ಮೈಸೂರು ಫಿಲ್ಮ್‌ಸಿಟಿ ದೊಡ್ಡಬಳ್ಳಾಪುರಕ್ಕೆ ಶಿಫ್ಟ್?

By Kannadaprabha News  |  First Published Dec 12, 2019, 8:48 AM IST

ಮೈಸೂರು ಫಿಲ್ಮ್‌ಸಿಟಿ ದೊಡ್ಡಬಳ್ಳಾಪುರಕ್ಕೆ?| ಸಿದ್ದು ಅವಧಿಯಲ್ಲಿ ಘೋಷಿಸಿದ್ದ ಯೋಜನೆ| ಸ್ಥಳಾಂತರಕ್ಕೆ ಸರ್ಕಾರದ ಅಂಕಿತವಷ್ಟೇ ಬಾಕಿ


-ಮಹೇಂದ್ರ ದೇವನೂರು

ಮೈಸೂರು[ಡಿ.12]: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಿಸಲುದ್ದೇಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರನಗರಿ (ಫಿಲ್ಮ್‌ ಸಿಟಿ) ಯೋಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಎತ್ತಂಗಡಿಯಾಗುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಈಗಾಗಲೇ ಒಂದೆರಡು ಸುತ್ತಿನ ಮಾತುಕತೆ ನಡೆಸಿರುವ ಸರ್ಕಾರ, ಯೋಜನೆ ಸ್ಥಳಾಂತರಕ್ಕೆ ಅಂತಿಮ ಮುದ್ರೆಯೊತ್ತುವುದಷ್ಟೇ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.

Tap to resize

Latest Videos

"

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಮೈಸೂರಿಗೆ ಚಿತ್ರನಗರಿ ಯೋಜನೆ ಮಂಜೂರು ಮಾಡಿ ಅನುದಾನ ಬಿಡುಗಡೆ ಕುರಿತು ಘೋಷಣೆಯನ್ನೂ ಮಾಡಿತ್ತು. ಜತೆಗೆ, ನಂಜನಗೂಡು ತಾಲೂಕು ಹಿಮ್ಮಾವು ಬಳಿ ಈ ಯೋಜನೆಗೆ ಅಗತ್ಯವಿರುವ 100ಕ್ಕೂ ಎಚ್ಚು ಎಕರೆ ಭೂಮಿಯನ್ನೂ ಗುರುತಿಸಿತ್ತು. ಆದರೆ, ನಂತರ ಬಂದ ಸರ್ಕಾರಗಳ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಭಾಗದಿಂದ ಫಿಲ್ಮ್‌ ಸಿಟಿಗಾಗಿ ತೀವ್ರ ಒತ್ತಡ ಕೇಳಿಬಂದಿತ್ತು.

ರಾಜೇಂದ್ರ ಸಿಂಗ್‌ ಅವಧಿಯಲ್ಲಿ ಆಯ್ಕೆ: ಫಿಲ್ಮ್‌ ಸಿಟಿ ಯೋಜನೆ ಪ್ರಸ್ತಾಪ ಬಂದಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಆಗ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್‌ ಬಾಬು ಇಬ್ಬರೂ ಮೈಸೂರಿನವರೇ ಆಗಿದ್ದರು. ಇವರಿಬ್ಬರ ಆಸಕ್ತಿಯ ಫಲವಾಗಿಯೇ ಯೋಜನೆಗೆ ಸಾಂಸ್ಕೃತಿಕ ನಗರಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಪೂರಕವಾಗಿ ವಿಷ್ಣುವರ್ಧನ್‌ ಸ್ಮಾರಕ ನಿರ್ಮಿಸಲು ಮೈಸೂರಿನಲ್ಲೇ ಜಮೀನು ನೀಡಲೂ ಸರ್ಕಾರ ತೀರ್ಮಾನಿಸಲಾಗಿತ್ತು.

ಬೆಂಗಳೂರಿನಲ್ಲಿ ವಾಹನಗಳ ಒತ್ತಡ, ಜೊತೆಗೆ ಕೇಂದ್ರ ಸ್ಥಾನದಿಂದ ದೂರದಲ್ಲಿ ಸಿನಿಮಾ ನಿರ್ಮಿಸಲು ಚಿತ್ರರಂಗದ ಅನೇಕರು ಆಶಿಸಿದ್ದರು. ಮೈಸೂರು ಸುತ್ತಮುತ್ತ ಸಿನಿಮಾ ನಿರ್ಮಾಣಕ್ಕೆ ಪೂರಕವಾದ ಅರಮನೆ, ಚಾಮುಂಡಿಬೆಟ್ಟ, ಕೆಆರ್‌ಎಸ್‌, ಮೇಲುಕೋಟೆ ಸೇರಿದಂತೆ ಅನೇಕ ಪಾರಂಪರಿಕ ಕಟ್ಟಡಗಳು, ಕಬಿನಿ, ನಾಗರಹೊಳೆ, ಊಟಿ, ಬೆಳಗಿರಿರಂಗನ ಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟಸೇರಿದಂತೆ ಹಲವು ಪ್ರಾಕೃತಿಕ ತಾಣಗಳಿದ್ದ ಹಿನ್ನೆಲೆಯಲ್ಲಿ ಮೈಸೂರೇ ಚಿತ್ರನಗರಿ ಯೋಜನೆಗೆ ಸೂಕ್ತ ಆಯ್ಕೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು.

ಆದರೆ, ಸಿದ್ದರಾಮಯ್ಯ ಅವರ ನಂತರ ಅಧಿಕಾರಕ್ಕೆ ಬಂದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಮೈಸೂರಲ್ಲಿ ಈ ಯೋಜನೆ ಸ್ಥಾಪಿಸುವ ಕುರಿತು ಅಷ್ಟಾಗಿ ಆಸಕ್ತಿ ತೋರಲಿಲ್ಲ. ಅಲ್ಲದೆ, ಈ ವೇಳೆಗೆ ರಾಮನಗರ ಜಿಲ್ಲೆಗೆ ಯೋಜನೆಯನ್ನು ಸ್ಥಳಾಂತರಿಸಬೇಕೆಂಬ ಪ್ರಯತ್ನಗಳೂ ಆರಂಭವಾಗಿದ್ದವು. ಇದೀಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಮೊದಲು ರೋರಿಚ್‌ ಎಸ್ಟೇಟ್‌ ವ್ಯಾಪ್ತಿಗೆ ಚಿತ್ರನಗರಿ ಸ್ಥಳಾಂತರಿಸಲು ಯೋಚಿಸಿತ್ತಾದರೂ ವಿರೋಧದ ಹಿನ್ನೆಲೆಯಲ್ಲಿ ನಂತರ ದೊಡ್ಡಬಳ್ಳಾಪುರದಲ್ಲೇ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದು, ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಜಮೀನು ಹುಡುಕಾಟ ಕಾರ್ಯ ಪೂರ್ಣಗೊಂಡಿದ್ದು, ಆಡಳಿತಾತ್ಮಕ ಅನುಮೋದನೆಯಷ್ಟೇ ಬಾಕಿ ಇದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಆ ಭಾಗದ ಜನಪ್ರತಿನಿಧಿಗಳ ನೇತೃತ್ವದಲ್ಲಿ ಒಂದರೆಡು ಸಭೆ ನಡೆದಿದೆ. ಸರ್ಕಾರ ಅಂಕಿತ ಹಾಕಿದ ಕೂಡಲೇ ಮೈಸೂರಿಗೆ ಮಂಜೂರಾಗಿದ್ದ ಯೋಜನೆ ಅನುದಾನ ಸಮೇತ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಳ್ಳಲಿದೆ.

ಯಾವುದು ಲಾಭದಾಯಕ?:

ಮೈಸೂರು ಜಿಲ್ಲೆಯ ಹಿಮ್ಮಾವು ಬಳಿ ಕೆಐಎಡಿಬಿ ಸಾವಿರಾರು ಎಕರೆ ಜಮೀನು ವಶಕ್ಕೆ ಪಡೆದಿತ್ತು. ಈ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಈಗ ಈ ಪ್ರದೇಶದಲ್ಲಿ ಹತ್ತಾರು ಕೈಗಾರಿಕೆಗಳು ತಲೆ ಎತ್ತಿವೆ. ಆದರೆ ಇನ್ನೂ ಸಾವಿರಾರು ಎಕರೆ ಭೂಮಿ ಕೆಐಎಡಿಬಿ ವಶದಲ್ಲೇ ಇದೆ. ಹೊಸದಾಗಿ ಜಮೀನು ಖರೀದಿಸುವ ಕಿರಿಕಿರಿ ಇಲ್ಲದ ಕಾರಣ ಈ ಜಾಗದಲ್ಲೇ ಫಿಲ್ಮ್‌ ಸಿಟಿ ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಇದರಿಂದಾಗಿ ಸರ್ಕಾರಕ್ಕೆ ಕಡಿಮೆ ದರದಲ್ಲಿ ಚಿತ್ರನಗರಿಗೆ ಬೇಕಿದ್ದ ಜಮೀನು ದೊರೆತಂತಾಗಿತ್ತು. ಈಗ ದೊಡ್ಡಬಳ್ಳಾಪುರ ಭಾಗದಲ್ಲಿ ಜಮೀನಿನ ಬೆಲೆ ಗಗನಕ್ಕೇರಿದೆ. ಅಲ್ಲಿ ಸಿನಿಮಾ ನಗರಿ ನಿರ್ಮಿಸುವುದಾದರೆ ದುಪ್ಪಟ್ಟು ದರ ಕೊಟ್ಟು ಭೂಮಿ ಕೊಂಡುಕೊಳ್ಳಬೇಕಿದೆ. ಹೀಗಾಗಿ ಸರ್ಕಾರ ಚಿತ್ರನಗರಿ ಯೋಜನಾ ವೆಚ್ಚವೂ ಹೆಚ್ಚಾಗಲಿದೆ ಎನ್ನುವುದು ಕೆಲವರ ವಾದ.

click me!