
ಮಂಗಳೂರು: ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ಕರ್ನಾಟಕದ ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ತಂದಿರುವುದರಿಂದ ಕೇರಳವು ತನ್ನ ಯಾವುದೇ ನಿಲ್ದಾಣಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಬದಲಾವಣೆ ಸಂಪೂರ್ಣವಾಗಿ ಆಡಳಿತಾತ್ಮಕ ಸ್ವರೂಪದ್ದಾಗಿದ್ದು, ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದ ಮಂಗಳೂರು ಹಾಗೂ ಕರಾವಳಿ ಘಟ್ಟ ಪ್ರದೇಶಕ್ಕೆ ಒಂದೇ ಕೇಂದ್ರದಿಂದ ಕಾರ್ಯಾಚರಣಾ ನಿಯಂತ್ರಣ ದೊರೆಯಲಿದೆ. ಮಂಗಳೂರು ನಗರವು ಕರ್ನಾಟಕದಲ್ಲಿರುವುದರಿಂದ ಕೇರಳವು ಯಾವುದೇ ನಿಲ್ದಾಣವನ್ನು ಕಳೆದುಕೊಳ್ಳುವುದಿಲ್ಲ. ಪಾಲಕ್ಕಾಡ್ ವಿಭಾಗವು ಕೇರಳದ ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಮತ್ತು ತಿರುಸ್ಸುರ್ ಜಿಲ್ಲೆಗಳಲ್ಲಿರುವ ತನ್ನ ಸಂಪೂರ್ಣ ರೈಲ್ವೆ ಪ್ರದೇಶವನ್ನು ಮುಂದುವರಿಸಿಕೊಂಡಿರುತ್ತದೆ.
ರೈಲ್ವೆಯ ಯಾವುದೇ ವಿಭಾಗ ಅಥವಾ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಾಡುವ ಹೂಡಿಕೆಯು ಆ ವಿಭಾಗ ಅಥವಾ ವಲಯದ ಆದಾಯವನ್ನು ಆಧರಿಸಿರುವುದಿಲ್ಲ. ಬದಲಾಗಿ, ರೈಲ್ವೆ ಜಾಲದ ಅಗತ್ಯತೆ ಮತ್ತು ಕಾರ್ಯಾಚರಣಾ ಅವಶ್ಯಕತೆಗಳ ಆಧಾರದ ಮೇಲೆ ಹೂಡಿಕೆ ಮಾಡಲಾಗುತ್ತದೆ.
ಕಳೆದ ಒಂದು ದಶಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇರಳದ ರೈಲ್ವೆ ಜಾಲಕ್ಕೆ ನೀಡಲಾಗುತ್ತಿರುವ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕೇರಳದಲ್ಲಿ ರೈಲ್ವೆ ಜಾಲದ ಅಭಿವೃದ್ಧಿಗೆ ಸ್ಪಷ್ಟವಾದ ಕಾರ್ಯ ಯೋಜನೆಯೂ ರೂಪಿಸಲಾಗಿದೆ. ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಕೇರಳಕ್ಕೆ ನೀಡಲಾಗುವ ವಾರ್ಷಿಕ ಸರಾಸರಿ ಅನುದಾನವು ಯುಪಿಎ ಅವಧಿಯ 372 ಕೋಟಿ ರು.ಯಿಂದ 2026-27ನೇ ಸಾಲಿನಲ್ಲಿ 3,795 ಕೋಟಿ ರು.ಗೆ ಏರಿಕೆಯಾಗಿದೆ. ಅಂದರೆ, ಈ ಅನುದಾನವು ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ.
ಕಳೆದ 12 ವರ್ಷಗಳಲ್ಲಿ ಈ ಹೂಡಿಕೆಯು ಕೇರಳದಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಕಾರಣವಾಗಿದೆ. ಇದರಲ್ಲಿ ಆರು ದ್ವಿ ಜೋಡಿಮಾರ್ಗ/ಗೇಜ್ ಪರಿವರ್ತನಾ ಯೋಜನೆಗಳ ಪೂರ್ಣಗೊಳಿಸುವಿಕೆ, 131 ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ನಿರ್ಮಾಣ, ರೈಲ್ವೆ ಜಾಲದ ಶೇ.100ರಷ್ಟು ವಿದ್ಯುದೀಕರಣ ಹಾಗೂ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 16 ನಿಲ್ದಾಣಗಳ ಪುನರ್‌ಅಭಿವೃದ್ಧಿ ಸೇರಿವೆ.
ಕೇರಳದ ಜನತೆ ಈ ನಿರ್ಧಾರವನ್ನು ರೈಲು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವ ಮತ್ತು ರೈಲು ಸೇವೆಗಳನ್ನು ಇನ್ನಷ್ಟು ಸುಗಮಗೊಳಿಸುವ ದೃಷ್ಟಿಕೋನದಿಂದ ಪರಿಗಣಿಸಬೇಕೆಂದು ವಿನಂತಿಸುತ್ತೇವೆ ಎಂದು ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ