
ಸುವರ್ಣ ವಿಧಾನಸಭೆ(ಡಿ.19): ಬೆಂಗಳೂರು ನಗರಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವಾಗ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾಕೆ ಮಾಡುತಿದ್ದೀರಿ? ಯಾರ ಪ್ರೇರಣೆಯಿಂದ ಮಾಡಲು ಹೊರಟಿದ್ದೀರಿ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
ಉತ್ತರ ಕರ್ನಾಟಕ ಭಾಗದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬೆಂಗಳೂರಿಗೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಬದಲು ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿ ಎಂದು ಆಗ್ರಹಿಸಿದರು.
ಹಾಸನ ಏರ್ಪೋರ್ಟ್ ಕೆಲಸ ಬೇಗ ಮುಗಿಸಿ: ಕೇಂದ್ರಕ್ಕೆ ದೇವೇಗೌಡ ಮನವಿ
ವಿಜಯಪುರ ವಿಮಾನ ನಿಲ್ದಾಣ ವಿಸ್ತರಣೆಗೆ 1870 ಎಕರೆ ಸ್ವಾಧೀನಕ್ಕೆ ನೋಟಿಸ್ ನೀಡಿ 16 ವರ್ಷವಾದರೂ ಏನೂ ಮಾಡಿಲ್ಲ. ಬೀದರ್ ವಿಮಾನ ನಿಲ್ದಾಣ ಮುಚ್ಚಿ .ಇದೀಗ ಬೆಂಗಳೂರಿನಲ್ಲಿ ಮಾತ್ರ 2ನೇ ನಿಲ್ದಾಣಕ್ಕೆ ಮುಂದಾಗಿದ್ದೀರಿ ಎಂದು ಕಿಡಿಕಾರಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್, 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಂದಿನ ಬೇಡಿಕೆ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಲಾಗುತ್ತಿದೆ.2035 ರವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ 100 ಮಿಲಿಯನ್ ಪ್ರಯಾಣಿಕರ ಒತ್ತಡ ಸೃಷ್ಟಿಯಾಗಲಿದೆ. 2033ರ ವೇಳೆಗೆ 85 ದಶಲಕ್ಷದಷ್ಟಾಗಲಿದೆ. ಈ ಒತ್ತಡವನ್ನು ತಗ್ಗಿಸಲು ಎರಡನೇ ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದೇವೆ ಎಂದು ಸಮರ್ಥಿಸಿಕೊಂಡರು.
ಬೆಂಗ್ಳೂರಲ್ಲಿ ಕ್ವಿನ್, ಸ್ವಿಫ್ಟ್ ಸಿಟಿ: ಉತ್ತರ ಕರ್ನಾಟಕಕ್ಕೆ ಸೋಡಾ ಚೀಟಿ!
ಹುಬ್ಬಳ್ಳಿ: ಇದೇ ವರ್ಷದಲ್ಲಿ ಸರ್ಕಾರದಿಂದ ಬೆಂಗಳೂರು ಭಾಗಕ್ಕೆ ಬಂಪರ್ ಆಫರ್ ಗಳ ಸುರಿಮಳೆ, ಮೊದಲು ಕ್ವೀನ್ ಸಿಟಿ, ಆಮೇಲೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇತ್ತೀಚಿಗಷ್ಟೇ ತುಮಕೂರು, ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಚಾಲನೆ, ಇನ್ನು ಶನಿವಾರವಷ್ಟೇ ಬೆಂಗಳೂರಿಗೆ ಘೋಷಣೆಯಾಗಿದೆ ಸ್ವಿಫ್ಟ್ ಸಿಟಿ. ಆದರೆ, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡಕ್ಕೆ ಮತ್ತೆ ಸೋಡಾ ಚೀಟಿ!
ಹೌದು, ಕಳೆದ 3-4 ತಿಂಗಳ ಹಿಂದಿನ ಮಾತು. ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಕ್ವಿನ್ ಸಿಟಿ (Knowledge, Wellbeing, and Innovation City- KWIN City ) ಘೋಷಿಸಲಾಗಿದೆ. ಸುಸ್ಥಿರತೆ, ಮನೆ, ಕೆಲಸದ ಸ್ಥಳ ಮತ್ತು ಅತ್ಯಾಧುನಿಕ ನಗರ ಸೇರಿದಂತೆ ಬದುಕಿನ ವಿವಿಧ ಸಂಗತಿಗಳಲ್ಲಿ ತಂತ್ರಜ್ಞಾನದ ನೆರವಿನಿಂದ ದಕ್ಷತೆ ಹಾಗೂ ಅನುಕೂಲತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸುಧಾರಿಸುವ ʼಸ್ಮಾರ್ಟ್ ಲಿವಿಂಗ್ʼ ಪರಿಕಲ್ಪನೆ ಕಾರ್ಯರೂಪಕ್ಕೆ ತರಲು ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ಈ ಸಿಟಿ ಅಸ್ತಿತ್ವಕ್ಕೆ ತರಲಾಗುತ್ತಿದೆ.
ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಮೈಸೂರು, ತುಮಕೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ಕಾಮಗಾರಿ ಆರಂಭಿಸಲಾಗಿದೆ. ತುಮಕೂರಿನಲ್ಲಿ ಬರೋಬ್ಬರಿ ₹150 ಕೋಟಿ ವೆಚ್ಚದ ಸುಸಜ್ಜಿತ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದೇ ವೇಳೆ, ಮೈಸೂರು ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಚಾಲನೆ ದೊರೆತಿದೆ.
ಬೆಂಗಳೂರು: ಟ್ರಾಫಿಕ್ ತಪ್ಪಿಸಲು ಸಿಗ್ನಲ್ ಫ್ರೀ ಏರ್ಪೋರ್ಟ್ ರಸ್ತೆಗೆ ಯೋಜನೆ
ಉಕಕ್ಕೆ ಸೋಡಾ ಚೀಟಿ:
ಉತ್ತರ ಕರ್ನಾಟಕ ಭಾಗಕ್ಕೆ ಇಂಥ ಒಂದೇ ಒಂದು ಯೋಜನೆ ಇಲ್ಲಿ ವರೆಗೆ ಘೋಷಣೆಯಾಗಿಲ್ಲ. ಘೋಷಣೆ ಹೋಗಲಿ ಆ ಕುರಿತು ಚರ್ಚೆಯೂ ಸರ್ಕಾರದ ಮಟ್ಟದಲ್ಲಿ ಇಲ್ಲ ಅನಿಸುತ್ತಿದೆ. ಇದರಿಂದ ಬೆಂಗಳೂರು ಭಾಗಕ್ಕೆ ಬೆಣ್ಣೆ ಉತ್ತರ ಕರ್ನಾಟಕಕ್ಕೆ ಸುಣ್ಣ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಸಚಿವ ಎಂ.ಬಿ. ಪಾಟೀಲ ಕರ್ನಾಟಕವನ್ನು ಸಿಲಿಕಾನ್ ರಾಜ್ಯ ಮಾಡುವುದಾಗಿ ಹೇಳಿದ್ದಾರೆ. ಆದರೆ, ಬೆಂಗಳೂರನ್ನೇ ಮುಖ್ಯವಾಗಿಟ್ಟುಕೊಂಡು ಎಲ್ಲ ರೀತಿಯ ಅಭಿವೃದ್ಧಿ ಮಾಡಿರೆ ಸಮಗ್ರ ಕರ್ನಾಟಕ ಅಭಿವೃದ್ಧಿ ಸಂಕಲ್ಪ ಸಾಕಾರವಾಗುವುದು ಯಾವಾಗ?. ಉತ್ತರ ಕರ್ನಾಟಕ ಭಾಗದವರೇ ಆದ ಸಚಿವ ಎಂ.ಬಿ. ಪಾಟೀಲ ಅವರಿಗೆ ಇಂತಹ ಕ್ವೀನ್ ಸಿಟಿ, ಸ್ವಿಫ್ಟ್ ಸಿಟಿ ಘೋಷಣೆ ಮಾಡುವ ಮೊದಲು ಕರ್ನಾಟಕದಲ್ಲಿ ಹಿಂದುಳಿದ ಉತ್ತರ ಕರ್ನಾಟಕ ಎನ್ನುವ ಒಂದು ಭಾಗವಿದೆ. ಅಲ್ಲಿಗೂ ಸ್ವಲ್ಪ ಪಾಲು ಕೊಡಬೇಕು ಎನ್ನುವ ಆಲೋಚನೆ ಬರಲಿಲ್ಲವೇ? ದೇವರೇ ಬಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ