ಇಂದು ರಾತ್ರಿ ಚಂದ್ರನೌಕೆ ಲ್ಯಾಂಡಿಂಗ್‌ ಸಾಹಸ! ಬೆಂಗ್ಳೂರಿನಿಂದ ಮೋದಿ ವೀಕ್ಷಣೆ

By Web Desk  |  First Published Sep 6, 2019, 2:54 PM IST

ಹೊಸ ಇತಿಹಾಸ ಸೃಷ್ಟಿಗೆ ಇಸ್ರೋ ಸಜ್ಜು; ರಾತ್ರಿ 1.30ರ ವೇಳೆಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡರ್‌ ಇಳಿಕೆ ; ಅಮೆರಿಕ, ರಷ್ಯಾ, ಚೀನಾ ದೇಶಗಳ ಸಾಧನೆ ಸರಿಗಟ್ಟಲಿದೆ ಭಾರತ
 


ಬೆಂಗಳೂರು (ಸೆ.06): ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿ ಹುದುಗಿರುವ ರಹಸ್ಯಗಳನ್ನು ಭೇದಿಸುವ ಹೆಗ್ಗುರಿಯೊಂದಿಗೆ ‘ಚಂದ್ರಯಾನ-2’ ನೌಕೆ ಚಂದಿರನ ಮೇಲೆ ಶುಕ್ರವಾರ ತಡರಾತ್ರಿ 1.30ರಿಂದ 2.30ರ ವೇಳೆಗೆ (ಶನಿವಾರ ನಸುಕಿನಲ್ಲಿ) ಪಾದಾರ್ಪಣೆ ಮಾಡಲಿದೆ. 

ಈ ಅಪರೂಪದ ಕ್ಷಣಗಳನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ. ಈ ವಿಸ್ಮಯ ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರೌಢಶಾಲೆಗಳ 70 ವಿದ್ಯಾರ್ಥಿಗಳ ಜತೆಗೂಡಿ ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ಅಪರೂಪದ ಸಾಧನೆಯನ್ನು ವೀಕ್ಷಿಸಲಿದ್ದಾರೆ. ಟೀವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

Tap to resize

Latest Videos

undefined

ಈವರೆಗೆ ವಿಶ್ವದ ಮೂರು ದೇಶಗಳು ಮಾತ್ರವೇ ಚಂದ್ರನ ಮೇಲೆ ನೌಕೆ ಇಳಿಸಿದ ಇತಿಹಾಸ ಹೊಂದಿವೆ. ಶುಕ್ರವಾರ ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದರೆ ರಷ್ಯಾ, ಅಮೆರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ. ವಿಶೇಷ ಎಂದರೆ, ಈವರೆಗೆ ಯಾವ ದೇಶಗಳು ಕಾಲಿಡದ ಹಾಗೂ ಬಿಸಿಲು ಕಾಣದ ದಕ್ಷಿಣ ಧ್ರುವವನ್ನು ಭಾರತ ಆಯ್ಕೆ ಮಾಡಿಕೊಂಡಿದೆ.

ಇದನ್ನೂ ಓದಿ | ಮೋದಿ ಜೊತೆ ಚಂದ್ರಯಾನ-2 ವೀಕ್ಷಣೆಗೆ ಸಿಂಧನೂರು ವಿದ್ಯಾರ್ಥಿನಿ ಆಯ್ಕೆ

15 ನಿಮಿಷ ಸಾಹಸ:

ಗಣೇಶ ಚತುರ್ಥಿಯ ದಿನವಾದ ಸೋಮವಾರ ಚಂದ್ರಯಾನ-2 ನೌಕೆಯಲ್ಲಿನ ಆರ್ಬಿಟರ್‌ ಹಾಗೂ ‘ವಿಕ್ರಮ್‌’ ಹೆಸರಿನ ಲ್ಯಾಂಡರ್‌ ಪ್ರತ್ಯೇಕಗೊಂಡಿದ್ದವು. ಬಳಿಕ ಲ್ಯಾಂಡರ್‌ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಎರಡು ಬಾರಿ ಕೆಳಕ್ಕೆ ಇಳಿಸಿದ್ದಾರೆ. ಶುಕ್ರವಾರ ತಡರಾತ್ರಿ 1.30ರಿಂದ ಲ್ಯಾಂಡರ್‌ ಅನ್ನು ನಿಧಾನವಾಗಿ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಸುಮಾರು 15 ನಿಮಿಷಗಳಲ್ಲಿ ಇದು ಮುಗಿಯುತ್ತದೆ ಎಂದು ಹೇಳಲಾಗಿದೆ.

ಲ್ಯಾಂಡರ್‌ ಚಂದ್ರನ ಮೇಲೆ ಇಳಿದ ಬಳಿಕ ತೆರೆದುಕೊಳ್ಳುತ್ತದೆ. ಒಳಗಿನಿಂದ ‘ಪ್ರಜ್ಞಾನ್‌’ ಹೆಸರಿನ ರೋವರ್‌ ಹೊರಬರುತ್ತದೆ. ಅದು ಒಟ್ಟು 14 ದಿನ 500 ಮೀ. ದೂರವನ್ನು ಕ್ರಮಿಸಿ, ಚಂದ್ರನಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಯನ್ನು ರೋವರ್‌ ಸಂಗ್ರಹಿಸಲಿದೆ.

ಲ್ಯಾಂಡರ್‌ನಿಂದ ಪ್ರತ್ಯೇಕಗೊಂಡಿರುವ ಆರ್ಬಿಟರ್‌ ಇನ್ನೂ ಒಂದು ವರ್ಷ ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಾ ಅಪರೂಪದ ಫೋಟೋಗಳನ್ನು ಭೂಮಿಗೆ ರವಾನಿಸಲಿದೆ.

ಇಸ್ರೋದಲ್ಲಿ ದೇವರಜಪ:

ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಇಳಿಸುವುದು ಅತ್ಯಂತ ಭಯಾನಕ ಕ್ಷಣ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಅವರೇ ಈ ಹಿಂದೆ ತಿಳಿಸಿದ್ದರು. ಹೀಗಾಗಿ ಇಸ್ರೋ ವಿಜ್ಞಾನಿಗಳು ಲ್ಯಾಂಡರ್‌ ಯಶಸ್ವಿಯಾಗಿ ಇಳಿಯಲೆಂದು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಯಾರೊಬ್ಬರೂ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

70 ಮಕ್ಕಳ ಜತೆ ಮೋದಿ ವೀಕ್ಷಣೆ:

ಶುಕ್ರವಾರ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, 70 ವಿದ್ಯಾರ್ಥಿಗಳ ಜತೆಗೂಡಿ ಇಸ್ರೋ ಸಾಹಸ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ | ಚಂದಮಾಮ ಸೆರೆಸಿಕ್ಕ: ಚಂದ್ರಯಾನ-2 ಕ್ಲಿಕ್ಕಿಸಿದ ಫೋಟೋ ಚೊಕ್ಕ!

ನೇರ ಪ್ರಸಾರ ತಪ್ಪದೆ ನೋಡಿ:

ಬಹುತೇಕ ವಾಹಿನಿಗಳು ಈ ಅಮೋಘ ಸಾಹಸದ ನೇರ ಪ್ರಸಾರ ಮಾಡಲಿವೆ. ಈ ಅಪೂರ್ವ ಸಾಧನೆಯನ್ನು ತಪ್ಪದೇ ನೋಡಿ.

ಮುಂದೇನು?

  • ಲ್ಯಾಂಡರ್‌ನಿಂದ ಹೊರಬರಲಿದೆ ‘ಪ್ರಜ್ಞಾನ್‌’ ಹೆಸರಿನ ರೋವರ್‌
  • 14 ದಿನ 500 ಮೀ. ಸಂಚರಿಸಿ ಚಂದ್ರನ ಬಗ್ಗೆ ಮಾಹಿತಿ ಸಂಗ್ರಹ
  • 1 ವರ್ಷ ಚಂದ್ರನ ಸುತ್ತ ಸುತ್ತಿ ಫೋಟೋ ತೆಗೆಯಲಿದೆ ಆರ್ಬಿಟರ್‌
click me!