ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲು ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಬಡವರಿಗಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಮುಂದಿನ ವರ್ಷವೇ ಈ ನೂತನ ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ. ಅಷ್ಟಕ್ಕೂ ಏನಿದು ಯೋಜನೆ? ಮುಂದೆ ಓದಿ...
ಬೆಂಗಳೂರು, (ಅ.15): ಮುಸ್ಲಿಂ ಸಮುದಾಯಕ್ಕೆ ನೀಡಲಾಗಿರುವ ಶಾದಿಭಾಗ್ಯ ರೀತಿಯಲ್ಲಿ ಇತರೆ ಜನಾಂಗದ ಆರ್ಥಿಕವಾಗಿ ಹಿಂದುಳಿದ ಬಡವರಿಗಾಗಿ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲು ಮುಂದಾಗಿದೆ.
ಮುಜರಾಯಿ ಇಲಾಖೆ ನೇತೃತ್ವದಲ್ಲಿ ಪ್ರತಿ ವರ್ಷ 10 ಸಾವಿರ ಉಚಿತ ಸಾಮೂಹಿಕ ಮದುವೆ ಮಾಡಿಸುವ ನೂತನ ಯೋಜನೆ ಇದಾಗಿದ್ದು, ಇದರ ಸಿದ್ಧತೆಯೂ ಆರಂಭವಾಗಿದೆ.
ಬಿಪಿಎಲ್ ಕುಟುಂಬಕ್ಕೆ ಲ್ಯಾಬ್ ತಪಾಸಣೆ ಉಚಿತ!
ರಾಜ್ಯದ 'A' ದರ್ಜೆಯ 100 ದೇವಾಲಯಗಳಲ್ಲಿ ತಲಾ ಒಂದೊಂದು ದೇವಾಲಯದಲ್ಲಿ ಪ್ರತಿ ವರ್ಷ 100 ಜೋಡಿಗೆ ಮದುವೆ ಮಾಡಿಸುವ ಮುಜರಾಯಿ ಇಲಾಖೆ ನಿರ್ಧರಿಸಿದೆ.
ಹೀಗೆ ಪ್ರತಿ ವರ್ಷ 10 ಸಾವಿರ ಜೋಡಿಗೆ ಮದುವೆ ಮಾಡಿಸುವ ಯೋಜನೆ ಇದಾಗಿದೆ. ಯಾವುದೇ ಜಾತಿ-ಭೇದವಿಲ್ಲದೆ, ಎಲ್ಲಾ ವರ್ಗದ ಬಡವರಿಗಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ಹಿಂದು ಸಂಪ್ರದಾಯದಂತೆ ವಿವಾಹ ನಡೆಯಲಿದೆ.
ಒಂದು ಜೋಡಿಗೆ 25-30 ಸಾವಿರ ಖರ್ಚಾಗಲಿದ್ದು, ಪ್ರತಿ ವರ್ಷ 25-30 ಕೋಟಿ ರೂ. ಈ ಯೋಜನೆಗೆ ಖರ್ಚಾಗಲಿದೆ. ಹಾಗೆಯೇ ವಧು-ವರರಿಗೆ ವಸ್ತ್ರ, ಮಾಂಗಲ್ಯ, ಆರ್ಥಿಕ ಸಹಾಯ ಸರ್ಕಾರವೇ ನೀಡಲಿದೆ.
A ದರ್ಜೆ ದೇಗುಲಗಳಲ್ಲಿ ಮದ್ವೆ
ಚಾಮುಂಡೇಶ್ವರಿ, ಕಟೀಲು ದುರ್ಗೆ, ನಂಜನಗೂಡು ನಂಜುಂಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಸೇರಿದಂತೆ A ದರ್ಜೆಯ 100 ದೇವಾಲಯಗಳಲ್ಲಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಸರ್ಕಾರ ನಿರ್ಧರಿಸಿದೆ.
ಇನ್ನು ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದಿಂದ ಈ ಯೋಜನೆ ಜಾರಿಗೆ ಆಗಲಿದೆ. ಆರ್ಥಿಕವಾಗಿ ಸಶಕ್ತರಲ್ಲದ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ.