ಟಿಕ್ ಟಾಕ್ ಬ್ಯಾನ್ ಮಾಡುವ ಮೂಲಕ ದೇಸಿ ಆ್ಯಪ್‌ಗಳಿಗೆ ಹೊಸ ಬಲ ನೀಡಿದಂತಾಗಿದೆ.ಚೀನಿ ಆ್ಯಪ್‌ಗಳಿಗೆ ಬೈ ಬೈ ಹೇಳಿ ಜನ ದೇಸಿ ಆ್ಯಪ್‌ಗಳಿಗೆ ಜೈ ಹೋ ಎನ್ನುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜೂ.30): ಗಲ್ವಾನ್ ಕಣಿವೆ ಘರ್ಷಣೆಯ ಬಳಿಕ ಭಾರತ ಸರ್ಕಾರ ಚೀನಾ ವಿರುದ್ಧ ಕಠಿಣ ನಿಲುವನ್ನು ಮುಂದುವರೆಸಿದ್ದು, ಸೋಮವಾರ(ಜೂ.29) ಚೀನಾದ 59 ಮೊಬೈಲ್ ಆ್ಯಪ್‌ಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಸರ್ಕಾರದ ಈ ದಿಟ್ಟ ನಡೆ ದೇಶಿ ಸ್ಟಾರ್ಟ್ ಅಪ್‌ಗಳಿಗೆ ವರದಾನವಾಗುವ ಸಾಧ್ಯತೆಗಳಿವೆ.
ಹೌದು, ದೇಸಿ ವಿಡಿಯೋ ಆ್ಯಪ್‌ಗಳಾದ ಮಿತ್ರೋನ್ ಟಿವಿ ಹಾಗೂ ಚಿಂಗಾರಿ ಆ್ಯಪ್‌ಗಳು ಭವಿಷ್ಯದಲ್ಲಿ ದೇಶದ ಜನರಿಗೆ ಮತ್ತಷ್ಟು ಹತ್ತಿರುವಾಗುವ ಲೆಕ್ಕಾಚಾರ ಹಾಕಲಾರಂಭಿಸಿದೆ. ದೇಶದ ಭದ್ರತೆ ಹಾಗೂ ಸಮಗ್ರತೆಯ ವಿಚಾರವನ್ನು ಮುಂದಿಟ್ಟುಕೊಂಡು ಭಾರತ ಸರ್ಕಾರ ಚೀನಾದ 59 ಮೊಬೈಲ್ ಆ್ಯಪ್‌ಗಳ ಮೇಲೆ ನಿಷೇಧ ಹೇರಿದೆ.
ಕೊರೋನಾ ವೈರಸ್ ಹಾಗೂ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ದೇಶಾದ್ಯಂತ ಚೀನಿ ವಿರೋಧಿ ಕೂಗು ಜೋರಾಗಿತ್ತು. ಇದರ ಬೆನ್ನಲ್ಲೇ ಸಾಕಷ್ಟು ಮಂದಿ ಚೀನಾ ಆ್ಯಪ್‌ಗಳನ್ನು ಡಿಲೀಟ್ ಮಾಡಿ ದೇಸಿ ಆ್ಯಪ್‌ಗಳ ಮೊರೆ ಹೋಗಿದ್ದರು. ಈಗ ಭಾರತ ಸರ್ಕಾರವೇ ಟಿಕ್ ಟಾಕ್ ಆ್ಯಪ್‌ಗಳನ್ನು ಬ್ಯಾನ್ ಮಾಡಿರುವುದರಿಂದ ಈ ಎರಡು ಆ್ಯಪ್‌ಗಳು ಮತ್ತಷ್ಟು ಜನಪ್ರಿಯವಾಗುವ ಸಾಧ್ಯತೆಯಿದೆ.
ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಡಿಲೀಟ್..! ಈಗಾಗಲೇ ಟಿಕ್ ಟಾಕ್ ಆ್ಯಪ್ ಹೊಂದಿರುವವರ ಕತೆ ಏನು?
ಮೇನಲ್ಲಿ ಬಿಡುಗಡೆಯಾದ ಮಿತ್ರೋನ್ ಟಿವಿ ಆ್ಯಪ್‌ಗೆ ಆರಂಭದಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಿತ್ರೋನ್ ಟಿವಿ ಸ್ಥಾಪಕರಾದ ಅನಿಷ್ ಖಂಡೇಲ್‌ವಾಲ್ ಹಾಗೂ ಶಿವಾಂಕ್ ಅಗರ್‌ವಾಲ್ ನಿರ್ಮಿಸಿದ ಈ ಆ್ಯಪ್ ದಿನಕಳೆಯುವುದರೊಳಗಾಗಿ ಪ್ರಖ್ಯಾತಿ ಪಡೆದಿದೆ. ಈಗಾಗಲೇ ಮಿತ್ರೋನ್ ಆ್ಯಪನ್ನು ಭಾರತದಲ್ಲಿ ಒಂದು ಕೋಟಿ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಇನ್ನು ಮಿತ್ರೋನ್ ಕತೆಯಾದರೆ, ಮತ್ತೊಂದೆಡೆ ಛತ್ತೀಸ್‌ಗಡ ಮೂಲದ ವ್ಯಕ್ತಿಯೊಬ್ಬರು ಪರಿಚಯಿಸಿದ ಚಿಂಗಾರಿ ಆ್ಯಪ್ ಈಗಾಗಲೇ 2.5 ಮಿಲಿಯನ್(ಎರಡೂವರೆ ಕೋಟಿ) ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಕಳೆದೆರಡು ದಿನಗಳ ಹಿಂದಷ್ಟೇ(ಜೂನ್ 28) ಟ್ವೀಟ್ ಮಾಡಿದ್ದ ಆನಂದ್ ಮಹೀಂದ್ರ ಗ್ರೂಪ್ ಚೇರ್‌ಮನ್ ಆನಂದ್ ಮಹೀಂದ್ರ ಚಿಂಗಾರಿ ಆ್ಯಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ಯಾವತ್ತೂ ಟಿಕ್ ಟಾಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿರಲಿಲ್ಲ. ಆದರೆ ಈಗಷ್ಟೇ ಚಿಂಗಾರಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡೆ. ತುಂಬಾ ಚೆನ್ನಾಗಿದೆ ಎಂದು ಟ್ವೀಟ್ ಮಾಡಿದ್ದರು.
ಚೀನಿ ಆ್ಯಪ್ ನಿಷೇಧದ ನಿಲುವನ್ನು ಸ್ವಾಗತಿಸಿರುವ ಚಿಂಗಾರಿ ಆ್ಯಪ್‌ನ ಸಹ ಸಂಸ್ಥಾಪಕ ಹಾಗೂ ಚೀಫ್ ಪ್ರೋಡೆಕ್ಟ್ ಆಫಿಸರ್, ತುಂಬಾ ದಿನಗಳಿಂದಲೂ ಟಿಕ್ ಟಾಕ್ ತನ್ನ ಬಳಕೆದಾರರ ಗೂಢಾಚಾರ ನಡೆಸಿ ಚೀನಾಗೆ ಮಾಹಿತಿ ರವಾನಿಸುತ್ತಿತ್ತು. ಕೊನೆಗೂ ಸರ್ಕಾರ ತೆಗೆದುಕೊಂಡ ಈ ದಿಟ್ಟ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಟಿಕ್ ಟಾಕ್ ಬಳಕೆದಾರರು ಒಂದು ಸಲ 100% ಭಾರತೀಯ ಆ್ಯಪ್ ಚಿಂಗಾರಿ ಬಳಸಿ ನೋಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
100,000 downloads per hour, guys please be patient! we are working on the servers and getting things up and running asap! pic.twitter.com/h3lGCbe4yl
— Sumit Ghosh (@sumitgh85)ಪ್ರತಿಗಂಟೆ ದೇಶದಲ್ಲಿ ಒಂದು ಲಕ್ಷ ಮಂದಿ ಚಿಂಗಾರಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುತ್ತಿರುವುದಾಗಿ ಸುಮಿತ್ ಘೋಷ್ ದತ್ತಾಂಶ ಸಹಿತವಾಗಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.