40 ಕೋಟಿ ಫೇಸ್‌ಬುಕ್ ಬಳಕೆದಾರರ ಮೊಬೈಲ್ ನಂಬರ್ ಸೋರಿಕೆ ಆರೋಪ| ಬಳಕೆದಾರರ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ: ಟಕ್ ವೆಬ್‌ಸೈಟ್ ವರದಿ
ವಾಷಿಂಗ್ಟನ್[ಸೆ.06]: ಈ ಹಿಂದೆ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆರೋಪ ಎದುರಿಸಿದ್ದ ಫೇಸ್‌ಬುಕ್‌ನಲ್ಲಿ ಮತ್ತೊಮ್ಮೆ ದತ್ತಾಂಶ ಸೋರಿಕೆ ಆರೋಪ ಕೇಳಿ ಬಂದಿದೆ. ಫೇಸ್‌ಬುಕ್ ಅಕೌಂಟ್ ಜೊತೆ ಸಂಯೋಜನೆಗೊಂಡಿರುವ 40 ಕೋಟಿ ಬಳಕೆದಾರರ ಫೋನ್‌ನಂಬರ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆ ಆಗಿವೆ.
13.3 ಕೋಟಿ ಅಮೆರಿಕದ ಬಳಕೆದಾರರ ಖಾತೆಗಳು, 5 ಕೋಟಿ ವಿಯೆಟ್ನಾಂ ಬಳಕೆದಾರರ ಖಾತೆಗಳು ಹಾಗೂ 1.8 ಕೋಟಿ ಬ್ರಿಟನ್ ಬಳಕೆದಾರರ ಖಾತೆಗಳು ಸೇರಿದಂತೆ 41.9 ಕೋಟಿ ಬಳಕೆದಾರರ ಖಾತೆಯಲ್ಲಿನ ಮಾಹಿತಿಗಳು ಆನ್‌ಲೈನ್ ಸರ್ವರ್‌ವೊಂದರಲ್ಲಿ ಲಭ್ಯವಾಗಿದೆ ಎಂದು ಟೆಕ್‌ಕ್ರಚ್ ಎಂಬ ವೆಬ್‌ಸೈಟ್ ವರದಿ ಮಾಡಿದೆ.
ಪ್ರತಿಯೊಂದು ಖಾತೆಯ ಜೊತೆ ಸೇರಿಕೊಂಡಿರುವ ವಿಶಿಷ್ಟಅಂಕೆಗಳು, ಪ್ರೊಫೈಲ್‌ನಲ್ಲಿರುವ ಫೋನ್ ನಂಬರ್‌ಗಳು ಹಾಗೂ ಬಳಕೆದಾರರ ಭೌಗೋಳಿಕ ಸ್ಥಳಗಳು ಮಾಹಿತಿ ಸರ್ವರ್‌ನಲ್ಲಿ ಲಭ್ಯವಿತ್ತು. ಸರ್ವರ್ ಪಾಸ್‌ವರ್ಡ್‌ನಿಂದ ರಕ್ಷಿಸಲ್ಪಡದೇ ಇರುವ ಕಾರಣದಿಂದ ಯಾರು ಬೇಕಾದರೂ ಸುಲಭವಾಗಿ ಬಳಕೆ ಮಾಡಬಹುದಾಗಿತ್ತು. ಈ ದತ್ತಾಂಶಗಳು ಬುಧವಾರದ ವರೆಗೂ ಆನ್‌ಲೈನ್‌ನಲ್ಲಿ ಲಭ್ಯವಿದ್ದವು ಎಂದು ವೆಬ್‌ಸೈಟ್ ವರದಿ ಮಾಡಿದೆ.
ಇದೇ ವೇಳೆ ವರದಿಯ ಕೆಲವು ಅಂಶಗಳನ್ನು ಫೇಸ್‌ಬುಕ್ ಖಚಿತಪಡಿಸಿದೆ. ಆದರೆ, ಕೋಟಿಗಟ್ಟಲೆ ಬಳಕೆದಾರರ ಖಾತೆ ಸೋರಿಕೆ ಆಗಿದೆ ಎಂಬ ವರದಿಯನ್ನು ತಳ್ಳಿಹಾಕಿದೆ.