ರೈತರನ್ನು ಮದುವೆಯಾದರೆ ವಧುವಿಗೆ ಸಿಗುತ್ತೆ 1 ಲಕ್ಷ ರು.!

By Web DeskFirst Published Jan 28, 2019, 10:55 AM IST
Highlights

ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘ ಕೃಷಿಕರನ್ನು ಕೈ ಹಿಡಿಯುವ ಯುವತಿಯ ಹೆಸರಿನಲ್ಲಿ .1 ಲಕ್ಷ ಠೇವಣಿ ಇಡುವ ವಿನೂತನ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. 

ಕಾರವಾರ :  ಈ ಗ್ರಾಮದ ಕೃಷಿಕರನ್ನು ಕೈ ಹಿಡಿಯುವ ಯುವತಿಯ ಹೆಸರಿನಲ್ಲಿ 1 ಲಕ್ಷ ಠೇವಣಿ ಇಡಲಾಗುತ್ತದೆ. ಕೃಷಿಕರು ಹಾಗೂ ಗ್ರಾಮೀಣ ಪ್ರದೇಶದ ಯುವಕರನ್ನು ವಿವಾಹವಾಗಲು ಯುವತಿಯರು ಹಿಂದೇಟು ಹಾಕುವುದನ್ನು ತಪ್ಪಿಸಲು ಸೇವಾ ಸಹಕಾರಿ ಸಂಘವೊಂದು ಈ ವಿನೂತನ ಯೋಜನೆ ಹಮ್ಮಿಕೊಂಡಿದೆ.

ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘ ಇಂತಹ ಯೋಜನೆಯನ್ನು ಪ್ರಕಟಿಸಿದೆ. ಗ್ರಾಮದಲ್ಲಿರುವ ಎಲ್ಲ ಜಾತಿ, ಧರ್ಮದ ಕೃಷಿಕರನ್ನು ವರಿಸುವ ಯುವತಿ ಈ ಸೌಲಭ್ಯ ಪಡೆಯಲಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಸೌಲಭ್ಯ ಇದ್ದರೂ ಯುವತಿಯರು ಮಾತ್ರ ಗ್ರಾಮೀಣ ಪ್ರದೇಶದ ಯುವಕರನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಅದರಲ್ಲೂ ಕೃಷಿಕ ಕುಟುಂಬವೆಂದರೆ ಅದೇಕೋ ನಿರಾಸಕ್ತಿ. ಹೀಗಾಗಿ ಗ್ರಾಮಾಂತರ ಪ್ರದೇಶದ ಕೃಷಿ ಕುಟುಂಬದ ಯುವಕರು ಮದುವೆ ಕಾಣುವುದು ಕಷ್ಟದ ಮಾತು. ಈಗ ಆನಗೋಡ ಗ್ರಾಮದ ಸೇವಾ ಸಹಕಾರಿ ಸಂಘ ಗ್ರಾಮೀಣ ಕೃಷಿಕ ಯುವಕರ ನೆರವಿಗೆ ಬಂದಿದೆ.

ಬರುವ ಮಾರ್ಚ್ ನಿಂದ ಈ ಯೋಜನೆ ಜಾರಿಯಾಗಲಿದೆ. ಅಂದ ಹಾಗೆ ಸೊಸೈಟಿ ಇದಕ್ಕೆ ಕೆಲವು ನಿಬಂಧನೆಗಳನ್ನೂ ಹಾಕಿದೆ. ವಿವಾಹ ಆಗುವವರು ಈ ಸೊಸೈಟಿಯ ಸದಸ್ಯರಾಗಿರಬೇಕು. ಪ್ರತಿ ವರ್ಷ 3-4 ಲಕ್ಷ ವಹಿವಾಟನ್ನು ಸೊಸೈಟಿಯಲ್ಲಿ ನಡೆಸಬೇಕು. ಸೊಸೈಟಿಯಲ್ಲಿ ಅಡಕೆ ಮಾರಾಟ, ಗೊಬ್ಬರ, ಹಿಂಡಿ, ಸಿಮೆಂಟ್‌, ಕಬ್ಬಿಣ ಮಾರಾಟ ನಡೆಯುವುದರಿಂದ 3-4 ಲಕ್ಷ ವಹಿವಾಟು ತುಂಬ ಸುಲಭ. ಅಲ್ಲದೆ ಸದ್ಯದಲ್ಲೆ ಎಲ್ಲ ದಿನಸಿ ಸಾಮಗ್ರಿಗಳು, ಕೃಷಿ ಉಪಕರಣಗಳು, ಸ್ಟೇಶನರಿ ಸೇರಿದಂತೆ ಎಲ್ಲ ವಸ್ತುಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ವ್ಯಾಪಾರ ವಹಿವಾಟಿನಲ್ಲಿ ಆದ ಲಾಭವನ್ನು ಮದುವೆಗಾಗಿ ವಿನಿಯೋಗಿಸಲು ನಿರ್ಧರಿಸಲಾಗಿದೆ.

ಇದರಿಂದ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತಾಗಲಿದೆ. ವಧು ಇಲ್ಲದೆ ಚಿಂತೆಯಲ್ಲಿರುವ ಯುವಕರ ಮದುವೆ ನೆರವೇರಲಿದೆ. ಸೊಸೈಟಿಯಲ್ಲೆ ವ್ಯವಹಾರ ನಡೆಸುವುದರಿಂದ ಸೊಸೈಟಿಯ ಆರ್ಥಿಕ ಬಲವೂ ವೃದ್ಧಿಯಾಗಲಿದೆ. ಈಚೆಗೆ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಎನ್‌.ಕೆ.ಹೆಗಡೆ ಅಗ್ಗಾಶಿಕುಂಬ್ರಿ ಈ ಯೋಜನೆ ಕುರಿತು ಅಭಿಪ್ರಾಯ ಕೇಳಿದಾಗ ಎಲ್ಲರೂ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು.

ಸೊಸೈಟಿಯಲ್ಲಿ ಒಟ್ಟೂ 2,200 ಸದಸ್ಯರಿದ್ದಾರೆ. ಸದಸ್ಯರ ಸಂಖ್ಯೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ಆನಗೋಡ ಗ್ರಾಮದಲ್ಲಿ ಬಹುತೇಕ ಕೃಷಿಕರೆ ಹೆಚ್ಚು. ಅಡಕೆ, ತೆಂಗು, ಭತ್ತ ಬೆಳೆಯುತ್ತಾರೆ. ಬೇರೆ ಬೇರೆ ಜಾತಿಯ ಜನರಿದ್ದಾರೆ. ಸೊಸೈಟಿಯಲ್ಲಿ ಸದಸ್ಯರಾಗಿರುವ ಊರಿನ ಎಲ್ಲ ಜಾತಿ, ಧರ್ಮದವರಿಗೂ ಈ ಯೋಜನೆ ಅನ್ವಯವಾಗಲಿದೆ.

ಕೃಷಿಕರಿಗೆ ಮದುವೆಯೇ ಆಗದ ಪರಿಸ್ಥಿತಿಯಲ್ಲಿ ಸಂಘ ನಡೆಸಿದ ಪ್ರಯತ್ನ ಇತಿಹಾಸದಲ್ಲಿ ಶಾಶ್ವತವಾಗಿರಬೇಕು. ಜತೆಗೆ ಸೊಸೈಟಿ ಬೆಳೆಯಬೇಕು. ಆರ್ಥಿಕವಾಗಿ ಸದೃಢವಾಗಬೇಕು.

-ಎನ್‌.ಕೆ.ಹೆಗಡೆ ಅಗ್ಗಾಶಿಕುಂಬ್ರಿ ಅಧ್ಯಕ್ಷರು, ಆನಗೋಡ ಸೇವಾ ಸಹಕಾರಿ ಸಂಘ.

ವರದಿ :  ವಸಂತಕುಮಾರ್‌ ಕತಗಾಲ

click me!