
ಬೆಂಗಳೂರು (ಡಿ.8): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ. ಒಂದು ವೇಳೆ ಹೈಕಮಾಂಡ್ ನಿರ್ಧಾರದಿಂದ ಬದಲಾವಣೆ ಅನಿವಾರ್ಯವಾದರೆ, ಡಿಸಿಎಂ ಡಿಕೆ ಶಿವಕುಮಾರ್ ಒಬ್ಬರೇ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಲ್ಲ; ಗೃಹಸಚಿವ ಪರಮೇಶ್ವರ್ ಎಂಬಿ ಪಾಟೀಲ್, ಸೇರಿದಂತೆ ಹಲವು ಹಿರಿಯ ನಾಯಕರು ರೇಸ್‌ನಲ್ಲಿದ್ದಾರೆ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ ಅವರು ಮುಂದುವರೆಯುವ ಕುರಿತು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಅವರೇ ಮುಂದುವರೆಯುತ್ತಾರೆ. ಒಂದು ವೇಳೆ ಅದನ್ನು ಮೀರಿ ಹೈಕಮಾಂಡ್ ಬದಲಾವಣೆ ತರಲು ತೀರ್ಮಾನಿಸಿದರೆ ಮಾತ್ರ ಬೇರೆ ನಾಯಕರು ಸಿಎಂ ಸ್ಥಾನಕ್ಕೆ ಪರಿಗಣನೆಗೆ ಬರಬಹುದು ಎಂದು ರಾಜಣ್ಣ ತಿಳಿಸಿದ್ದಾರೆ.
ನೀವು ಮಾಧ್ಯಮದವರು ಕೇವಲ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಸಿಎಂ ಆಗುತ್ತಾರೆ ಎಂದು ಹೇಳುತ್ತಿದ್ದೀರಾ. ಆದರೆ, ನಮ್ಮಲ್ಲಿ ಪರಮೇಶ್ವರ್, ಎಂಬಿ ಪಾಟೀಲ್, ಹೆಚ್ ಕೆ ಪಾಟೀಲ್ ಸೇರಿದಂತೆ ಸಾಕಷ್ಟು ಜನ ಸಿಎಂ ರೇಸ್‌ನಲ್ಲಿದ್ದಾರೆ. ಡಿಸಿಎಂ ಇದ್ದಾರೆ ಅಂತ ನೀವು ಹೇಳ್ತೀರಾ, ಅದೇ ರೀತಿ ನಮ್ಮಲ್ಲಿ ಇತರ ನಾಯಕರು ಕೂಡ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿದ್ದಾರೆ ಎಂದು ರಾಜಣ್ಣ ಸ್ಪಷ್ಟಪಡಿಸಿದರು.
ಅಧಿಕಾರಕ್ಕೆ ತರುವಲ್ಲಿ ಎಲ್ಲರ ಪಾತ್ರವಿದೆ:
ಸಿದ್ದರಾಮಯ್ಯ ಅವರನ್ನು ಎರಡುವರೆ ವರ್ಷಕ್ಕೆ ಮಾತ್ರ ಸಿಎಂ ಆಗಿ ಆಯ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಸಿಎಲ್‌ಪಿ ಸಭೆಯಲ್ಲಿ ಓಟಿಂಗ್ ನಡೆದು ಐದು ವರ್ಷಕ್ಕೆ ಮುಖ್ಯಮಂತ್ರಿ ಆಗಿದ್ದಾರೆ. ಮಧ್ಯೆ ಬದಲಾಗಬೇಕಾದರೆ ಅವರು ರಾಜೀನಾಮೆ ನೀಡಬೇಕು. ಅಲ್ಲಿಯವರೆಗೆ ಅವರೇ ಸಿಎಂ ಆಗಿರುತ್ತಾರೆ ಎಂದರು.
ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ಡಿ.ಕೆ. ಶಿವಕುಮಾರ್ ಒಬ್ಬರೇ ಅನಿವಾರ್ಯಾನಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, '2013 ರಲ್ಲಿ ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿದ್ದರು, ಆಗ ಪಕ್ಷ ಅಧಿಕಾರಕ್ಕೆ ಬಂತು. ಅವರನ್ನು ಪರಿಗಣಿಸಬೇಕಲ್ಲಾ? ದಲಿತರು ಎಂಬ ಕಾರಣಕ್ಕೆ ಮಾತ್ರವಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮವೂ ಇದೆ. ಒಬ್ಬರಿಂದಲೇ ಅಧಿಕಾರಕ್ಕೆ ಬಂತು ಎನ್ನುವುದನ್ನು ನಾನು ಒಪ್ಪುವುದಿಲ್ಲ' ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್‌ಗೆ ಟಾಂಗ್ ನೀಡಿದರು.
ಗೊಂದಲದಿಂದ ಆಡಳಿತದ ಮೇಲೆ ದುಷ್ಪರಿಣಾಮ
ಸಿಎಂ ಮತ್ತು ಡಿಸಿಎಂ ಅವರನ್ನು ಜನವರಿಯಲ್ಲಿ ಹೈಕಮಾಂಡ್ ಕರೆದು ಮಾತನಾಡಬಹುದು ಅಥವಾ ಮಾತನಾಡದೆ ಇರಬಹುದು. ಆದರೆ, ಈ ರೀತಿಯ ಗೊಂದಲಗಳಿಂದ ರಾಜ್ಯ ಸರ್ಕಾರದ ನಡವಳಿಕೆ ಮತ್ತು ಆಡಳಿತದ ದಕ್ಷತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಆದಷ್ಟು ಬೇಗ ಈ ಗೊಂದಲಗಳನ್ನು ಪರಿಹರಿಸುವಂತೆ ಹೈಕಮಾಂಡ್ ಮೇಲೆ ಒತ್ತಾಯ ಮಾಡುತ್ತೇನೆ ಎಂದರು. ಅಂತಿಮವಾಗಿ, ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂದು ಹಿಂದಿನ ತಮ್ಮ ಹೇಳಿಕೆಯನ್ನು ರಾಜಣ್ಣ ಪುನರುಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ