ಮೊಬೈಲ್ ಕಂಪೆನಿಗಳು ಟೀವಿ ತಯಾರಿಕೆಗೆ ಹೊರಟಿವೆಯೋ ಟೀವಿ ಕಂಪೆನಿಗಳು ಮೊಬೈಲ್ ತಯಾರಿಸುತ್ತಿವೆಯೋ ಎಂದು ಗೊಂದಲಗೊಳ್ಳುವಷ್ಟರ ಮಟ್ಟಿಗೆ ಅವುಗಳ ನಡುವಿನ ಸಂಬಂಧ ಗಾಢವಾಗಿದೆ. ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದಿರುವ ಒನ್‌ಪ್ಲಸ್ ಕೂಡಾ ಟೀವಿ ಕ್ಷೇತ್ರಕ್ಕೆ ಕಾಲಿಡುತ್ತಿದೆ.
ಸ್ಯಾಮ್ಸಂಗ್, ಸೋನಿ- ಮುಂತಾದ ಕಂಪೆನಿಗಳು ಟೀವಿಯ ಜೊತೆಗೆ ಸೆಲ್‌ಫೋನ್ ಉತ್ಪಾದನೆಗೂ ಕೈ ಹಾಕಿ ಸೈ ಅನ್ನಿಸಿಕೊಂಡವು. ಇದೀಗ ಫೋನ್ ಉತ್ಪಾದಕರ ಸರದಿ.
ಇತ್ತೀಚೆಗಷ್ಟೇ ಶಿಯೋಮಿ ಮೊಬೈಲ್ ಫೋನುಗಳ ಜೊತೆ ಟೀವಿ ನಿರ್ಮಾಣದಲ್ಲೂ ತೊಡಗಿಕೊಂಡು ಎಂಐ ಟೀವಿಗಳನ್ನು ಮಾರುಕಟ್ಟೆಗೆ ಬಿಟ್ಟು ಗೆದ್ದದ್ದು ನೆನಪಿರಬಹುದು. 48 ಇಂಚಿನ 4ಕೆ ಸ್ಮಾರ್ಟ್ ಟೀವಿ ಮೊಬೈಲ್ ಬೆಲೆಗೆ ಸಿಗತೊಡಗಿದಾಗ ಅದನ್ನು ಗ್ರಾಹಕರು ಮುಗಿಬಿದ್ದು ಕೊಂಡುಕೊಂಡದ್ದೂ ಆಗಿಹೋಗಿದೆ.
ಇದೀಗ ಒನ್‌ಪ್ಲಸ್ ಟೀವಿ ನಿರ್ಮಾಣಕ್ಕೆ ಕೈ ಹಾಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಒನ್‌ಪ್ಲಸ್ ಟೀವಿಗಳು ಮಾರುಕಟ್ಟೆಯಲ್ಲಿರುತ್ತವೆ ಎಂದು ಕಂಪೆನಿ ಹೇಳಿದೆ. ಒನ್‌ಪ್ಲಸ್ ಸೆವೆನ್-ಟಿ ಮೊಬೈಲುಗಳು ಸೆಪ್ಟೆಂಬರ್ 26ರಂದು ಬಿಡುಗಡೆಯಾಗಲಿದ್ದು ಅದರ ಜೊತೆಗೇ ಟೀವಿ ಕೂಡ ಬರಲಿದೆ ಎನ್ನುತ್ತದೆ ಒಂದು ಮೂಲ.
ಇದನ್ನೂ ಓದಿ | ಆನ್‌ಲೈನ್ ಬ್ಯಾಂಕ್ ಆಯ್ಕೆ ಮಾಡುವಾಗ ಈ ವಿಷಯಗಳನ್ನು ಗಮನಿಸಿ!
ಸ್ಮಾರ್ಟ್ ಟೀವಿ- ಒನ್‌ಪ್ಲಸ್ ಟೀವಿಯನ್ನು ಮೊದಲು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಒನ್‌ಪ್ಲಸ್ ಫೋನುಗಳಲ್ಲಿ ಭಾರತವೇ ಅತಿ ದೊಡ್ಡ ಮಾರುಕಟ್ಟೆ. ಟೀವಿಗೂ ಕೂಡ ಅದು ಲಭ್ಯವಾಗಲಿದೆ ಎಂಬ ಕಾರಣಕ್ಕೆ ಒನ್‌ಪ್ಲಸ್ ಟೀವಿ ಭಾರತವನ್ನ ಆರಿಸಿಕೊಂಡಿದೆ.
ಮುಂದಿನ ವರ್ಷದ ಹೊತ್ತಿಗೆ ಭಾರತದ ಬೆಡ್‌ರೂಮುಗಳಲ್ಲಿ ಮೊಬೈಲ್ ಫೋನಿನಷ್ಟೇ ಸುಲಭವಾಗಿ ಬಳಸಬಲ್ಲ, ಸೆಲ್‌ಫೋನಿಗಿರುವ ಎಲ್ಲಾ ಫೀಚರ್‌ಗಳೂ ಇರುವ ಆ್ಯಂಡ್ರಾಯಿಡ್ ಟೀವಿ ಪ್ರತ್ಯಕ್ಷವಾದರೆ ಅದಕ್ಕೆ ಒನ್‌ಪ್ಲಸ್ ಸಂಸ್ಥೆಯೇ ಕಾರಣ ಎನ್ನಬಹುದು.