ಟ್ರ್ಯಾಕ್ಟರ್ ಸಬ್ಸಿಡಿ ಆಸೆ ತೋರಿಸಿ 80 ರೈತರಿಗೆ 1.35 ಕೋಟಿ ರೂ. ಪಂಗನಾಮ: ಕಾಫಿನಾಡಲ್ಲಿ ಬೃಹತ್ ವಂಚನೆ ಜಾಲ ಪತ್ತೆ!

Published : Apr 16, 2026, 01:04 PM IST
Chikkamagaluru tractor Subsidy Scam

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ, ಸರ್ಕಾರಿ ಸಬ್ಸಿಡಿ ಕೊಡಿಸುವ ಆಮಿಷವೊಡ್ಡಿ 80ಕ್ಕೂ ಹೆಚ್ಚು ರೈತರಿಂದ 1.35 ಕೋಟಿ ರೂ. ವಂಚಿಸಿದ್ದಾನೆ. ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣಗಳಿಗಾಗಿ ಹಣ ಪಡೆದ ಆರೋಪಿ ಗಂಗಾಧರಗೌಡ ನಾಪತ್ತೆಯಾಗಿದ್ದು, ರೈತರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು (ಏ.16): ಕಷ್ಟಪಟ್ಟು ಭೂಮಿ ತಾಯಿಯನ್ನು ನಂಬಿ ಬದುಕುವ ರೈತರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ವಂಚಕನೊಬ್ಬ, ಸರ್ಕಾರಿ ಸಬ್ಸಿಡಿ ಕೊಡಿಸುವ ಆಮಿಷವೊಡ್ಡಿ ಬರೋಬ್ಬರಿ 1.35 ಕೋಟಿ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ:

ಸಖರಾಯಪಟ್ಟಣದ ಸಮೀಪದ ವೈ. ಮಲ್ಲಾಪುರ ಗ್ರಾಮದ ನಿವಾಸಿ ಮಹೇಶ್ವರಪ್ಪ ಎಂ.ಬಿ. ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಬೆಂಗಳೂರು ಮೂಲದ ಗಂಗಾಧರಗೌಡ ಕೆ. (A1) ಎಂಬ ವ್ಯಕ್ತಿ ಈ ಬೃಹತ್ ವಂಚನೆಯ ಜಾಲದ ಸೂತ್ರಧಾರ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯು ರೈತರನ್ನು ಸಂಪರ್ಕಿಸಿ, ತಾನು ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಂದ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಉಪಕರಣಗಳನ್ನು ಕೊಡಿಸುವುದಾಗಿ ನಂಬಿಸಿದ್ದಾನೆ.

ವಂಚನೆಯ ಜಾಲ ಹರಡಿದ್ದು ಹೇಗೆ?

ದೂರುದಾರ ಮಹೇಶ್ವರಪ್ಪ ಅವರಿಗೆ 2024ರ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಈ ಗಂಗಾಧರಗೌಡ ಪರಿಚಯವಾಗಿದ್ದ. 'ನೀವು 50,000 ರೂಪಾಯಿ ಮುಂಗಡವಾಗಿ ಪಾವತಿಸಿದರೆ, 3 ಲಕ್ಷ ರೂಪಾಯಿಗಳ ಸರ್ಕಾರಿ ಸಬ್ಸಿಡಿಯೊಂದಿಗೆ ಟ್ರ್ಯಾಕ್ಟರ್ ಕೊಡಿಸುತ್ತೇನೆ' ಎಂದು ಆಮಿಷ ಒಡ್ಡಿದ್ದ. ಇದನ್ನು ನಂಬಿದ ಮಹೇಶ್ವರಪ್ಪ ಮತ್ತು ಅವರ ಸ್ನೇಹಿತರು ಹಣ ನೀಡಲು ಮುಂದಾಗಿದ್ದಾರೆ. ಜುಲೈ 2024ರಲ್ಲಿ ಸಖರಾಯಪಟ್ಟಣಕ್ಕೆ ಭೇಟಿ ನೀಡಿದ್ದ ಆರೋಪಿ, ಅಲ್ಲಿನ ಸ್ಥಳೀಯ ರೈತರನ್ನು ನಂಬಿಸಿ ಹಣ ವಸೂಲಿ ಮಾಡಲು ಶುರು ಮಾಡಿದ್ದಾನೆ. ಮಹೇಶ್ವರಪ್ಪ ಅವರಲ್ಲದೆ ಅವರ ಗ್ರಾಮದ ಸೋಮಶೇಖರ್, ದಿನೇಶ್‌, ಕಲ್ಲೇಶಪ್ಪ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ರೈತರಿಂದ ಹಣ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಿಜಿಟಲ್ ಪಾವತಿ ಮೂಲಕ ವಂಚನೆ:

ವಂಚಕ ಗಂಗಾಧರಗೌಡ ಎಷ್ಟು ಚಾಣಾಕ್ಷನಾಗಿದ್ದನೆಂದರೆ, ಹಣವನ್ನು ನಗದು ರೂಪದಲ್ಲಿ ಮಾತ್ರವಲ್ಲದೆ, ವಿವಿಧ ಫೋನ್-ಪೇ (PhonePe) ನಂಬರ್‌ಗಳ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. 8125041599 ಮತ್ತು 8125159955 ಸೇರಿದಂತೆ ವಿವಿಧ ನಂಬರ್‌ಗಳಿಗೆ ರೈತರು ಲಕ್ಷಾಂತರ ರೂಪಾಯಿಗಳನ್ನು ಕಳುಹಿಸಿದ್ದಾರೆ. ಒಟ್ಟಾರೆ 80 ರೈತರಿಂದ ಸುಮಾರು 1,34,98,400 ರೂಪಾಯಿಗಳನ್ನು (ಒಂದು ಕೋಟಿ ಮುವತ್ತನಾಲ್ಕು ಲಕ್ಷದ ತೊಂಬತ್ತೆಂಟು ಸಾವಿರದ ನಾನೂರು ರೂ.) ಲೂಟಿ ಮಾಡಿದ್ದಾನೆ.

ನಾಪತ್ತೆಯಾದ 'ಸಬ್ಸಿಡಿ' ರಾಯಭಾರಿ:

ಹಣ ಪಡೆದ ನಂತರ ಕೆಲವು ದಿನಗಳ ಕಾಲ ರೈತರಿಗೆ 'ಬಜೆಟ್ ಅನುಮೋದನೆಯಾಗಿಲ್ಲ', 'ಅಧಿವೇಶನ ನಡೆಯುತ್ತಿದೆ' ಎಂಬಿತ್ಯಾದಿ ಸಬೂಬುಗಳನ್ನು ಹೇಳುತ್ತಾ ಕಾಲ ಕಳೆದಿದ್ದಾನೆ. ಆದರೆ ದಿನ ಕಳೆದಂತೆ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಸಬ್ಸಿಡಿಯೂ ಇಲ್ಲ, ಟ್ರ್ಯಾಕ್ಟರ್‌ಗಳೂ ಇಲ್ಲ ಎಂಬುದು ತಿಳಿದಾಗ ರೈತರು ಕಂಗಾಲಾಗಿದ್ದಾರೆ. ತಾವು ಮೋಸ ಹೋಗಿರುವುದು ಖಚಿತವಾದ ಮೇಲೆ ಸಖರಾಯಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಪೊಲೀಸ್ ಕ್ರಮ:

ಸದ್ಯ ಸಖರಾಯಪಟ್ಟಣ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 318(2) ಮತ್ತು 318(4) (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವರ್ಗಾವಣೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಎಸ್ಐ ಕೆ.ಎಂ. ಕುಮಾರ ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸರ್ಕಾರಿ ಸಬ್ಸಿಡಿಗಳು ನೇರವಾಗಿ ಬ್ಯಾಂಕ್ ಖಾತೆಗಳಿಗೆ (DBT) ಜಮೆಯಾಗುತ್ತವೆ ಅಥವಾ ಅಧಿಕೃತ ಸರ್ಕಾರಿ ಕಚೇರಿಗಳ ಮೂಲಕವೇ ಪ್ರಕ್ರಿಯೆ ನಡೆಯುತ್ತವೆ. ಇಂತಹ ಮಧ್ಯವರ್ತಿಗಳು ಅಥವಾ ಅಪರಿಚಿತ ವ್ಯಕ್ತಿಗಳು ಹಣ ಕೇಳಿದರೆ ರೈತರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಕೋಟಿ ಕೋಟಿ ಹಣದೊಂದಿಗೆ ನಾಪತ್ತೆಯಾಗಿರುವ ಈ ವಂಚಕ ಗಂಗಾಧರಗೌಡನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

8 ವರ್ಷ ಅಜ್ಞಾತವಾಸದಲ್ಲಿದ್ದ ದರ್ಶನ್ ಮಾಜಿ ಆಪ್ತ ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ಕೊನೆಗೂ ರಾಜ್ಯಪಾಲರ ಅಸ್ತು