PSI Recruitment Scam: ಮೆಟಲ್‌ ಡಿಟೆಕ್ಟರ್‌ ಸರಿಯಿಲ್ಲ ಅಂತ ಬುರುಡೆ ಬಿಟ್ರಾ ಸಿಬ್ಬಂದಿ?

By Kannadaprabha News  |  First Published Jul 29, 2022, 10:51 AM IST

ಸಿಐಡಿ ಎದುರು ಖಾಕಿಪಡೆ ತಬ್ಬಿಬ್ಬು: ಬ್ಲೂಟೂತ್‌ ಪ್ರಾತ್ಯಕ್ಷಿಕೆ ತೋರಿಸಿದ ಸಿಐಡಿ ಅಧಿಕಾರಿಗಳು


ಆನಂದ್‌ ಎಂ. ಸೌದಿ

ಯಾದಗಿರಿ(ಜು.29):  ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ತೆರಳುವ ಮುನ್ನ ಪ್ರವೇಶದ್ವಾರದಲ್ಲಿ ‘ಮೆಟಲ್‌ ಡಿಟೆಕ್ಟರ್‌’ ಹಾಗೂ ಮತ್ತಿತರ ತಪಾಸಣೆಗಳನ್ನು ಮಾಡಬೇಕಿದ್ದ ನಿಯೋಜಿತ ಪೊಲೀಸ್‌ ಸಿಬ್ಬಂದಿಗಳು, ಉದ್ದೇಶಪೂರ್ವಕವಾಗಿ ಇಂತಹ ತಪಾಸಣೆ ಕೈಗೊಳ್ಳದೆ ಅಕ್ರಮಕ್ಕೆ ಪರೋಕ್ಷವಾಗಿ ಸಹಕರಿಸಿದರೇ ಎಂಬ ದಟ್ಟವಾದ ಅನುಮಾನಗಳು ಸಿಐಡಿ ತನಿಖೆಯ ವೇಳೆ ಕಂಡು ಬರುತ್ತಿವೆ. ಹೀಗಾಗಿ, ಅಂದು ಪರೀಕ್ಷಾ ಕೇಂದ್ರಗಳಿಗೆ ನಿಯೋಜಿತರಾಗಿದ್ದ ಕೆಲವು ಸಿಬ್ಬಂದಿಗಳಿಗೆ ಸೋಮವಾರ ಮೆಟಲ್‌ ಡಿಟೆಕ್ಟರ್‌ ಪ್ರಾತ್ಯಕ್ಷಿಕೆಯ ಮೂಲಕ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಖಾಕಿಪಡೆಯನ್ನೇ ತಬ್ಬಿಬ್ಬುಗೊಳಿಸಿದ್ದಾರೆ. ಸಿಐಡಿ ಸಿಬ್ಬಂದಿಯೊಬ್ಬರ ಬಳಿ ಬ್ಲೂಟೂತ್‌ ಡಿವೈಸ್‌ ಕೊಟ್ಟು, ಮೆಟಲ್‌ ಡಿಟೆಕ್ಟರ್‌ ಮೂಲಕ ಹಾದು ಹೋಗುವಾಗ ‘ಬೀಪ್‌ ಬೀಪ್‌’ ಶಬ್ದ ಕೇಳಿಸಿದೆ. ಬ್ಲೂಟೂತ್‌ ಡಿವೈಸ್‌ ತೆಗೆದು ಕಳುಹಿಸಿದಾಗ ಯಾವುದೇ ಶಬ್ದ ಮಾಡಿಲ್ಲ.

Latest Videos

undefined

ಅತ್ಯಾಧುನಿಕ ವ್ಯವಸ್ಥೆಗಳು (ಡಿಎಫ್‌ಎಂಡಿ ಹಾಗೂ ಎಚ್‌ಎಚ್‌ಎಂಡಿ) ಕಾರ್ಯನಿರ್ವಹಿಸುತ್ತಿದ್ದಾಗ, ಅದ್ಯಾವ ರೀತಿ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಒಳಬಿಡಲಾಯಿತು ಎಂದು ಪ್ರಶ್ನಿಸಿದ ಸಿಐಡಿ ತಂಡ, ಹಲವಾರು ಪ್ರಶ್ನೆಗಳ ಸುರಿಮಳೆಗೈದಿದೆ. ಸಿಬ್ಬಂದಿಗಳ ಅಸ್ಪಷ್ಟಉತ್ತರಗಳು ಹಲವಾರು ರೀತಿಯ ಅನುಮಾನಗಳಿಗೆ ಕಾರಣವಾಗಿದೆ.

PSI Recruitment Scam: ಯಾದಗಿರಿ ಪೊಲೀಸ್‌ ಕ್ವಾಟ್ರಸ್‌ನಲ್ಲೇ ಬ್ಲೂಟೂತ್‌ ಟ್ರೇನಿಂಗ್‌..!

545 ಹುದ್ದೆಗಳ ಪಿಎಸೈ ಅಕ್ರಮದ ಆಳವಾದ ತನಿಖೆಗಿಳಿದಿರುವ ಕಲಬುರಗಿಯ ಸಿಐಡಿ ತಂಡಕ್ಕೆ ಖಾಕಿಪಡೆಯಲ್ಲೇ ಮತ್ತಷ್ಟೂ ಅಕ್ರಮ ಕೂಟದ ವಾಸನೆ ಬಡಿಯುತ್ತಿದೆ. ಪರೀಕ್ಷೆಯಲ್ಲಿ ನಕಲು ಅಥವಾ ಬ್ಲೂಟೂತ್‌ ಉಪಕರಣಗಳ ದುರ್ಬಳಕೆ ಸಾಧ್ಯತೆಯಿದ್ದು, ಎಲ್ಲ ರೀತಿಯ ತಪಾಸಣೆ, ಚಿತ್ರೀಕರಣ ಕಡ್ಡಾಯದ ಮೇಲಧಿಕಾರಿಗಳ ಆದೇಶವನ್ನೇ ಇಲ್ಲಿ ಗಾಳಿಗೆ ತೂರಿ, ಅಕ್ರಮಕ್ಕೆ ಪರೋಕ್ಷ ಸಹಕರಿಸಲಾಯಿತೇ ಎಂಬ ಪ್ರಶ್ನೆಗಳು ಮೂಡಿವೆ.

ಫ್ಯಾಕ್ಸ್‌, ಇ-ಮೇಲ್‌ ಸಂದೇಶ

ಪರೀಕ್ಷೆಗೆ 2 ದಿನಗಳ ಮೊದಲು, ಅಂದರೆ ಅಕ್ಟೋಬರ್‌ 3, 2021 ರಂದು ಇಲಾಖೆಯ ಎಲ್ಲ ಕಡೆಗಳ ಮುಖ್ಯಸ್ಥರಿಗೆ ಫ್ಯಾಕ್ಸ್‌ ಹಾಗೂ ಇ ಮೇಲ್‌ ಸಂದೇಶ ರವಾನಿಸಿದ್ದ ನೇಮಕಾತಿ ವಿಭಾಗದ ಎಡಿಜಿಪಿ, ಎಲೆಕ್ಟ್ರಾನಿಕ್‌ ಉಪಕರಣಗಳ ದುರ್ಬಳಕೆ ಶಂಕೆ ವ್ಯಕ್ತಪಡಿಸಿ, ಪ್ರತಿ ಅಭ್ಯರ್ಥಿಯ ದೇಹ ಹಾಗೂ ಕಿವಿ ತಪಾಸಣೆ ನಡೆಸಬೇಕೆಂದು ಸೂಚಿಸಿದ್ದರು. ಅಲ್ಲದೆ, ಕೊಠಡಿಗಳಲ್ಲಿ ಪರಿಶೀಲನೆ, ಮುಖಗವಸು ತೆಗೆದು ಪ್ರತಿ ಅಭ್ಯರ್ಥಿಯ ವೀಡಿಯೋ ಚಿತ್ರೀಕರಣ ಮಾಡಬೇಕೆಂದು ಆದೇಶಿಸಿದ್ದರು.

ಈಗ, ಅಕ್ರಮದ ಒಂದೊಂದು ಮುಖಗಳು ಅನಾವರಣಗೊಳ್ಳುತ್ತಿದ್ದಂತೆಯೇ, ಈ ಹಿಂದಿನ ನಿಯಮಗಳ ಪಾಲಿಸಿದ ಬಗ್ಗೆ ವರದಿ, ದಾಖಲೆಗಳನ್ನು ಕೇಳುತ್ತಿರುವ ಸಿಐಡಿ ತಂಡ ಕಾರ್ಯವೈಖರಿ ಕಲಬುರಗಿ ಪೊಲೀಸ್‌ ಪಡೆಗೆ ಬಿಸಿತುಪ್ಪದಂತೆ ಪರಿಣಮಿಸಿದೆ.

click me!