Android Vs iOS: ಸ್ಮಾರ್ಟ್‌ಫೋನ್‌ ಬಳಕೆದಾರರ ಫೇವರೆಟ್‌ ಯಾವುದು? ಇಲ್ಲಿದೆ ಲೇಟೆಸ್ಟ್‌ ವರದಿ

By Suvarna News  |  First Published Apr 23, 2022, 10:31 AM IST

2022 ರಲ್ಲಿ 25.49 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಐಓಎಸ್, 6 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದ್ದು ಆ್ಯಪಲ್ ಉತ್ತಮ ಬೆಳವಣಿಗೆ ಕಂಡಿದೆ.


ನವದೆಹಲಿ (ಏ. 23): ಅನೇಕ ವರ್ಷಗಳಿಂದ ಆಂಡ್ರಾಯ್ಡ್ ಜಾಗತಿಕವಾಗಿ ಅತ್ಯಂತ ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಐಓಎಸ್ ಮುಂದೆ ಆಂಡ್ರಾಯ್ಡ್ ತನ್ನ ನೆಲೆಯನ್ನು ಕಳೆದುಕೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಆಂಡ್ರಾಯ್ಡ್‌ನ ಮಾರುಕಟ್ಟೆ ಪಾಲು 2018 ರಲ್ಲಿದ್ದ ಶೇಕಡಾ 77.32 ರಿಂದ ಶೇಕಡಾ 69.74 ಕ್ಕೆ ಇಳಿದಿದೆ. ಇದೇ ವೇಳೆ ಆಪಲ್‌ನ ಐಒಎಸ್‌ ಉತ್ತಮ ಬೆಳವಣಿಗೆ ಕಂಡಿದೆ. 

ಇದೇ ವರ್ಷಗಳಲ್ಲಿ ಐಫೋನ್‌ನ ಆಪರೇಟಿಂಗ್ ಸಿಸ್ಟಂ ಶೇಕಡಾ 19.4 ರಿಂದ ಶೇಕಡಾ 25.49 ಕ್ಕೆ ಏರಿದ್ದು, ಜನರು ಆಂಡ್ರಾಯ್ಡ್‌ಗಿಂತ ಹೆಚ್ಚು ಐಓಎಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.  ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದರೂ ಸಹ, ಆಂಡ್ರಾಯ್ಡ್ ಇನ್ನೂ ಜಾಗತಿಕವಾಗಿ ಪ್ರಬಲ ಆಪರೇಟಿಂಗ್ ಸಿಸ್ಟಮ್ ಆಗಿದೆ. 

Tap to resize

Latest Videos

ಇದನ್ನೂ ಓದಿ: Google Play Store Update: ಮೇ 11ರಿಂದ ಥರ್ಡ್‌ ಪಾರ್ಟಿ ಕಾಲ್ ರೆಕಾರ್ಡಿಂಗ್‌ ಆ್ಯಪ್ಸ್ ಬ್ಯಾನ್!

ಅನಾಲಿಟಿಕ್ಸ್ ಸಂಸ್ಥೆ StockApps ವರದಿಯ ಪ್ರಕಾರ ಐಓಎಸ್‌ ಕಳೆದ ನಾಲ್ಕು ವರ್ಷಗಳಿಂದ ಬಳಕೆದಾರರನ್ನು ಗಳಿಸುತ್ತಿದೆ, ಆದರೆ ಇದೇ ವೇಳೆ ಆ್ಯಂಡ್ರಾಯ್ಡ್‌ ಗ್ರಾಹಕರನ್ನು ಕಳೆದುಕೊಂಡಿದೆ. 2022 ರಲ್ಲಿ 25.49 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಐಓಎಸ್ 6 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ, ಇದು ಆಪಲ್‌ಗೆ ಉತ್ತಮ ಬೆಳವಣಿಗೆಯ ಸಂಕೇತವಾಗಿದೆ. 

ಆ್ಯಪಲ್ ವೈಶಿಷ್ಟ್ಯಗಳು ಜನಪ್ರಿಯ: ಆ್ಯಪಲ್ ಕೈಗೆಟುಕುವ ಬೆಲೆಯ iPhone SE ಯಂತಹ ಕೊಡುಗೆಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ತಲುಪುವಲ್ಲಿ ಕೆಲಸ ಮಾಡುತ್ತಿದೆ. ಇಷ್ಟು ವರ್ಷಗಳಲ್ಲಿ ಆಪಲ್‌ನ ಪ್ರಮುಖ ಐಫೋನ್‌ಗಳು ಯಾವುದೇ ರೀತಿಯಲ್ಲಿ ಅಗ್ಗವಲ್ಲದಿದ್ದರೂ, ಅವುಗಳಲ್ಲಿನ ವೈಶಿಷ್ಟ್ಯಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೆಚ್ಚಿನ ಮೌಲ್ಯದ ರಿಯಾಯಿತಿಗಳು ಮತ್ತು ಐಫೋನ್‌ಗಳಲ್ಲಿ ಲಭ್ಯವಿರುವ ಕೊಡುಗೆಗಳಿಂದಾಗಿ ಐಓಎಸ್ ಜನಪ್ರಿಯತೆಯು ಗಣನೀಯವಾಗಿ ಬೆಳೆದಿದೆ. ಉದಾಹರಣೆಗೆ, ನೀವು ಭಾರತದಲ್ಲಿ ಇತ್ತೀಚಿನ iPhone 13ನ್ನು 13,000 ರೂಪಾಯಿಗಳ ರಿಯಾಯಿಯೊಂದಿಗೆ ಖರೀದಿಸಬಹುದು. ಈ ರಿಯಾಯಿತಿಗಳನ್ನು ಸಾಮಾನ್ಯವಾಗಿ ಥರ್ಡ್‌ ಪಾರ್ಟಿ ಮಾರಾಟಗಾರರು ಬ್ಯಾಂಕ್‌ಗಳ ಸಹಯೋಗದೊಂದಿಗೆ ನೀಡುತ್ತಾರೆ.

ಇದನ್ನೂ ಓದಿ: ಗೂಗಲ್ ಪ್ಲೇ ಸ್ಟೋರ್‌ ಮಹತ್ವದ ಬದಲಾವಣೆ: ನವೆಂಬರ್‌ನಿಂದ ಈ ಆ್ಯಪ್ಸ್‌ ಡೌನ್‌ಲೋಡ್‌ ಅಸಾಧ್ಯ

ಆಂಡ್ರಾಯ್ಡ್, ಪ್ರತಿ ವರ್ಷ ಹೊಸ ಆವೃತ್ತಿಯನ್ನು ಪಡೆಯುತ್ತಿದ್ದರೂ ಯುನಿಕ್ ವೈಶಿಷ್ಟ್ಯವನ್ನು ಹೊಂದಿಲ್ಲ. ಬದಲಿಗೆ, ಇದು ಆಪಲನ್ನು ಅನುಸರಿಸಿ ಗೌಪ್ಯತೆ ಸೂಚಕಗಳು ಮತ್ತು ಅಪ್ಲಿಕೇಶನ್‌ಗಳಿಗೆ ಗ್ರ್ಯಾನ್ಯುಲರ್ ಅನುಮತಿಗಳಂತಹ ವಿಷಯಗಳನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಪ್ರತಿ ಬೆಲೆಯಲ್ಲೂ ಆಂಡ್ರಾಯ್ಡ್ ಫೋನ್‌ಗಳು ಲಭ್ಯವಾಗಿರುವುದರಿಂದ ಕೆಲವು ಗ್ರಾಹಕರು ಈ ರಾಶಿಯಲ್ಲಿ‌ ಯಾವುದೇ ಫೋನ್ ಖರೀದಿಸಲು ಹಿಂದೇಟು ಹಾಕಬಹುದು.  

ಪ್ರಬಲ ಆಪರೇಟಿಂಗ್ ಸಿಸ್ಟಮ್:  ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದರೂ ಸಹ, ಆಂಡ್ರಾಯ್ಡ್ ಇನ್ನೂ ಜಾಗತಿಕವಾಗಿ ಪ್ರಬಲ ಆಪರೇಟಿಂಗ್ ಸಿಸ್ಟಮ್ ಆಗಿದೆ. ಅದರ ಪ್ರಸ್ತುತ ಪಾಲು 69.74, ಆಪಲ್‌ನ ಮಾರುಕಟ್ಟೆ ಪಾಲಿನ ಅರ್ಧಕ್ಕಿಂತ ಹೆಚ್ಚು. ಭಾರತ ಸೇರಿದಂತೆ ಏಷ್ಯಾದಲ್ಲಿ, ಆಂಡ್ರಾಯ್ಡ್ ಪಾಲು ಶೇಕಡಾ 81 ರಷ್ಟಿದ್ದರೆ, ಐಒಎಸ್ ಪಾಲು ಶೇಕಡಾ 18 ರಷ್ಟಿದೆ ಎಂದು ವರದಿ ತಿಳಿಸಿದೆ. ಯುಎಸ್ನಲ್ಲಿ, ಐಒಎಸ್ 54 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಆಂಡ್ರಾಯ್ಡ್ನ ಪಾಲು ಶೇಕಡಾ 45 ರಷ್ಟಿದೆ.

ಹಣಕಾಸು ತಜ್ಞ ಎಡಿತ್ ರೀಡ್ಸ್ ಪ್ರಕಾರ, ಆಂಡ್ರಾಯ್ಡ್ ಐಒಎಸ್‌ಗಿಂತ ಹೆಚ್ಚು ಪ್ರಯೋಜನ ಹೊಂದಿದೆ ಏಕೆಂದರೆ ಇದು ಓಪನ್ ಸೋರ್ಸ್ ಆಗಿದೆ, ಇದು ಬಳಕೆದಾರರಿಗೆ ಕ್ರಿಯಾತ್ಮಕತೆಯ ವಿಷಯದಲ್ಲಿ ಹೆಚ್ಚ ಅವಕಾಶಗಳನ್ನು ನೀಡುತ್ತದೆ. ಐಒಎಸ್, ಮತ್ತೊಂದೆಡೆ, ಆಪಲ್ ಸಾಧನಗಳೊಂದಿಗೆ ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ.  ಐಓಎಸ್  ಐಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ, ಆದರೆ ಆಂಡ್ರಾಯ್ಡ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಸಾಧನಗಳಲ್ಲಿ ಲಭ್ಯವಿದೆ.

ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಲು ಮತ್ತೊಂದು ಕಾರಣವೆಂದರೆ ಅದರ ಕೈಗೆಟುಕುವಿಕೆ. ಅತ್ಯಂತ ಕೈಗೆಟುಕುವ ಐಫೋನ್ ಮಾದರಿಯ ಆರಂಭಿಕ ಬೆಲೆ 43,900 ರೂ.ಗಳಿಗೆ ಹೋಲಿಸಿದರೆ ಆಂಡ್ರಾಯ್ಡ್ ಫೋನ್‌ಗಳು ಭಾರತದಲ್ಲಿ 4,000 - 5,000 ರೂ ಗಳಲ್ಲಿ ಕಡಿಮೆ ಬೆಲೆಗೆ  ಲಭ್ಯವಿದೆ. 

click me!