ಪ್ಲೇಸ್ಟೋರ್‌ನಿಂದ ಟಿಕ್‌ಟಾಕ್ ಆ್ಯಪ್ ತೆಗೆಯಲು ಕೇಂದ್ರದ ಸೂಚನೆ| ಗೂಗಲ್, ಆ್ಯಪಲ್‌ನಲ್ಲಿ ಇನ್ನು ಟಿಕ್‌ಟಾಕ್ ಡೌನ್‌ಲೋಡ್ ಅಸಾಧ್ಯ?
ನವದೆಹಲಿ[ಏ.17]: ವಿಡಿಯೋ ಶೇರಿಂಗ್ ಆ್ಯಪ್ ಟಿಕ್‌ಟಾಕ್ ಅನ್ನು ನಿಮ್ಮ ಆ್ಯಪ್‌ಸ್ಟೋರ್‌ನಿಂದ ತೆಗೆದುಹಾಕಿ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗೂಗಲ್ ಮತ್ತು ಆ್ಯಪಲ್‌ಗೆ ಸೂಚನೆ ನೀಡಿದೆ. ಏ.3ರಂದು ಮದ್ರಾಸ್ ಹೈಕೋರ್ಟ್ ದೇಶಾದ್ಯಂತ ಟಿಕ್‌ಟಾಕ್ ನಿಷೇಧಿಸಿ ಆದೇಶ ಹೊರಡಿಸಿದ ಹಾಗೂ ಅದಕ್ಕೆ ತಡೆ ನೀಡಲು ಮೊನ್ನೆಯಷ್ಟೇ ಸುಪ್ರಿಂಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ಸೂಚನೆ ಹೊರಬಿದ್ದಿದೆ.
ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ಆರೋಪ: ಟಿಕ್ ಟಾಕ್ ಬ್ಯಾನ್ ಮಾಡಲು ಆದೇಶ!
ಚೀನಾ ಮೂಲದ ಈ ಆ್ಯಪ್‌ನಲ್ಲಿ ಜನರು ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ಉಂಟಾಗುತ್ತಿದ್ದು, ಅದನ್ನು ನಿಷೇಧಿಸಬೇಕೆಂದು ಅರ್ಜಿದಾರರು ಕೋರಿದ್ದರು. ಅದನ್ನು ಪುರಸ್ಕರಿಸಿ ಮದ್ರಾಸ್ ಹೈಕೋರ್ಟ್ ಟಿಕ್‌ಟಾಕ್ ನಿಷೇಧಿಸಿತ್ತು. ಅದನ್ನು ಟಿಕ್‌ಟಾಕ್ ಕಂಪನಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ, ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ನಿಮ್ಮನಿಮ್ಮ ಆ್ಯಪ್‌ಸ್ಟೋರ್‌ಗಳಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಬೇಡಿ ಎಂದು ಕೇಂದ್ರ ಸರ್ಕಾರ ಗೂಗಲ್ ಮತ್ತು ಆ್ಯಪಲ್‌ಗೆ ಸೂಚಿಸಿದೆ. ಏ.22ರಂದು ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಟಿಕ್‌ಟಾಕ್, ನಮ್ಮ ಆ್ಯಪ್‌ನಲ್ಲಿ ಜನರು ಹಂಚಿಕೊಳ್ಳುವ ವಿಡಿಯೋಗಳಿಗೆ ನಮ್ಮನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಆದರೂ ನಾವು ಇಲ್ಲಿಯವರೆಗೆ 60 ಲಕ್ಷ ಆಕ್ಷೇಪಾರ್ಹ ವಿಡಿಯೋಗಳನ್ನು ತೆಗೆದುಹಾಕಿದ್ದೇವೆ. ಭಾರತದ ಕಾನೂನಿನ ಬಗ್ಗೆ ನಮಗೆ ಗೌರವವಿದೆ. ಹೀಗಾಗಿ ಇನ್ನಷ್ಟುಕಠಿಣವಾಗಿ ವಿಡಿಯೋಗಳ ಮೇಲೆ ನಿಗಾವಹಿಸುವ ವ್ಯವಸ್ಥೆ ರೂಪಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.