ಬೆಂಗಳೂರು ಅರಮನೆ ಆವರಣದಲ್ಲಿ ಸೋಮವಾರ ಆರಂಭವಾಗಿರುವ, ಮೂರು ದಿನಗಳ ಕಾಲ ನಡೆಯಲಿರುವ ‘ಬೆಂಗಳೂರು ತಾಂತ್ರಿಕ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಂಡಳಿಯು ಬಂಡವಾಳ ಹೂಡಿಕೆ, ಕೈಗಾರಿಕೆಗಳ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮಾಡುವ ಜವಾಬ್ದಾರಿ ಹೊಂದುವ ಮೂಲಕ ವಿಶ್ವದಲ್ಲೇ ರಾಜ್ಯವನ್ನು ಅತ್ಯಾಧುನಿಕ ತಂತ್ರಜ್ಞಾನ ತಾಣವನ್ನಾಗಿ ಮಾಡುವ ಗುರಿ ಹೊಂದಿರುತ್ತದೆ ಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರು (ನ. 19): ಮಾಹಿತಿ ತಂತ್ರಜ್ಞಾನ ಹಾಗೂ ಜ್ಞಾನಾಧಾರಿತ ಆರ್ಥಿಕತೆಗೆ ಉತ್ತೇಜನ ನೀಡಲು ‘ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ’ (ಕೆಟಿಡಿಬಿ) ಸ್ಥಾಪನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು ಅರಮನೆ ಆವರಣದಲ್ಲಿ ಸೋಮವಾರ ಆರಂಭವಾಗಿರುವ, ಮೂರು ದಿನಗಳ ಕಾಲ ನಡೆಯಲಿರುವ ‘ಬೆಂಗಳೂರು ತಾಂತ್ರಿಕ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಂಡಳಿಯು ಬಂಡವಾಳ ಹೂಡಿಕೆ, ಕೈಗಾರಿಕೆಗಳ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮಾಡುವ ಜವಾಬ್ದಾರಿ ಹೊಂದುವ ಮೂಲಕ ವಿಶ್ವದಲ್ಲೇ ರಾಜ್ಯವನ್ನು ಅತ್ಯಾಧುನಿಕ ತಂತ್ರಜ್ಞಾನ ತಾಣವನ್ನಾಗಿ ಮಾಡುವ ಗುರಿ ಹೊಂದಿರುತ್ತದೆ ಎಂದರು.
ಟೆಲಿಕಾಂ ಕಂಪೆನಿಗಳ ಮಹತ್ವದ ಘೋಷಣೆ: ಡಿಸೆಂಬರ್‌ನಿಂದ ಮೊಬೈಲ್ ಭಾರೀ ದುಬಾರಿ!
ಪ್ರಸಕ್ತ ವರ್ಷದ ಬೆಂಗಳೂರು ತಾಂತ್ರಿಕ ಮೇಳದ ಧ್ಯೇಯ ‘ಆವಿಷ್ಕಾರ ಮತ್ತು ಪರಿಣಾಮ’ ಎಂಬುದಾಗಿದ್ದು, ಮುಂಬರುವ ವರ್ಷಗಳಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆ ಎಲ್ಲದಕ್ಕೂ ಕಾರಣವಾಗಿರುತ್ತದೆ ಎಂಬ ವಿಶ್ವಾಸ ತಮಗೆ ಇದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರದಿಂದಾಗಿ ಕರ್ನಾಟಕದ ಆರ್ಥಿಕತೆ ಮುಂಚೂಣಿಯಲ್ಲಿದೆ. ಕರ್ನಾಟಕ ರಾಜ್ಯ ಆವಿಷ್ಕಾರ ತಾಣವಾಗಿ ಮುಂದೆ ನಡೆಯುತ್ತಿದೆ. ಸೇವಾ ಕ್ಷೇತ್ರದಿಂದ ಉತ್ಪಾದನಾ ಅಭಿವೃದ್ಧಿ ಕ್ಷೇತ್ರದತ್ತ ಹೊರಳುತ್ತಿದೆ ಎಂದರು.
ಪ್ರಗತಿಪರ ರಾಜಕೀಯ ವ್ಯವಸ್ಥೆ, ಪ್ರಮುಖ ಪಾಲುದಾರರ ಜೊತೆ ನಿರಂತರ ಚರ್ಚೆಯ ಮೂಲಕ ಕರ್ನಾಟಕ ‘ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಹಾಗೂ ಭಾರತದ ‘ಆವಿಷ್ಕಾರ ರಾಜಧಾನಿ’ಯಾಗಿ ಗುರುತಿಸಿಕೊಂಡಿದೆ ಎಂದ ಮುಖ್ಯಮಂತ್ರಿಗಳು, ಕ್ರಿಯಾಶೀಲ ಸರ್ಕಾರ, ಕೈಗಾರಿಕಾ ಸ್ನೇಹಿ ಕಾನೂನು, ಉನ್ನತ ಮಟ್ಟದ ಕೌಶಲ್ಯ ಇರುವ ವೃತ್ತಿಪರರು, ಕಾಸ್ಮೋಪಾಲಿಟಿನ್ ಜೀವನ ಶೈಲಿಯನ್ನು ನಗರ ಹೊಂದಿರುವುದರಿಂದ ಸಹಜವಾಗಿ ಸ್ಟಾರ್ಟ್‌ಅಪ್, ಸಂಶೋಧಕರು, ಜಾಗತಿಕ ಮಟ್ಟದ ಸಂಸ್ಥೆಗಳಿಗೆ ಕರ್ನಾಟಕ ಆಕರ್ಷಿಸುವ ತಾಣವಾಗಿದೆ ಎಂದು ಹೇಳಿದರು.
ಇಂದಿನಿಂದ 3 ದಿನ ದೇಶದ ಬೃಹತ್ ಟೆಕ್ ಮೇಳ; ಅರಮನೆ ಮೈದಾನಕ್ಕೆ ಬನ್ನಿ!
ಇತ್ತೀಚೆಗೆ ‘ನೀತಿ ಆಯೋಗ’ ಇಡೀ ದೇಶದಲ್ಲಿ ಕರ್ನಾಟಕ ಅತ್ಯಂತ ಮುಂಚೂಣಿಯಲ್ಲಿರುವ ‘ಆವಿಷ್ಕಾರದ ರಾಜ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಸ್ಮರಿಸಿಕೊಂಡ ಅವರು, ತಾವು ಮುಖ್ಯಮಂತ್ರಿಯಾದ ನಂತರ ಕೈಗಾರಿಕೋದ್ಯಮಿಗಳ ಜತೆ ನಿರಂತರ ಚರ್ಚೆ ಮಾಡುತ್ತಾ ಬಂದಿದ್ದೇನೆ. ಪ್ರಮುಖವಾಗಿ ಆವಿಷ್ಕಾರ, ಉದ್ಯಮಶೀಲತಾ, ಸ್ಟಾರ್ಟ್‌ಅಪ್‌ಗಳ ಬಗ್ಗೆ ಚರ್ಚಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಆವಿಷ್ಕಾರ ವಲಯಕ್ಕೆ ಉತ್ತೇಜನ ನೀಡಲು ಕಾನೂನಿನ ಮಾನ್ಯತೆ ನೀಡುವುದಾಗಿ ಭರವಸೆ ನೀಡಿದರು.
ಇತ್ತೀಚೆಗೆ ‘ಕರ್ನಾಟಕ ಆವಿಷ್ಕಾರ ಪ್ರಾಧಿಕಾರ’ ರಚಿಸಲಾಗಿದೆ. ತಾವು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಈ ಪ್ರಾಧಿಕಾರವು ರಾಜ್ಯ ಸರ್ಕಾರ ಜಾರಿ ತಂದಿರುವ ಯಾವುದೇ ಕಾನೂನನ್ನು ಸಡಿಲಿಸುವ ಅಥವಾ ಅದರಿಂದ ವಿನಾಯಿತಿ ನೀಡುವ ಅಧಿಕಾರವನ್ನು ಹೊಂದಿದೆ ಎಂದು ಬಿ.ಎಸ್. ಯಡಿಯೂರಪ್ಪ ವಿವರಿಸಿದರು.
ಪ್ರೋತ್ಸಾಹ ನೀಡಿಕೆ:
ನವೋದ್ಯಮಿಗಳಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಅಗತ್ಯ ಪ್ರಮಾಣದ ಹಣಕಾಸಿನ ನೆರವು ನೀಡಲಿದೆ. ಜೊತೆಗೆ ಖಾಸಗಿ ಉದ್ಯಮಿಗಳು, ತಜ್ಞರು, ಕೈಗಾರಿಕೆಗಳ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ‘ಎಕ್ಸಲೆನ್ಸ್ ಸೆಂಟರ್’ ಸ್ಥಾಪಿಸಿದೆ. ಜೊತೆಗೆ ವಿಶ್ವದ ಬೇರೆ ಬೇರೆ ಭಾಗದಲ್ಲಿರುವ ಆವಿಷ್ಕಾರ ತಾಣಗಳ ಜೊತೆ ಕೈ ಜೋಡಿಸಿ ಜಾಗತಿಕ ಆವಿಷ್ಕಾರ ಒಕ್ಕೂಟ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್‌್ಥ ನಾರಾಯಣ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಎಸ್. ಗೋಪಾಲಕೃಷ್ಣನ್ (ಕ್ರಿಸ್), ಬಯೋಕಾನ್ ಅಧ್ಯಕ್ಷ ಡಾ. ಕಿರಣ್ ಮಜುಂದಾರ್ ಶಾ, ಉದ್ಯಮಿ ಮೋಹನದಾಸ್ ಪೈ, ಐಟಿ- ಬಿಟಿ ಇಲಾಖೆ ನಿರ್ದೇಶಕ ಪ್ರಶಾಂತಕುಮಾರ್ ಮಿಶ್ರಾ, ಎಸ್‌ಟಿಪಿಐ ಮಹಾ ನಿರ್ದೇಶಕ ಡಾ. ಓಂಕಾರ್ ರೈ, ನಿರ್ದೇಶಕ ಶೈಲೆಂದ್ರಕುಮಾರ್ ತ್ಯಾಗಿ ಸೇರಿದಂತೆ ವಿವಿಧ ದೇಶಗಳ ರಾಯಭಾರಿಗಳು, ಹೈಕಮಿಷನರ್ ಉಪಸ್ಥಿತರಿದ್ದರು.
ಬಂಡವಾಳದಾರರ ಹಿತ ರಕ್ಷಣೆ
ಭಾರತ ಸರ್ಕಾರ ಆರ್‌ಸಿಇಪಿಗೆ ಸಹಿ ಹಾಕದ ಮಾತ್ರಕ್ಕೆ ಬಂಡವಾಳ ಹೂಡಿಕೆದಾರರು ಆತಂಕ ಪಡಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರು ಹಾಗೂ ಬಡವರ ಹಿತಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಹೂಡಿಕೆದಾರರ ರಕ್ಷಣೆಯನ್ನು ಪ್ರಧಾನಿಗಳು ಮಾಡಲಿದ್ದಾರೆ. ಪ್ರಧಾನಿ ಜನರು, ದೇಶ ಹಾಗೂ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳ ಹಿತ ಕಾಪಾಡುತ್ತಾರೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು, ಉದ್ಯಮಿಗಳ ನಾಯಕರಿಗೆ ಇಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.