ತನ್ನ ಮಹತ್ವಾಕಾಂಕ್ಷೆಯ ನಿರ್ಧಾರಗಳ ಮೂಲಕವೇ ಗಮನ ಸೆಳೆದಿರುವ ಎಲಾನ್ ಮಸ್ಕ್ ಮಾನವನ ಮೆದುಳಿಗೆ ಚಿಪ್ ಹಾಕುವ ಕ್ಲಿನಿಕಲ್ ಪ್ರಯೋಗವನ್ನು ಇನ್ನು 6 ತಿಂಗಳಲ್ಲಿ ಆರಂಭ ಮಾಡುವುದಾಗಿ ಘೋಷಿಸಿದ್ದಾರೆ. ಇಲಿ, ಮಂಗಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ಈ ಪ್ರಯೋಗ ಯಶಸ್ಸು ಕಂಡಲ್ಲಿ ಅಂಧರಿಗೆ ದೃಷ್ಟಿ, ಪಾಶ್ರ್ವವಾಯು ಪೀಡಿತರಿಗೆ ಪರಿಹಾರ ಸಿಗಲಿದೆ ಎನ್ನಲಾಗಿದೆ.
ಸ್ಯಾನ್‌ಫ್ರಾನ್ಸಿಸ್ಕೋ (ಡಿ.2): ಮಾನವರಂತೆ ವರ್ತಿಸುವ ರೋಬೋಟ್‌ಗಳು, ಮಾನವರ ದೇಹದಲ್ಲಿ ಚಿಪ್ ಅಳವಡಿಸಿ ಅವನಿಗೆ ಅತಿಮಾನವ ಶಕ್ತಿ ನೀಡುವ ಕಥೆಗಳು ಸಿನಿಮಾದಲ್ಲಿ ಹೊಸದೇನಲ್ಲ. ಆದರೆ ಕಾಲ್ಪನಿಕ ರೂಪದಲ್ಲಿದ್ದ ಈ ಕಥೆಗಳಿಗೆ ಇದೀಗ ನಿಜಸ್ವರೂಪ ನೀಡಲು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಮುಂದಾಗಿದ್ದಾರೆ. ತಮ್ಮ ಒಡೆತನದ ನ್ಯೂರಾಲಿಂಕ್ ಕಂಪನಿಯು ಮಾನವರ ಮೆದುಳಿನಲ್ಲಿ ಚಿಪ್ ಸೇರಿಸುವ ಪ್ರಕ್ರಿಯೆಯನ್ನು ಇನ್ನು 6 ತಿಂಗಳಲ್ಲಿ ಆರಂಭಿಸಲಿದೆ ಎಂದು ಬುಧವಾರ ಮಸ್ಕ್ ಘೋಷಿಸಿದ್ದಾರೆ. ಜೊತೆಗೆ ಮುಂಬರುವ ವರ್ಷಗಳಲ್ಲಿ ತಾವು ಕೂಡಾ ಈ ಚಿಪ್ ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಒ ದು ವೇಳೆ ಈ ಯೋಜನೆ ಯಶಸ್ವಿಯಾದರೆ ಹುಟ್ಟಿನಿಂದ ಅಂಧರಾಗಿರುವವರು, ಪಾರ್ಶ್ವವಾಯು ಪೀಡಿತರು, ಮರೆವಿನ ರೋಗ, ಪಾರ್ಕಿನ್ಸನ್ ತೊಂದರೆಯಿಂದ ಬಳಲುತ್ತಿರುವವರು ಕೈಯನ್ನು ಬಳಸದೆಯೇ ಮೊಬೈಲ್, ಕಂಪ್ಯೂಟರ್‌ಗಳನ್ನು ಬಳಸಬಹುದಾಗಿದೆ. ಬಾಯಿ ತೆರೆಯದೆಯೇ ಯಂತ್ರಗಳ ಜೊತೆ ಮಾತನಾಡಬಹುದಾಗಿದೆ. ಜೊತೆಗೆ ಮೆದುಳಿನಲ್ಲಿ ನಿಷ್ಕ್ರಿಯವಾಗಿರುವ ಭಾಗವನ್ನು ಉತ್ತೇಜಿಸುವ ಮೂಲಕ ನರರೋಗ ಸಮಸ್ಯೆಯಿಂದ ಮುಕ್ತಿ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿಯೇ ಈ ಯೋಜನೆಯನ್ನು ಇಡೀ ವಿಶ್ವ ಕುತೂಹಲದ ಕಣ್ಣಿನಿಂದ ಎದುರು ನೋಡುತ್ತಿದೆ.
ಏನಿದು ಯೋಜನೆ?: ನ್ಯೂರಾಲಿಂಕ್ ಸಂಸ್ಥೆ, ಸರ್ಜಿಕಲ್ ರೋಬೋಟ್ (ಆರ್1) ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್ ಅಭಿವೃದ್ಧಿಪಡಿಸಿದೆ. ಅದನ್ನು ಮೆದುಳಿನಲ್ಲಿ ಅಳವಡಿಸಲಾಗುವುದು. ಈ ಚಿಪ್‌ನ ಹೊರಭಾಗದಲ್ಲಿ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ವೈರ್‌ಗಳು (ಎಲೆಕ್ಟ್ರೋಡ್‌ಗಳು) ಇರಲಿದ್ದು, ಅವು ಎಲ್ಲೆಡೆ ಹರಡಿಕೊಂಡು ಮೆದುಳಿನ ಭಾಗದೊಂದಿಗೆ ಸಂಪರ್ಕ ಬೆಳೆಸಲಿವೆ. ಇದು ಮೆದುಳಿಗೆ ಬರುವ ಸಂದೇಶ ಸಂಗ್ರಹ ಹಾಗೂ ಮೆದುಳನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ. ಈ ಮೂಲಕ ವ್ಯಕ್ತಿಯು ಮನಸ್ಸಿನಲ್ಲಿ ಅಂದುಕೊಂಡ ವಿಷಯವನ್ನು ಮಾಡುವುದು ಸಾಧ್ಯವಾಗುತ್ತದೆ. ಅಂದರೆ ಚಿಪ್ ಅಳವಡಿಸಿದ ವ್ಯಕ್ತಿಯೊಬ್ಬ ತನ್ನ ತಲೆಯಲ್ಲಿ ಮೊಬೈಲ್ ಆನ್ ಮಾಡಬೇಕು ಅಥವಾ ಕರೆ ಮಾಡಬೇಕೆಂದು ಬಯಸಿದರೆ ಆ ಸಂದೇಶ ಚಿಪ್ ಮೂಲಕ ನೇರವಾಗಿ ಮೊಬೈಲ್‌ಗೆ ರವಾನೆಯಾಗಿ ಮೊಬೈಲ್ ಆನ್ ಆಗುತ್ತದೆ.
undefined
ಟ್ವಿಟರ್ ಖರೀದಿಸಿ ಸಂಭ್ರಮಿಸಿದ ಮಸ್ಕ್‌ಗೆ ಶಾಕ್, 2022ರಲ್ಲಿ ಪ್ರತಿ ದಿನ 2,500 ಕೋಟಿ ರೂ ಲಾಸ್!
ಇದರ ಜೊತೆಗೆ ಮೆದುಳಿನಲ್ಲಿ ನಾನಾ ನರರೋಗದಿಂದ ನಿಷ್ಕ್ರಿಯಗೊಂಡಿರುವ ಭಾಗಗಳನ್ನು ಎಲೆಕ್ಟ್ರೋಡ್ ಮೂಲಕ ಉತ್ತೇಜಿಸಿ ಅವುಗಳನ್ನು ಮರಳಿ ಸಕ್ರಿಯಗೊಳಿಸುವ ಕೆಲಸ ಮಾಡುತ್ತದೆ. ಇದರಿಂದ ಪಾರ್ಶ್ವವಾಯು, ಪಾರ್ಕಿನ್ಸನ್ ಮೊದಲಾದ ಸಮಸ್ಯೆಯಿಂದ ಬಳಲುತ್ತಿರುವವರು ಮರಳಿ ನಡೆಯಲು ಸಾಧ್ಯವಾಗಬಹುದು ಎಂಬ ಆಶಾಭಾವ ಇದೆ. ಹೀಗೆ ಭಾರೀ ನಿರೀಕ್ಷೆ ಹೊಂದಿರುವ ಚಿಪ್ ಅನ್ನು ಮಾನವರ ಮೆದುಳಿನಲ್ಲಿ ಅಳವಡಿಸಲು ನ್ಯೂರಾಲಿಂಕ್ ಎಲ್ಲಾ ಸಿದ್ಧತೆ ನಡೆಸಿದ್ದು, ಇದಕ್ಕೆ ಅಗತ್ಯವಾದ ದಾಖಲೆಗಳನ್ನು ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದೆ. ಅದು ಅನುಮತಿ ನೀಡಿದರೆ ಮುಂದಿನ 6 ತಿಂಗಳಲ್ಲಿ ಮೆದುಳಿನಲ್ಲಿ ಚಿಪ್ ಸೇರ್ಪಡೆ ಕಾರ್ಯಕ್ರಮ ಆರಂಭವಾಗಲಿದೆ.
ಮತ್ತೆ ಟ್ವಿಟ್ಟರ್‌ನಲ್ಲಿ ಶುರುವಾಗಲಿದೆ ಡೊನಾಲ್ಡ್ ಟ್ರಂಪ್ ಹವಾ..! ಅಮೆರಿಕ ಮಾಜಿ ಅಧ್ಯಕ್ಷರು ಹೇಳಿದ್ದೇನು..?
ರೋಬೋಟ್ ಬಳಕೆ: ಈ ಚಿಪ್ ಅಳವಡಿಕೆ ಅತ್ಯಂತ ಕ್ಲಿಷ್ಟಪ್ರಕ್ರಿಯೆಯಾಗಿದ್ದು, ಇದನ್ನು ನುರಿತ ವೈದ್ಯರು ಕೂಡಾ ಮಾಡುವುದು ಸಾಧ್ಯವಿಲ್ಲ. ಇದಕ್ಕೆಂದೇ ವಿಶೇಷ ರೋಬೋಟ್ ಅಭಿವೃದ್ಧಿಪಡಿಸಿದ್ದು, ಅದು ಶಸ್ತ್ರಚಿಕಿತ್ಸೆ ನಡೆಸಿ ಚಿಪ್ ಅನ್ನು ಮೆದುಳಿನಲ್ಲಿ ಕೂರಿಸಲಿದೆ. ನ್ಯೂರಾಲಿಂಕ್ ಕಂಪನಿಯು ಕಳೆದ ಕೆಲವು ವರ್ಷಗಳಿಂದ ಇಲಿ, ಮಂಗಗಳ ಮೆದುಳಿನಲ್ಲಿ ಚಿಪ್ ಅಳವಡಿಸಿ ಪ್ರಯೋಗ ನಡೆಸಿ ಯಶಸ್ವಿಯಾದ ಬೆನ್ನಲ್ಲೇ ಮಾನವರ ಮೇಲೆ ಕ್ಲಿನಿಕಲ್ ಪ್ರಯೋಗಕ್ಕೆ ಮುಂದಾಗಿದೆ.
ಚಿಪ್ ಅಳವಡಿಕೆ ಏಕೆ?
- ಮೆದುಳಿನಿಂದ ಸಂದೇಶ ರವಾನಿಸುವ ಸಮಸ್ಯೆ ಇರುವವರಿಗೆ ಚಿಪ್ ಅಳವಡಿಕೆ
- ಚಿಪ್ ಮೂಲಕ ಕೃತಕವಾಗಿ ದೇಹದ ಅಂಗಗಳಿಗೆ ವಿವಿಧ ಸಂದೇಶಗಳ ರವಾನೆ
- ಮೆದುಳಿಗೆ ಅಳವಡಿಸುವ ಚಿಪ್ ಹೊರಗಿನಿಂದ ನಿಯಂತ್ರಣ ಮಾಡಲು ಸಾಧ್ಯ
- ಆಗ ದೃಷ್ಟಿದೋಷ, ನರದೋಷ, ಪಾಶ್ರ್ವವಾಯು ಸಮಸ್ಯೆಗಳಿಗೆ ಪರಿಹಾರ
- ಕೈಯನ್ನು ಬಳಸದೆ ಮನಸ್ಸಿನಲ್ಲಿ ಅಂದುಕೊಂಡರೂ ಮೊಬೈಲ್ ಬಳಸಬಹುದು
- ಬಾಯಿ ತೆರೆಯದೆಯೇ ಯಂತ್ರಗಳ ಜೊತೆ ಮಾತನಾಡಲು ಕೂಡ ಸಾಧ್ಯವಿದೆ
- ಈ ಪ್ರಯೋಗ ಯಶಸ್ವಿಯಾದರೆ ಮನುಷ್ಯನ ಅನೇಕ ಸಮಸ್ಯೆಗಳಿಗೆ ಪರಿಹಾರ