ಬಾಗಲಕೋಟೆಯಿಂದ ಚಾಮರಾಜನಗರಕ್ಕೆ ಕೊಂಡೊಯ್ದಿದ್ದ 28ಕೋಟಿ ಅನುದಾನ ಮತ್ತೇ ತರ್ತಾರಾ ಸಿದ್ದರಾಮಯ್ಯ?| 2013ರಲ್ಲಿ ಸಿದ್ದು ಸಿಎಂ ಇದ್ದಾಗ ಬಾಗಲಕೋಟೆಗೆ ಹೈಟೆಕ್ ಡೇರಿ ನಿರ್ಮಾಣಕ್ಕೆ ನೀಡಿದ್ದ ಅನುದಾನ ವಿವಾದ| ಜಿಲ್ಲೆಯಿಂದ ಚಾಮರಾಜನಗರದ ಹಾಲಿನ ಡೇರಿ ನಿರ್ಮಾಣಕ್ಕೆ ಹಣ ಒರ್ಗಾಯಿಸಿದ್ದ ಸಿದ್ದರಾಮಯ್ಯ| ಅರ್ಧಂಬರ್ದ ಕೆಲಸದಿಂದ ನಿಂತು ಬಿಟ್ಟಿರೋ ಬಾಗಲಕೋಟೆಯ ಹೈಟೆಕ್ ಹಾಲಿನ ಡೇರಿ
ಮಲ್ಲಿಕಾರ್ಜುನ್ ಹೊಸಮನಿ
ಬಾಗಲಕೋಟೆ(ಡಿ.14): ಹೀಗೆ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿರೋ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಹಾಲಿನ ಡೇರಿ ಕಟ್ಟಡ ಕಂಡು ಬರೋದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ.
ಹೌದು, ವಿಜಯಪುರ-ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ನವನಗರದ ಗ್ರೀನ್‌ಫುಡ್ ಪಾರ್ಕ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವಿದು. ಒಕ್ಕೂಟದಲ್ಲಿ ಈಗ ಒಟ್ಟು 474 ಸಂಘಗಳಿದ್ದು, ನಿತ್ಯವೂ 1, 80,000 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.
ಒಕ್ಕೂಟದಿಂದ ಹೈಟೆಕ್ ಡೇರಿ ನಿರ್ಮಾಣಕ್ಕಾಗಿ ಈ ಮಧ್ಯೆ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲು ಮುಂದಾಯಿತು. ಇದು ರಾಜ್ಯ ಸರ್ಕಾರದ ಮೂಲಕವೇ ನಿರ್ವಹಣೆಯಾಗಬೇಕಿದ್ದರಿಂದ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2013-14ರಲ್ಲಿ ಅಂದಾಜು 28 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು.
ಈ ಮಧ್ಯೆ 750 ಎಕರೆ ಪ್ರದೇಶದಲ್ಲಿ ಹೈಟೆಕ್ ಡೇರಿ ನಿರ್ಮಿಸಲು ಮುಂದಾಗಿತ್ತು. ಇಷ್ಟಾಗಿದ್ದೇ ತಡ ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಮಹಾದೇವ ಪ್ರಸಾದರ ಇಚ್ಚೆಯಂತೆ ಬಾಗಲಕೋಟೆಗೆ ಬಂದಿದ್ದ ಅನುದಾನವನ್ನೆಲ್ಲಾ ಚಾಮರಾಜನಗರ ಮತ್ತು ಮೈಸೂರು ಭಾಗಕ್ಕೆ ಶಿಪ್ಟ್ ಮಾಡಿದ್ದರು.
ಈ ವಿಷಯ ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈಗ ಸಿದ್ದರಾಮಯ್ಯನವರೇ ಮೈಸೂರಿನ ಚಾಮುಂಡೇಶ್ವರಿಯಲ್ಲಿ ಸೋತು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಿಂದ ಆಯ್ಕೆಯಾಗಿರುವುದರಿಂದ ಈ ಸರ್ಕಾರದಲ್ಲಿ ಅನುದಾನ ಬಿಡುಗಡೆ ಮಾಡಿಸಲಿ ಅಂತಿದಾರೆ ಹಾಲು ಒಕ್ಕೂಟದ ಅಧ್ಯಕ್ಷರು.
ಇನ್ನು ಉಭಯ ಜಿಲ್ಲೆಗಳ ಮಟ್ಟಿಗೆ ಹೇಳುವುದಾದರೆ 1,80,000 ಲೀಟರ್ ಪೈಕಿ 1,30,000 ಲೀಟರ್ ಬಾಗಲಕೋಟೆ ಜಿಲ್ಲೆಯಲ್ಲಿಯೇ ಹಾಲು ಉತ್ಪಾದನೆಯಾಗುತ್ತದೆ. ಹೀಗಾಗಿ ಇಲ್ಲಿ ಬೃಹತ್ ಹೈಟೆಕ್ ಹಾಲಿನ ಡೇರಿ ನಿರ್ಮಿಸಲು ಒಪ್ಪಲಾಗಿತ್ತು. ಆದರೆ ಯಾವಾಗ ಅನುದಾನ ಮೈಸೂರು ಭಾಗಕ್ಕೆ ಹೋಯಿತೋ ಆಗ ಒಕ್ಕೂಟ ತಮ್ಮ ಉತ್ಪಾದನೆಯಿಂದ ಬಂದ ಲಾಭಾಂಶದಲ್ಲಿಯೇ ಅಂದಾಜು 7 ರಿಂದ 8 ಕೋಟಿ ಹಣ ಕ್ರೂಢೀಕರಿಸಿ ಕೆಲಸವನ್ನೇನೋ ನಿರ್ಮಿಸಿದೆ. ಆದರೆ ಇನ್ನೂವರೆಗೂ ಪರಿಪೂರ್ಣವಾಗಿಲ್ಲ.
ಸಿವಿಲ್ ಕೆಲಸ ಅರ್ಧ ಮುಗಿದಿದ್ದು, ಇನ್ನುಳಿದಂತೆ ಮೆಕ್ಯಾನಿಲ್ ಕೆಲಸ ಸೇರಿದಂತೆ ಇನ್ನೂ ಹಲವು ಕೆಲಸಗಳಾಗಬೇಕಿದೆ. ಈ ಮಧ್ಯೆ ಬಾಗಲಕೋಟೆ ಜಿಲ್ಲೆಯಿಂದ ಮರಳಿ ಹೋಗಿರುವ ಅನುದಾನವನ್ನು ಇಂದು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಆಯ್ಕೆಯಾಗಿ ಜಿಲ್ಲೆಯ ಜನರ ಅಭಿಮಾನವನ್ನು ಕೊಂಡಾಡುತ್ತಿರುವ ಸಿದ್ದರಾಮಯ್ಯನವರು ಮರಳಿ ಅನುದಾನವನ್ನ ಕೊಡಿಸೋ ಮೂಲಕ ಹೈನುಗಾರಿಕೆ ಮಾಡೋ ರೈತರ ನೆರವಿಗೆ ಬರಬೇಕಿದೆ.