
ಧಾರವಾಡ(ಡಿ.8): ನಿಗದಿಯಾಗಿದ್ದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದರೂ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ಉದ್ಯೋಗಾಕಾಂಕ್ಷಿಗಳನ್ನು ಭೇಟಿ ಮಾಡಿ ಮಾತನಾಡಿಸಿದ ಸಂದರ್ಭದಲ್ಲಿ, ಓರ್ವ ಯುವತಿ ಕಣ್ಣೀರು ಹಾಕಿದ ಘಟನೆ ಧಾರವಾಡ ನಗರದ ಶ್ರೀನಗರದಲ್ಲಿ ಇಂದು ನಡೆದಿದೆ.
ಇಂದು ಶ್ರೀನಗರದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನಿಗದಿಯಾಗಿತ್ತು. ಆದರೆ ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದಾಗ್ಯೂ, ಪರಿಸ್ಥಿತಿಯನ್ನು ತಿಳಿಯಲು, ಪ್ರತಿಭಟನೆ ನಡೆಯಬಹುದೆಂದು ಊಹಿಸಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ಸ್ವತಃ ಫೀಲ್ಡ್‌ಗೆ ಇಳಿದು ರೌಂಡ್ಸ್‌ಗೆ ಹೋಗಿದ್ದರು. ಈ ವೇಳೆ ಅವರು ಕೋಚಿಂಗ್ ಪಡೆಯಲು ಬಂದಿದ್ದ ಉದ್ಯೋಗಾಕಾಂಕ್ಷಿಗಳೊಂದಿಗೆ ಮಾತನಾಡಲು ನಿಂತರು.
ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲೆಂದೇ ಬಂದಿದ್ದ ಕೆಲ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡರು. ಇದೇ ಸಂದರ್ಭದಲ್ಲಿ ಕೊಪ್ಪಳ ಮೂಲದ ಯುವತಿಯೊಬ್ಬಳು ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತು ತನ್ನ ಅಳಲನ್ನು ತೋಡಿಕೊಂಡಳು.
'ಸರ್, ನಮ್ಮ ವಯಸ್ಸು ಮೀರುತ್ತಿದೆ. ನಾವು ಸಾಕಷ್ಟು ಕಷ್ಟಪಟ್ಟು ಓದುತ್ತಿದ್ದೇವೆ. ದಯವಿಟ್ಟು ಬೇಗ ಉದ್ಯೋಗ ಕರೆಯಲು ಹೇಳಿ ಸರ್' ಎಂದು ಕೊಪ್ಪಳ ಮೂಲದ ಯುವತಿ ಆಯುಕ್ತರ ಮುಂದೆ ಗಳಗಳನೇ ಕಣ್ಣೀರು ಹಾಕುತ್ತಾ ಮನವಿ ಮಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರ ಮೇಲೆ ಇರುವ ಮಾನಸಿಕ ಒತ್ತಡ ಆತಂಕವೇನು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಯುವತಿಯ ಕಷ್ಟವನ್ನು ಆಲಿಸಿದ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು, ತಕ್ಷಣವೇ ಆಕೆಗೆ ಧೈರ್ಯ ತುಂಬಿದರು. 'ದೈರ್ಯಗೆಡಬೇಡಿ, ಸರ್ಕಾರ ಈ ಬಗ್ಗೆ ಗಮನಹರಿಸುತ್ತದೆ' ಎಂದು ಅಭಯ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ