ಯೋಗೇಶ್ ಗೌಡ ಹತ್ಯೆ ಪ್ರಕರಣ, ಕಠಿಣ ಶಿಕ್ಷೆಗೆ ಸಿಬಿಐ ಮನವಿ, ಕಡಿಮೆಗೊಳಿಸುವಂತೆ ಜಡ್ಜ್‌ ಮುಂದೆ ಅಪರಾಧಿಗಳ ಕಣ್ಣೀರು!

Published : Apr 16, 2026, 03:13 PM IST
yogesh gowda vinay kulkarni case

ಸಾರಾಂಶ

ಯೋಗೇಶ್ ಗೌಡ ಹತ್ಯೆ ಪ್ರಕರಣದ ಶಿಕ್ಷೆ ಪ್ರಕಟಣೆಗೂ ಮುನ್ನ ನಡೆದ ವಿಚಾರಣೆಯಲ್ಲಿ, ಸಿಬಿಐ ಪರ ವಕೀಲರು ಇದೊಂದು ಪೂರ್ವಯೋಜಿತ ರಾಜಕೀಯ ಕೊಲೆ ಎಂದು ವಾದಿಸಿ ಗರಿಷ್ಠ ಶಿಕ್ಷೆಗೆ ಒತ್ತಾಯಿಸಿದರು. ಮತ್ತೊಂದೆಡೆ, ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಆರೋಪಿಗಳು ಕೌಟುಂಬಿಕ ಹಾಗೂ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು, ಕನಿಷ್ಠ ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

 ಧಾರವಾಡ: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ನಾಳೆ ಅಂದ್ರೆ ಶುಕ್ರವಾರ ಪ್ರಕಟವಾಗಲಿದೆ. ಇದಕ್ಕೂ ಮುನ್ನ ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರ ನಡುವೆ ತೀವ್ರ ವಾದ-ಪ್ರತಿವಾದಗಳು ನಡೆದವು. ಒಂದೆಡೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಸಿಬಿಐ ಪರ ವಕೀಲರು ಒತ್ತಾಯಿಸಿದರೆ, ಮತ್ತೊಂದೆಡೆ ಆರೋಪಿಗಳ ಪರ ವಕೀಲರು ವಿವಿಧ ಕಾರಣಗಳನ್ನು ಮುಂದಿಟ್ಟು ಕನಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿದರು.

ನ್ಯಾಯಾಧೀಶರಿಗೆ ಒದೊಂದು ಕಾರಣ ಕೊಟ್ಟ ಅಪರಾಧಿಗಳು

ವಿಚಾರಣೆ ಅಂತ್ಯ ಹಂತಕ್ಕೆ ಬಂದಾಗ ನ್ಯಾಯಾಧೀಶರು, “ಆರೋಪಿಗಳು ಏನಾದರೂ ಹೇಳಬೇಕೇ?” ಎಂದು ಪ್ರಶ್ನಿಸಿದರು. ಈ ವೇಳೆ ಒಬ್ಬೊಬ್ಬರಾಗಿ ಆರೋಪಿಗಳು ಒಂದೊಂದೇ ಕಾರಣ ನೀಡಿ ಕನಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿದರು. ಕೆಲವರು ನಾವು ನಿರಪರಾಧಿಗಳು ಎಂದು ಹೇಳಿದರೆ, ಮತ್ತೊಬ್ಬರು ಚಿಕ್ಕ ಮಕ್ಕಳಿದ್ದಾರೆ. ಕುಟುಂಬವನ್ನು ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳಿವೆ ಎಂಬ ಕಾರಣಗಳನ್ನು ಮುಂದಿಟ್ಟರು. ಅವರ ವಿಚಿತ್ರ ಹೇಳಿಕೆಗಳು ಈ ಕೆಳಗೆ ನೀಡಲಾಗಿದೆ.

ಅಪರಾಧಿಗಳು ಏನಾದರೂ ಹೇಳಿವುದಿದೆಯಾ? ಎಂದು ಜಡ್ಜ್ ಕೇಳಿದರು. ಎ2 ಅಪರಾಧಿ ವಿಕ್ರಮ್ ನಾನು ನಿರಪರಾಧಿ ಸಾರ್.. ನನಗರ ಐದು ವರ್ಷದ ಮಗು ಇದೆ ಸಾರ್ ಎಂದ. ಇನ್ನು ಎ3 ಅಪರಾಧಿ ಕೀರ್ತಿ ಕುಮಾರ್ ಸ್ವೀಟ್ ಮಾರ್ಟ್ ರಿಯಲ್ ಎಸ್ಟೇಟ್ ಎಏಜೆಂಟ್ ಆಗಿದ್ದೆ ಸಾರ್ ನಾನು ತಪ್ಪು ಮಾಡಿಲ್ಲ ಎಂದ. ಎ4 ಅಪರಾಧಿ ಸಂದೀಪ್ ನನಗೆ ಚಿಕ್ಕ ಮಕ್ಕಳಿದ್ದಾರೆ, ನಾನು ತಪ್ಪು ಮಾಡಿಲ್ಲ ಸಾರ್ ಎಂದ ಎ5 ವಿನಾಯಕ್ ನಾನು ರಿಯಲ್ ಎಸ್ಟೇಟ್ ಏಜೆಂಟ್ ಸಾರ್ ನಾನು ಮಾಡಿಲ್ಲ ಸಾರ್ ಎಂದ. ಎ6 ಮಹಾಬಲೇಶ ನನಗೆ ಒಂದು ವರ್ಷದ, ಮೂರು ವರ್ಷ ದ ಮಕ್ಳಳಿದ್ದಾರೆ. ನಾನು ದುಡಿದೇ ನಮ್ಮ ಕುಟುಂಬ ನಡಿಯಬೇಕು ಸಾರ್ ಎಂದು ಕಣ್ಣೀರು ಹಾಕಿದ್ದಾನೆ.

ಎ7 - ಸಂತೋಷ್ ನಾನು ಆಟೋ ಡ್ರೈವರ್ ಆಗಿದ್ದೇನೆ ಸಾರ್, ಕುಟುಂಬ ಕಷ್ಟದಲ್ಲಿ ಇದೆ ಸಾರ್ ಎಂದ, ಎ8 - ದಿನೇಶ್, ನಾನು ಆಟೋ ಡ್ರೈವರ್, ನನ್ನ ಕುಟುಂಬಕ್ಕೆ ನಾನೇ ಆಧಾರ ಸಾರ್ ಎಂದ. ಎ9 ಅಶ್ವಥ್ ನನ್ನ ತಾಯಿ ನೋಡಿಕೋಳ್ಳೋರು ಯಾರು ಇಲ್ಲ ಸಾರ್ ಎಂದ. ಎ10 ಸುನಿಲ್ - 8 ವರ್ಷದ ಮಗು ಇದೆ ಸಾರ್, ಕಡಿಮೆ‌ ಶಿಕ್ಷೆ ಕೊಡಿ ಸಾರ್ ಎಂದು ಮನವಿ ಮಾಡಿದ. ಎ11 - ನಜೀರ್, ಲೋ ಬಿಪಿಬಿ ಇದೆ ಕಡಿಮೆ‌ ಶಿಕ್ಷೆ ಕೊಡಿ ಸಾರ್ ಎಂದ , ಎ12 ಷನಾವಜ್ - ಟೈಲರ್ ಕೆಲಸ ಮಾಡ್ತಾ ಇದ್ದೆ ಸಾರ್. ಕಡಿಮೆ ‌ಶಿಕ್ಷೆ ಕೊಡಿ ಎಂದ. ಎ 13 ನೂತನ್ ಆರೋಗ್ಯ ಸರಿಯಿಲ್ಲ, ಆಪರೇಷನ್ ಆಗಿದೆ ಸಾರ್ ಎಂದ. ಎ14 - ತಾಯಿ ಸಾಕಬೇಕು ಸಾರ್ ಎಂದ.

ಇನ್ನು ಪ್ರಕರಣ ಪ್ರಭಾವಿ ವ್ಯಕ್ತಿ ಎ 15 ವಿನಯ್ ಕುಲಕರ್ಣಿ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ‌ಸಾರ್. ನಾನು ಕ್ಷೇತ್ರದಲ್ಲಿ ಇಲ್ಲ ಅಂದ್ರೂ ಜನ ಗೆಲ್ಲಿಸಿದ್ದಾರೆ. ಮೂರು ಜನ ಮಕ್ಕಳಿದ್ದಾರೆ. ನನ್ನ ಕ್ಷೇತ್ರದ ಜನಕ್ಕೆ‌ ಅನ್ಯಾಯ ಆಗಿದೆ ಸಾರ್. ರಾಜಕೀಯ ದ್ವೇಷದಿಂದ ಈ ಪರಿಸ್ಥಿತಿ ಬಂದಿದೆ ಸಾರ್. ಮೂರು ಬಾರಿ ಶಾಸಕ, ಒಂದ್ಸಾರಿ ಮಿನಿಸ್ಟರ್ ಆಗಿದ್ದೇನೆ. ಕೃಷಿ ಕೆಲಸ ಮಾಡ್ತಾ ಬೆಳೆದವನು ಸಾರ್ ಎಂದು ಕೋರ್ಟ್ ಮುಂದೆ ಹೇಳಿಕೆ. ಈ ವೇಳೆ ಬೇರೆ ಏನಾದರೂ ಹೇಳೋದಿದ್ಯಾ ? ಎಂದು ಜಡ್ಜ್ ಕೇಳಿದ್ದಕ್ಕೆ ಏನಿಲ್ಲ ಅಂತ ತಲೆ ಅಲ್ಲಾಡಿಸ್ತಾ ವಿನಯ್ ಕುಲಕರ್ಣಿ ಹಿಂದೆ ಸರಿದರು.

ಎ16 ಚಂದು ಮಾಮ, ನನ್ನ ಮಗ ಬೇರೆ ಇದ್ದಾನೆ, ನಾನು ನನ್ನ ಹೆಂಡತಿ ಇದ್ದೇವೆ. ಇಬ್ಬರೂ ಹಾರ್ಟ್ ಪೇಷೆಂಟ್. ಹೀಗಾಗಿ ಕಡಿಮೆ ಶಿಕ್ಷೆ ಕೊಡಿ ಎಂದ. A17ವಿಕಾಸ್ ಕಲಬುರಗಿ ಐದು ವರ್ಷದ ಮಗ ಇದ್ದಾನೆ ಸಾರ್, ಎಲೆಕ್ಟ್ರಿಕಲ್ ಗುತ್ತಿದಾರ ಇದ್ದೆ, ಕಡಿಮೆ ಶಿಕ್ಷೆ ಕೊಡಿ ಸಾರ್ ಎಂದ. ಇನ್ನು ಇನ್ಸ್ಪೆಕ್ಟರ್ ಟಿಂಗರಿಕರ್, ನನ್ನ ಸರ್ವೀಸ್ ನಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ.ನನ್ನ ಸರ್ವೀಸ್ ಗೆ ಅವಾರ್ಡ್ ಬಂದಿತ್ತು.ದಯೆತೋರಿಸಿ ಶಿಕ್ಷೆ ಕಡಿಮೆ ಮಾಡಿ ಸಾರ್ ಎಂದಿದ್ದಾನೆ.

ವಕೀಲರ ವಾದ

ವಿನಯ್ ಕುಲಕರ್ಣಿ ಹಾಗೂ ಚಂದ್ರಶೇಖರ್ ಇಂಡಿ ಪರವಾಗಿ ವಕೀಲ ಶ್ಯಾಂ ಸುಂದರ್ ವಾದ ಮಂಡಿಸಿದರು. ಸಿ.ವಿ. ನಾಗೇಶ್ ಅವರಿಗೆ ಅನಾರೋಗ್ಯ ಇರುವ ಹಿನ್ನೆಲೆ ಅವರು ಹಾಜರಾಗಲು ಸಾಧ್ಯವಾಗದ ಕಾರಣ ಶ್ಯಾಂ ಸುಂದರ್ ವಾದ ಮಂಡಿಸಿದರು. ಎಲ್ಲಾ ಆರೋಪಿಗಳ ಪರ ವಕೀಲರು ಸಹ ತಮ್ಮ ವಾದಗಳಲ್ಲಿ ಆರೋಪಿಗಳಿಗೆ ಕಡಿಮೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಕೋಲ್ಡ್ ಬ್ಲಡೆಡ್ ಕೊಲೆ ಎಂದ  ಸಾಲಿಸಿಟರ್ ಜನರಲ್

ಇದಕ್ಕೆ ಪ್ರತಿಯಾಗಿ ಸಿಬಿಐ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಎಸ್. ಹೇಮಾ ಹಾಗೂ ಶಿವಾನಂದ ಪೆರ್ಲಾ ವಾದ ಮಂಡಿಸಿದರು. ಜೊತೆಗೆ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಾದಿಸಿದರು. ಈ ಪ್ರಕರಣದಲ್ಲಿ ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆ ವಿಧಿಸಬೇಕು. ಇದು ಪೂರ್ವಯೋಜಿತ, ಕೋಲ್ಡ್ ಬ್ಲಡೆಡ್ ಕೊಲೆ. ರಾಜಕೀಯ ದುರುದ್ದೇಶದಿಂದ ಯೋಗೇಶ್ ಗೌಡರನ್ನು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಿದರು.

ಯೋಗೇಶ್ ಗೌಡ ಸಾರ್ವಜನಿಕ ಜೀವನದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಅವರ ಹತ್ಯೆಯ ನಂತರ ಸಾಕ್ಷಿಗಳನ್ನು ನಾಶಪಡಿಸುವ ಪ್ರಯತ್ನ ನಡೆದಿದೆ. ಆರೋಪಿಗಳಿಗೆ ಹಣ ನೀಡುವುದು, ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ ಎಂದು ಸಿಬಿಐ ವಾದಿಸಿತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಟರ್‌ನ್ನೇ ಹೆದರಿಸುವ ಮಟ್ಟಿಗೆ ಘಟನೆಗಳು ನಡೆದಿವೆ. ಆದ್ದರಿಂದ ಗಂಭೀರ ಶಿಕ್ಷೆ ಅಗತ್ಯ ಎಂದು ಎಸ್.ವಿ. ರಾಜು ಹೇಳಿದರು. ಆದಾಗ್ಯೂ, ಈ ಪ್ರಕರಣವನ್ನು ‘ವಿರಳಾತಿವಿರಳ’ ಪ್ರಕರಣವೆಂದು ಪರಿಗಣಿಸುವ ಅಗತ್ಯ ಇಲ್ಲದ ಹಿನ್ನೆಲೆಯಲ್ಲಿ ಮರಣದಂಡನೆ ಕೇಳದೇ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದರು.

ಆರೋಪಿಗಳ ಪರ ವಕೀಲರಿಂದ ವಿವಿಧ ಕಾರಣ

ಇನ್ನೊಂದೆಡೆ ಆರೋಪಿಗಳ ಪರ ವಕೀಲರು ವಿವಿಧ ವೈಯಕ್ತಿಕ ಹಾಗೂ ಮಾನವೀಯ ಕಾರಣಗಳನ್ನು ಮುಂದಿಟ್ಟರು. ಎ8ರಿಂದ ಎ14ರವರ ಪರ ವಕೀಲ ಎಸ್. ಶಂಕರಪ್ಪ, “ಅವರಿಗೆ ಚಿಕ್ಕ ಮಕ್ಕಳಿದ್ದು ಕುಟುಂಬದ ಹೊಣೆಗಾರಿಕೆ ಇದೆ. ಹೀಗಾಗಿ ಕನಿಷ್ಠ ಶಿಕ್ಷೆ ನೀಡಬೇಕು,” ಎಂದು ವಾದಿಸಿದರು. ಎ2ರಿಂದ ಎ7ರವರ ಪರ ವಕೀಲ ಪರಮೇಶ್ವರ್ ಕೂಡ ಇದೇ ವಾದವನ್ನು ಮುಂದಿಟ್ಟರು.

ವಿನಯ್ ಕುಲಕರ್ಣಿ ಪರವಾಗಿ ವಾದಿಸಿದ ಶ್ಯಾಂ ಸುಂದರ್, “ಈ ಪ್ರಕರಣ ಗರಿಷ್ಠ ಶಿಕ್ಷೆ ನೀಡುವಂತಹುದಲ್ಲ. ನ್ಯಾಯಾಲಯ ನೀಡುವ ಶಿಕ್ಷೆ ವ್ಯಕ್ತಿಯನ್ನು ಸುಧಾರಿಸಲು ಸಹಾಯ ಮಾಡಬೇಕೇ ಹೊರತು ಕೇವಲ ದಂಡನೆಗಾಗಿ ಇರಬಾರದು. ವಿನಯ್ ಕುಲಕರ್ಣಿ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ. ಅವರು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, 3 ಸಾವಿರಾರು ಹಸುಗಳನ್ನು ಸಾಕುತ್ತಿದ್ದಾರೆ. ಯಾವುದೇ ವ್ಯಕ್ತಿಗೆ 14 ವರ್ಷಗಳ ಶಿಕ್ಷೆ ಸಾಕಷ್ಟು ಸುಧಾರಣೆಗೆ ಕಾರಣವಾಗಬಹುದು. ಅವರ ಕುಟುಂಬ, ಮಕ್ಕಳ ಭವಿಷ್ಯವನ್ನು ಪರಿಗಣಿಸಿ ಕಡಿಮೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.

ಚಂದ್ರಶೇಖರ್ ಇಂಡಿ ಪರವಾಗಿ ಕೂಡ ವಾದಿಸಿದ ಶ್ಯಾಂ ಸುಂದರ್, “ಅವರಿಗೆ ಈಗಾಗಲೇ 65 ವರ್ಷ ವಯಸ್ಸಾಗಿದೆ. ಅವರ ವಯಸ್ಸನ್ನು ಪರಿಗಣಿಸಿ ಕನಿಷ್ಠ ಶಿಕ್ಷೆ ವಿಧಿಸಬೇಕು,” ಎಂದು ಕೋರಿದರು.

ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಪರವಾಗಿ ವಕೀಲ ಬಾಲನ್ ವಾದಿಸಿ, “ಕೊಲೆಯಲ್ಲಿ ಅವರ ನೇರ ಪಾತ್ರ ಇಲ್ಲ. ಮಾರಕಾಸ್ತ್ರಗಳ ವಿಚಾರದಲ್ಲಿ ಸುಳ್ಳು ಸಾಕ್ಷಿಗಳ ಆರೋಪ ಮಾತ್ರ ಇದೆ. ಅವರ ವಿರುದ್ಧ ಬಲವಾದ ಸಾಕ್ಷಿಗಳಿಲ್ಲ. ಕೊಲೆಗೂ ಮುನ್ನ ಉತ್ತಮ ಸೇವೆಗಾಗಿ ಅವರಿಗೆ ಪ್ರಶಸ್ತಿಗಳೂ ದೊರೆತಿವೆ,” ಎಂದು ವಿವರಿಸಿದರು. ಜೊತೆಗೆ, ಕುಟುಂಬದ ಪರಿಸ್ಥಿತಿಯನ್ನು ಗಮನಿಸಿ ಶಿಕ್ಷೆ ಕಡಿಮೆ ಮಾಡಬೇಕೆಂದು ಮನವಿ ಮಾಡಿದರು. ಇದೇ ವೇಳೆ, ಪ್ರಾಸಿಕ್ಯೂಷನ್ ಪರವಾಗಿ ಕೆ.ಎಸ್. ಹೇಮಾ, “ಮೃತ ಯೋಗೇಶ್ ಗೌಡರ ಮಕ್ಕಳಿಗೆ ಪರಿಹಾರ ನೀಡಬೇಕು,” ಎಂದು ಮನವಿ ಮಾಡಿದರು. ಆದರೆ ಆರೋಪಿಗಳ ಪರ ವಕೀಲ ಶ್ಯಾಂ ಸುಂದರ್, ಪರಿಹಾರ ನೀಡುವ ಅಗತ್ಯವಿಲ್ಲ ಎಂದು ವಾದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರಿ ಟೆಂಡರ್ ಹೈಟೆಕ್ ವಂಚನೆ: ತಾನು IAS ಅಧಿಕಾರಿ ಎಂದು ನಂಬಿಸಿ ಉದ್ಯಮಿಗೆ ₹41 ಲಕ್ಷ ಪಂಗನಾಮ ಹಾಕಿದ ಕಿರಾತಕ!
ಟ್ರ್ಯಾಕ್ಟರ್ ಸಬ್ಸಿಡಿ ಆಸೆ ತೋರಿಸಿ 80 ರೈತರಿಗೆ 1.35 ಕೋಟಿ ರೂ. ಪಂಗನಾಮ: ಕಾಫಿನಾಡಲ್ಲಿ ಬೃಹತ್ ವಂಚನೆ ಜಾಲ ಪತ್ತೆ!