
ಬೆಂಗಳೂರು: ‘ರಾಜ್ಯದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ(ಜಿಇಆರ್) ದಕ್ಷಿಣದ ರಾಜ್ಯಗಳಿಗಿಂತ ಕಡಿಮೆ ಇದೆ. ರಾಜ್ಯದಲ್ಲಿ ಹಿಂದೆ ಇದ್ದಂತೆ ಈಗ ಯಾಕೆ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ವಿವಿಗಳನ್ನು ಸರಿಪಡಿಸಿ ಎಂದ ಕೂಡಲೇ ಸಿಬ್ಬಂದಿಯಿಲ್ಲ ಎನ್ನುತ್ತೀರಿ. ಅತಿಥಿ ಅಧ್ಯಾಪಕರು ಸಿಬ್ಬಂದಿಯಲ್ಲವೆ? ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಕಾಯಂ ಅಧ್ಯಾಪಕರ ಸಂಖ್ಯೆ ಎಷ್ಟು? ಸಂದರ್ಶಕ ಪ್ರಾಧ್ಯಾಪಕರು ಅಲ್ಲಿನ ಶೈಕ್ಷಣಿಕ ವಾತಾವರಣವನ್ನು ಉತ್ತಮಗೊಳಿಸುತ್ತಿದ್ದಾರೆ. ಅದು ಇಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?’
ಇದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ನಡೆಸಿದ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಲಪತಿಗಳಿಗೆ ಮಾಡಿದ ಪಾಠ ಹಾಗೂ ರಾಜ್ಯದಲ್ಲಿ ಉನ್ನತ ಶಿಕ್ಷಣದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂದು ಚಾಟಿ ಬೀಸಿದ ಪರಿ.
ಅಷ್ಟೇ ಅಲ್ಲ, ವಿಶ್ವವಿದ್ಯಾಲಯಗಳು ಕೇವಲ ಸರ್ಕಾರಿ ನಿಧಿ ಅವಲಂಬಿಸದೆ, ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಗಳು ಮತ್ತು ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್ ಮೂಲಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ ಮುಖ್ಯಮಂತ್ರಿ ಅವರು, ಕರ್ನಾಟಕದಲ್ಲಿ 94 ವಿವಿಗಳಿವೆ. ಇವುಗಳಲ್ಲಿ 32 ಸಾರ್ವಜನಿಕ ವಿವಿಗಳು. ಸುಮಾರು 27.40 ಲಕ್ಷ ಮಕ್ಕಳು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಇದರಲ್ಲಿ ಸರ್ಕಾರಿ ವಿವಿಗಳಲ್ಲಿ 14.60 ಲಕ್ಷ ಸಂಖ್ಯೆಯ ಮಕ್ಕಳು ಕಲಿಯುತ್ತಿದ್ದಾರೆ. ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಒಟ್ಟು ದಾಖಲಾತಿ ಅನುಪಾತ(ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೋ) ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ. 2023-24ರ ಪ್ರಕಾರ ರಾಜ್ಯದ ಪ್ರತಿ 100 ಮಕ್ಕಳಲ್ಲಿ 39.6 ರಷ್ಟು ಮಕ್ಕಳು ಮಾತ್ರ ಉನ್ನತ ಶಿಕ್ಷಣಕ್ಕೆ ಬರುತ್ತಿದ್ದಾರೆ. ಇದನ್ನು 2030ರ ವೇಳೆಗೆ ಶೇ.50ಕ್ಕೆ ತಲುಪಿಸುವ ಗುರಿ ವಿಶ್ವವಿದ್ಯಾಲಯಗಳ ಮೇಲಿದೆ ಎಂದರು.
ವಿಶ್ವವಿದ್ಯಾಲಯಗಳನ್ನು ಸರಿಪಡಿಸಿ ಎಂದ ಕೂಡಲೇ ಸಿಬ್ಬಂದಿಯಿಲ್ಲ ಎನ್ನುತ್ತೀರಿ. ಅತಿಥಿ ಅಧ್ಯಾಪಕರು ಸಿಬ್ಬಂದಿಯಲ್ಲವೇ? ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಕಾಯಂ ಅಧ್ಯಾಪಕರ ಸಂಖ್ಯೆ ಎಷ್ಟು? ಸಂದರ್ಶಕ ಪ್ರಾಧ್ಯಾಪಕರು ಅಲ್ಲಿನ ಶೈಕ್ಷಣಿಕ ವಾತಾವರಣವನ್ನು ಉತ್ತಮಗೊಳಿಸುತ್ತಿದ್ದಾರೆ. ಅದು ಇಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಸಭೆಯಲ್ಲಿ ಮುಖ್ಯಮಂತ್ರಿ ಅವರು ಕುಲಪತಿಗಳನ್ನು ಪ್ರಶ್ನಿಸಿದ್ದಾರೆ.
ಇದು ಕೃತಕ ಬುದ್ಧಿಮತ್ತೆಯ (ಎಐ) ಯುಗ. ನಮ್ಮ ವಿದ್ಯಾರ್ಥಿಗಳು ಎಐ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಸಾಧಿಸಲು ಸರ್ಕಾರ ಪ್ರಮುಖ ಕಾರ್ಪೊರೆಟ್ ಕೈಗಾರಿಕೆಗಳ ಸಹಯೋಗದೊಂದಿಗೆಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಎಐ ಮತ್ತು ಐಐಒಟಿ ಸೌಲಭ್ಯಗಳನ್ನು ಹೊಂದಿರುವ ಅನೇಕ ಕೌಶಲ್ಯ ಅಭಿವೃದ್ಧಿ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್‌ಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಪಠ್ಯಕ್ರಮವು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿರುವಂತೆ ರೂಪಿಸುವುದು ವಿಶ್ವವಿದ್ಯಾಲಯಗಳ ಜವಾಬ್ದಾರಿ. ಕುಲಪತಿಗಳು ಶೈಕ್ಷಣಿಕ ಶ್ರೇಷ್ಠತೆ, ಪಾರದರ್ಶಕ ಆಡಳಿತ, ಪಠ್ಯಕ್ರಮದ ನಾವೀನ್ಯತೆ, ವಿದ್ಯಾರ್ಥಿ ಕಲ್ಯಾಣ ಮತ್ತು ನೈತಿಕ ಅಭ್ಯಾಸಗಳೆಂಬ ಐದು ಪ್ರಮುಖ ಆದ್ಯತೆಗಳ ಮೇಲೆ ಗಮನ ಹರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಸಭೆಯಲ್ಲಿ ರಾಜ್ಯದ ಎಲ್ಲ ವಿವಿಗಳ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೆ ಮೈಸೂರು, ಧಾರವಾಡ, ಬೆಂಗಳೂರು, ಗುಲ್ಬರ್ಗಾ ವಿಶ್ವವಿದ್ಯಾಲಯಗಳು ಅಸಂಖ್ಯಾತ ವಿದ್ವಾಂಸರನ್ನು ಸೃಷ್ಟಿಸಿದ್ದವು. ಅತ್ಯಂತ ಕಡಿಮೆ ಸಂಪನ್ಮೂಲ ಹೊಂದಿದ್ದರೂ ಈ ವಿವಿಗಳು ಹೆಸರಿಗೆ ತಕ್ಕ ಹಾಗೆ ಜಗತ್ತಿನ ವಿದ್ವತ್ ನಕ್ಷೆಯಲ್ಲಿ ಹೆಸರಾಗಿದ್ದವು. ಅಂಥ ವ್ಯವಸ್ಥೆಯಲ್ಲಿ ನಾವು, ನೀವು ಓದಿ ಬಂದಿದ್ದೇವೆ. ಆದರೆ ಈಗ ಯಾಕೆ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ಕಟ್ಟಲಾಗುತ್ತಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಲಪತಿಗಳನ್ನು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ