
ಪ್ಲಾಸ್ಟಿಕ್ ಸಮಸ್ಯೆ ಯಾವ ಪರಿಯಲ್ಲಿ ಇದೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದರಲ್ಲಿಯೂ ಏಕಬಳಕೆಗೆ ಪ್ಲಾಸ್ಟಿಕ್ ಮನುಷ್ಯರ, ಪ್ರಾಣಿಗಳ ಜೀವಕ್ಕೆ ಅಪಾಯ. ಕ್ಯಾನ್ಸರ್ನಂಥ ಮಾರಣಾಂತಿಕ ಕಾಯಿಲೆಗೂ ಇದು ದಾರಿ ಮಾಡಿಕೊಡುತ್ತದೆ. ಇದರ ಹೊರತಾಗಿಯೂ, ಏಕಬಳಕೆಯ ಪ್ಲಾಸ್ಟಿಕ್ ಹಲವೆಡೆ ಬ್ಯಾನ್ ಮಾಡಿದ್ದರೂ, ಜನರಿಗೆ ಅದು ಬೇಕೇ ಬೇಕು. ಅದಕ್ಕಾಗಿ ಕದ್ದುಮುಚ್ಚಿಯಾದರೂ ವ್ಯಾಪಾರಸ್ಥರು ಇದನ್ನು ಇಟ್ಟುಕೊಳ್ಳುವ ಅನಿವಾರ್ಯ. ಅವರ ಬಳಿ ಪ್ಲಾಸ್ಟಿಕ್ ಕವರ್ ಇಲ್ಲದಿದ್ದರೆ, ಗ್ರಾಹಕರೇ ಬರುವುದಿಲ್ಲ ಎನ್ನುವ ಭಯ. ಪ್ಲಾಸ್ಟಿಕ್ ಬದಲು ಪರ್ಯಾಯ ಯಾವುದು ಎನ್ನುವ ಚಿಂತೆ ಹಲವರಲ್ಲಿ ಇದ್ದರೆ, ಪರ್ಯಾಯ ಇದ್ದರೂ ಅದು ದುಬಾರಿ. ಅದಕ್ಕೆ ಎಕ್ಸ್ಟ್ರಾ ಬೆಲೆ ತೆರಬೇಕು ಎನ್ನುವ ಚಿಂತೆ.
ಇವುಗಳಿಗೆ ಮುಕ್ತಿ ನೀಡುವುದಕ್ಕಾಗಿಯೇ ಟೆನಿತ್ ಆದಿತ್ಯ ಎನ್ನುವ ವಿದ್ಯಾರ್ಥಿ ಹೊಸ ಸಂಶೋಧನೆ ಮಾಡಿದ್ದಾನೆ. ನೈಸರ್ಗಿಕವೂ, ಆರೋಗ್ಯಪೂರ್ಣವೂ ಆಗಿರುವ ಬಾಳೆ ಎಲೆಗೆ ತನ್ನದೇ ಆದ ವಿಶೇಷತೆ ಇದೆ. ಹಬ್ಬ-ಹರಿದಿನ, ಮದುವೆ-ಮುಂಜಿಗಳಲ್ಲಿ ಇದಕ್ಕೆ ಡಿಮಾಂಡ್ ಇದ್ದದ್ದೇ. ಆದರೆ ಇದು ಒಂದು ಅಥವಾ ಎರಡು ದಿನ ತಾಜಾ ಇರಬಹುದು. ಕೆಲವು ಬಾಳೆ ಎಲೆಗಳು ವಾರಗಟ್ಟಲೆಯೂ ತಾಜಾ ಇರುತ್ತವೆ. ಒಂದಿಷ್ಟು ಕೆಮಿಕಲ್ಸ್ ಹಾಕಿಟ್ಟರೆ ಮತ್ತೊಂದಿಷ್ಟು ದಿನ ತಾಜಾ ಇರುತ್ತದೆ. ಆದರೆ ದೀರ್ಘಕಾಲ ಅದರಲ್ಲಿಯೂ ವರ್ಷಗಟ್ಟಲೆ ಬಾಳೆ ಎಲೆ ತಾಜಾ ಇರುವುದು ಕಷ್ಟಸಾಧ್ಯವೇ, ಅದೂ ಯಾವುದೇ ಕೆಮಿಕಲ್ಸ್ ಇಲ್ಲದೇ ಇಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ.
ಇವೆಲ್ಲಕ್ಕೂ ಪರಿಹಾರ ಕಂಡುಕೊಂಡಿದ್ದಾರೆ ಭಾರತದ ಯು ಸಂಶೋಧಕ ಟೆನಿತ್ ಆದಿತ್ಯ ಯಾವುದೇ ರಾಸಾಯನಿಕದ ಸೋಂಕು ಇಲ್ಲದೇ ಬಾಳೆ ಎಲೆಗಳನ್ನು ವರ್ಷಗಟ್ಟಲೆ ತಾಜಾ ಇಡುವ ಬಗ್ಗೆ, ಪ್ಲಾಸ್ಟಿಕ್ ಬದಲಾಗಿ ಬಾಳೆ ಎಲೆಯನ್ನೇ ಉಪಯೋಗಿಸುವಂತೆ ಮಾಡುವ ಗುರಿ ಇಟ್ಟುಕೊಂಡು ಈ ನಿಟ್ಟಿನಲ್ಲಿ ಅವರು ಸಾಧನೆ ಮಾಡಿದ್ದಾರೆ. ಬಾಳೆ ಎಲೆಯ ಕೋಶ ಗೋಡೆಗಳನ್ನು ನೈಸರ್ಗಿಕವಾಗಿ ಬಲಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ, ಪ್ಲಾಸ್ಟಿಕ್ ಕಪ್‌ಗಳು, ಪ್ಲೇಟ್‌ಗಳು, ಪಾತ್ರೆಗಳು ಮತ್ತು ಪ್ಯಾಕೇಜಿಂಗ್ ವಸ್ತುಗಳನ್ನು ಬದಲಾಯಿಸುವಾಗ 12 ತಿಂಗಳವರೆಗೆ ಬಾಳಿಕೆ ಬರುವ ಪರಿಸರ ಸ್ನೇಹಿ ಪರ್ಯಾಯವನ್ನು ಅವರು ರಚಿಸಿದ್ದಾರೆ.
ಭಾರತವು ಪ್ರತಿ ವರ್ಷ ಲಕ್ಷಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ, ಅದರಲ್ಲಿ ಹೆಚ್ಚಿನವು ಆಹಾರ ಪ್ಯಾಕೇಜಿಂಗ್ ಮತ್ತು ಬಿಸಾಡಬಹುದಾದ ಉತ್ಪನ್ನಗಳಿಂದ. ಇದಕ್ಕೆ ಪರಿಹಾರ ಸಸ್ಯ ಆಧರಿತ ವಸ್ತು ಎನ್ನುವುದನ್ನು ಮನಗಂಡು ಇದನ್ನು ತಾವು ಮಾಡಿರುವುದಾಗಿ ಹೇಳಿದ್ದಾರೆ ಅವರು. ಏಕ-ಬಳಕೆಯ ಪ್ಲಾಸ್ಟಿಕ್‌ನಲ್ಲಿ ಮುಳುಗಿರುವ ಜಗತ್ತಿನಲ್ಲಿ, ಈ ರೀತಿಯ ನಾವೀನ್ಯತೆಗಳು ಉತ್ತಮ ಪರಿಹಾರ ದೊರಕಿಸಿಕೊಡುತ್ತದೆ. ಇಂಥ ಪರಿಹಾರಕ್ಕಾಗಿ ನಮ್ಮಲ್ಲಿಯೇ ಇರುವ ವಸ್ತುಗಳ ಬಗ್ಗೆ ಸಂಶೋಧನೆ ಮಾಡುವ ಅಗತ್ಯವಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.