ನೂತನ ಶಾಸಕ ಸುಧಾಕರ್ ಕ್ಷೇತ್ರವಾದ ಚಿಕ್ಕಬಳ್ಳಾಪುರಕ್ಕೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡುತ್ತಿದೆ.
ಬೆಂಗಳೂರು (ಡಿ.13): ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಡಾ. ಕೆ.ಸುಧಾಕರ್ ನಡುವೆ ಪ್ರತಿಷ್ಠೆಯ ಜಟಾಪಟಿಗೆ ಕಾರಣವಾಗಿರುವ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣ ಮತ್ತು ಮೂಲಸೌಕರ್ಯಕ್ಕಾಗಿ 525 ಕೋಟಿ ರು. ಮೊತ್ತದ ಪ್ರಸ್ತಾವನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮುಂದಿನ ಎರಡು ವರ್ಷಗಳಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಇತ್ತೀಚೆಗಷ್ಟೇ ಸುಧಾಕರ್ ಹೇಳಿದ್ದರು. ಉಪಚುನಾವಣೆಯ ಪ್ರಚಾರದಲ್ಲಿ ಇದೇ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಮತಯಾಚಿಸಿದ್ದರು.
ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿತ್ತು. ಚಿಕ್ಕಬಳ್ಳಾಪುರಕ್ಕೆ ನೀಡಲಾದ ವೈದ್ಯಕೀಯ ಕಾಲೇಜು ಸ್ಥಳಾಂತರ ಮಾಡಿ ಕನಕಪುರಕ್ಕೆ ನೀಡಿರುವುದು ಸುಧಾಕರ್ ಕೋಪಕ್ಕೆ ಕಾರಣವಾಗಿತ್ತು. ಮೈತ್ರಿ ಸರ್ಕಾರ ಪತನಗೊಳಿಸಲು ಇದು ಸಹ ಕಾರಣವಾಗಿದ್ದು, ಸುಧಾಕರ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿಗೆ ಸೇರ್ಪಡಗೊಂಡ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನಕಪುರಕ್ಕೆ ನೀಡಲಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಗೊಳಿಸಿ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದರು. ಅಲ್ಲದೇ, ಇತ್ತೀಚೆಗೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು.
ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಬಿರುಗಾಳಿ ಎಬ್ಬಿಸಿದ ಡಿಕೆಶಿ: BSYಗೆ ವಾರ್ನ್...
ಕನಕಪುರಕ್ಕೆ ನೀಡಲಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಗೊಳಿಸಿರುವುದಕ್ಕೆ ಡಿ.ಕೆ.ಶಿವಕುಮಾರ್ ಗರಂ ಆಗಿದ್ದು, ಮುಖ್ಯಮಂತ್ರಿಗಳಿಗೆ ಪತ್ರವನ್ನು ಸಹ ಬರೆದಿದ್ದಾರೆ. ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಸದ್ಯಕ್ಕೆ ಈವರೆಗೂ ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.