
ಇಂಡೋನೇಷ್ಯಾ(ಡಿ. 04): ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಲು ಚೀನಾ (China) ಪ್ರಯತ್ನ ಪಡುತ್ತಿರುವ ಬೆನ್ನಲ್ಲೇ ಇಂಡೋನೇಷ್ಯಾ ತನ್ನ ಭದ್ರತಾ ಉಪಕರಣವನ್ನು ಹೆಚ್ಚಿಸಲು ಭಾರತದಿಂದ ರಕ್ಷಣಾ ತಂತ್ರಜ್ಞಾನವನ್ನು (Defence Tech) ಕೋರಿದೆ. ಆಗ್ನೇಯ ಏಷ್ಯಾದ ಅತಿದೊಡ್ಡ ರಾಷ್ಟ್ರ ಇಂಡೋನೆಷ್ಯಾ ಭಾರತದೊಂದಿಗೆ ಜಂಟಿ ರಕ್ಷಣಾ ಉತ್ಪಾದನೆ ಮಾಡುತ್ತಿದೆ. ಜತೆಗೆ ಭಾರತ ಮತ್ತು ಇಂಡೋನೇಷ್ಯಾ ಮಿಲಿಟರಿ ವಾಹನಗಳು ಮತ್ತು ಜಲ ಫಿರಂಗಿಗಳನ್ನು ಜಂಟಿಯಾಗಿ ಉತ್ಪಾದಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ರಕ್ಷಣಾ ತಂತ್ರಜ್ಞಾನದಲ್ಲಿ ಕೌಶಲ್ಯಗಳನ್ನು ಪಡೆಯಲು ಇಂಡೋನೇಷಿಯಾ ಈ ಒಪ್ಪಂದಕ್ಕೆ ಮುಂದಾಗಿದೆ. . ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಸರನ್ (Pankaj Saran) ಕಳೆದ ವಾರ ಇಂಡೋನೇಷ್ಯಾದ ರಕ್ಷಣಾ ಸಚಿವ ಪ್ರಬಾವೊ ಸುಬಿಯಾಂಟೊ (Prabawo Subianto) ಮತ್ತು ಅಧ್ಯಕ್ಷೀಯ ಮುಖ್ಯಸ್ಥ ಎಚ್ ಮೊಲ್ಡೊಕೊ (H Moeldoko) ಸೇರಿದಂತೆ ಇತರ ಪ್ರಮುಖರನ್ನು ಜಕಾರ್ತಾದಲ್ಲಿ ಭೇಟಿಯಾಗಿದ್ದರು. ಈ ವೇಳೆ ರಾಷ್ಟ್ರಗಳ ಮಧ್ಯೆ ಪಾಲುದಾರಿಕೆ ಮತ್ತು ಜಂಟಿ ರಕ್ಷಣಾ ಉತ್ಪಾದನೆಯನ್ನು ವಿಸ್ತರಿಸುವುದರ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ ಎಂದು ತಿಳಿದು ಬಂದಿದೆ. ಜತೆಗೆ ಸಭೆಯಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಡಿರ‍್ಯಾಡಿಕಲೈಸೇಶನ್ ಬಗ್ಗೆ ಕೂಡ ಚರ್ಚಿಸಲಾಗಿದೆ.
ಉಗ್ರವಾದವನ್ನು ಎದುರಿಸುವಲ್ಲಿ ಸಹಕಾರ!
ಡಿಸೆಂಬರ್ 8 ರಂದು ಸರನ್ ಅವರೊಂದಿಗಿನ ಸಭೆಯಲ್ಲಿ, ಇಂಡೋನೇಷ್ಯಾ ಮತ್ತು ಭಾರತವು ರಕ್ಷಣಾ ಕ್ಷೇತ್ರ ಸೇರಿದಂತೆ ಹಲವಾರು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿದೆ ಎಂದು ಮೊಯೆಲ್ಡೊಕೊ ಹೇಳಿದ್ದಾರೆ. "ನಾವು ಮೂಲಭೂತವಾದ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿದ್ದೇವೆ. ಆದ್ದರಿಂದ, ರಕ್ಷಣಾ ವಲಯದಲ್ಲಿ ಬಲವಾದ ಸಂಬಂಧಗಳನ್ನು ನಿರ್ಮಿಸಲು ನಾವು ಸಹಕಾರವನ್ನು ಅಭಿವೃದ್ಧಿಪಡಿಸಬಹುದು" ಎಂದು ಮೊಯೆಲ್ಡೊಕೊ ಹೇಳಿದ್ದಾರೆ ಎಂದು ವರದಿಯಾಗಿದೆ.
ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ಮತ್ತು ನವದೆಹಲಿಯು, ತಂತ್ರಜ್ಞಾನ ವರ್ಗಾವಣೆ ಮತ್ತು ರಕ್ಷಣಾ ವಲಯದಲ್ಲಿ ಸ್ಥಳೀಯ ಉತ್ಪಾದನಾ ಕೈಗಾರಿಕೆಗಳ ಅಭಿವೃದ್ಧಿಗೆ ಒಂದಾಗಲಿವೆ. ದಕ್ಷಿಣ ಚೀನಾ ಸಮುದ್ರ (South China Sea region) ಪ್ರದೇಶದಲ್ಲಿ ಇಂಡೋನೇಷ್ಯಾ ಯಾವುದೇ ಹಕ್ಕು ಪಡೆದಿಲ್ಲವಾದರೂ, ಈ ಪ್ರದೇಶದಲ್ಲಿ ಮೇಲುಗೈ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಚೀನಾದ ಮಹತ್ವಾಕಾಂಕ್ಷೆಗಳ ಬಗ್ಗೆ ಇಂಡೋನೇಷ್ಯಾ ಜಾಗರೂಕವಾಗಿದೆ.
ಭಾರತ ಮತ್ತು ಇಂಡೋನೇಷ್ಯಾ ಭದ್ರತಾ ಸಂವಾದ!
ಭಾರತ ಮತ್ತು ಇಂಡೋನೇಷ್ಯಾ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತಮ್ಮ ಕಡಲ ಸಹಕಾರ ಮತ್ತು ಪಾಲುದಾರಿಕೆಯನ್ನು ವಿಸ್ತರಿಸಲು ನಿರ್ಧರಿಸಿವೆ. ಭಾರತೀಯ ಸಂಸ್ಥೆಗಳು ಇಂಡೋನೇಷ್ಯಾದಲ್ಲಿ ಬಂದರುಗಳನ್ನು ನಿರ್ಮಿಸಲು ಯೋಜಿಸುತ್ತಿವೆ ಎಂದು ತಿಳಿದು ಬಂದಿದೆ.
ಕಳೆದ ವಾರ ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ನಿಧನರಾದ ನಂತರ ಸಂತಾಪ ಸೂಚಕ ಪುಸ್ತಕಕ್ಕೆ ಸಹಿ ಹಾಕಲು ಸುಬಿಯಾಂಟೊ ಅವರು ಜಕಾರ್ತದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. 2018 ರಲ್ಲಿ, ಇಂಡೋನೇಷ್ಯಾ ಮತ್ತು ಭಾರತವು ಮೊದಲ ಇಂಡೋನೇಷ್ಯಾ-ಭಾರತ ಭದ್ರತಾ ಸಂವಾದವನ್ನು (IISD-1) ನವದೆಹಲಿಯಲ್ಲಿ ನಡೆಸಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮುಂದಿನ ದಿನಗಳಲ್ಲಿ ಎರಡನೇ ಭದ್ರತಾ ಸಂವಾದವನ್ನು ನಡೆಸಬಹುದು ಎಂದು ತಿಳಿದು ಬಂದಿದೆ. ಕಳೆದ ವರ್ಷ, ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ, ಸುಬಿಯಾಂಟೊ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ಭಾರತಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ:
1) Pinaka-ER: ಹೊಸ ರಾಕೆಟ್ ಲಾಂಚರ್ ಪಿನಾಕಾ ಯಶಸ್ವಿ ಪರೀಕ್ಷೆ, ಭಾರತಕ್ಕೆ ಮತ್ತೊಂದು ಗರಿ
2) Wireless over Wire: ವಿದ್ಯುತ್ ಕೇಬಲ್‌ನಲ್ಲೇ ಇಂಟರ್ನೆಟ್: ಇಂಟೆಲ್ ಹೊಸ ತಂತ್ರಜ್ಞಾನ!
3) Anti-drone Technology ಭಾರತದಲ್ಲೇ ಅಭಿವೃದ್ಧಿ: ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರ : ಅಮಿತ್ ಶಾ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.