
ಭೀಮಣ್ಣ ಗಜಾಪುರ
ಕೂಡ್ಲಿಗಿ (ಸೆ.29): ತಾಲೂಕಿನ ಗುಡೇಕೋಟೆ ಅರಣ್ಯ ಪ್ರದೇಶದಲ್ಲಿನ ಕರಡಿಧಾಮದ ಪಕ್ಕದಲ್ಲಿಯೇ ಗಾಳಿಯಂತ್ರಗಳು ಸದ್ದು ಮಾಡುತ್ತಿವೆ. ಜಗತ್ತಿನಲ್ಲಿಯೇ ಅಪರೂಪದ ಅತೀ ಹೆಚ್ಚು ಕಪ್ಪು ಕರಡಿಗಳಿರುವ ಗುಡೇಕೋಟೆ ಅರಣ್ಯಪ್ರದೇಶದ ಸುತ್ತ ಕರ್ಕಶ ಶಬ್ದ ಕೇಕೆ ಹಾಕುತ್ತಿದೆ. ಪ್ರಾಣಿಗಳಿಗೆ ಪ್ರಾಣಸಂಕಟ ಶುರುವಾಗಿದೆ.
2013ರಲ್ಲಿ ಈ ಪ್ರದೇಶವನ್ನು ಕರಡಿಧಾಮ ಎಂದು ಘೋಷಿಸಿದೆ. ಮೊದಲು 1761 ಹೆಕ್ಟೇರ್ ಅರಣ್ಯ ಪ್ರದೇಶವಷ್ಟೇ ಕರಡಿಧಾಮವಾಗಿತ್ತು. ನಂತರ 2019-20ರಲ್ಲಿ ಪುನಃ 12 ಸಾವಿರ ಹೆಕ್ಟೇರ್ ಹಾಲಸಾಗರ ಅರಣ್ಯವನ್ನು ಕರಡಿಧಾಮಕ್ಕೆ ಸೇರ್ಪಡಿಸಲಾಗಿತ್ತು. ಕರಡಿ, ಚಿರತೆ, ನವಿಲು, ಸಾರಂಗ ಹೀಗೆ ನೂರಾರು ಪ್ರಾಣಿ, ಪಕ್ಷಿಗಳು ಸ್ವಚ್ಛಂದವಾಗಿ ಕಾಲ ಕಳೆಯುತ್ತಿದ್ದವು. ಆದರೆ ಈಗ ಪ್ರಾಣಿಗಳಿಗೆ ಸಂಕಷ್ಟ ಎದುರಾಗಿದೆ.ಕರಡಿಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದ ಸುತ್ತ ಅರಣ್ಯ ಇಲಾಖೆಯವರು ತಡೆಗೋಡೆ ನಿರ್ಮಿಸಿ ಜನ- ಜಾನುವಾರು ಕಾಡಿಗೆ ಬಾರದಂತೆ ನಿರ್ಬಂಧ ಹೇರಿದ್ದರಿಂದ ಈಗ ಗುಡೇಕೋಟೆ ಕರಡಿಧಾಮದಲ್ಲಿ ಸಹಸ್ರಾರು ಜೀವವೈವಿಧ್ಯಗಳು ತನ್ನ ಪ್ರಭೇದಗಳನ್ನು ಹೆಚ್ಚಳ ಮಾಡಿಕೊಳ್ಳಲು ಸಾಧ್ಯವಾಗಿದೆ. ಅಳಿವಿನಂಚಿಲ್ಲಿದ್ದ ಸಸ್ತನಿ, ಪಕ್ಷಿ, ಚಿಟ್ಟೆ, ಸರೀಸೃಪಗಳು ಇಲ್ಲಿ ಸಂತತಿ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ.
ಪ್ರಾಕೃತಿಕವಾಗಿ ಈಗಾಗಲೇ ಇರುವ ಇಲ್ಲಿಯ ನೈಸರ್ಗಿಕ ಕಲ್ಲುಬಂಡೆಗಳು, ಜಲಪಾತಗಳು ಸಂರಕ್ಷಣೆಯಾಗಿರುವುದು ಪರಿಸರ ಪ್ರಿಯರಲ್ಲಿ ಸಂತಸದ ನಗೆ ಮೂಡಿದೆ. ಇಂತಹ ನೆಮ್ಮದಿಯ ತಾಣದ ಪಕ್ಕದಲ್ಲಿಯೇ ರೈತರ ಜಮೀನುಗಳಲ್ಲಿ ದೈತ್ಯ ಫ್ಯಾನ್‌ಗಳ ಸದ್ದು ನೂರಾರು ಕರಡಿಗಳ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಿದೆ.
ಇದನ್ನೂ ಓದಿ: ಬಳ್ಳಾರಿ: ಹೊಲದಲ್ಲಿ ಹೊತ್ತಿಯುರಿದ ವಿಂಡ್ ಪ್ಯಾನ್! #Bellary #windmill #fireaccident
ಕರಡಿಧಾಮದ ಸುತ್ತಮುತ್ತ ಪ್ರದೇಶವಾದ ಯರ್ರಲಿಂಗನಹಟ್ಟಿ, ಶ್ರೀಕಂಠಾಪುರ, ಗುಡೇಕೋಟೆ, ತೋಕೆನಹಳ್ಳಿ ವ್ಯಾಪ್ತಿಯಲ್ಲಿ ಫ್ಯಾನ್‌ಗಳು ಸದ್ದು ಮಾಡಲು ಶುರು ಮಾಡಿವೆ. ಇಲ್ಲಿ ಕರಡಿ, ಚಿರತೆಗಳು ಹಾಡುಹಗಲೇ ಜನತೆಗೆ ಕಾಣಿಸುತ್ತವೆ. ನವಿಲುಗಳ ಕೂಗು, ನರ್ತನ ಇನ್ನು ಕನಸಾಗುತ್ತದೆಯೇನೋ ಎಂಬ ಆತಂಕ ವನ್ಯಜೀವಿ ಪ್ರಿಯರಿಗೆ ಕಾಡುತ್ತಿದೆ. 200ಕ್ಕೂ ಹೆಚ್ಚು ಕರಡಿಗಳಿವೆ. ಮುಂದಿನ ದಿನಗಳಲ್ಲಿ ದರೋಜಿ ಕರಡಿಧಾಮದ ರೀತಿಯಲ್ಲಿ ಪ್ರವಾಸಿಗರು ಗುಡೇಕೋಟೆಯಲ್ಲಿ ವಿಶ್ವದಲ್ಲಿಯೇ ಅಪರೂಪದ ಕಪ್ಪು ಕರಡಿಗಳನ್ನು ನೈಸರ್ಗಿಕವಾಗಿ ನೋಡುವ ಅವಕಾಶ ಸಿಗುತ್ತದೆ. ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿರುವ ಕರಡಿಧಾಮಕ್ಕೆ ಈಗ ವಿಂಡ್ ಫ್ಯಾನ್‌ಗಳು ಅಡ್ಡಗಾಲಾಗಿವೆ.
ಗುಡೇಕೋಟೆಗೆ ಬೇರೆ ದೇಶಗಳಿಂದ ಹಕ್ಕಿಗಳು ಚಳಿಗಾಲದಲ್ಲಿ ವಲಸೆ ಬರುತ್ತವೆ. ಕೆಲವು ಪಕ್ಷಿಗಳು ಗುಡೇಕೋಟೆ ಮೂಲಕ ಹಾದುಹೋಗುವಾಗ ಫ್ಯಾನ್‌ಗಳಿಗೆ ಡಿಕ್ಕಿ ಹೊಡೆದು ಸಾಯುವ ಸಂದರ್ಭಗಳು ಬಂದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ತಜ್ಞರಿಂದ ವನ್ಯಜೀವಿಗಳಿಗೆ ಗಾಳಿಯಂತ್ರಗಳಿಂದ ದುಷ್ಪರಿಣಾಮದ ಬಗ್ಗೆ ಪಾರದರ್ಶಕವಾಗಿ ಅಧ್ಯಯನ ಮಾಡಬೇಕಿದೆ.
ಇದನ್ನೂ ಓದಿ: Donimalai NMDC housing project: ವಸತಿಗೃಹ ನಿರ್ಮಾಣಕ್ಕಾಗಿ 828 ಮರಗಳ ಮಾರಣಹೋಮ ತಡೆಗೆ ಮನವಿ
ಗಾಳಿಯಂತ್ರಗಳಿಂದ ಕರಡಿಗಳಿಗೆ, ವನ್ಯಜೀವಿ, ಪಕ್ಷಿಗಳ ಜೀವನಕ್ಕೆ ತೊಂದರೆಯಿದೆ. ಗುಡೇಕೋಟೆಯಲ್ಲಿ ಏಷ್ಯಾದ 2ನೇ ಅತೀ ದೊಡ್ಡ ಕರಡಿಧಾಮವಿದೆ. ಕರಡಿಗಳು ಅಲ್ಲಿಂದ ಪ್ರತಿದಿನ ಹತ್ತಾರು ಕಿಲೋಮೀಟರ್ ದೂರ ನಡೆದು ರೈತರ ಜಮೀನುಗಳ ಮೂಲಕವೇ ಹೋಗಿ ತೋಟಗಾರಿಕೆ ಬೆಳೆಗಳನ್ನು ತಿಂದು ಬರುತ್ತವೆ. ಹೀಗಾಗಿ ಕರಡಿಗಳು ಫ್ಯಾನ್‌ಗಳು ಇರುವ ಜಾಗದ ಮೂಲಕವೇ ಹೋಗಬೇಕು. ಶಬ್ದಕ್ಕೆ ಬೆದರಿ ಬೇರೆ ಕಡೆ ಕರಡಿಗಳು ಹೋದರೂ ಹೋಗಬಹುದು. ಮೊದಲೇ ಗೊತ್ತಾಗಿದ್ದರೆ ಹೋರಾಟ ಮಾಡುತ್ತಿದ್ದೆವು. ಈಗಲೂ ಕಾಲ ಮಿಂಚಿಲ್ಲ. ರೈತರು, ಪ್ರಗತಿಪರ ಸಂಘಟನೆಗಳು ಸಹಕಾರ ನೀಡಿದರೆ ಹೋರಾಟ ಮಾಡಲಾಗುವುದು ಎನ್ನುತ್ತಾರೆ ವನ್ಯಜೀವಿ ತಜ್ಞ ಸಮದ್ ಕೊಟ್ಟೂರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ