಕ ಮಂಡಳಿಯ ಸದಸ್ಯರಾಗಿ, ಶೇರುದಾರರಾಗಿ, ಪಾಲುದಾರರಾಗಿ ಮತ್ತು ಸಂಸ್ಥಾಪಕರಾಗಿ ನಾವು ಕಂಪನಿಯ ವ್ಯವಹಾರಗಳಲ್ಲಿ ಸಕ್ರಿಯರಾಗಿರುತ್ತೇವೆ ಎಂದು ಅವರು ಬರೆದಿದ್ದಾರೆ.
ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್ ಎರಡು ದಶಕಗಳ ಹಿಂದೆ ಗೂಗಲ್ ಕಂಪನಿಯನ್ನು ಸ್ಥಾಪಿಸಿದ್ದರು. 2015ರಲ್ಲಿ ಅದು ಅಲ್ಫಾಬೆಟ್‌ನ ರೂಪ ಪಡೆಯಿತು. ಗೂಗಲ್ ಮ್ಯಾಪ್, ಜಿಮೇಲ್ ಯೂಟ್ಯೂಬ್, ಕ್ರೋಮ್, ಆ್ಯಂಡ್ರಾಯಿಡ್, ಹೀಗೆ ಗೂಗಲ್ ತಂತ್ರಜ್ಞಾನದ ಮೂಲಕ ಜನಸಾಮಾನ್ಯರ ಜೀವನದಲ್ಲಿ ಹಾಸುಹೊಕ್ಕಾಗಿದೆ.
ಈ ಬದಲಾವಣೆಯು ಕಂಪನಿಯ ಆಡಳಿತ ಅಥವಾ ಪ್ರತಿನಿತ್ಯದ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಎಂದು ಪಿಚ್ಚೈ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸುಂದರ್ ಪಿಚ್ಚೈ ಪಯಣ:
ತನ್ನ 15 ವರ್ಷಗಳ ಕರಿಯರ್‌ನಲ್ಲಿ ಪಿಚ್ಚೈ ಗೂಗಲ್ ಕ್ರೋಮ್‌ನಂತಹ ಮಹತ್ವದ ಪ್ರಾಜೆಕ್ಟ್‌ಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಗೂಗಲ್‌ನ ಪ್ರಾಡಕ್ಟ್ ಚೀಫ್ ಆಗಿ, ಆ್ಯಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್‌ನ ಮುಖ್ಯಸ್ಥರಾಗಿ ಕಂಪನಿಯಲ್ಲಿ ಸೇವೆ ಸಲ್ಲಿಸಿದ ಪಿಚ್ಚೈ 2015ರಲ್ಲಿ ಅಲ್ಫಾಬೆಟ್ ಕಂಪನಿ ರಚನೆಯಾದಾಗ ಗೂಗಲ್‌ನ ಸಿಇಓ ಆಗಿ ನೇಮಕವಾದರು. ಆಲ್ಫಾಬೆಟ್ ಕಂಪನಿಯ ನಿರ್ದೇಶಕ ಮಂಡಳಿಯ ಸದಸ್ಯರಾಗಿಯೂ ಇದ್ದಾರೆ.