ದಿವಾಳಿಯ ಅಂಚಿನಲ್ಲಿ ವೊಡಾಫೋನ್‌ ಕಂಪನಿ!

By Kannadaprabha News  |  First Published Feb 19, 2020, 7:35 AM IST

ದಿವಾಳಿಯ ಅಂಚಿನಲ್ಲಿ ವೊಡಾಫೋನ್‌ ಕಂಪನಿ!| ಬಾಕಿ ಪಾವತಿಸಲು ಹಣವಿಲ್ಲದೆ ತೀವ್ರ ಪರದಾಟ| 53000 ಕೋಟಿ ಬಾಕಿ| 1.15 ಲಕ್ಷ ಕೋಟಿ ಸಾಲ


ನವದೆಹಲಿ[ಫೆ.19]: ಭರ್ಜರಿ 53038 ಕೋಟಿ ರು. ಎಜಿಆರ್‌ ಶುಲ್ಕ ಕಟ್ಟುವಂತೆ ಕೇಂದ್ರ ಸರ್ಕಾರದಿಂದ ನೋಟಿಸ್‌ ಪಡೆದುಕೊಂಡಿರುವ ದೇಶದ ದೊಡ್ಡ ಮೊಬೈಲ್‌ ದೂರವಾಣಿ ಸೇವಾ ಕಂಪನಿಯಾಗಿರುವ ‘ವೊಡಾಫೋನ್‌-ಐಡಿಯಾ’ ದಿವಾಳಿ ಅಂಚಿನಲ್ಲಿದೆ ಎಂದು ವರದಿಗಳು ಹೇಳಿವೆ.

ವೊಡಾಫೋನ್‌- ಐಡಿಯಾ ಕಂಪನಿ 53038 ಕೋಟಿ ಎಜಿಆರ್‌ ಶುಲ್ಕ ಮಾಡಬೇಕಿರುವುದರ ಜೊತೆಗೆ, 1,15,850 ಕೋಟಿ ರು. ಇತರೆ ಸಾಲವೂ ಇದೆ. ಇದರ ಹೊರತಾಗಿ ಕಂಪನಿ ಭಾರೀ ಪ್ರಮಾಣದಲ್ಲಿ ಲೀಸ್‌ ಹೊಣೆಗಾರಿಕೆಯನ್ನೂ ಹೊಂದಿದೆ. ಇದೆಲ್ಲಾ ಒಟ್ಟು ಸೇರಿದಲ್ಲಿ ಅದು ಸುಮಾರು 2 ಲಕ್ಷ ಕೋಟಿ ಆಸುಪಾಸಿಗೆ ಬರುತ್ತದೆ. ಈಗಾಗಲೇ ಜಿಯೋ ನೀಡಿದ ಹೊಡೆತದಿಂದ ತತ್ತರಿಸುತ್ತಿರುವಾಗಲೇ, ಬೆನ್ನೇರಿರುವ ಈ ಅಂದಾಜು 2 ಲಕ್ಷ ಕೋಟಿ ರು. ಪಾವತಿ ಮಾಡುವುದು ವೊಡಾಫೋನ್‌- ಐಡಿಯಾಗೆ ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

undefined

ಈ ವರದಿಗಳ ಬೆನ್ನಲ್ಲೇ ವೊಡಾಪೋನ್‌ ಐಡಿಯಾದ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ, ಮಂಗಳವಾರ ಟೆಲಿಕಾಂ ಕಾರ್ಯದರ್ಶಿ ಅನ್ಷು ಪ್ರಕಾಶ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಟೆಲಿಕಾಂ ಕಂಪನಿಗಳು ಎಜಿಆರ್‌ ಶುಲ್ಕ ಪಾವತಿ ಮಾಡದೇ ಇದ್ದಲ್ಲಿ, ಕೇಂದ್ರ ಸರ್ಕಾರವು, ಕಂಪನಿಗಳು ಇಟ್ಟಿರುವ ಬ್ಯಾಂಕ್‌ ಖಾತರಿ ಹಣ ಮುಟ್ಟುಗೋಲು ಹಾಕಿಕೊಳ್ಳಲು ಚಿಂತಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಭೇಟಿ ನಡೆದಿದೆ.

ಏರ್‌ಟೆಲ್‌, ವೊಡಾ, ಟಾಟಾದಿಂದ ಕೇಂದ್ರಕ್ಕೆ 15 ಸಾವಿರ ಕೋಟಿ ಪಾವತಿ!

ಭರ್ಜರಿ ಬಾಕಿ:

ವಿವಿಧ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ 1.46 ಲಕ್ಷ ಕೋಟಿ ರು. ಎಜಿಆರ್‌ (ಅಡ್ಜಸ್ಟೆಡ್‌ ಗ್ರಾಸ್‌ ರೆವಿನ್ಯೂ- ದೂರಸಂಪರ್ಕ ಕಂಪನಿಗಳು ಗಳಿಸುವ ಒಟ್ಟು ಆದಾಯದಲ್ಲಿ ಕೇಂದ್ರ ಸರ್ಕಾರಕ್ಕೆ ಕೊಡಬೇಕಿರುವ ಪಾಲು) ನೀಡಬೇಕಿದೆ. ಇದರಲ್ಲಿ ವೊಡಾಫೋನ್‌ ಪಾಲು 53,038 ಕೋಟಿ ರುಪಾಯಿ. ಇದರ ಮೊದಲ ಭಾಗವಾಗಿ 2500 ಕೋಟಿ ರು.ಗಳನ್ನು ಸೋಮವಾರ ವೊಡಾಫೋನ್‌ ಕಟ್ಟಿದೆ. ಉಳಿದ ಬಾಕಿ ಮೊತ್ತ ಕಟ್ಟಲು ಸಮಯ ನೀಡಿ ಎಂಬ ಕಂಪನಿಯ ವಕೀಲರ ಕೋರಿಕೆಗೆ ಕೋರ್ಟ್‌ ಮನ್ನಣೆ ನೀಡಿಲ್ಲ. ಇದರ ಬದಲು, ಕಂಪನಿ ನೀಡಿರುವ ಬ್ಯಾಂಕ್‌ ಖಾತರಿಗಳನ್ನು ನಗದು ಮಾಡಿಕೊಂಡು ಬಾಕಿ ವಸೂಲಿಗೆ ಆದೇಶಿಸಿದೆ.

ಮತ್ತೊಂದೆಡೆ ಬಾಕಿ ಇರುವ ಎಜಿಆರ್‌ ಶುಲ್ಕವನ್ನು ಮಾ.17ರೊಳಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು ಎಂದು ಈಗಾಗಲೇ ಸುಪ್ರೀಂಕೋರ್ಟ್‌ ಸೂಚಿಸಿದೆ. ಒಂದು ವೇಳೆ ಈ ಹಣ ಪಾವತಿ ಹೆಚ್ಚಿನ ಸಮಯ ನೀಡುವ ಪರಿಹಾರವನ್ನು ಕೇಂದ್ರ ಸರ್ಕಾರ ಒದಗಿಸದೇ ಹೋದಲ್ಲಿ ಕಂಪನಿ ದಿವಾಳಿಯತ್ತ ಮುಖ ಮಾಡುವುದು ಅನಿವಾರ್ಯ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಷೇರುಪೇಟೆಗೆ ಡಿಸೆಂಬರ್‌ 31, 2019ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ವಿವರ ನೀಡಿದ್ದ ವೊಡಾಫೋನ್‌, ‘ಭಾರತದಲ್ಲಿ ನಮ್ಮ ಕಂಪನಿಯು ವ್ಯವಹಾರ ಮುಂದುವರಿಸುವುದು ಮುಂಬರುವ ನಮ್ಮ ಪರವಾದ ಆದೇಶದ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿತ್ತು. ಒಂದು ವೇಳೆ ವೊಡಾಫೋನ್‌- ಐಡಿಯಾ ದಿವಾಳಿಯಾದರೆ, ದೇಶದಲ್ಲಿ ಏರ್‌ಟೆಲ್‌, ಜಿಯೋ ಹಾಗೂ ಬಿಎಸ್‌ಎನ್‌ಎಲ್‌ ಮಾತ್ರ ಉಳಿದುಕೊಳ್ಳಲಿವೆ.

click me!