
-ಅಜಿತ್ ಶೆಟ್ಟಿ ಹೆರಂಜೆ
ಇಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಸಾರಿರುವ ಯುದ್ಧವು ಜಗತ್ತಿನ ಇಂಧನ ಪೂರೈಕೆಯನ್ನೇ ಹಿಂಡಿ ಹಿಪ್ಪೆ ಮಾಡಿದೆ. ತೈಲ ಬೆಲೆ ಏರಿಕೆ ಮತ್ತು ಪೂರೈಕೆಯ ವ್ಯತ್ಯಾಸದಿಂದ ಹಲವು ದೇಶಗಳ ಅರ್ಥ ವ್ಯವಸ್ಥೆ ಹಳಿ ತಪ್ಪಿದೆ. ಭಾರತದಲ್ಲೂ ಅಡುಗೆ ಅನಿಲದ ಪೂರೈಕೆ, ಪೆಟ್ರೋಲ್ ದರ ನಿಯಂತ್ರಿಸಿ ಗ್ರಾಹಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಒತ್ತಡದಲ್ಲಿ ಭಾರತ ಸರಕಾರವಿದೆ. ಇಂದು ಜಗತ್ತಿನ ಅತ್ಯಂತ ದೊಡ್ಡ ಕ್ರೂಡ್ ಆಯಿಲ್ ಉತ್ಪಾದಕ ರಾಷ್ಟ್ರವಾದ ಅಮೆರಿಕದಲ್ಲೇ ತೈಲ ಬೆಲೆ ಏರಿಕೆಯಾಗಿದೆ. ಆದರೆ ಇವೆಲ್ಲಕ್ಕಿಂತ ಭಿನ್ನವಾದ ಮತ್ತು ಅತ್ಯಂತ ಜಟಿಲವಾದ ಪರಿಸ್ಥಿತಿ ಪಾಕಿಸ್ತಾನದ್ದು.
ಪಾಕಿಸ್ತಾನಕ್ಕೆ ಕೇವಲ ಇಂಧನ ಅಥವಾ ಹಣದುಬ್ಬರದ ಸಮಸ್ಯೆಯಷ್ಟೇ ಅಲ್ಲ, ಇರಾನ್ ಸಂಘರ್ಷ ಮುಂದುವರಿದರೆ ಅದು ಆ ದೇಶದ ಅಸ್ತಿತ್ವಕ್ಕೇ ಮಾರಕವಾಗುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಮುಖ್ಯ ಕಾರಣ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆ ಕಾರ್ಯಾಚರಣೆಯ ನಂತರ ಪಾಕಿಸ್ತಾನ ತನ್ನನ್ನು ತಾನು ಜಾಗತಿಕ ವೇದಿಕೆಯಲ್ಲಿ ನಡೆಸಿಕೊಂಡ ರೀತಿ ಅದನ್ನು ಇಂತಹ ಅಡಕತ್ತರಿಯಲ್ಲಿ ಸಿಲುಕಿಸಿದೆ. ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದ ‘ಗೋಲ್ ಪೋಸ್ಟ್’ ಸಂಪೂರ್ಣವಾಗಿ ಬದಲಾಗಿದೆ. ದಶಕಗಳಿಂದ ಚೀನಾದ ಮಡಿಲಲ್ಲಿ ಕುಳಿತಿದ್ದ ಪಾಕಿಸ್ತಾನ, ಭಾರತದ ಈ ಆಕ್ರಮಣಕಾರಿ ದಾಳಿಯಿಂದ ಕಂಗೆಟ್ಟು ದಿಕ್ಕೇ ತೋಚದಂತಾಗಿ, ದಿಢೀರನೇ ಅಮೆರಿಕದ ಕಡೆಗೆ ಮುಖ ಮಾಡಿತು.
ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವೈಟ್ ಹೌಸಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ 2 ಗಂಟೆಗಳ ವಿಶೇಷ ಭೋಜನ ಕೂಟಕ್ಕೆ ಪ್ರತಿಫಲವಾಗಿ ಟ್ರಂಪ್ ಹೆಸರನ್ನು ನೋಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿದರು. ಇದು ಮುನೀರ್ರನ್ನು ಟ್ರಂಪ್ ಅವರ ‘ಫೇವರಿಟ್ ಫೀಲ್ಡ್ ಮಾರ್ಷಲ್’ ಮಾಡಿಸಿತು. ಆದರೆ ಭೂರಾಜಕಾರಣದಲ್ಲಿ ಪ್ರಸಿದ್ಧ ಮಾತೊಂದು ಚಾಲ್ತಿಯಲ್ಲಿದೆ ‘There are no Free Lunch’ ಅಂದರೆ ಇಲ್ಲಿ ಯಾರೇ ಉಪಕಾರ ಮಾಡಿದರೂ ಅದಕ್ಕೊಂದು ಬೆಲೆ ಇದ್ದೇ ಇದೆ. ಜೊತೆಗೆ ಅಮೆರಿಕದ ಬಗ್ಗೆ ಮತ್ತೊಂದು ಪ್ರಸಿದ್ಧವಾದ ಮಾತಿದೆ: ‘It may be dangerous to be America''s enemy, but to be America''s friend is fatal’. ಇದನ್ನು ಕಿಸಿಂಜರ್ ಅವರು 1968ರಲ್ಲಿ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಹೇಳಿದ್ದರು. ಯಾವಾಗ ಪಾಕಿಸ್ತಾನ ಚೀನಾವನ್ನು ಬಿಟ್ಟು ಅಮೆರಿಕದ ಅಂಗಳದಲ್ಲಿ ಬಂದು ನಿಂತಿತೋ ಅಮೆರಿಕ ಪಾಕಿಸ್ತಾನವನ್ನು ತನ್ನ ಲಾಭಕ್ಕೆ ಬಳಸಿಕೊಂಡಿತು.
ಡೊನಾಲ್ಡ್ ಟ್ರಂಪ್ ನುರಿತ ರಾಜಕಾರಣಿಯಲ್ಲ, ಆದರೆ ಪಳಗಿದ ವ್ಯಾಪಾರಿ. ಅದಕ್ಕೆ ಅವರ ಬಗ್ಗೆ ಇರುವ ಆರೋಪ ‘Transactional President’ ಎಂದು. ಎಲ್ಲರಿಗೂ ಡೀಲ್ ಮಾಡಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಬೆದರಿಕೆ ಒಡ್ಡುವ ಟ್ರಂಪ್ ಪಾಕಿಸ್ತಾನದ ವಿರುದ್ಧ ಅಕ್ಷರಶಃ ಅದನ್ನೇ ಮಾಡಿದರು, ಯುದ್ಧಗ್ರಸ್ಥ ಗಾಜಾದಲ್ಲಿ ಇಸ್ರೇಲಿನ ಪರವಾಗಿ ಪಾಕಿಸ್ತಾನಿ ಸೈನಿಕರನ್ನು ಶಾಂತಿ ಪಾಲನೆಗೆ ನಿಯೋಜಿಸುವಂತೆ ಒತ್ತಡ, ಬಿಟ್ ವ್ಯವಹಾರದ ಜೊತೆಗೆ ಪಾಕಿಸ್ತಾನದ ವಾಯು ನೆಲೆಗಳನ್ನು ಪಡೆಯಲು ಟ್ರಂಪ್ ಸಫಲರಾದರು. ಇಲ್ಲಿ ಪಾಕಿಸ್ತಾನ ಅಡಕತ್ತರಿಯಲ್ಲಿ ಸಿಕ್ಕಿತು. ಪಾಕಿಸ್ತಾನ ಐತಿಹಾಸಿಕವಾಗಿ, ಸೈದ್ಧಾಂತಿಕವಾಗಿ, ಮತೀಯವಾಗಿ ಇಸ್ರೇಲ್ ವಿರೋಧಿ. ಈ ನಿರ್ಧಾರ ದೇಶದ ಒಳಗಿನ ಕಟ್ಟರ್ ಮೂಲಭೂತವಾದಿಗಳು ಹಾಗೂ ಸೈನ್ಯದ ಒಳಗೂ ವಿರೋಧವನ್ನು ಫೀಲ್ಡ್ ಮಾರ್ಷಲ್ ಆಸಿಫ್ ಮುನೀರ್ ಎದುರಿಸುವಂತಾಯಿತು.
ಯೆಮೆನ್ ಸಂಘರ್ಷದ ಹಿನ್ನೆಲೆಯಲ್ಲಿ ಯುಎಇ ಜೊತೆಗಿನ ಪಾಕಿಸ್ತಾನದ ರಕ್ಷಣಾ ಒಪ್ಪಂದವು ಈಗ ‘ನುಂಗಲಾರದ ತುತ್ತಾಗಿ’ ಪರಿಣಮಿಸಿದೆ. ಆರ್ಥಿಕ ಲಾಭದ ದೃಷ್ಟಿಯಿಂದ ಮಾಡಿಕೊಂಡ ಈ ಒಪ್ಪಂದಗಳು ಇಂದು ಪಾಕಿಸ್ತಾನಕ್ಕೆ ಮುಳುವಾಗಿದೆ. ಯೆಮೆನ್ ಯುದ್ಧದ ಆರಂಭದಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಒಂದಾಗಿದ್ದರೂ, ಕಾಲಕ್ರಮೇಣ ಅವರ ಹಿತಾಸಕ್ತಿಗಳು ಭಿನ್ನವಾದವು. ಸೌದಿ ಅಲ್ಲಿನ ಅಧಿಕೃತ ಸರ್ಕಾರವನ್ನು ಬೆಂಬಲಿಸಿದರೆ, ಯುಎಇ ಪ್ರತ್ಯೇಕತಾವಾದಿ ಗುಂಪುಗಳಿಗೆ ಬೆಂಬಲ ನೀಡಿತು. ಈ ಇಬ್ಬರು ಮಿತ್ರರ ನಡುವಿನ ಶೀತಲ ಸಮರವು ಪಾಕಿಸ್ತಾನಿ ಸೇನೆಯನ್ನು ಸಂಕಷ್ಟಕ್ಕೆ ನೂಕಿದೆ. ಮುಖ್ಯವಾಗಿ, ಪಾಕಿಸ್ತಾನದ ಆರ್ಥಿಕ ಬೆನ್ನೆಲುಬಾಗಿರುವ ಸೌದಿ ಅರೇಬಿಯಾವನ್ನು ಎದುರು ಹಾಕಿಕೊಳ್ಳುವುದು ಇಸ್ಲಾಮಾಬಾದಿಗೆ ಘಾತಕವಾದುದು.
ಪಾಕಿಸ್ತಾನವು 2025ರ ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾದೊಂದಿಗೆ ಸ್ಟ್ರಾಟೆಜಿಕ್ ಮ್ಯೂಚುಯಲ್ ಡಿಫೆನ್ಸ್ ಅಗ್ರಿಮೆಂಟ್ (SMDA) ಮಾಡಿಕೊಂಡಿತು. ಈ ಒಪ್ಪಂದದ ಪ್ರಕಾರ, ಪರಸ್ಪರ ದೇಶಗಳ ಮೇಲಿನ ಯಾವುದೇ ದಾಳಿಯನ್ನು ತಮ್ಮ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಸೌದಿ ಮತ್ತು ಯುಎಇ ಮೇಲೆ ಇರಾನ್ ದಾಳಿ ತೀವ್ರಗೊಳಿಸಿರುವುದರಿಂದ, ಈ ‘ಒಪ್ಪಂದದಂತೆ ಪಾಕಿಸ್ತಾನಕ್ಕೆ ಈ ಯುದ್ಧದಲ್ಲಿ ಭಾಗಿ ಆಗಬೇಕಾದ ಅನಿವಾರ್ಯತೆ’ ಸೃಷ್ಟಿಸಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯುಎಇ ಮೇಲೆ ದಾಳಿ ನಡೆಸಿದಾಗ, ಅಲ್ಲಿನ ಪಾಕಿಸ್ತಾನಿ ಸೈನಿಕರು ಅನಿವಾರ್ಯವಾಗಿ ಇರಾನ್ ಪರ ಗುಂಪುಗಳ ವಿರುದ್ಧ ಹೋರಾಡಬೇಕಾಗುತ್ತದೆ, ಇದು ಪರೋಕ್ಷವಾಗಿ ಇರಾನ್ ಜೊತೆಗಿನ ನೇರ ಸಂಘರ್ಷದ ಭಯವೊಡ್ಡಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇರಾನಿನೊಂದಿಗೆ ಪಾಕಿಸ್ತಾನವು 900 ಕಿ.ಮೀ. ಉದ್ದದ ಗಡಿ ಹೊಂದಿದ್ದು, ದುರಂತವೆಂದರೆ ಈ ಭಾಗದಲ್ಲಿ ಪಾಕಿಸ್ತಾನದ ಸೈನ್ಯಕ್ಕೆ ಹಿಡಿತವಿಲ್ಲ. ಗಡಿಯಲ್ಲಿ ಬಲೂಚಿ ಸ್ವಾತಂತ್ರ್ಯ ಹೋರಾಟಗಾರರ ಪ್ರಭಾವವೇ ಹೆಚ್ಚಿದೆ. ಹೀಗಾಗಿ ಈಗ ಯುದ್ಧಕ್ಕೆ ಇಳಿದರೆ ಈ ಭಾಗದಲ್ಲಿ ಸ್ಥಳೀಯರೇ ಇರಾನಿನ ಬೆಂಬಲವಾಗಿ ನಿಂತರೂ ಆಶ್ಚರ್ಯವಿಲ್ಲ.
ಆಪರೇಶನ್ ಸಿಂಧೂರ್ ನಂತರ ಆಸಿಫ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡಲಾಯಿತು. ಸೋತ ಯುದ್ಧವೊಂದನ್ನು ಗೆಲುವು ಎಂದು ತನ್ನ ದೇಶದ ಜನರಿಗೆ ಹೇಳಲು ಇದನ್ನು ಮಾಡಿದ ಪಾಕಿಸ್ತಾನ, ತನ್ನ ಸಂವಿಧಾನದಲ್ಲಿ 27ನೇ ತಿದ್ದುಪಡಿ ಮಾಡಿ ಮುನೀರ್‌ಗೆ ಸೇನಾ ಪಡೆಗಳ ಸರ್ವೋಚ್ಛ ಅಧಿಕಾರ ನೀಡಿತು. ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಸ್ಟ್ರಾಟೆಜಿಕ್ ಪ್ಲಾನ್ಸ್ ಡಿವಿಶನ್ ಕೂಡ ಅವರ ಹಿಡಿತಕ್ಕೆ ಕೊಟ್ಟಿತು. ಇದು ಪಾಕಿಸ್ತಾನದ ಸೈನ್ಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿತು. ಮುನೀರ್ ಭಡ್ತಿಗೆ ಪಾಕ್ ಸೈನ್ಯದ ಹಿರಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ISI ಮತ್ತು ಸೇನೆ ನಡುವಿನ ತಿಕ್ಕಾಟ, ಮಾಜಿ ಪ್ರಧಾನಿ ಇಮ್ರಾನ್ ಬೆಂಬಲಿಗರ ಅಸಮಾಧಾನ, ಪಾಷ್ತೂನ್- ಬಲೂಚ್- ಸಿಂಧ್ ಒಳಗಿನ ಬಂಡಾಯ - ಇವೆಲ್ಲ ಸೇರಿ ಮುನೀರ್‌ಗೆ ಭೀತಿ ಎದುರಾಯಿತು.
ಆಂತರಿಕವಾಗಿ ಛಿದ್ರವಾಗಿರುವ ಪಾಕಿಸ್ತಾನ ಈಗ ಸೌದಿ ಮತ್ತು ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್ ಮೇಲೆ ಯುದ್ಧಕ್ಕೆ ಹೋದರೆ ದೇಶದಲ್ಲಿ ಎಂದೂ ಕಾಣದ ಆಂತರಿಕ ದಂಗೆ ಏಳುವ ಸಾಧ್ಯತೆ ಹೆಚ್ಚಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್ ಯುದ್ಧದ ಬಗ್ಗೆ ಚರ್ಚೆ ಮಾಡಲು ಪಾಕಿಸ್ತಾನಿ ಸೈನ್ಯ ಕರೆದ ಶಿಯಾ ಮುಖಂಡರ ಸಭೆಯಲ್ಲಿ ಪಾಕ್ ಸೈನ್ಯಕ್ಕೆ ಛೀಮಾರಿ ಬಿದ್ದಿತ್ತು, ಈಗ ಯುಎಇ ಒತ್ತಡಕ್ಕೆ ಮಣಿದು ಪಾಕಿಸ್ತಾನಿ ಸೈನ್ಯ ಇರಾನ್ ವಿರುದ್ಧ ಯುದ್ಧಕ್ಕೆ ಹೋಗದಿರಲು ಸಬೂಬು ಹುಡುಕುತ್ತಿದೆ, ಅದಕ್ಕೆ ಅಫ್ಘಾನಿಸ್ತಾನದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಹೋಗುತ್ತಿದೆ. ಭಾರತ ತನ್ನ ಮೇಲೆ ಹೇಗಾದರೂ ಸಣ್ಣ ಪ್ರಮಾಣದ ದಾಳಿ ಮಾಡಲಿ ಎಂದು ಕಾಯುತ್ತಿದೆ. ಇದಕ್ಕೆ ಕಾರಣವೂ ಇದೆ, ಭಾರತದ ವಿರುದ್ಧ ದ್ವೇಷ ಒಂದೇ ಇವತ್ತಿಗೂ ಪಾಕಿಸ್ತಾನವನ್ನು ಒಗ್ಗಟ್ಟಿನಲ್ಲಿ ಇಟ್ಟಿರೋದು. ಇದನ್ನು ಅರಿತಿರುವ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಈ ಅವಕಾಶ ಕೊಡುತ್ತಿಲ್ಲ. ಕಟ್ಟಕಡೆಗೆ ಇರಾನ್ ಜೊತೆ ಸಂಘರ್ಷಕ್ಕೆ ಇಳಿದರೆ ದೇಶದ ಉಳಿದೆರಡು ಗಡಿಗಳನ್ನು ಶತ್ರುಗಳಿಂದ ಕಾಪಾಡಿಕೊಳ್ಳುವಷ್ಟು ಸೈನ್ಯ ಸಾಮರ್ಥ್ಯ ಪಾಕಿಸ್ತಾನದ ಬಳಿ ಈಗ ಉಳಿದಿಲ್ಲ. ಆಪರೇಷನ್ ಸಿಂಧೂರದಿಂದ ಹಾನಿಗೆ ಒಳಗಾದ ಪಾಕಿಸ್ತಾನದ ಮಿಲಿಟರಿ ಸೌಕರ್ಯಗಳು ಇನ್ನೂ ರಿಪೇರಿ ಆಗಿಲ್ಲ. ಈ ಬಾರಿ ಹಿಂದೆ ಸಹಾಯ ಮಾಡಿದ ಚೀನಾ ಕೂಡ ಪಾಕಿಸ್ತಾನದ ಸಹಾಯಕ್ಕೆ ಬಾರದು. ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನಕ್ಕೆ ಉಳಿದಿರುವ ಅತ್ಯಂತ ಕೊನೆಯ ಮಾರ್ಗ ಇರಾನಿನ ಯುದ್ಧ ವಿರಾಮವೊಂದೇ!!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ