ಪಿಎಸ್‌ಐ ಮರುಪರೀಕ್ಷೆಯಲ್ಲೂ ವ್ಯಾಪಕ ನಿಯಮ ಉಲ್ಲಂಘನೆ?: ಕೋರ್ಟ್‌ ಮೆಟ್ಟಿಲೇರಲು ಅಭ್ಯರ್ಥಿಗಳ ಸಿದ್ಧತೆ

By Kannadaprabha News  |  First Published Jun 16, 2024, 6:46 AM IST

ಪಿಎಸ್‌ಐ ಮರು ಪರೀಕ್ಷೆಯಲ್ಲಿ ಎರಡು ರೀತಿಯ ಪ್ರಶ್ನೆ ಪತ್ರಿಕೆಗಳಿದ್ದು, ಪತ್ರಿಕೆ-1 ಪ್ರಬಂಧ, ಭಾಷಾಂತರ ಮಾದರಿ, ಪತ್ರಿಕೆ-2 ಬಹುಆಯ್ಕೆ ಪಶ್ನೆಗಳ ರೂಪದಲ್ಲಿತ್ತು. ಇದರಲ್ಲಿ ಪತ್ರಿಕೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಿಯಮಗಳನ್ನು ವ್ಯಾಪಕವಾಗಿ ಗಾಳಿಗೆ ತೂರಿದೆ ಎಂಬ ಆರೋಪ ಹಲವು ಅಭ್ಯರ್ಥಿಗಳಿಂದ ಕೇಳಿಬಂದಿದೆ. 


ಆನಂದ್‌ ಎಂ. ಸೌದಿ

ಯಾದಗಿರಿ (ಜೂ.16): 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶದಂತೆ ಇದೇ ಜ.23ರಂದು ನಡೆದಿದ್ದ ಮರುಪರೀಕ್ಷೆ ಕೂಡ ಇದೀಗ ವಿವಾದಕ್ಕೆ ಗುರಿಯಾಗುವ ಲಕ್ಷಣ ಇದೆ. ಉತ್ತರ ಪತ್ರಿಕೆಯ ಮೌಲ್ಯಮಾಪನ ವೇಳೆ ನಿಯಮಗಳ ವ್ಯಾಪಕ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಇದನ್ನು ಪ್ರಶ್ನಿಸಿ ಇದೀಗ ನೊಂದ ಅಭ್ಯರ್ಥಿಗಳು ಸದ್ಯದಲ್ಲೇ ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

Latest Videos

undefined

ಪಿಎಸ್‌ಐ ಮರು ಪರೀಕ್ಷೆಯಲ್ಲಿ ಎರಡು ರೀತಿಯ ಪ್ರಶ್ನೆ ಪತ್ರಿಕೆಗಳಿದ್ದು, ಪತ್ರಿಕೆ-1 ಪ್ರಬಂಧ, ಭಾಷಾಂತರ ಮಾದರಿ, ಪತ್ರಿಕೆ-2 ಬಹುಆಯ್ಕೆ ಪಶ್ನೆಗಳ ರೂಪದಲ್ಲಿತ್ತು. ಇದರಲ್ಲಿ ಪತ್ರಿಕೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಿಯಮಗಳನ್ನು ವ್ಯಾಪಕವಾಗಿ ಗಾಳಿಗೆ ತೂರಿದೆ ಎಂಬ ಆರೋಪ ಹಲವು ಅಭ್ಯರ್ಥಿಗಳಿಂದ ಕೇಳಿಬಂದಿದೆ. ಇದರಿಂದಾಗಿ ಅರ್ಹ ನೂರಾರು ಅಭ್ಯರ್ಥಿಗಳಿಗೆ ನೇಮಕಾತಿಯಿಂದ ವಂಚಿತರಾಗುವ ಆತಂಕ ಎದುರಾಗಿದೆ.

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟು ದರ್ಶನ್ ಗ್ಯಾಂಗ್ ಟಾರ್ಚರ್‌!

ಪತ್ರಿಕೆ-1ರ ಉತ್ತರ ಪತ್ರಿಕೆಯ ಮೌಲ್ಯಮಾಪನ ಪರೀಕ್ಷೆಯ ನೋಟಿಫಿಕೇಶನ್‌ನಲ್ಲಿ ತಿಳಿಸಿರುವಂತೆ ದ್ವಿತೀಯ/ತೃತೀಯ ಮೌಲ್ಯಮಾಪನಕ್ಕೆ ಒಳಪಟ್ಟಿಲ್ಲ. ಜತೆಗೆ ಗಣಕೀಕೃತ ಕಾಪಿ ಮೌಲ್ಯಮಾಪನ ಬದಲು ನೇರವಾಗಿ ಉತ್ತರಪತ್ರಿಕೆಗಳನ್ನೇ ಮೌಲ್ಯಮಾಪಕರ ಕೈಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಕೆಇಎಯ ಈ ನಡೆ ಈ ಹಿಂದೆ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಿಂದಾಗಿ ಆತಂಕದಲ್ಲಿರುವ ಅನೇಕ ಅಭ್ಯರ್ಥಿಗಳಿಗೆ ತಾವು ಪಡೆದ ಅಂಕಗಳ ಕುರಿತು ಅನುಮಾನ ಮೂಡಿಸಿದೆ. ಈ ನಿಟ್ಟಿನಲ್ಲಿ ಪತ್ರಿಕೆ-1ರ ಮೌಲ್ಯಮಾಪನಕ್ಕೆ ಅನುಸರಿಸಿದ ವಿಧಾನದ ಬಗ್ಗೆ ತನಿಖೆ ನಡೆಸಬೇಕು ಎಂದು ವಿಜಯಪುರದ ರವೀಂದ್ರ ಎಂಬ ಅಭ್ಯರ್ಥಿ ದೂರಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಕೆಇಎ ಮೂಲಕ ಅವರೇ ಪಡೆದಿರುವ ದಾಖಲೆಗಳನ್ನಿಟ್ಟುಕೊಂಡು ಕಾನೂನು ಸಮರಕ್ಕೂ ಸಿದ್ಧತೆ ನಡೆಸಿದ್ದಾರೆ.

ಪತ್ರಿಕೆ-1ರ ಉತ್ತರ ಪತ್ರಿಕೆ ನಕಲು ಪ್ರತಿ ಹಾಗೂ ಮೌಲ್ಯಮಾಪನಕ್ಕೆ ಅನುಸರಿಸಿರುವ ನಿಯಮ ಕುರಿತು ಮಾಹಿತಿ ಕೋರಿದ್ದ ಅವರಿಗೆ, ‘ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲವಾದ್ದರಿಂದ ನಕಲು ಪ್ರತಿ ಕೊಡಲಾಗುವುದಿಲ್ಲ’ ಹಾಗೂ ‘ಗೌಪ್ಯ ಕಾರಣದಿಂದ ನಿಮಯಗಳ ಬಗ್ಗೆ ಹೇಳಲಾಗದು’ ಎಂದು ಕೆಇಎ ಉತ್ತರಿಸಿತ್ತು. ಇದರಿಂದ ಸಂತುಷ್ಟರಾಗದ ರವೀಂದ್ರ ಮೇಲ್ಮನವಿ ಸಲ್ಲಿಸಿದ್ದರು. ಆಗ ಮೌಲ್ಯಮಾಪನಕ್ಕೆ ಅನುಸರಿಸಿದ ನಿಯಮಗಳ ಕುರಿತು ಮಾತ್ರ ಕೆಇಎ ಮಾಹಿತಿ ನೀಡಿದೆ. ಅದರಂತೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪರೀಕ್ಷಾ ನಿಮಯಗಳನುಸಾರ ಆಗಿಲ್ಲವೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ, ನ್ಯಾಯ ಕೋರಿ ಕೋರ್ಟ್‌ ಕದ ತಟ್ಟಲಿದ್ದೇನೆ ಎಂದು ರವೀಂದ್ರ ''ಕನ್ನಡಪ್ರಭ''ಕ್ಕೆ ತಿಳಿಸಿದ್ದಾರೆ.

ಕೇವಲ 5 ದಿನದಲ್ಲಿ 35000 ಉತ್ತರ ಪತ್ರಿಕೆ: ಕೇವಲ ಐದು ದಿನಗಳಲ್ಲಿ (ಫೆ.5ರಿಂದ ಫೆ.9ರವರೆಗೆ) ಪಿಎಸ್‌ಐ ಪರೀಕ್ಷೆ ಬರೆದ 35,823 ಅಭ್ಯರ್ಥಿಗಳ ಪತ್ರಿಕೆ-1ನ್ನು (ಪ್ರಬಂಧ, ಭಾಷಾಂತರ) ಮೌಲ್ಯಮಾಪನ ಮಾಡಲಾಗಿದೆ. ಅಲ್ಲದೆ, ಕೇವಲ ಒಂದೇ ಬಾರಿ ಮಾತ್ರ ಮೌಲ್ಯಮಾಪನ ನಡೆಸಲಾಗಿದೆ ಎಂಬುದು ಅಭ್ಯರ್ಥಿಗಳ ಆರೋಪ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಕೆ.ಕೆ.ಮಿಶ್ರಾ ಕಮಿಟಿ ವರದಿಯನ್ನು ಮೌಲ್ಯಮಾಪನ ವೇಳೆ ಅನುಸರಿಸಿಲ್ಲ, ಪರೀಕ್ಷೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಈ ಹಿಂದೆ ನೀಡಿದ್ದ ಸೂಚನೆಯನ್ನೂ ಪಾಲಿಸಿಲ್ಲ. ವಿಷಯ ಪರಿಣತರನ್ನು ಮೌಲ್ಯಮಾಪನಕ್ಕೆ ಬಳಸಿಕೊಂಡಿಲ್ಲ. ಇದಕ್ಕೆ ಪೂರಕ ಸಾಕ್ಷಿಗಳನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇನೆ ಎಂದು ಅಭ್ಯರ್ಥಿ ರವೀಂದ್ರ ಹೇಳಿದ್ದಾರೆ.

ಕೀ ಉತ್ತರಗಳಲ್ಲೂ ದೋಷ: ಜ.30ರಂದು ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಕೆಇಎ ಬಿಡುಗಡೆ ಮಾಡಿದ್ದು, ಸಾಕಷ್ಟು ದೋಷಗಳು ಕಂಡು ಬಂದಿದ್ದವು. ಮಾ.1 ರಂದು ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಕೀ ಉತ್ತರಗಳಿಗೆ ಸಂಬಂಧಿಸಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಿದ್ದರೂ ಕೆಇಎ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ರವೀಂದ್ರ ದೂರಿದ್ದಾರೆ. ಮರು ಪರೀಕ್ಷೆ ನಡೆಸುವ ಹೊಣೆಯನ್ನು ಸರ್ಕಾರ ಈ ಬಾರಿ ಕೆಇಎಗೆ ನೀಡಿತ್ತಾದರೂ ಗೊಂದಲ ಕಂಡು ಬಂದಿರುವ ಕುರಿತು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನಡೆದಿದ್ದ ಪರೀಕ್ಷೆಯಲ್ಲೂ ಆರೋಪ: 545 ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಅಕ್ರಮ ಹಾಗೂ ಓಎಂಆರ್‌ ಶೀಟ್‌ ತಿರುಚುವಿಕೆ ಕುರಿತು ಸಿಐಡಿ ನಡೆಸಿದ್ದ ತನಿಖೆಯಲ್ಲಿ, ಪತ್ರಿಕೆ-1 (ಪ್ರಬಂಧ ಹಾಗೂ ಭಾಷಾಂತರ)ಯಲ್ಲೂ ಅಕ್ರಮ ನಡೆದಿರಬಹುದಾದ ಬಹುತೇಕ ಸಾಧ್ಯತೆಗಳ ಬಗ್ಗೆ ಚಾರ್ಜ್‌ಶೀಟಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಕೊನೆಗೂ ಪತ್ರಿಕೆ-1ರ ತನಿಖೆ ಆಗಿರಲಿಲ್ಲ. ಈಗ, ಮರು ಪರೀಕ್ಷೆಯಲ್ಲೂ ಪತ್ರಿಕೆ-1ರ ಮೌಲ್ಯಮಾಪನ ಕುರಿತು ಅನೇಕ ಆರೋಪಗಳು ಕೇಳಿಬಂದಿರುವುದು ನೊಂದ ಅಭ್ಯರ್ಥಿಗಳಿಗೆ ಆತಂಕ ಮೂಡಿಸಿದೆ.

ಪ್ರವಾಸೋದ್ಯಮಕ್ಕೆ ಹೊಸ ನೀತಿ, ಉದ್ದಿಮೆಗಳನ್ನು ಜಿಎಸ್‌ಟಿ ಕೊಲ್ಲುತ್ತಿದೆ: ಡಿಕೆಶಿ

ನಿಯಮ ಉಲ್ಲಂಘನೆ
1. ಗಣಕೀಕೃತ ಪ್ರತಿಗಳ ಬದಲು ನೇರವಾಗಿ ಉತ್ತರಪ್ರತಿ (ಹಾರ್ಡ್‌ ಕಾಪಿ)ಗಳ ಮೌಲ್ಯಮಾಪನ
2. ನಿಯಮದ ಪ್ರಕಾರ ಎರಡು ಸಲದ ಬದಲು ಒಂದೇ ಬಾರಿ ಉತ್ತರಪತ್ರಿಕೆಗಳ ಮೌಲ್ಯಮಾಪನ
3. ವಿಷಯ ಪರಿಣತರನ್ನು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜನೆ ಮಾಡದಿರುವುದು

click me!