ಸ್ವಯಂಘೋಷಿತ ದೇವ ಮಾನವ ನಿತ್ಯಾನಂದ ಎಲ್ಲಿದ್ದಾನೆ..?

By Kannadaprabha NewsFirst Published Dec 13, 2019, 7:51 AM IST
Highlights

ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಸದ್ಯ ಎಲ್ಲಿದ್ದಾರೆ? ಹೀಗೊಂದು ಪ್ರಶ್ನೆ ಕೇಳಲಾಗಿದೆ.

ಬೆಂಗಳೂರು [ಡಿ.13] : ಅತ್ಯಾಚಾರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದ ಆರೋಪಿಯಾದ ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಸದ್ಯ ಎಲ್ಲಿದ್ದಾರೆ? ನಿತ್ಯಾನಂದ ಸ್ವಾಮೀಜಿ ದೇಶದಲ್ಲೇ ಇಲ್ಲ ಎಂದಾದರೆ, ಪ್ರಕರಣದ ದೂರುದಾರ ಲೆನಿನ್‌ಗೆ ವಾರಂಟ್‌ ಜಾರಿಗೊಳಿಸಿದರೆ ಯಾವ ಉದ್ದೇಶ ಈಡೇರುತ್ತದೆ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರಿಗೆ (ರಾಜ್ಯ ಸರ್ಕಾರ) ಹೈಕೋರ್ಟ್‌ ತೀಕ್ಷ್ಣವಾಗಿ ಪ್ರಶ್ನಿಸಿದೆ.

ನಿತ್ಯಾನಂದ ಸ್ವಾಮಿ ವಿರುದ್ಧದ ಅತ್ಯಾಚಾರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ತಮಗೆ ವಾರಂಟ್‌ ಜಾರಿ ಮಾಡಿದ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಪಡಿಸಲು ಹಾಗೂ ಪ್ರಕರಣದ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಕೋರಿ ಲೆನಿನ್‌ ಸಲ್ಲಿಸಿದ್ದ ಅರ್ಜಿ ಗುರುವಾರ ನ್ಯಾಯಮೂರ್ತಿ ಜಿ.ನರೇಂದರ್‌ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಲೆನಿನ್‌ ಪರ ವಕೀಲರು, ಆರೋಪಿ ನಿತ್ಯಾನಂದ ದೇಶ ಬಿಟ್ಟು ಹೋಗಿದ್ದಾನೆ. ವಿಚಾರಣೆಗೆ ಹಾಜರಾಗುತ್ತಿಲ್ಲ. ಆದರೆ, ಒಂದು ದಿನ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪ್ರಾಸಿಕ್ಯೂಟರ್‌ ಮನವಿ ಮೇರೆಗೆ ಅರ್ಜಿದಾರರಿಗೆ (ಲೆನಿನ್‌) ವಿಚಾರಣಾ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ ಎಂದು ದೂರಿದರು. ಪ್ರಾಸಿಕ್ಯೂಷನ್‌ ಪರ ಹಾಜರಾದ ಸರ್ಕಾರಿ ವಕೀಲರು, ಅರ್ಜಿದಾರರು ವಿಚಾರಣಾ ನ್ಯಾಯಾಧೀಶರ ಮೇಲೆ ಆರೋಪ ಮಾಡುತ್ತಿರುವುದು ಗಂಭೀರ ತಪ್ಪು. ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಎಲ್ಲಾ ದಾಖಲೆಗಳನ್ನು ಹೈಕೋರ್ಟ್‌ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪ್ರಕರಣದ ಮೊದಲನೇ ಆರೋಪಿ ನಿತ್ಯಾನಂದ ಸ್ವಾಮೀಜಿ ಸದ್ಯ ಎಲ್ಲಿದ್ದಾರೆ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ಆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದ ಸರ್ಕಾರಿ ವಕೀಲರು, ವಿಚಾರಣೆಗೆ ಹಾಜರಾಗುವುದಕ್ಕೆ ನಿತ್ಯಾನಂದ ಸ್ವಾಮೀಜಿಗೆ ಹೈಕೋರ್ಟ್‌ ವಿನಾಯ್ತಿ ನೀಡಿದೆ. ಈ ಕುರಿತ ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.

ನಿತ್ಯಾನಂದನ ಕೈಲಾಸ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ಶಿಷ್ಯೆ!...

ಅದರಿಂದ ಬೇಸರಗೊಂಡ ನ್ಯಾಯಮೂರ್ತಿಗಳು, ಆರೋಪಿಗೆ ದೇಶಬಿಟ್ಟು ಹೋಗಲು ಅನುಮತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಜತೆಗೆ, ಮುಕ್ತವಾಗಿ ಓಡಾಡಿಕೊಂಡಿರಲು ಆರೋಪಿಗಳಿಗೆ ಬಿಟ್ಟಿದ್ದೀರಿ. ಮತ್ತೊಂದಡೆ ಪ್ರಕರಣದಲ್ಲಿ ಅರ್ಜಿದಾರನಿಗೆ ವಾರಂಟ್‌ ಜಾರಿ ಮಾಡಲಾಗಿದೆ. ಆರೋಪಿಯೇ ದೇಶದಲ್ಲಿ ಇಲ್ಲದಿದ್ದರೆ, ಅರ್ಜಿದಾರನಿಗೆ ವಾರಂಟ್‌ ಜಾರಿ ಮಾಡಿ ಯಾವ ಉದ್ದೇಶವನ್ನು ಈಡೇರಿಸುತ್ತೀರಿ ಎಂದು ಕೇಳಿತು.

ಅಲ್ಲದೆ, ವಿಚಾರಣಾ ನ್ಯಾಯಾಲಯದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮೇಲೆ ಅರ್ಜಿದಾರರು ಆರೋಪ ಮಾಡಿದ್ದಾರೆ. ಆ ಕುರಿತು ವಿವರಣೆ ನೀಡುವಂತೆ ಅರ್ಜಿಯ ಕಳೆದ ವಿಚಾರಣೆ ವೇಳೆ ನಿಮಗೆ (ಸರ್ಕಾರಕ್ಕೆ) ಸೂಚಿಸಿತ್ತು. ಆದರೆ, ಇದೀಗ ನೀವು (ಸರ್ಕಾರಿ ವಕೀಲರು) ವಿಚಾರಣೆಯನ್ನು ದಿಕ್ಕು ತಪ್ಪಿಸುತ್ತೀದ್ದೀರಿ. ಈ ರೀತಿ ನಡೆದುಕೊಳ್ಳುವುದನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನಿತ್ಯಾ ವಿರುದ್ಧದ ರೇಪ್‌ ಕೇಸ್‌ ವಿಚಾರಣೆಗೆ ತಡೆ

ನಿತ್ಯಾನಂದ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣ ಕುರಿತ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತು. ಪ್ರಕರಣದ ಸಂಬಂಧ ಅಧೀನ ನ್ಯಾಯಾಲಯವು ತಮಗೆ ಜಾರಿ ಮಾಡಿರುವ ವಾರಂಟ್‌ ರದ್ದುಪಡಿಸುವಂತೆ ಕೋರಿ ದೂರುದಾರ ಲೆನಿನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶಿಸಿ ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು.

click me!