ನಾವು ಪ್ರತಿದಿನ ನಡೆಯುತ್ತೇವೆ. ಆದರೆ, ಹೀಗೆ ಸುಮ್ಮನೆ ನಡೆಯೋಕೆ ಯಾರಾದ್ರೂ ದುಡ್ಡು ಕೊಡ್ತಾರಾ? ನಾವು ಕೊಡ್ತೀವಿ ಅಂತಿದಾವೆ ಈ ವಾಕಿಂಗ್ ಆ್ಯಪ್‌ಗಳು. ಮತ್ತೇಕೆ ತಡ? ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ, ವಾಕ್ ಮಾಡೋಕೆ ಶುರು ಹಚ್ಕೊಳ್ಳಿ... ಹಣ ಮತ್ತು ಆರೋಗ್ಯ ಎರಡೂ ಗಳಿಸಿ.
ವ್ಯಾಯಾಮ, ವಾಕಿಂಗ್, ರನ್ನಿಂಗ್- ಯಾವುದೇ ಆಗಲಿ, ನಮ್ಮ ಆರೋಗ್ಯಕ್ಕಾಗಿ, ಖುಷಿಗಾಗಿ ಮಾಡುತ್ತೇವೆ ಅಲ್ಲವೇ? ಆದರೆ, ಅದಕ್ಕೂ ಯಾರಾದರೂ ಹಣ ಕೊಡ್ತಾರೆ ಅಂದ್ರೆ? ಡಬಲ್ ಖುಷಿ ಆಗ್ದೇ ಇರುತ್ತಾ?
ಇದಕ್ಕಾಗಿ ನೀವು ಹೆಚ್ಚೇನು ಕಷ್ಟ ಪಡಬೇಕಾಗಿಲ್ಲ. ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡ್ರೆ ಸಾಕು. ಹಾಗಂತ ಹಣ ಮಾಡೋಕಂತಾನೇ ವಾಕ್ ಮಾಡ್ಬೇಡಿ, ಏಕೆಂದರೆ ಇದು ನಿಮ್ಮ ಪಾಕೆಟ್ ಮನಿಯಾಗುತ್ತದೆಯೇ ಹೊರತು ಸ್ಯಾಲರಿಯಲ್ಲ.
ಫ್ರೀಯಾಗಿದ್ದೇ ಫಿಟ್ ಆಗಿರ್ಬೇಕಾ? ಜಿಮ್, ಜುಂಬಾ ಬಿಟ್ಹಾಕಿ...
ಈ ಆ್ಯಪ್‌ಗಳ ನಡುವೆ ಹಲವು ಒಂದೇ ತರ ಇದ್ದರೂ ರಿವಾರ್ಡ್ ಪಾಯಿಂಟ್ಸ್ ಕೊಡುವುದರಲ್ಲಿ, ಪೇಮೆಂಟ್ ವಿಧಾನಗಳಲ್ಲಿ ವ್ಯತ್ಯಾಸವಿದೆ. ಇಷ್ಟಕ್ಕೂ ನೀವು ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ಏನಾಗುತ್ತಂದ್ರೆ, ನಿಮಗೂ ವಾಕಿಂಗ್‌ಗೆ ಮೂಡ್ ಬರುತ್ತದೆ, ರಿವಾರ್ಡ್‌ನಿಂದಾಗಿ ನಿಮ್ಮ ಗೆಳೆಯರನ್ನೂ ಫಿಟ್ನೆಸ್ ಕಡೆ ಸೆಳೆಯುತ್ತೀರಿ ಅಲ್ಲದೆ, ಸುಮ್ಮನೇ ದಿನಾ ಮಾಡುವ ಕೆಲಸಕ್ಕೇ ಯಾರೋ ದುಡ್ಡು ಕೊಡ್ತಾರಂದ್ರೆ ಖುಷೀನೇ ತಾನೇ? ಅವೆಲ್ಲ ಏನು, ಯಾವ ಅಪ್ಲಿಕೇಶನ್‌ಗಳಿವು ಎಂದು ನೋಡಿ ಬರೋಣ.
1. ಸ್ವೆಟ್‌ಕಾಯ್ನ್
ಇದು ವಾಕ್ ಮಾಡಲು ದುಡ್ಡು ನೀಡುವ ಆ್ಯಪ್‌ಗಳಲ್ಲಿ ಬಹಳ ಜನಪ್ರಿಯವಾದುದು. ಇದು ಫೋನ್‌ನಲ್ಲಿ ರನ್ ಮೋಡ್‌ನಲ್ಲಿದ್ದರೆ ಸಾಕು, ನೀವು ದಿನದಲ್ಲಿ ಎಷ್ಟು ಹೆಜ್ಜೆ ನಡೆದಿರು ಎಂಬುದನ್ನಿದು ಲೆಕ್ಕ ಹಾಕುತ್ತಿರುತ್ತದೆ. ಓಡಿದರೆ ಬಹಳ ಬೇಗ ಹೆಚ್ಚು ಸ್ವೆಟ್‌ಕಾಯಿನ್ಸ್ ಪಡೆಯಬಹುದು. ಈ ಕರೆನ್ಸಿಯನ್ನು ರಿವಾರ್ಡ್ ಅಥವಾ ಕ್ಯಾಶ್ ಆಗಿ ಪಡೆದುಕೊಳ್ಳಬಹುದು. ಗಿಫ್ಟ್ ಕಾರ್ಡ್ ಆಯ್ಕೆ ಕಡಿಮೆ ಇದೆ. ಆದರೆ, 20,000 ಸ್ವೆಟ್‌ಕಾಯಿನ್ಸ್ ಒಟ್ಟು ಮಾಡಿದರೆ ಪೇಪಲ್ ಮೂಲಕ 1 ಸಾವಿರ ಡಾಲರ್ ಹಣವನ್ನು ಪಡೆಯಬಹುದು. ನೆನಪಿರಲಿ, ಇದು ನೀವು ಮನೆಯೊಳಗೆ ನಡೆದ ಹೆಜ್ಜೆಗೆಲ್ಲ ಲೆಕ್ಕ ಕೊಡೋಲ್ಲ. ಏನಿದ್ದರೂ ಹೊರಾಂಗಣದಲ್ಲೇ ನಡೆಯಬೇಕು. ಫೋನ್‌ನ ಜಿಪಿಎಸ್ ಬಳಸಿಕೊಳ್ಳುತ್ತದೆ. ಈ ಅಪ್ಲಿಕೇಶನ್ ಬಳಸಿ ನಿಮ್ಮ ದೈನಂದಿನ ಖರ್ಚಷ್ಟನ್ನಾದರೂ ವರ್ಷದಲ್ಲಿ ಪಡೆಯಬಹುದು.
2. ಲೈಫ್ ಕಾಯಿನ್
ಇದು ಕೂಡಾ ಸ್ವೆಟ್‌ಕಾಯಿನ್‌ನಂತೆಯೇ ಕೆಲಸ ಮಾಡುತ್ತದೆ. ಇಲ್ಲಿ ಕೂಡಾ ಲೈಫ್‌ಕಾಯಿನ್ ಬದಲಾಗಿ ಕರೆನ್ಸಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಇದನ್ನು ಗಿಫ್ಟ್ ಕಾರ್ಡ್, ಕ್ರೀಡಾ ವಸ್ತುಗಳು, ಆ್ಯಪಲ್ ಐಫೋನ್ ಎಕ್ಸ್, ಆ್ಯಪಲ್ ಏರ್‌ಪಾಡ್ಸ್, ಆ್ಯಪಲ್ ವಾಚ್, ಹಾಗೂ ಅಮೇಜಾನ್, ಪೇಪಲ್‌ನಲ್ಲಿ ಬ್ಯಾಲೆನ್ಸ್ ಆಗಿ ಬದಲಾಯಿಸಿಕೊಳ್ಳಬಹುದು. ಇದರ ಅಂಬಾಸಿಡರ್ ಪ್ರೋಗ್ರಾಂನ ಸದಸ್ಯರಾದರೆ ಮತ್ತಷ್ಟು ಹಣವನ್ನು ಗಳಿಸಬಹುದು.
3. ಅಚೀವ್‌ಮೆಂಟ್
ವಾಕಿಂಗ್, ಸ್ವಿಮ್ಮಿಂಗ್,. ಬೈಕಿಂಗ್ ಅಥವಾ ಸುಮ್ಮನೆ ಆಟವಾಡುವುದಕ್ಕೆ ಈ ಆ್ಯಪ್ ನಿಮಗೆ ಹಣ ನೀಡುತ್ತದೆ. ರಿಜಿಸ್ಟರ್ ಮಾಡಿದ್ದಕ್ಕೆ 6 ಪಾಯಿಂಟ್ಸ್, ಅಲ್ಲದೆ, ಪ್ರತಿದಿನ ನಿಮ್ಮ ಫುಡ್ ಇಂಟೇಕ್, ನಿದ್ರಾ ಸೈಕಲ್, ತೂಕಇಳಿಕೆ, ಸಾಧನೆಗಳನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದಕ್ಕೂ ಪಾಯಿಂಟ್ಸ್ ನೀಡುತ್ತದೆ. ಪ್ರತಿದಿನ ನಿಮ್ಮ ಚಟುವಟಿಕೆಗಳನ್ನು ಈ ಆ್ಯಪ್‌ನಲ್ಲಿ ಹಾಕುವುದಕ್ಕೆ ಗರಿಷ್ಠ 80 ಪಾಯಿಂಟ್ಸ್ ಹಾಗೂ ನಡಿಗೆಗೆ ಮತ್ತಷ್ಟು ಪಾಯಿಂಟ್ಸ್ ಸಿಗುತ್ತದೆ. 10000 ಪಾಯಿಂಟ್ಸ್‌ಗೆ 10 ಡಾಲರ್ ನೀಡಲಾಗುತ್ತದೆ.
4. ಸ್ಟೆಪ್‌ಬೆಟ್
ಇದೂ ಕೂಡಾ ವಾಕಿಂಗ್‌ಗೆ ಹಣ ನೀಡುವ ಪಾಪುಲರ್ ಆ್ಯಪ್. ನಿಮ್ಮ ವರ್ಕೌಟ್ ರೂಟಿನ್‌ನಿಂದ ಹಣ ಗಳಿಸಬೇಕೆಂದರೆ ಇದು ನಿಮಗೆ ಪರ್ಫೆಕ್ಟ್ ಆ್ಯಪ್. ಇದರಲ್ಲಿ ನೀವು ಗುರಿ ಸಾಧಿಸಿ ಹಣ ಪಡೆಯಲೂ ಅವಕಾಶವಿದೆ, ಗುರಿ ಸಾಧಿಸದೆ ಹೋದರೆ ಹಣ ಕಳೆದುಕೊಳ್ಳಲೂಬೇಕಾಗುತ್ತದೆ. ಪ್ರೊಫೈಲ್ ಸೆಟ್ ಮಾಡಿದ ಕೂಡಲೇ ಆ್ಯಪ್ ನಿಮ್ಮ ಫಿಟ್ನೆಸ್ ಲೆವೆಲ್ ಅಳೆಯುತ್ತದೆ. ಪ್ರತಿ ವಾರ ಹಣ ಗೆಲ್ಲಲು ಒಂದಿಷ್ಟು ಗುರಿಗಳನ್ನು ನೀಡುತ್ತದೆ. ಸುಮಾರು 40 ಡಾಲರ್ ಹಣ ನೀವಿಲ್ಲಿ ಬೆಟ್ ಕಟ್ಟಬೇಕು. ಗುರಿ ಸಾಧಿಸದೆ ಹೋದರೆ ಇಷ್ಟನ್ನು ಕಳೆದುಕೊಳ್ಳಬೇಕಾಗುತ್ತದಲ್ಲ ಎಂಬ ಭಯಕ್ಕೇ ವರ್ಕೌಟ್ ಮಾಡೇಮಾಡುತ್ತೀರಿ.
ನಡಿಗೆಯಲ್ಲಿ ವೇಗವಿದ್ದರೆ ಆಯಸ್ಸು ಹೆಚ್ಚಳ!
5. ಹೈಜಿ
ಹೈಜಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಹತ್ತಿರದ ಮೆಡಿಕಲ್ ಸ್ಟೋರ್ ಅಥವಾ ದೊಡ್ಡ ಆಹಾರ ಮಳಿಗೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಆ ಮೂಲಕ ನಿಮ್ಮ ತೂಕ, ಬಿಪಿ, ಪಲ್ಸ್, ಹೆಜ್ಜೆಗಳು, ಬಿಎಂಐ, ಜಿಮ್ ಚೆಕ್ ಇನ್, ಬಾಡಿ ಫ್ಯಾಟ್ ಎಲ್ಲವನ್ನೂ ಹೈಜಿಗೆ ಅಪ್ಡೇಟ್ ಮಾಡಿ ಟ್ರ್ಯಾಕ್ ಮಾಡಬಹುದು. ಇಲ್ಲಿ ಕೂಡಾ ನಡೆಯಲು, ಟಾಸ್ಕ್ ಕಂಪ್ಲೀಟ್ ಮಾಡಲು ಪಾಯಿಂಟ್ಸ್ ಸಿಗುತ್ತವೆ. ಅವನ್ನು ಹಣವಾಗಿ ರಿಡೀಮ್ ಮಾಡಿಕೊಳ್ಳಬಹುದು.