ಕುಮಾರಸ್ವಾಮಿ ಬರಪ್ರವಾಸ ಏಕಿಲ್ಲ?: ಗುಡುಗಿದ ಬಿಎಸ್‌ವೈ

By Web DeskFirst Published Jan 28, 2019, 10:50 AM IST
Highlights

ಬಿಜೆಪಿಯಿಂದ ಮುಂದುವರಿದ ಬರ ಪರಿಶೀಲನೆ| ಯಡಿಯೂರಪ್ಪ, ಈಶ್ವರಪ್ಪ, ಶ್ರೀರಾಮುಲು ನೇತೃತ್ವದ ತಂಡ ಭೇಟಿ

ಬೆಂಗಳೂರು[ಜ.28]: ಯಡಿಯೂರಪ್ಪ ನೇತೃತ್ವದ ತಂಡ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆ ತಾಲೂಕಿನ ಕೆಲವು ಗ್ರಾಮಗಳಿಗೆ ಮತ್ತು ತುಮಕೂರು ಜಿಲ್ಲೆಯ ಶಿರಾ ತಾಲೂಕಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ತಂಡ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿಗೆ ಭೇಟಿ ನೀಡಿ ಬರಪರಿಶೀಲನೆ ನಡೆಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೇತೃತ್ವದ ತಂಡ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ರೈತರ ಸಮಸ್ಯೆ ಆಲಿಸಿದ ಬಿಎಸ್‌ವೈ:

ಚಿತ್ರದರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ, ಖಂಡೇನಹಳ್ಳಿ, ಹೊಸಕೆರೆ, ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಮತ್ತು ತುಮಕೂರು ಜಿಲ್ಲೆಯ ಶಿರಾ ತಾಲೂಕಿಗೆ ಭೇಟಿ ನೀಡಿ ಅಡಕೆ, ತೆಂಗಿನ ತೋಟ, ದಾಳಿಂಬೆ, ಸೇಂಗಾ ಬೆಳೆ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್‌, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಶಾಸಕರಾದ ಗೂಳಿಹಟ್ಟಿಶೇಖರ್‌ ಇದ್ದರು. ಶಿರಾದಲ್ಲಿ ಶಾಸಕರಾದ ಜ್ಯೋತಿಗಣೇಶ್‌, ಜೆ.ಸಿ.ಮಾಧುಸ್ವಾಮಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬರಗಾಲ ಇರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡುತ್ತಿಲ್ಲ. ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದೇ ಸಂಪೂರ್ಣ ವಿಫಲವಾಗಿದೆ. ಬರ ನಿವಾರಿಸಲು ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಕಾಲಹರಣ ಮಾಡುತ್ತಿದೆ. ಅಡಕೆ, ತೆಂಗು, ದಾಳಿಂಬೆ, ಶೇಂಗಾ ನಾಶವಾಗಿದೆ. ಶೀಘ್ರವೇ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ವಿಜಯಪುರದಲ್ಲಿ ಈಶ್ವರಪ್ಪ ಪರಿಶೀಲನೆ:

ವಿಜಯಪುರ ಮತ್ತು ಬಾಗಲಕೋಟೆಯ ಕೆಲವು ಹಳ್ಳಿಗಳಿಗೆ ಭೇಟಿ ನೀಡಿದ ಈಶ್ವರಪ್ಪ ನೇತೃತ್ವದ ತಂಡ ಕಡಲೆ ಮತ್ತು ಬಿಳಿ ಜೋಳ ಬೆಳೆಯನ್ನು ಪರಿಶೀಲಿಸಿದೆ. ಈ ಸಂದರ್ಭದಲ್ಲಿ ರೈತರ ಜತೆ ಸಂವಾದ ನಡೆಸಿ ಅವರ ಕಷ್ಟವನ್ನು ಆಲಿಸಿದರು. ಈಶ್ವರಪ್ಪ ಜತೆಗೆ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು , ಶಾಸಕರಾದ ಎ.ಎಸ್‌.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ ಮತ್ತು ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಬರ ನಿರ್ವಹಣೆ ಮಾಡುವಲ್ಲಿ ಮೈತ್ರಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ತೃಪ್ತಿಕರವಾಗಿಲ್ಲ. ಜೊತೆಗೆ ಬರ ನಿರ್ವಹಣೆಗೆ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಸೇಡಂನಲ್ಲಿ ಶ್ರೀರಾಮುಲು ತಂಡ:

ಮಾಜಿ ಸಚಿವ ಬಿ.ಶೀರಾಮುಲು ನೇತೃತ್ವದ ಬರ ಅಧ್ಯಯನ ತಂಡ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಬರ ಪರಿಶೀಲನೆ ನಡೆಸಿದ್ದಾರೆ. ಸೇಡಂನಲ್ಲಿ ಕೋಡ್ಲಾ, ಸಿಂಧನಮುಡು, ತೋಲ್‌ ಮಾಮಿಡಿ, ನರೇಪೆಟ್ಲಾ ಕೆರೆಗಳಿಗೆ ಭೇಟಿ ನೀಡಿ ಅಲ್ಲಿನ ಹಾಳಾದ ಹೊಲಗದ್ದೆ, ಖಾತ್ರಿ ಯೋಜನೆಯ ಕಾಮಗಾರಿಗಳನ್ನು ವೀಕ್ಷಿಸಿದರು. ಹಾಗೇ ಕೋಡ್ಲಾದ ಕಡ್ಲಿ ಹೊಲ, ಸಿಂಧನಮಡು ಊರಿನ ತೊಗರಿ ಹೊಲ, ಕಾನಾಗಡ್ಡಾ, ಕಲ್‌ ಮಾಮಿಡಿ ಊರಿನ ಖಾತ್ರಿ ಯೋಜನೆಯ ಕೆಲಸ ನಡೆದ ಸ್ಥಳಗಳಿಗೂ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.

click me!