
ಬೆಂಗಳೂರು(ಡಿ.04): ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಮಸೂದೆ ಒಂದು ಸಮಗ್ರ, ಆಧುನಿಕ ಶಾಸನವಾಗಿದೆ. ಇದು ನಾಗರಿಕರ ಡೇಟಾ ರಕ್ಷಣೆಯ ಹಕ್ಕನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಡೇಟಾ ರಕ್ಷಣೆ, ನಾವೀನ್ಯತೆ ಮತ್ತು ಆಡಳಿತವನ್ನು ಸುಲಭಗೊಳಿಸುವುದು ಇದರ 3 ಪ್ರಮುಖ ಗುರಿಗಳು. ಈ ಮಸೂದೆಯು ನಮ್ಮ ಡೇಟಾ ಆರ್ಥಿಕತೆಯಲ್ಲಿ ಆಳವಾದ, ಶಾಶ್ವತ ಬದಲಾವಣೆಗಳನ್ನು ತರಲಿದೆ. ಇತ್ತೀಚೆಗೆ ಅರಬ್ ಸಂಯುಕ್ತ ಸಂಸ್ಥಾನದ ಡಿಜಿಟಲ್ ಸಚಿವರು ‘ಭವಿಷ್ಯದಲ್ಲಿ ಭಾರತೀಯರ ಬೆರಳಚ್ಚುಗಳು ಎಲ್ಲೆಡೆ ಕಂಡುಬರಲಿವೆ’ ಎನ್ನುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಯು ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಪ್ರಪಂಚದಲ್ಲಿ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನದ ಮೌಲ್ಯ ಸರಪಳಿಯಲ್ಲಿ ಭಾರತದ ವಿಸ್ತಾರವಾದ ಅಸ್ತಿತ್ವ ಮತ್ತು ಸ್ಥಾನವನ್ನು ಎತ್ತಿ ತೋರಿಸುತ್ತದೆ.
3 ದಶಕಗಳ ಹಿಂದೆ ಕೇವಲ ತಂತ್ರಜ್ಞಾನಗಳನ್ನು ಖರೀದಿಸಿ ಬಳಕೆ ಮಾಡಿಕೊಳ್ಳುತ್ತಿದ್ದ ನಾವು ಇಂದು ಟೆಕ್ ವೇದಿಕೆ, ಎಲೆಕ್ಟ್ರಾನಿಕ್ ಸಾಮಗ್ರಿಗಳ ವಾಸ್ತುಶಿಲ್ಪಿಗಳು, ವಿನ್ಯಾಸಗಾರರು ಹಾಗೂ ನಿರ್ಮಾಪಕರೆನಿಸಿಕೊಂಡಿದ್ದೇವೆ. ಅತಿ ಕಡಿಮೆ ಅವಧಿಯಲ್ಲಿ ಭಾರತದ ತಾಂತ್ರಿಕ ಸಾಮರ್ಥ್ಯಗಳು ಬಹಳ ದೂರ ಸಾಗಿವೆ. ಪ್ರಪಂಚದ ಹೊರಗುತ್ತಿಗೆ ಕೇಂದ್ರ ಎನಿಸಿರುವ ನಮ್ಮ ದೇಶದ ನಾವೀನ್ಯತಾ ಪರಿಸರ ವ್ಯವಸ್ಥೆಯ ಬೆಳವಣಿಗೆಯ ವೇಗಕ್ಕೆ ಜಗತ್ತೇ ದಂಗಾಗಿದೆ. ಇಂದು ಯುವ ಭಾರತೀಯರು ಆತ್ಮವಿಶ್ವಾಸದೊಂದಿಗೆ ಬಾಹ್ಯಾಕಾಶದಿಂದ ಡೀಪ್ ಟೆಕ್, ಕೃತಕ ತಂತ್ರಜ್ಞಾನದಿಂದ ವೆಬ್3, ಇಂಟರ್ನೆಟ್‌ನಿಂದ ಎಲೆಕ್ಟ್ರಾನಿಕ್ಸ್ ಅಥವಾ ಸೆಮಿಕಂಡಕ್ಟರ್‌ಗಳವರೆಗಿನ ಡೊಮೇನ್‌ಗಳಲ್ಲಿ ಮುನ್ನುಗ್ಗುತ್ತಿದ್ದಾರೆ.
ಭಾರತ ಈಗ ಸ್ಮಾರ್ಟ್‌ಫೋನ್ ಹಬ್: ಒಂದೇ ವರ್ಷದಲ್ಲಿ ಮೊಬೈಲ್ ರಫ್ತು ಡಬಲ್
820 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತ ಅತಿದೊಡ್ಡ ಸಂಪರ್ಕಿತ ಪ್ರಜಾಪ್ರಭುತ್ವ ಎನಿಸಿಕೊಂಡಿದೆ. ಶೀಘ್ರದಲ್ಲೇ ದೇಶದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯು 120 ಕೋಟಿಯನ್ನು ಮುಟ್ಟಲಿದೆ. ಭಾರತದಲ್ಲಿ ಇಂಟರ್ನೆಟ್ ವ್ಯವಸ್ಥೆ ಚೀನಾದಂತೆ ಕಠಿಣ ಸೆನ್ಸಾರ್‌ಗೆ ಒಳಗಾಗದೇ ಇತರೆ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಂತೆ ಜಾಗತಿಕ ಡಿಜಿಟಲ್… ನೆಟ್‌ವರ್ಕ್‌ಗೆ ಮುಕ್ತ ಪ್ರವೇಶವನ್ನು ಹಾಗೂ ಪರಸ್ಪರ ಸಂಪರ್ಕವನ್ನು ಹೊಂದಿದೆ. ಭಾರತವು ಜಿ20 ಅಧ್ಯಕ್ಷನಾಗಿ ಮತ್ತು ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (ಜಿಪಿಎಐ) ಕೌನ್ಸಿಲ್‌ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಹೀಗಾಗಿ ಭವಿಷ್ಯದ ತಂತ್ರಜ್ಞಾನ ರೂಪಿಸುವಲ್ಲಿ ಭಾರತವು ನಾಯಕತ್ವದ ಪಾತ್ರವನ್ನು ವಹಿಸುವುದು ಬಹುತೇಕ ಖಚಿತವಾಗಿದೆ.
ಇಂಡಿಯಾ ಟೆಕ್ಕೇಡ್
‘ಇಂಡಿಯಾ ಟೆಕ್ಕೇಡ್’ ಅಥವಾ ‘ತಂತ್ರಜ್ಞಾನ ಅವಕಾಶಗಳ ದಶಕ’ ಇದು ಪ್ರಧಾನಿ ನರೇಂದ್ರ ಮೋದಿಯವರ ಗುರಿ. ಇದರೊಂದಿಗೆ 1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಡಿಜಿಟಲ… ಆರ್ಥಿಕತೆಯನ್ನು ಸಾಧಿಸುವುದು ನಮ್ಮ ತಕ್ಷಣದ ಗುರಿ ಎನಿಸಿಕೊಂಡಿದೆ. ಈ ಗುರಿಗಳ ಪೂರೈಕೆಗಾಗಿ ಮುಕ್ತತೆ, ಸುರಕ್ಷತೆ ಮತ್ತು ನಂಬಿಕೆ ಮತ್ತು ಹೊಣೆಗಾರಿಕೆಯ ತತ್ವಗಳ ಸುತ್ತ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯವು ಜಾಗತಿಕ ಡಿಜಿಟಲ… ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ವೇಗಗೊಳಿಸಲು ಮತ್ತು ಬಲಪಡಿಸಲು ಒಂದು ನೀತಿ ಚೌಕಟ್ಟನ್ನು ರಚಿಸುತ್ತಿದೆ.
ದಿನೇ ದಿನೇ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್‌ನಲ್ಲಿ ಗ್ರಾಹಕರ ಡೇಟಾ ದುರುಪಯೋಗ ಹಾಗೂ ವೇಗವಾಗಿ ಹೆಚ್ಚುತ್ತಿರುವ ಆನ್‌ಲೈನ್ ಅಪರಾಧಗಳ ಸವಾಲುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಕಾನೂನು ಮತ್ತು ನಿಬಂಧನೆಗಳನ್ನು ರೂಪಿಸುವಲ್ಲಿ ವಿಶ್ವದಾದ್ಯಂತ ಸರ್ಕಾರಗಳು ಹೆಣಗಾಡುತ್ತಿವೆ. ಅಂತಹ ಕಾರ್ಯವನ್ನು ಭಾರತದಲ್ಲಿ ಸುಲಭಗೊಳಿಸಲು ಹಾಗೂ ಪರಿಣಾಮಕಾರಿಯಾಗಿಸಲು ಇಂಟರ್ನೆಟ್ ಸಂಬಂಧಿತ ವಿಷಯಗಳಿಗಾಗಿ ಭಾರತದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯವು ನಾಗರಿಕರು ಅಥವಾ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಹಾಗೂ ಯಾವುದೇ ಡೇಟಾ ದುರುಪಯೋಗವಾಗುತ್ತಿಲ್ಲ ಎಂದು ಖಾತ್ರಿಪಡಿಸುವ ಡಿಜಿಟಲ… ವೈಯಕ್ತಿಕ ಡೇಟಾ ರಕ್ಷಣಾ ಮಸೂದೆ-2022ನ್ನು ಹೊರತಂದಿದೆ.
ಡಿಪಿಡಿಪಿ ಮಸೂದೆ
ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಮಸೂದೆ (ಡಿಪಿಡಿಪಿ)ಯು ಡಿಜಿಟಲ್ ಡೇಟಾ ರಕ್ಷಣೆಗೆ ಕ್ರಮಗಳನ್ನು ಒಳಗೊಂಡಿದ್ದು, ನಮ್ಮ ಡಿಜಿಟಲ್ ಆರ್ಥಿಕತೆ ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಗಾಗಿ ಸಮಗ್ರ ಜಾಗತಿಕ ಮಾನದಂಡ ಮತ್ತು ಭವಿಷ್ಯ-ಸಿದ್ಧ ಚೌಕಟ್ಟು ಎನಿಸಿಕೊಂಡಿದೆ. ಈ ಮಸೂದೆಯು ನಾವೀನ್ಯತೆಯನ್ನು ತಡೆಯುವುದಿಲ್ಲ, ಆದರೆ ಹೊಸ ಉದಯೋನ್ಮುಖ ಸವಾಲುಗಳನ್ನು ವಿಳಂಬವಿಲ್ಲದೆ ಪರಿಹರಿಸುತ್ತದೆ.
ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಮಸೂದೆ ಒಂದು ಸಮಗ್ರ, ಆಧುನಿಕ ಶಾಸನವಾಗಿದೆ. ಇದು ನಾಗರಿಕರ ಡೇಟಾ ರಕ್ಷಣೆಯ ಹಕ್ಕನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಡೇಟಾ ರಕ್ಷಣೆ, ನಾವೀನ್ಯತೆ ಮತ್ತು ಆಡಳಿತವನ್ನು ಸುಲಭಗೊಳಿಸುವುದು ಇದರ 3 ಪ್ರಮುಖ ಗುರಿಗಳಾಗಿವೆ. ಈ ಮಸೂದೆಯು ನಮ್ಮ ಡೇಟಾ ಆರ್ಥಿಕತೆಯಲ್ಲಿ ಆಳವಾದ ಶಾಶ್ವತ ವರ್ತನೆಯ ಬದಲಾವಣೆಗಳನ್ನು ತರುತ್ತದೆ ಹಾಗೂ ವೈಯಕ್ತಿಕ ಡೇಟಾದ ದುರುಪಯೋಗ, ಡಾಕ್ಸಿಂಗ್, ಗ್ಯಾಸ್‌ಲೈಟಿಂಗ್, ಸೈಬರ್ ಟ್ರೋಲಿಂಗ್‌ನ ಅಪಾಯಕಾರಿ ಅಭ್ಯಾಸಗಳಿಗೆ ಕಾನೂನಿನ ಮೂಲಕ ತಡೆ ಹಾಕುತ್ತದೆ.
ಮಸೂದೆಯ ಪ್ರಮುಖ ಲಕ್ಷಣಗಳು
- ನಾಗರಿಕರ ವೈಯಕ್ತಿಕ ಡಿಜಿಟಲ್ ಮಾಹಿತಿ ರಕ್ಷಣೆಯ ಹಕ್ಕನ್ನು ಇದು ಖಚಿತಪಡಿಸುತ್ತದೆ.
- ಡೇಟಾ ಕನಿಷ್ಠೀಕರಣ (ಮಿನಿಮೈಸೇಶನ್), ಸಮ್ಮತಿ, ಉದ್ದೇಶ ಮತ್ತು ಶೇಖರಣಾ ಮಿತಿ, ಡೇಟಾ ಸಂರಕ್ಷಣಾ ಮಂಡಳಿಯಿಂದ ಡೇಟಾ ಉಲ್ಲಂಘನೆಗಳ ತ್ವರಿತ ಮತ್ತು ಪಾರದರ್ಶಕ ತೀರ್ಪುಗಳು ಮೊದಲಾದ ತತ್ವಗಳ ಆಧಾರದ ಮೇಲೆ ಮಸೂದೆ ರೂಪುಗೊಂಡಿದೆ.
- ಮಸೂದೆ ಅನುಸರಣೆಯ ಹೊರೆಯು ಕನಿಷ್ಠವಾಗಿದೆ.
- ಡೇಟಾ ಸಂರಕ್ಷಣಾ ಮಂಡಳಿಯು ತೀರ್ಪು ನೀಡುವ ವಿಚಾರದಲ್ಲಿ ಸಂಪೂರ್ಣವಾಗಿ ಸ್ವತಂತ್ರ ಸಂಸ್ಥೆಯಾಗಿದೆ. ವಿವಾದಗಳನ್ನು ನಿರ್ಣಯಿಸುವ ಮತ್ತು ಉಲ್ಲಂಘನೆಗಳ ಸಂದರ್ಭದಲ್ಲಿ ಹಣಕಾಸಿನ ದಂಡವನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಮಂಡಳಿಗಳ ಆದೇಶಗಳ ಬಗ್ಗೆ ಮೇಲ್ಮನವಿಗಳಿದ್ದಲ್ಲಿ ಉಚ್ಚ ನ್ಯಾಯಾಲಯಕ್ಕೆ ಹೋಗಬಹುದು. ದೊಡ್ಡ ಡೇಟಾ ಇಕೋಸಿಸ್ಟಮ್‌ನ ಎಲ್ಲಾ ಮಾನದಂಡಗಳು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವಾಲಯದ ಇಂಡಿಯಾ ಡೇಟಾ ಮ್ಯಾನೇಜ್‌ಮೆಂಟ್ ಆಫೀಸ್ ಮೂಲಕ ನಿರ್ಧರಿಸಲ್ಪಡುತ್ತವೆ.
- ಮಸೂದೆಯ ಪ್ರಕಾರ ಗಡಿಯಾಚೆಗಿನ ಡೇಟಾ ಹರಿವು ಷರತ್ತುಬದ್ಧವಾಗಿರುತ್ತದೆ. ಇದು ಸ್ಟಾರ್ಟ್‌ಅಪ್ ಹಾಗೂ ಸಾಫ್ಟ್‌ವೇರ್ ಸಂಸ್ಥೆಗಳ ಗಡಿಯಾಚೆಗೂ ಹರಿಯುವ ಡೇಟಾದ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ.
- ಮಸೂದೆಯು ಸುಪ್ರಿಂಕೋರ್ಟ್ ಸೂಚಿಸಿದಂತೆ ಕಾನೂನುಬದ್ಧತೆ, ಅಗತ್ಯತೆ ಮತ್ತು ಪ್ರಮಾಣಾನುಗುಣತೆಯ ಪರೀಕ್ಷೆಗಳಿಗೆ ಅನುಗುಣವಾಗಿ ರಚಿಸಲ್ಪಟ್ಟಿದೆ.
- ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಾಗ ಭಾರತವು ಡೇಟಾ ಸಂಸ್ಕರಣೆಗೆ ಮತ್ತು ಭಾರತೀಯ ಕ್ಲೌಡ್ ಮತ್ತು ಡೇಟಾ ಸೆಂಟರ್ ಉದ್ಯಮದ ಬೆಳವಣಿಗೆಗೆ ಸುರಕ್ಷಿತ ತಾಣ ಎನಿಸಿಕೊಳ್ಳಲಿದೆ.
ಮುಕ್ತ ಸಮಾಲೋಚನೆಗೆ ಅವಕಾಶ
ಈ ಮಸೂದೆ ಕುರಿತು ನಿರೀಕ್ಷಿಸಿದಂತೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇವುಗಳಲ್ಲಿ ಟೀಕೆಗಳೂ ಸೇರಿವೆ. ನಾನು ವೈಯಕ್ತಿಕವಾಗಿ ಇಲ್ಲಿಯವರೆಗೆ ಮಸೂದೆಯ ವ್ಯಾಖ್ಯಾನವನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದ್ದೇನೆ. ಈ ಮಸೂದೆಯನ್ನು ಆಧುನಿಕ ವಿಶ್ವ ದರ್ಜೆಯ ಶಾಸನವಾಗಿ ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿರುವ ಎಲ್ಲರೊಂದಿಗೆ ತೊಡಗಿಸಿಕೊಳ್ಳಲು ನಾವು ಮುಂದಾಗಿದ್ದೇವೆ.
ಭಾರತಕ್ಕೆ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆಯ ಅಧ್ಯಕ್ಷ ಸ್ಥಾನ!
ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಡೊಮೇನ್ ಅಡಿಯಲ್ಲಿ ಮುಕ್ತ ಮತ್ತು ಸಮಗ್ರವಾದ ಸಮಾಲೋಚನೆಗಳಿಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಭಾರತದ ಟೆಕೇಡ್‌ಗಾಗಿ ರೂಪಿಸಲಾಗುತ್ತಿರುವ ಹೊಸ ಕಾಯಿದೆಗಳ ರಚನೆಯಲ್ಲಿ ಹೆಚ್ಚೆಚ್ಚು ಯುವಕ, ಯುವತಿಯರು ಭಾಗವಹಿಸಲು ಪ್ರಧಾನಿ ಕರೆ ನೀಡಿದ್ದನ್ನು ನಾನು ಮತ್ತೊಮ್ಮೆ ಇಲ್ಲಿ ಒತ್ತಿ ಹೇಳುತ್ತೇನೆ. ಮುಕ್ತ ಮತ್ತು ಪಾರದರ್ಶಕ ಸಮಾಲೋಚನೆಗಳು ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯದ ಮೂಲಕ ಕೈಗೊಳ್ಳಲಾಗುತ್ತಿರುವ ಎಲ್ಲಾ ತಂತ್ರಜ್ಞಾನ ನೀತಿಯ ಮೂಲಾಧಾರವಾಗಿವೆ. ಈ ನಿಟ್ಟಿನಲ್ಲಿ ಹಲವಾರು ವಾರಗಳ ಕಾಲ ನಡೆದ ಸಮಗ್ರ ಸಮಾಲೋಚನೆಗಳ ಬಳಿಕವೇ ಪ್ರಸ್ತುತ ತಿದ್ದುಪಡಿ ಮಾಡಲಾದ ಐಟಿ ನಿಯಮಗಳು, ರಾಷ್ಟ್ರೀಯ ಡೇಟಾ ಆಡಳಿತ ಫ್ರೇಮ್‌ವರ್ಕ್ ನೀತಿ ಮತ್ತು ಸೈಬರ್ ಸುರಕ್ಷತೆ ನಿರ್ದೇಶನಗಳನ್ನು ರೂಪಿಸಲಾಗಿದೆ. ಈ ಎಲ್ಲ ಕಾರ್ಯಗಳಲ್ಲಿ ನಾನೂ ವೈಯಕ್ತಿಕವಾಗಿ ಭಾಗವಹಿಸಿದ್ದೇನೆ. ಡಿಜಿಟಲ್ ಡೇಟಾ ರಕ್ಷಣಾ ಮಸೂದೆಯನ್ನು ನಾವು ಈಗಾಗಲೇ ರೂಪಿಸಿದ್ದೇವೆ. ಇದು ಸಾರ್ವಜನಿಕ ಸಮಾಲೋಚನೆಗೆ ಮುಕ್ತವಾಗಿದೆ. ರಚನಾತ್ಮಕ ಪ್ರತಿಕ್ರಿಯೆ ಹಾಗೂ ಅಭಿಪ್ರಾಯಗಳನ್ನು ನಾವು ಸ್ವಾಗತಿಸಿದ್ದೇವೆ. ಸಮಾಲೋಚನಾ ಪ್ರಕ್ರಿಯೆಯನ್ನು ಇನ್ನಷ್ಟುಸಮಗ್ರಗೊಳಿಸಲು, ನಾವು ಶಿಕ್ಷಣ ತಜ್ಞರು, ಉದ್ಯಮ ಸಂಸ್ಥೆಗಳು, ವಕೀಲರು ಸೇರಿ ಎಲ್ಲ ಮಧ್ಯಸ್ಥಗಾರರೊಂದಿಗೆ ತೊಡಗಿಸಿಕೊಂಡಿದ್ದೇವೆ.
ಡಿಜಿಟಲ್ ಆರ್ಥಿಕತೆಗೆ ಬಲ
ಈ ಮಸೂದೆಯು ಡಿಜಿಟಲ್ ಆರ್ಥಿಕತೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನೀತಿಗಳನ್ನು ಹೊಂದಿದೆ. ಪ್ರಸ್ತುತ ಡಿಜಿಟಲ… ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯು ಸೈಬರ್ ಸುರಕ್ಷತೆ ನಿರ್ದೇಶನಗಳು, ತಿದ್ದುಪಡಿ ಮಾಡಲಾದ ಐಟಿ ನಿಯಮಗಳು, ವೈಯಕ್ತಿಕವಲ್ಲದ ಡೇಟಾಗಾಗಿ ರಾಷ್ಟ್ರೀಯ ಡೇಟಾ ಆಡಳಿತದ ಚೌಕಟ್ಟಿನ ನೀತಿಗಳನ್ನು ಒಳಗೊಂಡಿದೆ. ಇದರೊಂದಿಗೆ ನಾವು ಶೀಘ್ರದಲ್ಲೇ ಡಿಜಿಟಲ್ ಇಂಡಿಯಾ ಕಾಯ್ದೆಯನ್ನು ಪ್ರಸ್ತಾಪಿಸುವುದರೊಂದಿಗೆ ಕಾನೂನುಗಳು ಮತ್ತು ನಿಯಮಗಳ ಜಾಗತಿಕ ಗುಣಮಟ್ಟದ ಭವಿಷ್ಯಕ್ಕೆ ಸಿದ್ಧ ಚೌಕಟ್ಟನ್ನು ರಚಿಸಿದ್ದೇವೆ. ಈ ಮೂಲಕ ಸುರಕ್ಷಿತ ಮತ್ತು ವಿಶ್ವಾಸಾರ್ಹ, ನಾಗರಿಕ ಹಕ್ಕುಗಳ ಸಂರಕ್ಷಿತ ಭಾರತದ ಟೆಕೇಡ್‌ಗೆ ನಾವು ಅನುವು ಮಾಡಿಕೊಡುತ್ತಿದ್ದೇವೆ.
ಈ ಮೂಲಕ ನಾಗರಿಕರ ಜೀವನವನ್ನು ಸುಧಾರಿಸಲು ಹಾಗೂ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಭಾರತ ಮತ್ತು ವಿಶ್ವದ ಭವಿಷ್ಯದ ಡಿಜಿಟಲ್ ಆರ್ಥಿಕತೆಗಾಗಿ ತನ್ನದೇ ಆದ ಹೊಸ ಹಾದಿಯನ್ನು ರೂಪಿಸುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.