
ಚನ್ನಪಟ್ಟಣ(ಜು.29): ಇಡಿ ವಿಚಾರದಲ್ಲಿ ಮತ್ತೆ ನನ್ನನ್ನು ಸಿಕ್ಕಿಸುವ ಪ್ರಯತ್ನಗಳು ನಡೆಯುತ್ತಿವೆ. ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೇ ಇವರು ಬಿಟ್ಟಿಲ್ಲ, ಇನ್ನು ನಮ್ಮನ್ನು ಬಿಡುತ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಭೀಮನ ಅಮವಾಸ್ಯೆ ಪ್ರಯುಕ್ತ ತಾಲೂಕಿನ ಗೌಡಗೆರೆಯ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ಏನೇನೋ ಆಸೆ ಇಟ್ಟುಕೊಂಡಿದ್ದಾರೆ. ಅವರು ಯಾರಾದರೂ ಏನಾದರೂ ಆಸೆಗಳು ಇಟ್ಟುಕೊಳ್ಳಲಿ. ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಇಡಿ ಮುಂದೆ ಹಾಜರಾಗಲಿದ್ದೇನೆ ಎಂದರು.
ಆಗಸ್ಟ್‌ನಲ್ಲೇ ಖೆಡ್ಡಾ ತೋಡುತ್ತಾರೆ ಅಂತ ಶಿವಕುಮಾರ್ ಅವರು ಮೊದಲೇ ನೀಡಿದ್ದ ಹೇಳಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಏನೇನು ಮಾಡುತ್ತಾರೆ ಅನ್ನೋದನ್ನು ನಿಧಾನವಾಗಿ ಹೇಳ್ತೀನಿ ಎಂದರು. ಮತ್ತೆ ನನ್ನನ್ನು ಇಡಿ ಬಲೆಯಲ್ಲಿ ಸಿಕ್ಕಿಹಾಕಿಸುವ ತಯಾರಿಗಳು ನಡೆಯುತ್ತಿವೆ. ಆದರೆ, ಆ ಚಾಮುಂಡೇಶ್ವರಿ ನನ್ನ ರಕ್ಷಣೆಗೆ ಇದ್ದಾಳೆ. ನಾನು ಏನಾದರೂ ತಪ್ಪು ಮಾಡಿದ್ದರೆ ಆ ತಾಯಿಯೇ ಶಿಕ್ಷೆ ಕೊಡುತ್ತಾಳೆ. ತಪ್ಪು ಮಾಡಿಲ್ಲ ಎಂದರೆ ಆ ದೇವಿಯೇ ಎಲ್ಲವನ್ನು ನೋಡಿಕೊಳ್ಳುತ್ತಾಳೆ ಎಂದರು.
ಜನರ ರಕ್ಷಿಸದ ಈ ಸರ್ಕಾರ ಯಾಕೆ ಬೇಕು?: ಡಿಕೆಶಿ
ಚಾಮುಂಡೇಶ್ವರಿ ಹತ್ತಿರ ಏನು ವರ ಕೇಳಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಎಲ್ಲ ವೈರಿಗಳು, ತೊಂದರೆ ನೀಡುತ್ತಿರುವ ಎಲ್ಲಾ ಸಮಸ್ಯೆಗಳನ್ನು ದೂರ ಮಾಡು. ಎಲ್ಲರ ದುಖಃವನ್ನು ದೂರ ಮಾಡು, ದುರ್ಗಾ ದೇವಿಯಾ ಸ್ವರೂಪವಾದಂತಹ ಚಾಮುಂಡೇಶ್ವರಿ ತಾಯಿ ಇಲ್ಲಿ ನೆಲೆಸಿದ್ದೀಯಾ. ಈ ಭಾಗದ ಜನರಿಗೆ ನೆಮ್ಮದಿ ಉತ್ತಮ ಭಾಗ್ಯ ಕರುಣಿಸು. ಒಳ್ಳೆ ಮಳೆ, ಬೆಳೆಯಾಗಲಿ, ಯಾರಿಗೂ ಅನ್ಯಾಯವಾಗಬಾರದು, ಎಲ್ಲರಿಗೂ ನ್ಯಾಯವನ್ನ ಒದಗಿಸಿಕೊಡು ತಾಯಿ ಅಂತ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.
ಜನೋತ್ಸವ ರದ್ದಿಗೆ ಸ್ವಾಗತ:
ಬಿಜೆಪಿ ಜನೋತ್ಸವ ರದ್ದು ಮಾಡಿದ ವಿಚಾರಕ್ಕೆ ಪತ್ರಿಕ್ರಿಯಿಸಿ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಇದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಜನೋತ್ಸವ ಮಾಡುವ ಅವಶ್ಯಕತೆ ಇಲ್ಲ ಅಂತ ಮೊದಲೇ ಹೇಳಿದ್ದೆ ಎಂದರು.
ಪರಮಶಿಷ್ಯನ ವಿಚಾರದಲ್ಲಿ ಸಿದ್ದರಾಮಯ್ಯ ಮೌನದ ಹಿಂದೆ ಅಹಿಂದ ಲೆಕ್ಕಾಚಾರ ?
ಪ್ರವೀಣ್ ಹತ್ಯೆಗೆ ಖಂಡನೆ:
ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆತ ಇನ್ನು ಯುವಕ, ಈ ರೀತಿ ಆಗಬಾರದಿತ್ತು. ಈ ವಿಚಾರವನ್ನು ನಾನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ. ಪಕ್ಷದ ಕಾರ್ಯಕರ್ತರ ನೋವು ಏನೆಂದು ನಮಗೆ ಅರಿವಿದೆ ಎಂದರು.
ಪ್ರವೀಣ್ ಹಂತಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ಏನೆಲ್ಲ ಕಾನೂನುಗಳಿವೆಯೋ ಅದನ್ನ ಬಳಸಿಕೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಆ ಮೂಲಕ ಎಲ್ಲಾ ಕಾರ್ಯಕರ್ತರಿಗೆ ಧೈರ್ಯ ತುಂಬುವಂತಹ ಕೆಲಸವನ್ನ ಮಾಡಬೇಕು. ಯಾವುದೇ ಪಕ್ಷವಾಗಲಿ, ಧರ್ಮವಾಗಲಿ ಈ ವಿಚಾರದಲ್ಲಿ ನಾವು ನೀವು ರಾಜಕಾರಣ ಮಾಡೋದು ಬೇಡ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ