ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು ಎರಡು ದಿನ ಭರ್ಜರಿ ಮಳೆಯಾಗಲಿದೆ. ಶನಿವಾರ ಬೆಳಗ್ಗೆ 8.30ರ ತನಕ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು (ಜು.30): ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು ಎರಡು ದಿನ ಭರ್ಜರಿ ಮಳೆಯಾಗಲಿದೆ. ಶನಿವಾರ ಬೆಳಗ್ಗೆ 8.30ರ ತನಕ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶನಿವಾರದಿಂದ ಭಾನುವಾರ ಬೆಳಗ್ಗೆ 8.30ರ ತನಕ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭಾನುವಾರದಿಂದ ಸೋಮವಾರ ತನಕ ಮಳೆ ಅಬ್ಬರ ತುಸು ಕಡಿಮೆ ಇರಲಿದೆ. ಆದರೆ ಸೋಮವಾರ ಮತ್ತು ಮಂಗಳವಾರ ಮತ್ತೆ ಮಳೆ ಅಬ್ಬರಿಸಲಿದ್ದ ಮಲೆನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗೆ ಅತಿ ಭಾರಿ ಮಳೆಯ ಆರೆಂಜ್ ಅಲರ್ಟ್ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ರಾಜ್ಯದ ಕೆಲವೆಡೆ ಭಾರಿ ಮಳೆಯಾಗಿದೆ. ಉಳಿದಂತೆ ಹಗುರದಿಂದ ಸಾಧಾರಣ ಮಳೆ ಸುರಿದಿದೆ. ಒಟ್ಟಾರೆ ರಾಜ್ಯದಲ್ಲಿ ವಾಡಿಕೆ ಮಳೆಯಾಗಿದೆ. ತುಮಕೂರಿನ ಓಬಳಾಪುರ 11.2 ಸೆಂ.ಮೀ, ಮಂಡ್ಯದ ಸಿಂಧಘಟ್ಟ9.3, ಚಿಕ್ಕಬಳ್ಳಾಪುರದ ಮೇಳ್ಯ 6.75, ಮಂಡ್ಯದ ನಾಗಮಂಗಲ 6 ಮತ್ತು ಹಾಸನದ ಕೊಣನೂರಿನಲ್ಲಿ 5 ಸೆಂ.ಮೀ. ಮಳೆಯಾಗಿದೆ.
ಉತ್ತರದ 8 ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ
ದಿಢೀರ್ ಮಳೆಗೆ ಜನಜೀವನ ಅಸ್ತವ್ಯಸ್ತ: ಕಳೆದ ಒಂದು ವಾರದಿಂದ ಬಿಡುವುಕೊಟ್ಟಿದ್ದ ಮಳೆರಾಯ ಶುಕ್ರವಾರ ಏಕಾಏಕಿ ತನ್ನ ಆರ್ಭಟ ಪ್ರದರ್ಶಿಸಿದ್ದಾನೆ. ಇದರಿಂದ ನಗರದ ಜನಜೀವನ ಕೆಲ ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತು. ಒಂದು ವಾರದ ಹಿಂದೆ ಸತತವಾಗಿ ಸುರಿದ ಮಳೆಯಿಂದಾಗಿ ಜನ ಸಾಕಷ್ಟುತೊಂದರೆಗೊಳಗಾಗಿದ್ದರು. ಆದರೆ ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜನಜೀವನ ಯಥಾಸ್ಥಿತಿಗೆ ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ ಮಳೆರಾಯ ತನ್ನ ಆರ್ಭಟ ಮೆರೆದಿದ್ದಾನೆ.
ಬಿರುಗಾಳಿ ಸಮೇತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳಗಾವಿಯ ಪ್ರಮುಖ ಸ್ಥಳಗಳಲ್ಲಿ ನೀರು. ರಸ್ತೆಗಳ ಮೇಲೆಲ್ಲಾ ಸಾಕಷ್ಟುನೀರು ಹರಿದಿದ್ದು, ರಸ್ತೆಗಳೆಲ್ಲ ಈಜು ಕೊಳಗಳಂತಾಗಿದ್ದವು. ನಗರದಲ್ಲಿ ಎರಡು ಗಂಟೆಗಳ ಕಾಲ ಸುರಿದ ಈ ಧಾರಾಕಾರ ಮಳೆಗೆ ಸಾರ್ವಜನಿಕರು ಸಾಕಷ್ಟುತೊಂದರೆ ಅನುಭವಿಸಬೇಕಾಯಿತು. ರಸ್ತೆಯ ಮೇಲೆಲ್ಲಾ ಮಳೆಯ ನೀರು ಪ್ರವಾಹದ ರೀತಿಯಲ್ಲಿ ಹರಿದಾಡಿತು. ಈ ವೇಳೆ ದ್ವಿಚಕ್ರ ವಾಹನ ಹಾಗೂ ಕಾರ ಸವಾರರು ತಮ್ಮ ವಾಹನಗಳನ್ನು ಚಲಾಯಿಸಲು ಪರದಾಡಬೇಕಾಯಿತು. ಈ ವೇಳೆ ವಾಹನಗಳು ಅರ್ಧದಷ್ಟುಮುಳುಗಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಗದಗ ಮಳೆ ಅವಾಂತರ : ಪೆಟ್ರೋಲ್ ಬಂಕ್, ಹಾಸ್ಟೆಲ್‌ಗೆ ನುಗ್ಗಿದ ನೀರು..!
ಈ ವೇಳೆ ನಗರದ ಗಣಪತಿಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟ್, ಸಿಬಿಟಿ ರಸ್ತೆ, ಹಳೆ ಪುಣಾ ಬೆಂಗಳೂರು ರಸ್ತೆ, ಬ್ರಿಡ್ಜ್ ಸವೀರ್‍ಸ್ ರಸ್ತೆ ಮೊದಲಾದ ಕಡೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸವಾಗಿತ್ತು. ಮಳೆಯ ಆರ್ಭಟ ಹೆಚ್ಚಾಗಿದ್ದ ಕಾರಣ ಕೆಲ ಅಂಗಡಿಗಳಲ್ಲಿ ನೀರು ನುಗ್ಗಿತ್ತು. ಇನ್ನು ನಗರದ ಹಣ್ಣಿನ ಮಾರುಕಟ್ಟೆಪ್ರದೇಶದಲ್ಲಿ ನೀರು ನುಗ್ಗಿ ವ್ಯಾಪಾರ ವಹಿವಾಗೆ ಸಾಕಷ್ಟುತೊಂದರೆಯುಂಟಾಯಿತು. ಇನ್ನು ಕೆಲ ಪ್ರದೇಶಗಳಲ್ಲಿ ನೀರು ಪುಟಿಯುವ ದೃಶ್ಯಗಳು ಕಂಡುಬಂದಿತು.