ರೈತರೇ ಡಿಕೆಶಿಯ ತೊಡೆ ಮುರಿಯುತ್ತಾರೆ: ನಿಖಿಲ್

Kannadaprabha News   | Kannada Prabha
Published : Sep 29, 2025, 06:03 AM IST
JDS Nikhil kumaraswamy dharmasthala yatre

ಸಾರಾಂಶ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರೈತರ ವಿರುದ್ಧ ತೊಡೆ ತಟ್ಟಿದ್ದಾರೆ. ಅವರಿಗೆ ರೈತರ ತಾಕತ್ತಿನ ಬಗ್ಗೆ ಅರಿವಿಲ್ಲ. ರೈತರಿಗೆ ಅಧಿಕಾರ ಕೊಡುವುದು ಗೊತ್ತು ತೊಡೆ ಮುರಿದು ಮನೆಗೆ ಕಳುಹಿಸುವುದು ಗೊತ್ತು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಗುಡುಗಿದ್ದಾರೆ.

ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರೈತರ ವಿರುದ್ಧ ತೊಡೆ ತಟ್ಟಿದ್ದಾರೆ. ಅವರಿಗೆ ರೈತರ ತಾಕತ್ತಿನ ಬಗ್ಗೆ ಅರಿವಿಲ್ಲ. ರೈತರಿಗೆ ಅಧಿಕಾರ ಕೊಡುವುದು ಗೊತ್ತು ತೊಡೆ ಮುರಿದು ಮನೆಗೆ ಕಳುಹಿಸುವುದು ಗೊತ್ತು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುಡುಗಿದ್ದಾರೆ.

ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ನಾವು ಹೋರಾಟ ಮಾಡುತ್ತಿರುವುದು ಮನುಷ್ಯರ ಮೇಲಲ್ಲ, ರಾಕ್ಷಸರ ಮೇಲೆ. ರಾಜ್ಯ ಸರ್ಕಾರ ಎಷ್ಟೇ ದಬ್ಬಾಳಿಕೆ ಮಾಡಿದರು ಟೌನ್‌ಶಿಪ್ ಯೋಜನೆಗಾಗಿ ರೈತರಿಂದ ಒಂದಿಂಚೂ ಭೂಮಿಯನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ.

ಸರ್ಕಾರ ಯೋಜನೆಯನ್ನು ಹಿಂಪಡೆಯದಿದ್ದರೇ ಭೈರಮಂಗಲ ಗ್ರಾಮದಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹಾಗೂ ಸಿಎಂ ನಿವಾಸ ಕೃಷ್ಣ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.ಈ ಯೋಜನೆಗೆ ಶೇ.80ರಷ್ಟು ರೈತರು ಭೂಮಿಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೂ ರೈತರ ಮೇಲೆ ದಿನನಿತ್ಯ ಅಧಿಕಾರಿಗಳ ಮೂಲಕ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿರುವುದು ಯಾವ ಉದ್ದೇಶಕ್ಕೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಈ ಯೋಜನೆಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.

ಕೊನೆಯ ಹಂತದವರೆಗೂ ರೈತರ ಧ್ವನಿಯಾಗಿ ನಿಲ್ಲುತ್ತೇವೆ ಎಂದು ಧೈರ್ಯ ತುಂಬಿದರು.ಡಿಕೆಶಿ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ: ಎಚ್‌ಡಿಕೆನೀವು ಯಾವ ರೀತಿ ಆಟ ಆಡುತ್ತಿದ್ದೀರಾ ಅಂತ ಗೊತ್ತಿದೆ. ಎಲ್ಲದಕ್ಕೂ ದೇವರು ತಕ್ಕ ಉತ್ತರ ಕೊಟ್ಟೆ ಕೊಡುತ್ತಾನೆ. ನೀವು ಮುಂದೆ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವರ್ಚ್ಯುವಲ್ ಸಭೆ ಮೂಲಕ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಬಿಡದಿ ಟೌನ್‌ಶಿಪ್ ವಿಚಾರವಾಗಿ ಡಿ.ಕೆ.ಶಿವಕುಮಾರ್ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ, ಅವರು ಬಿಲ್ಲುಕೆಂಪನಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ಭೂಮಿ ಲಪಟಾಯಿಸಿ ಬಿಲ್ಡಿಂಗ್ ಕಟ್ಟಿಕೊಂಡರು. ನಿವೃತ್ತ ಯೋಧನ ಜಮೀನು ಕಬಳಿಸಿದರು. ಅವರಿಗೆ ದೇವೇಗೌಡರು ಹಾಗೂ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕೆ ನಿರ್ಧಾರ ಮಾಡಿದರು. ಬಳಿಕ ದೇವೇಗೌಡರು ದೆಹಲಿಗೆ ಹೋದರು. ಆಗ ಇದೇ ಡಿ.ಕೆ.ಶಿವಕುಮಾರ್ ಒಂದು ಪ್ರಾಧಿಕಾರ ಮಾಡಿ ಅಧ್ಯಕ್ಷರಾದರು. ಈಗಲೂ ಆ ರೈತರಿಗೆ ಡಿ.ಕೆ.ಶಿವಕುಮಾರ್ ಪರಿಹಾರ ಕೊಡಿಸಿಲ್ಲ. ಈಗ ನಮ್ಮ ಬಗ್ಗೆ ಮಾತನಾಡುತ್ತಾರೆ. ನಾನು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಮಾಡಿರಲಿಲ್ಲ. ಆಗ ರೈತರು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ನಾನು ಯಾವ ರೈತರಿಗೂ ಅನ್ಯಾಯ ಮಾಡಿಲ್ಲ. ಇದೇ ಕಾಂಗ್ರೆಸ್ ಸದ್ಯಶೋಧನಾ ಸಮಿತಿ ಮಾಡಿಕೊಂಡಿದ್ದರು. ನಾನು ಹಾಸನದಲ್ಲಿ ಹುಟ್ಟಿದ್ದರು ಋಣಾನುಬಂಧ ರಾಮನಗರದ ಜತೆಗೆ ಬೆಳೆದಿದೆ. ಇಲ್ಲಿ ಜಮೀನು ಖರೀದಿಸಿ ಇಲ್ಲೇ ಉಳಿದುಕೊಂಡಿದ್ದೇನೆ. ಈಗ 9 ಸಾವಿರ ಎಕರೆ ಭೂಸ್ವಾಧೀನ ಮಾಡಿ ಅದರಲ್ಲಿ ಇರುವ ಸರ್ಕಾರಿ ಭೂಮಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ನನಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಬರಲು ಸಾಧ್ಯವಾಗಿಲ್ಲ. ನಿಮ್ಮ ಪರವಾಗಿ ಧ್ವನಿ ಎತ್ತಲು ನಿಖಿಲ್ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಸ್ವಾಧೀನ ಮಾಡಲು ಬಿಡಲ್ಲ. ಪಾದಯಾತ್ರೆಗೆ ಅನಿವಾರ್ಯವಾದರೆ ನಾನೇ ಬರುತ್ತೇನೆ. ರೈತರ ಜೊತೆ ನಾವು ನಿಲ್ಲುತ್ತೇವೆ ಎಂದು ಎಚ್‌ಡಿಕೆ ಭರಸವೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ