
ವಿಜಯಪುರ(ಡಿ.8): ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ನಿಯಂತ್ರಿಸಲು ಹೊಸ ಕಾನೂನನ್ನು ಜಾರಿಗೆ ತರುವ ಸರ್ಕಾರದ ಚಿಂತನೆ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ವಿರೋಧಿಸಿದ್ದು, ಆ ಕಾಯ್ದೆ ತನ್ನನ್ನು ಗುರಿಯಾಗಿಸಿಕೊಂಡೇ ಬರುತ್ತಿದೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ಆ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ. ಹಿಂದೂಗಳ ಪರವಾಗಿ ಯಾರು ಮಾತನಾಡುತ್ತಾರೋ ಅವರನ್ನು ಟಾರ್ಗೆಟ್ ಮಾಡಬೇಕು ಅನ್ನೋದು ಅವರ (ಸರ್ಕಾರದ) ಉದ್ದೇಶ. ಅವರು ವಿಜಯೇಂದ್ರ, ಆರ್ ಅಶೋಕ್ ಅವರನ್ನು ಟಾರ್ಗೆಟ್ ಮಾಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದೇ ಅಂಜಿಕೆ ಇದೆ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿ ಈ ಬಿಲ್ ತರಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆ ಬಿಲ್ ಅನ್ನು ನನಗಾಗಿಯೇ ಜಾರಿಗೆ ತರುತ್ತಿದ್ದಾರೆ. ಹಾಗಾಗಿ ಹೆಚ್‌ಕೆ ಪಾಟೀಲ್ ಅವರಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದರು, ನಾನು ಈ ಕಾಯ್ದೆಯನ್ನು ಖಡಾಖಂಡಿತ ವಿರೋಧಿಸುವುದಾಗಿ ಯತ್ನಾಳ್ ಸ್ಪಷ್ಟಪಡಿಸಿದರು. ವಿರೋಧ ಮಾಡದೇ ಸಪೋರ್ಟ್ ಮಾಡಲೇ? ಎಂದು ಪ್ರಶ್ನಿಸಿದರು.
ಗೋ ರಕ್ಷಣಾ ಕಾಯ್ದೆ ತಿದ್ದುಪಡಿ ಮಾಡುವ ಸರ್ಕಾರದ ಚಿಂತನೆ ಕುರಿತು ಮಾತನಾಡಿದ ಯತ್ನಾಳ್, ಈ ವಿಚಾರದಲ್ಲಿ ಪಕ್ಷಾತೀತವಾಗಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
'ನಾವು ಗೋ ಪ್ರೇಮಿ ಶಾಸಕರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇದು ಒಂದು ಪಾರ್ಟಿಯ ವಿಚಾರ ಅಲ್ಲ. ಗೋ, ಸನಾತನ ಧರ್ಮದ ಪರ ಇರುವವರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿಯೂ ಇದ್ದಾರೆ. ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ