ಚಂದ್ರನ ಮಣ್ಣು ತಂದವನೊಬ್ಬ, ಮುಟ್ಟಿದವ ಮತ್ತೊಬ್ಬ: ಫೋಟೋಗ್ರಾಫರ್ ಅಬ್ಬಬ್ಬ!

By nikhil vk  |  First Published Jul 30, 2019, 5:23 PM IST

ಚಂದ್ರನ ನೆಲ ಮುಟ್ಟಿ ಬಂದ ಅಪೊಲೋ-11 ಗಗನಯಾತ್ರಿಗಳು| ನಾಸಾದ ಐತಿಹಾಸಿಕ ಸಾಧನೆಗೆ ಭರ್ತಿ 50 ವರ್ಷಗಳು| ಅಚಾತುರ್ಯದಿಂದ ಚಂದ್ರನ ಮಣ್ಣು ಮುಟ್ಟಿದ ನಾಸಾದ ಫೋಟೋಗ್ರಾಫರ್| ಚಂದ್ರನ ಮಣ್ಣು ಮುಟ್ಟಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಟೆರ್ರಿ ಸ್ಲೆಜಕ್| ನೀಲ್ ಆರ್ಮ್’ಸ್ಟ್ರಾಂಗ್ ಬೀಳಿಸಿದ್ದ ವಿಡಿಯೋ ಟೇಪ್ | ವಿಡಿಯೋ ಟೇಪ್ ಬಾಕ್ಸ್ ಮೇಲಿದ್ದ ಚಂದ್ರನ ಮಣ್ಣು ಮುಟ್ಟಿದ್ದ ಟೆರ್ರಿ| ವೈದ್ಯಕೀಯ ಪರೀಕ್ಷೆಗೆ ಗುರಿಯಾದ ಫೋಟೋಗ್ರಾಫರ್ ಟೆರ್ರಿ|


ವಾಷಿಂಗ್ಟನ್(ಜು.30): ನಾಸಾದ ಅಪೊಲೋ-11 ಗಗನಯಾತ್ರಿಗಳು, ಕಷ್ಟಪಟ್ಟು ಚಂದ್ರನ ನೆಲ ಮುಟ್ಟಿ ಅಲ್ಲಿಂದ ಕಲ್ಲು, ಮಣ್ಣು ಹೊತ್ತು ತಂದಿದ್ದರು. ಆದರೆ ಅವರು ಹೊತ್ತು ತಂದ ಚಂದ್ರನ ಈ ಅಪೂರ್ವ ಆಸ್ತಿಯನ್ನು ಮುಟ್ಟಲು ಅವರಿಗೂ ಅನುಮತಿ ನೀಡಿರಲಿಲ್ಲ.

ಆದರೆ ಚಂದ್ರನ ನೆಲದಿಂದ ಹೊತ್ತು ತಂದ ವಸ್ತುಗಳ ಕುರಿತು ಸಾಕ್ಷ್ಯಚಿತ್ರ ತಯಾರಿಸುವ ಸಂದರ್ಭದಲ್ಲಿ ನಾಸಾದ ಫೋಟೋಗ್ರಾಫರ್ ಓರ್ವ ಅಚಾತುರ್ಯದಿಂದ ಚಂದ್ರನ ಮಣ್ಣನ್ನು ಮುಟ್ಟುವ ಮೂಲಕ ಚಂದ್ರನ ಮಣ್ಣನ್ನು ಮುಟ್ಟಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ.

Latest Videos

undefined

ಹೌದು, ಜುಲೈ 24 1969ರಂದು ಅಪೊಲೋ-11 ನೌಕೆ ಯಶಸ್ವಿಯಾಗಿ ಭೂಮಿಗೆ ಮರಳಿತ್ತು. ಅಪೊಲೋ-11 ನೌಕೆಯ ಗಗನಯಾತ್ರಿಗಳಾದ ನೀಲ್ ಆರ್ಮ್’ಸ್ಟ್ರಾಂಗ್, ಬಜ್ ಆಲ್ಡ್ರೀನ್ ಹಾಗೂ ಮೈಕೆಲ್ ಕೋಲಿನ್ಸ್ ಅವರನ್ನು ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ಚಂದ್ರನಿಂದ ಮಾರಕ ಸೂಕ್ಷ್ಮಾಣು ಜೀವಿಗಳನ್ನೇನಾದರೂ ಈ ಗಗನಯಾತ್ರಿಗಳು ಹೊತ್ತು ತಂದಿದ್ದಾರೆಯೇ ಎಂದು ತಿಳಿಯಲು,  ಹಲವು ದಿನಗಳ ಕಾಲ ಈ ಮೂವರನ್ನೂ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಯಿತು. 

ಈ ಮಧ್ಯೆಯೇ ನಾಸಾ ಯಶಸ್ವಿ ಚಂದ್ರಯಾನದ ಕುರಿತು ಸಾಕ್ಷ್ಯಚಿತ್ರ ತಯಾರಿಸಲು ಮುಂದಾಯಿತು. ಹೀಗಾಗಿ ಚಂದ್ರನ ನೆಲದಿಂದ ತರಲಾಗಿದ್ದ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಫೋಟೋಗ್ರಾಫರ್ ಟೆರ್ರಿ ಸ್ಲೆಜಕ್ ಅಚಾತುರ್ಯದಿಂದ ವಿಡಿಯೋ ಕಂಟೇನರ್ ಮೇಲಿದ್ದ ಚಂದ್ರನ ಮಣ್ಣನ್ನು ಮುಟ್ಟಿ ಆತಂಕ ಸೃಷ್ಟಿಸಿದ್ದರು.

ನೀಲ್ ಆರ್ಮ್’ಸ್ಟ್ರಾಂಗ್, ಬಜ್ ಆಲ್ಡ್ರೀನ್ ಚಂದ್ರನ ಮೇಲೆ ಪರಸ್ಪರರ ಹಾಗೂ ಚಂದ್ರನ ಮೇಲ್ಮೈನ ವಿಡಿಯೋ ಮಾಡಿದ್ದರು. ಈ ವಿಡಿಯೋಗಳು ಟೇಪ್’ಗಳಲ್ಲಿ ಶೇಖರಿಸಲಾಗಿತ್ತು. ಆದರೆ ಹೊರಡುವ ವೇಳೆ ನೀಲ್ ಆರ್ಮ್’ಸ್ಟ್ರಾಂಗ್’ ಒಂದು ಟೇಪ್’ನ್ನು ಕೆಳಗಡೆ ಬೀಳಿಸಿದ್ದರು. ನೌಕೆಯ ಏಣಿ ಏರುವಾಗ ನೀಲ್ ಅವರನ್ನು ಹಿಂಬಾಲಿಸುತ್ತಿದ್ದ ಬಜ್ ಆಲ್ಡ್ರೀನ್ ಮತ್ತೆ ಕೆಳಗಿಳಿದು ಆ ಟೇಪ್’ನ್ನು ಮರಳಿ ತಂದಿದ್ದರು.

ಈ ಟೇಪ್’ನ್ನು ಇಡಲಾಗಿದ್ದ ಬಾಕ್ಸ್’ನ್ನು ನಾಸಾ ಅತ್ಯಂತ ಸುರಕ್ಷಿತವಾಗಿ ಪ್ಯಾಕ್ ಮಾಡಿ ಇಟ್ಟಿತ್ತು. ಆದರೆ ವಿಡಿಯೋ ಬಾಕ್ಸ್’ನ್ನು ತೆರೆದು ಅದರಲ್ಲಿನ ಟೇಪ್ ಸಂಗ್ರಹಿಸಲು ಮುಂದಾದ ಟೆರ್ರಿ ಸ್ಲೆಜೆಕ್, ಅಚಾತುರ್ಯದಿಂದ ಟೇಪ್ ಮೇಲಿದ್ದ ಮಣ್ಣನ್ನು ಬರಿಗೈಲಿ ಮುಟ್ಟಿ ಆತಂಕ ಸೃಷ್ಟಿಸಿದರು.

ಕೂಡಲೇ ಟೆರ್ರಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಯಿತು. ವೈದ್ಯಕೀಯ ಪರೀಕ್ಷೆ ಬಳಿಕ ಜೆಕ್ ಸುರಕ್ಷಿತವಾಗಿದ್ದಾರೆಂದು ಸಾಬೀತಾಗಿತ್ತು. ಆದರೆ ಅಚಾತುರ್ಯವೇ ಸರಿ ಚಂದ್ರನ ಮಣ್ಣನ್ನು ಮುಟ್ಟಿದ ಮೊದಲ ಮಾನವನೆಂಬ ಹೆಗ್ಗಳಿಕೆಗೆ ಟೆ್ರ್ರಿ ಪಾತ್ರವಾಗಿದ್ದು ಮಾತ್ರ ಸತ್ಯ.

click me!