India Gate: 2024ಕ್ಕೆ ನರೇಂದ್ರ ಮೋದಿ ಎದುರು ಯಾರು?

By Prashant Natu  |  First Published Sep 9, 2022, 8:55 AM IST
  • ಪಾದಯಾತ್ರೆ ಮೂಲಕ ಪಕ್ಷ ಸಂಘಟಿಸುತ್ತಿರುವ ರಾಹುಲ್‌
  • ಹಳೆಯ ಜನತಾ ಪರಿವಾರ ಒಗ್ಗೂಡಿಸುತ್ತಿರುವ ನಿತೀಶ್‌
  • 2024ಕ್ಕೆ ಮೋದಿ ಎದುರು ಯಾರು?

India Gate Column by Prashant Natu

ಕಳೆದ 8 ವರ್ಷಗಳಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ ಅತೀ ಹೆಚ್ಚು ಚರ್ಚೆಯಾದ ಪ್ರಶ್ನೆ ಮೋದಿ ಎದುರು ಯಾರು ಎಂದು. ವಿಧಾನಸಭಾ ಚುನಾವಣೆಗಳಲ್ಲಿ ಮಮತಾ, ನಿತೀಶ್‌ಕುಮಾರ್‌, ನವೀನ್‌ ಪಟ್ನಾಯಕ್‌, ಅರವಿಂದ ಕೇಜ್ರಿವಾಲ್‌ ತಮ್ಮ ರಾಜ್ಯಗಳಲ್ಲಿ ಮೋದಿಯನ್ನು ಕೂಡ ಸೋಲಿಸಬಹುದು ಎಂದು ಬಾರಿ ಬಾರಿ ತೋರಿಸಿದ್ದಾರಾದರೂ ಲೋಕಸಭಾ ಚುನಾವಣೆ ಬಂದಾಗ ಮೋದಿ ವಿರುದ್ಧ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ವಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗೆ ನೋಡಿದರೆ ಬಿಜೆಪಿ ಮತ್ತು ಮೋದಿಯ ದೊಡ್ಡ ಸಾಮರ್ಥ್ಯ ಎಂದರೆ ದುರ್ಬಲ ಕಾಂಗ್ರೆಸ್‌ ಪಕ್ಷ ಮತ್ತು ಒಡೆದ ವಿಪಕ್ಷಗಳ ಏಕತೆ. ಆದರೆ 2024ರ ಲೋಕಸಭಾ ಚುನಾವಣೆಗೆ 18 ತಿಂಗಳು ಇರುವಾಗ ರಾಹುಲ್‌ ಗಾಂಧಿ ಪುನರಪಿ ಪಾದಯಾತ್ರೆಗೆ ಹೊರಟಿದ್ದು, ಇದು ಒಂದು ರೀತಿ ಮೋದಿ ವಿರುದ್ಧದ ಗುಂಪಿಗೆ ನಾಯಕ ನಾನೇ ಎಂದು ತೋರಿಸುವ ಕೊನೆಯ ಪ್ರಯತ್ನ. ಇನ್ನು ದಿಲ್ಲಿ ಮಹತ್ವಾಕಾಂಕ್ಷೆ ಕಾರಣದಿಂದಲೇ ನಿತೀಶ್‌ಕುಮಾರ್‌ ಅರ್ಧ ದಾರಿಯಲ್ಲಿ ಬಿಜೆಪಿಗೆ ಸೋಡಾಚೀಟಿ ಕೊಟ್ಟು ಯಾದವರ ಸಖ್ಯ ಮಾಡಿದ್ದು, ದಿಲ್ಲಿಗೆ ಬಂದು ಹಳೆ ಜನತಾ ಪರಿವಾರದವರನ್ನು ಗುಡ್ಡೆ ಹಾಕಿ ಮೋದಿಗೆ ಠಕ್ಕರ್‌ ಕೊಡುವ ಕೊನೆಯ ಯತ್ನ ಮಾಡುತ್ತಿದ್ದಾರೆ.

Tap to resize

Latest Videos

ಇನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಬಿಟ್ಟರೆ ದಿಲ್ಲಿ ಮತ್ತು ಪಂಜಾಬ್‌ ಹೀಗೆ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಆಮ್‌ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್‌ ಮೋದಿ ಮತ್ತು ಅಮಿತ್‌ ಶಾರನ್ನು ಮಣಿಸಬೇಕಾದರೆ ಮೊದಲು ಗುಜರಾತ್‌ನಲ್ಲಿ ಮೋದಿ ಪರಿವಾರವನ್ನು ದುರ್ಬಲ ಮಾಡಬೇಕು ಎಂದು ವಾರಕ್ಕೊಮ್ಮೆ ಗುಜರಾತ್‌ಗೆ ಹೋಗಿ ಬರುತ್ತಿದ್ದಾರೆ. ದೂರದ ಕೋಲ್ಕತ್ತಾದಲ್ಲಿ ಕುಳಿತಿರುವ ಯಾರಿಗೆ ನಾನು ಏನು ಕಮ್ಮಿ ಎಂದು ಸದಾ ಕೇಳುವ ಮಮತಾ ದೀದಿ ಬಂಗಾಳದಲ್ಲಿ 2024ರಲ್ಲಿ 30ರಿಂದ 35 ಸೀಟು ಗೆದ್ದರೆ ತನ್ನಿಂದ ತಾನೇ ವಿಪಕ್ಷಗಳು ತನ್ನ ಹಿಂದೆ ಬರುತ್ತವೆ ಎಂದು ಲೆಕ್ಕ ಹಾಕಿ ತಯಾರಿ ನಡೆಸುತ್ತಿದ್ದಾರೆ. 1977ರಲ್ಲಿ ಮೊರಾರ್ಜಿ ದೇಸಾಯಿ, 1989ರಲ್ಲಿ ವಿ.ಪಿ.ಸಿಂಗ್‌, ಚಂದ್ರಶೇಖರ್‌, 1996ರಲ್ಲಿ ದೇವೇಗೌಡ, ಗುಜ್ರಾಲ್‌ ಸರ್ಕಾರದ ಪ್ರಯೋಗಗಳು ವಿಫಲವಾದ ನಂತರ ಯಾಕೋ ಪ್ರಾದೇಶಿಕ ಪಕ್ಷಗಳು ದಿಲ್ಲಿ ಆಳುವ ಬಗ್ಗೆ ಜನಸಾಮಾನ್ಯರಲ್ಲಿ ಅಷ್ಟೊಂದು ಉತ್ಸಾಹ ಇಲ್ಲ. ಆದರೆ ಮೋದಿ ವಿರುದ್ಧ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕದೇ ಪಾಲಿಟಿಕ್ಸ್‌ ಚಲನಶೀಲ ಆಗುವುದಿಲ್ಲ ನೋಡಿ.

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ!

ನಿತೀಶ್‌ಕುಮಾರ್‌ ದಿಲ್ಲಿ ಯಾತ್ರೆ
2024ರಲ್ಲಿ ಪ್ರಧಾನಿ ಅಭ್ಯರ್ಥಿ ನಾನಲ್ಲ ಎಂದು ಎಷ್ಟೇ ಹೇಳಿದರೂ ಕೂಡ ಬಿಜೆಪಿ ಬಿಟ್ಟು ಲಾಲು ಪುತ್ರರು ಮತ್ತು ಕಾಂಗ್ರೆಸ್‌ ಜೊತೆ ನಿತೀಶ್‌ ಬಂದಿದ್ದೇ, ಹೇಗೂ 17 ವರ್ಷ ಮಗಧ ಆಳಿದ್ದು ಆಯಿತು, ದಿಲ್ಲಿಯಲ್ಲೊಂದು ಅವಕಾಶ ಸಿಗುತ್ತಾ ನೋಡೋಣ ಎಂದು. ನಿತೀಶ್‌ರ ಸಾಮರ್ಥ್ಯ ಎಂದರೆ ಅವರಿಗೆ ಲಾಲು ಮುಲಾಯಂರಂತೆ ಭ್ರಷ್ಟಅನ್ನುವ ಹಣೆಪಟ್ಟಿಇಲ್ಲ. ಜೊತೆಗೆ ಲಾಲುರಿಂದ ಹಿಡಿದು ಚೌಟಾಲಾರಂತೆ ಮಕ್ಕಳನ್ನು, ಮೊಮ್ಮಕ್ಕಳನ್ನು ರಾಜಕಾರಣಕ್ಕೆ ತಂದವರೂ ಅಲ್ಲ. ಜೊತೆಗೆ ಮಮತಾ, ಕೇಜ್ರಿವಾಲ್‌ರಂತೆ ಉಳಿದವರಿಗೆ ಇವರೊಂದಿಗೆ ಏಗುವುದು ಕಷ್ಟಅನ್ನುವ ತರಹದ ವ್ಯಕ್ತಿತ್ವ ನಿತೀಶ್‌ರದ್ದು ಅಲ್ಲ. ಆದರೆ ನಿತೀಶ್‌ರ ದೌರ್ಬಲ್ಯ ಎಂದರೆ ಲಾಲು ಮುಲಾಯಂರಂತೆ ರಾಜ್ಯದಲ್ಲಿ, ಮೋದಿ ಮತ್ತು ಕಾಂಗ್ರೆಸ್‌ನಂತೆ ದೇಶದಲ್ಲಿ ನಿತೀಶ್‌ ಹೆಸರಿಗೆ ಜೈಕಾರ ಹಾಕುವ ಕಾಲಾಳುಗಳು ಇಲ್ಲ. ಆದರೆ ಈಗಿನಿಂದಲೇ ಕಾಂಗ್ರೆಸ್‌, ಎಡ ಪಕ್ಷಗಳು ಲಾಲು, ಮುಲಾಯಂ, ದೇವೇಗೌಡರು, ಚೌಟಾಲಾ, ಠಾಕ್ರೆ, ಶರದ್‌ ಪವಾರ ಮತ್ತು ಸ್ಟಾಲಿನ್‌ ಇರುವಂಥ ಪಕ್ಷಗಳು ಒಟ್ಟಿಗೆ ಬಂದರೆ, 2024ರಲ್ಲಿ ಮೊದಲು ಠಕ್ಕರ್‌ ಕೊಡೋಣ. ಆಮೇಲೆ ಗೆಲುವು ಸಿಕ್ಕರೆ ನಾಯಕ ಯಾರು ಎಂದು ತೀರ್ಮಾನಿಸೋಣ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಜೊತೆಗೆ ಇಟ್ಟುಕೊಂಡು ಮೈತ್ರಿಕೂಟಕ್ಕೆ ಕೆಸಿಆರ್‌ ಮತ್ತು ಮಮತಾ ತಯಾರಿಲ್ಲ. ಆದರೆ ಕಾಂಗ್ರೆಸ್‌ ಹೊರಗಿಟ್ಟು ಯಾವುದೇ ತೃತೀಯ ರಂಗದ ತರಹದ ಮೈತ್ರಿಕೂಟಕ್ಕೆ ನಿತೀಶ್‌ ಮತ್ತು ಶರದ್‌ ಪವಾರ್‌ ತಯಾರಿಲ್ಲ. ಈ ಎಲ್ಲ ಪ್ರಾದೇಶಿಕ ಪಕ್ಷಗಳ ಸಮಸ್ಯೆ ಎಂದರೆ ಪರಸ್ಪರ ಚುನಾವಣಾ ಪೂರ್ವ ಮೈತ್ರಿಕೂಟಕ್ಕೆ ಅರ್ಥ ಇರುವುದಿಲ್ಲ. ಏನಿದ್ದರೂ ಚುನಾವಣೆಯಲ್ಲಿ ಭರ್ಜರಿ ಗೆಲ್ಲಬೇಕು, ಆನಂತರ ಮಾತುಕತೆ ಮಾಡಿ ನಾಯಕನ ಆಯ್ಕೆ ಆಗಬೇಕು. ಪರ್ಯಾಯ ರಂಗದ ಸಮಸ್ಯೆ ಅಂದರೆ ವಿಧಾನಸಭಾ ಚುನಾವಣೆಯಲ್ಲಿ ಜನ ಪ್ರಾದೇಶಿಕ ಜಾತಿ ನಾಯಕತ್ವವನ್ನು ಬೆಂಬಲಿಸುತ್ತಾರೆ. ಆದರೆ ಲೋಕಸಭೆ ಅಂದಾಕ್ಷಣ ರಾಷ್ಟ್ರೀಯ ಪಕ್ಷ ಇದ್ದರೆ ಒಳ್ಳೆಯದು ಅನ್ನುತ್ತಾರೆ. ಆದರೆ ಕಾಂಗ್ರೆಸ್‌ ಬಗ್ಗೆ, ಗಾಂಧಿ ಕುಟುಂಬದ ಬಗ್ಗೆ ಒಲವಿಲ್ಲ. ಹೀಗಾಗಿ ಸಹಜವಾಗಿ ಕಣ್ಣಿಗೆ ಕಾಣೋದು ಮೋದಿ ಮತ್ತು ಅದರಿಂದಾಗಿ ಬಿಜೆಪಿ ಮಾತ್ರ.

ಪದಯಾತ್ರಿಕ ರಾಹುಲ್‌
ಅಧಿಕಾರ ಹೋಗಿ 8 ವರ್ಷದಲ್ಲಿ ಸೇನಾಧಿಪತಿಗಳು ಒಬ್ಬೊಬ್ಬರೇ ಬಂಡಾಯ ಎದ್ದು ಮನೆತನ ಸಂಕಷ್ಟದಲ್ಲಿರುವಾಗ ಯುವರಾಜ ಒಬ್ಬ ರಾಜಧಾನಿ ಬಿಟ್ಟು ನೇರವಾಗಿ ಜನರ ಬಳಿ ಹೋಗಿ ಅವರ ಸಂಕಷ್ಟಅರಿಯುವುದು ಒಳ್ಳೆಯ ಬೆಳವಣಿಗೆ. 8 ವರ್ಷದಲ್ಲಿ 50 ಯುದ್ಧಗಳಲ್ಲಿ 41 ಸೋತಿರುವ ರಾಹುಲ್‌ ಗಾಂಧಿಗೆ ರಾಷ್ಟ್ರೀಯ ರಾಜಕಾರಣದಲ್ಲಿ ಕಾಂಗ್ರೆಸ್‌ ಅನ್ನು ವಾಪಸ್‌ ಕರೆತರಲು ಇದು ಕೊನೆಯ ಅವಕಾಶ. ಆದರೆ ರಾಹುಲ್‌ ಪಾದಯಾತ್ರೆಗೆ ಮೋದಿ ಸರ್ಕಾರದ ದೌರ್ಬಲ್ಯಗಳಾದ ಬೆಲೆ ಏರಿಕೆ, ಕೃಷಿ ಸಂಕಷ್ಟಹೀಗೆ ಯಾವುದೇ ನಿರ್ದಿಷ್ಟವಿಷಯ ಇಲ್ಲದೇ ಹೊರಟಿರುವುದು ಎಷ್ಟರ ಮಟ್ಟಿಗೆ ಲಾಭ ತರಬಹುದು ಎಂಬುದು ಒಂದು ಪ್ರಶ್ನೆ. ಆದರೆ ಉತ್ತರ ಪ್ರದೇಶ, ಬಿಹಾರ, ಆಂಧ್ರ, ಪಶ್ಚಿಮಬಂಗಾಳ, ಗುಜರಾತ್‌ಗೆ ಹೋಗದೇ ಹೇಗೆ ರಾಜಕೀಯವಾಗಿ ರಾಹುಲ್‌ ಮತ್ತು ಕಾಂಗ್ರೆಸ್‌ಗೆ ಲಾಭ ಬರುತ್ತದೆ ಅನ್ನುವುದು ಇನ್ನೊಂದು ಪ್ರಶ್ನೆ. ಏನೇ ಇರಲಿ, ಈ ದಿಲ್ಲಿ ಮಂದಿ ತಮ್ಮ ವಂಧಿ ಮಾಗಧರನ್ನು ಬಿಟ್ಟು ಹಳ್ಳಿಗಳಿಗೆ ರಸ್ತೆ ಮೇಲೆ ಬರುವುದು ಜನರಿಗೆ ಎಷ್ಟುಉಪಯೋಗ ಆಗುತ್ತೋ ಬಿಡುತ್ತೋ, ಅಧಿಕಾರ ನಡೆಸುವವರ ಭ್ರಮೆಗಳನ್ನು ಮಾತ್ರ ಒಡೆಯುತ್ತದೆ.

ಕೇಜ್ರಿವಾಲ್‌ ಗುಜರಾತ್‌ ಪ್ರದಕ್ಷಿಣೆ
ಬಿಜೆಪಿ ಗುಜರಾತ್‌ನಲ್ಲಿ 1997ರಿಂದ ಹೆಚ್ಚುಕಡಿಮೆ ಅಧಿಕಾರದಲ್ಲಿದೆ. ಹೀಗಾಗಿ 25 ವರ್ಷದ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಸಹಜ ಸ್ವಾಭಾವಿಕ. ಮೋದಿಯನ್ನು ಗುಜರಾತಿಗಳು ಇಷ್ಟಪಡುತ್ತಾರೆ. ಆದರೆ ಮೋದಿ ಕೂರಿಸಿದವರನ್ನು ಭಾಳ ಏನು ಇಷ್ಟಪಡೋಲ್ಲ ಅನ್ನುವುದನ್ನು 2017ರಲ್ಲೇ ಗುಜರಾತಿಗಳು ಸ್ಪಷ್ಟವಾಗಿ ಹೇಳಿದ್ದರು. ಮೋದಿ ಮತ್ತು ಬಿಜೆಪಿ ವಿರುದ್ಧ ಸಿಟ್ಟು ಇದ್ದರೂ ಅದನ್ನು ಪೂರ್ತಿ ಕಾಂಗ್ರೆಸ್‌ನ ವೋಟಾಗಿ ಪರಿವರ್ತನೆ ಮಾಡುವ ಶಕ್ತಿ ದಿಲ್ಲಿ ಮತ್ತು ಗಾಂಧಿ ನಗರಗಳಲ್ಲಿ ಕೂತಿರುವ ಕಾಂಗ್ರೆಸ್‌ ನಾಯಕರಿಗೆ ಇಲ್ಲ. ಹೀಗಾಗಿ ಅಲ್ಲೊಂದು ಅವಕಾಶ ಇದೆ ಎಂದು ಅರಿತಿರುವ ಕೇಜ್ರಿವಾಲ್‌ ವಾರಕ್ಕೊಮ್ಮೆ ಸೂರತ್‌ ಸೌರಾಷ್ಟ್ರಗಳಿಗೆ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ಪಟೇಲ್‌ ಸಮುದಾಯವನ್ನು ಮನವೊಲಿಸಲು ಪ್ರಯತ್ನಿಸುತ್ತಿರುವ ಕೇಜ್ರಿವಾಲ್‌ ಅದು ಆದರೆ ಮುಸ್ಲಿಮರು ಆಪ್‌ ಗೆಲ್ಲುವ ಸಾಧ್ಯತೆ ಇದ್ದಲ್ಲಿ ತನ್ನ ಕಡೆ ವಾಲುತ್ತಾರೆ ಎಂದು ಲೆಕ್ಕ ಹಾಕುತ್ತಿದ್ದಾರೆ. ಕೇಜ್ರಿವಾಲ್‌ಗೆ ಸಿಗುತ್ತಿರುವ ಪ್ರತಿಸ್ಪಂದನೆ ನೋಡಿದರೆ ಎರಡು ಸಾಧ್ಯತೆಗಳು ಇವೆ. 1.ಕಾಂಗ್ರೆಸ್‌ ಮತ್ತು ಆಪ್‌ ನಡುವೆ ಗ್ರಾಮೀಣ ಗುಜರಾತ್‌ನಲ್ಲಿ ಮತ ವಿಭಜನೆ ಆಗಿ ಶಹರಗಳಲ್ಲಿ ಗಟ್ಟಿಆಗಿರುವ ಬಿಜೆಪಿಗೆ ಮರಳಿ ಲಾಭ ತಂದರೂ ಆಶ್ಚರ್ಯ ಇಲ್ಲ. 2.ಆಪ್‌ ಏನಾದರೂ ಶಹರಗಳ ಬಡವರು ಮತ್ತು ಬಿಜೆಪಿಯಿಂದ ಮುನಿಸಿಕೊಂಡಿರುವ ಪಟೇಲರ ವೋಟು ಪಡೆದರೆ ಬಿಜೆಪಿಗೆ ಕಷ್ಟಆಗಬಹುದು. ಕೇಜ್ರಿವಾಲ್‌ರ ಲಕ್ಷ್ಯ ಸ್ಪಷ್ಟಇದ್ದ ಹಾಗಿದೆ, ಎಲ್ಲೆಲ್ಲಿ ಕಾಂಗ್ರೆಸ್‌ ದುರ್ಬಲಗೊಳ್ಳುತ್ತಿದೆಯೋ ಆ ಜಾಗ ಆಪ್‌ನದು ಎಂದು.

India Gate: ಕರ್ನಾಟಕದಲ್ಲಿ ಸಿದ್ದು ಅಶ್ವಮೇಧದ ಕುದುರೆ ಕಟ್ಟೋರು ಯಾರು?

ಮೋದಿ, ಗಡ್ಕರಿ ಮತ್ತು ಹಸೀನಾ
ಅಮಿತ್‌ ಶಾ ಜೊತೆಗೆ ನಿತಿನ್‌ ಗಡ್ಕರಿ ಸಂಬಂಧ ಅಷ್ಟಕಷ್ಟೇ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ ತಿಂಗಳು ಗಡ್ಕರಿ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯಿಂದ ತೆಗೆದು ಹಾಕಿದ ಮೇಲೆ ಈ ವಿಷಯ ಇನ್ನಷ್ಟುಜಗಜ್ಜಾಹೀರು ಆಯಿತು. ಆದರೆ ನಿನ್ನೆ ಬೆಳಿಗ್ಗೆ ಮೋದಿ ಗಡ್ಕರಿಯನ್ನು ತೋರಿಸುತ್ತಾ ಶೇಖ್‌ ಹಸೀನಾ ಜೊತೆಗೆ ಜೋರಾಗಿ ನಕ್ಕಿದ್ದು ಭಾರೀ ಕುತೂಹಲ ಕೆರಳಿಸಿದೆ. ಪ್ರಧಾನಿ ಮೋದಿ ಶೇಖ್‌ ಹಸೀನಾರಿಗೆ ಗಡ್ಕರಿಯನ್ನು ತೋರಿಸುತ್ತಾ ಪರಿಚಯ ಮಾಡಿ ಕೊಡಲು ಹೋದಾಗ ಬಾಂಗ್ಲಾ ಪ್ರಧಾನಿ, ನಿನ್ನೆ ರಾತ್ರಿ ಬಾಂಗ್ಲಾ ರಾಯಭಾರಿ ಕಚೇರಿಗೆ ಊಟಕ್ಕೆ ಬಂದಿದ್ದರು. ಮೀನು ತಿನ್ನಲಿಲ್ಲ, ಆದರೆ ಭಾಳ ನಗಿಸಿದರು ಎಂದು ಹೇಳಿದರು. ಆಗ ಮೋದಿ ಓಹೋ ಹೌದಾ ಗಡ್ಕರೀಜಿ ತುಂಬಾ ಖುಷ್‌ ಮಿಜಾಜ್‌ ಇರುವ ಮನುಷ್ಯ. ಅವರನ್ನು ಕರೆದಿದ್ದು ಒಳ್ಳೆಯದಾಯಿತು. ನಾನು ರಾತ್ರಿ ಊಟ ಮಾಡುವುದು ಕಡಿಮೆ. ಅನಿವಾರ್ಯ ಇದ್ದರೆ ಮಾತ್ರ ಹೋಗುತ್ತೇನೆ ಎಂದು ಹೇಳಿ ಜೋರಾಗಿ ನಕ್ಕರಂತೆ. ಗಡ್ಕರಿ ಅಂದರೆ ಕೆಲಸದಲ್ಲಿ ಎಷ್ಟುಚುರುಕೋ ಹಾಗೆ ಮಾತಿನ ಮಲ್ಲ ಮತ್ತು ತಿಂಡಿ ಪೋತ ಕೂಡ ಹೌದು.

ಉಮೇಶ್‌ ಕತ್ತಿಯ ರಂಗೀನ್‌ ಕಹಾನಿ
ಬರೀ ಟೀವಿಯಲ್ಲಿ ಉಮೇಶ ಕತ್ತಿ ಮಾತು ಕೇಳಿದವರಿಗೆ ತುಂಬಾ ಒರಟು ಅನ್ನಿಸಿರಬಹುದು. ಆದರೆ ಹತ್ತಿರ ಹೋದರೆ ಮಾತ್ರ ಬರೀ ಮಜಾ ಮಜಾ ರಂಗೀನ್‌ ಮಾತುಗಳು. ಕತ್ತಿ, ಜೆ.ಎಚ್‌.ಪಟೇಲ್‌ರನ್ನು ಯಾವಾಗಲೂ ನನ್ನ ಗುರುಗಳು ಎಂದು ನೆನಪಿಸಿಕೊಳ್ಳುತ್ತಿದ್ದರು. ಒಮ್ಮೆ ಪಟೇಲರು ಸಂಜೆಯ ಗೋಷ್ಠಿಗೆ ಮನೆಗೆ ಕರೆದು ಕಾರ್ಡ್ಸ್ ಆಡೋಣ ಅಂದರಂತೆ. ಮುಖ್ಯಮಂತ್ರಿ ಜೊತೆ ಏನು ಆಡೋದು ಅಂತ ಕತ್ತಿ ಪಟೇಲ… ಸರ್‌ ನನಗೆ ಬರೋಲ್ಲ ಎಂದು ಸುಳ್ಳು ಹೇಳಿದರಂತೆ. ಹಾಗಾಗಿ ರಮ್ಮಿ ಆಟದಲ್ಲಿ ಮೊದಲು ಒಂದು ತಾಸು 25 ಸಾವಿರ ಸೋತರಂತೆ. ಆಮೇಲೆ 30 ಸಾವಿರ ಗೆದ್ದರಂತೆ. ಒಮ್ಮೆ ಕಾರಜೋಳರು ಮತ್ತು ಕತ್ತಿ ಹೋಗಿ ಸಾರಾಯಿ ವ್ಯಾಪಾರ ಇರುವ ಜಾರಕಿಹೊಳಿಯನ್ನು ವಿಧಾನ ಪರಿಷತ್‌ಗೆ ತರೋಣ ಎಂದು ಹೇಳಿದಾಗ ಮುಖ್ಯಮಂತ್ರಿ ಪಟೇಲರು ಬುದ್ಧಿ ಇದೆ ಏನ್ರೋ ನಿಮಗೆ, ವ್ಯಾಪಾರಿಗಳಿಗೆ ಅಧಿಕಾರ ಕೊಡಿಸಬೇಡಿ ಎಂದು ಬೈದರಂತೆ. ಕೊನೆಗೆ ಇಬ್ಬರೂ ಹೆಗಡೆ ಬಳಿ ಹೋಗಿ ಜಾರಕಿಹೊಳಿಗೆ ಟಿಕೆಟ್‌ ಕೊಡಿಸಿದರು. ಮುಂದೆ ಅದೇ ಜಾರಕಿಹೊಳಿ ಕುಟುಂಬದ ವಿರುದ್ಧ ಕತ್ತಿ ಕೊನೆಯವರೆಗೂ ಹೋರಾಟ ಮಾಡಬೇಕಾಯಿತು. ನಾನು ಒಮ್ಮೆ ಆಸ್ಪತ್ರೆಯಲ್ಲಿ ನರಳುತ್ತಿದ್ದಾಗ ಫೋನ್‌ ಮಾಡಿದ ಕತ್ತಿ, ನಾತು ಬರೀ ಸುದ್ದಿ ಸುದ್ದಿ ಅಂತಿ. ಸ್ವಲ್ಪ ಬ್ಯಾಂಕಾಕ್‌ ಪಟಾಯಾಗೆ ಹೋಗು, ಜೀವನ ಇರೋದು ಮಜಾ ಮಾಡಲಿಕ್ಕೆ ಎಂದು ಏನೇನೋ ಹೇಳಿದಾಗ, ನಾನು ನೋವಿನಲ್ಲೂ ಬಿದ್ದುಬಿದ್ದು ನಕ್ಕಿದ್ದೆ. ಈ 24 ಗಂಟೆ ಟೀವಿ ಯುಗದಲ್ಲಿ ನಟ ರತ್ನಾಕರರೇ ಜಾಸ್ತಿ ಆಗಿರುವಾಗ ಕತ್ತಿ ಥರ ಮನಸ್ಸಿಗೂ ಮಾತಿಗೂ ಜಾಳಿಗೆ ಇಟ್ಟುಕೊಳ್ಳದ ವ್ಯಕ್ತಿಗಳು ಅಪರೂಪ.

13 ವರ್ಷ ಮುಖ್ಯಮಂತ್ರಿ, 7 ವರ್ಷ ಪ್ರಧಾನಿ ಆಗಿದ್ದರೂ ಕುಸಿಯದ ಮೋದಿ ಜನಪ್ರಿಯತೆ

2024ರ ಲೋಕಸಭಾ ಚುನಾವಣೆಗೆ 18 ತಿಂಗಳು ಇರುವಾಗ ರಾಹುಲ್‌ ಗಾಂಧಿ ಪಾದಯಾತ್ರೆಗೆ ಹೊರಟಿದ್ದಾರೆ. ಇದು ಒಂದು ರೀತಿ ಮೋದಿ ವಿರುದ್ಧದ ಗುಂಪಿಗೆ ನಾಯಕ ನಾನೇ ಎಂದು ತೋರಿಸುವ ಕೊನೆಯ ಪ್ರಯತ್ನ. ಇನ್ನು ನಿತೀಶ್‌ಕುಮಾರ್‌ ಕೂಡ ಒಂದು ಅವಕಾಶ ಸಿಗುತ್ತಾ ನೋಡೋಣ ಎಂದು ಬಿಜೆಪಿ ಸ್ನೇಹ ತೊರೆದು ಬಂದಿದ್ದಾರೆ. ಮತ್ತೊಂದೆಡೆ ಕೇಜ್ರಿವಾಲ್‌ ಕೂಡ ಸದ್ದು ಮಾಡುತ್ತಿದ್ದಾರೆ.

click me!