ಸಂಸದ ಬಿ.ವೈ. ರಾಘವೇಂದ್ರ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಬುಧವಾರ ಪಟ್ಟಣದಲ್ಲಿ ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ವಿಶೇಷವಾಗಿ ಆಚರಿಸಿಕೊಂಡರು.
ಶಿಕಾರಿಪುರ (ಆ.17) : ಸಂಸದ ಬಿ.ವೈ. ರಾಘವೇಂದ್ರ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಬುಧವಾರ ಪಟ್ಟಣದಲ್ಲಿ ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ವಿಶೇಷವಾಗಿ ಆಚರಿಸಿಕೊಂಡರು.
ಬೆಳಗ್ಗೆ 10 ಗಂಟೆ ವೇಳೆಯಲ್ಲಿ ತಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಹೋದರ ಶಾಸಕ ಬಿ.ವೈ. ವಿಜಯೇಂದ್ರ ಸಹಿತ ಸಹೋದರಿಯರು ಕುಟುಂಬಸ್ಥರ ಜತೆ ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದರು. ಅಪಾರ ಅಭಿಮಾನಿಗಳು ಕುಟುಂಬಕ್ಕೆ ಸಾಥ್ ನೀಡಿ, ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಅನಂತರದಲ್ಲಿ ಸಮೀಪದಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಗುರುರಾಯರ ಬೃಂದಾವನದ ದರ್ಶನ ಆಶೀರ್ವಾದ ಪಡೆದರು. ದೇವಸ್ಥಾನದ ಮುಂಭಾಗ ಆಯ್ದ 6 ವಿಕಲಚೇತನರಿಗೆ ಹುಟ್ಟುಹಬ್ಬದ ಸವಿನೆನಪಿಗಾಗಿ ಟ್ರೈ ಮೋಟಾರ್ ಸೈಕಲ್ ವಿತರಿಸಿದರು.
ಈ ಸಂದರ್ಭ ಸಂಸದರು ಮಾತನಾಡಿ, ಇದೀಗ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ವಯಸ್ಸು ಹೆಚ್ಚಾದಂತೆ ಜವಾಬ್ದಾರಿ ಹೆಚ್ಚಾಗುವ ಬಗ್ಗೆ ಅರಿವಿದೆ. ತಂದೆ ಯಡಿಯೂರಪ್ಪ ಅವರು ತಾಲೂಕಿನ ಜನತೆಯ ಪ್ರೀತಿ- ವಿಶ್ವಾಸ ಸಂಪಾದಿಸಿ, ಎಲ್ಲರ ಆಶೀರ್ವಾದದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ. ತಂದೆ ಸಾಗಿದ ಹಾದಿಯಲ್ಲಿಯೇ ಜನತೆಯ ಪ್ರೀತಿ- ವಿಶ್ವಾಸ ಸಂಪಾದಿಸಿ, ಅಭಿವೃದ್ಧಿಗೆ ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೆರಡು ತಿಂಗಳಲ್ಲಿ ಶಿವಮೊಗ್ಗಕ್ಕೆ ಫೈಟರ್ ಜೆಟ್ ವಿಮಾನ: ಸಂಸದ ರಾಘವೇಂದ್ರ
ಅಲ್ಲದೇ, ಸಹೋದರ ಬಿ.ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಲ್ಲಿ ಬೆಂಬಲಿಸಿ, ಪ್ರೋತ್ಸಾಹಿಸಿದ ತಾಲೂಕಿನ ಜನತೆಯ ಸಮಸ್ಯೆಯನ್ನು ಜೋಡೆತ್ತು ಸೇರಿಕೊಂಡು ಬೇಸಾಯ ಮಾಡುವ ರೀತಿಯಲ್ಲಿ ಒಗ್ಗಟ್ಟಿನ ಮೂಲಕ ಪರಿಹರಿಸಲು ಶ್ರಮಿಸುವುದಾಗಿ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ವಾತಾವರಣದಲ್ಲಿ ತೀವ್ರ ವ್ಯತ್ಯಾಸವಾಗುತ್ತಿದೆ. ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯೂ ದಟ್ಟವಾಗಿದೆ. ಈ ದಿಸೆಯಲ್ಲಿ ರೈತ ಸಮುದಾಯ ನಾಟಿ ಕೃಷಿ ಕೈ ಬಿಟ್ಟು, ಕಡಿಮೆ ನೀರು ಬಳಸುವ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುಬಹುದು. ವಿಶೇಷಚೇತನರು ಸಮಾಜದಲ್ಲಿ ಎಲ್ಲರ ಜತೆ ಬದುಕುವ ಸವಾಲನ್ನು ಧೈರ್ಯ, ಆತ್ಮವಿಶ್ವಾಸದಿಂದ ಎದುರಿಸಲು ತ್ರಿಚಕ್ರ ವಾಹನಗಳನ್ನು ಹುಟ್ಟುಹಬ್ಬದ ಸವಿನೆನಪಿಗಾಗಿ ವಿತರಿಸಲಾಗಿದೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿ ಬೆತ್ತಲೆಯಾದ ಐಎನ್‌ಡಿಐಎ: ಸಂಸದ ರಾಘವೇಂದ್ರ
ಅನಂತರ ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖ ಕೇಕ್ ಕತ್ತರಿಸಿ, ನೇರವಾಗಿ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಗೆ ಆಗಮಿಸಿದ ಸಂಸದರಿಗೆ ಹುಟ್ಟುಹಬ್ಬದ ಅಭಿನಂದನೆಗಳನ್ನು ಸಲ್ಲಿಸಲು ಅಧಿಕಾರಿ ವರ್ಗ, ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಧಾವಿಸಿದರು. ನೆಚ್ಚಿನ ನಾಯಕನಿಗೆ ಶುಭ ಕೋರಿದರು. ಈ ಸಂದರ್ಭ ಸಂಸದ ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ, ಪುತ್ರ ಸುಭಾಷ್, ಭಗತ್, ಸಹೋದರಿ ಪದ್ಮಾವತಿ, ಅರುಣಾದೇವಿ, ಉಮಾ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಮುಖಂಡ ರೇವಣಪ್ಪ ಕೊಳಗಿ, ಚನ್ನವೀರಪ್ಪ, ವಸಂತಗೌಡ, ಮೋಹನ್, ಕಬಾಡಿ ರಾಜಣ್ಣ, ಫಕೀರಪ್ಪ, ಪುರಸಭಾ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.