
ಹಾಸನ: "ನಮ್ಮ ಕುಟುಂಬದಲ್ಲಿ ನಡೆದ ಕೆಲವು ಆಘಾತಕಾರಿ ಘಟನೆಗಳಿಂದ ತಾಯಿ ಚೆನ್ನಮ್ಮ ಅವರು ತೀವ್ರ ಮಾನಸಿಕ ಯಾತನೆಗೆ ಒಳಗಾಗಿದ್ದರು. ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲೂ ಅವರು ‘ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪಾ’ ಎಂದು ಪದೇ ಪದೇ ಕೇಳುತ್ತಿದ್ದರು. ಆ ಮಾತು ಇಂದಿಗೂ ನನ್ನನ್ನು ಕಾಡುತ್ತಿದೆ, ಎದೆಯೊಳಗೆ ತೀವ್ರ ನೋವುಂಟು ಮಾಡುತ್ತಿದೆ," ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಂತ ಭಾವುಕರಾಗಿ ನುಡಿದರು.
ಜುಲೈ 18ರಂದು ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಮೂರನೇ ದಿನದ ‘ಹಾಲು-ತುಪ್ಪ’ ಕಾರ್ಯವು ಮಂಗಳವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ನೆರವೇರಿತು. ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಕಳೆದ ಒಂದೂವರೆ ವರ್ಷದಿಂದ ತಮ್ಮ ತಾಯಿ ಅನುಭವಿಸಿದ ಹಿಂಸೆ ಮತ್ತು ಮಾನಸಿಕ ಸಂಕಟವನ್ನು ನೆನೆದು ಭಾವುಕರಾದರು.
ಕುಟುಂಬದ ಘಟನೆಗಳನ್ನು ಪ್ರಸ್ತಾಪಿಸುವಾಗ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅವರ ವಿವಾದಾತ್ಮಕ ಪ್ರಕರಣವನ್ನು ಉಲ್ಲೇಖಿಸಿದರು. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಬಹುಶಃ ನಮ್ಮ ತಾಯಿ ಇನ್ನೂ ಕೆಲವು ವರ್ಷ ಬದುಕಿರುತ್ತಿದ್ದರು. ಆದರೆ ಕುಟುಂಬದಲ್ಲಿ ವಯಸ್ಸಾಗಿದ್ದ ಇಬ್ಬರು ಹಿರಿಯರು (ದೇವೇಗೌಡರು ಮತ್ತು ಚೆನ್ನಮ್ಮ) ತೀವ್ರ ಮಾನಸಿಕ ಯಾತನೆಗೆ ಒಳಗಾಗುವಂತಹ ಘಟನೆಗಳು ಜರುಗಿದವು. ಮುಂದಿನ ದಿನಗಳಲ್ಲಿ ಯಾರಾದರೂ ಇತಿಹಾಸ ಬರೆಯುವವರು ಇದ್ದರೆ ಈ ಬಗ್ಗೆ ಬರೆಯುತ್ತಾರೆ. ಆದರೆ, ಕುಟುಂಬದಲ್ಲಾದ ಆ ಎರಡು-ಮೂರು ಘಟನೆಗಳ ನಂತರ ತಾಯಿಗೆ ಸದಾ ಕಾಡುತ್ತಿದ್ದ ಪ್ರಶ್ನೆ ಅದೊಂದೇ ಆಗಿತ್ತು. ಆ ಕಠಿಣ ಪರಿಸ್ಥಿತಿಯನ್ನು ತಡೆದುಕೊಳ್ಳಲು ಸಾಧ್ಯವಾಗದೆಯೇ ಇಂದು ನಾವು ಇಂತಹದೊಂದು ದಿನವನ್ನು ನೋಡಬೇಕಾಗಿ ಬಂದಿದೆ. ಇಲ್ಲದಿದ್ದರೆ ಇನ್ನೂ 3-4 ವರ್ಷಗಳ ಕಾಲ ಅವರು ನಮ್ಮೊಂದಿಗಿರುತ್ತಿದ್ದರು. ಆದರೆ ದೇವರ ತೀರ್ಮಾನವೇ ಬೇರೆಯಾಗಿತ್ತು, ಆ ವಿಧಿಯ ಆಟಕ್ಕೆ ನಾವು ತಲೆಬಾಗಲೇಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಒಂದೂವರೆ ವರ್ಷದಿಂದ ತಾಯಿ ಹಾಸಿಗೆ ಹಿಡಿದಿದ್ದ ದಿನಗಳನ್ನು ನೆನೆದ ಕುಮಾರಸ್ವಾಮಿ, "ಕೊನೆಯ ದಿನಗಳಲ್ಲಿ ಅವರಿಗೆ ನೆನಪಿನ ಶಕ್ತಿ ಸಂಪೂರ್ಣವಾಗಿ ಕುಂದಿ ಹೋಗಿತ್ತು. ಯಾರನ್ನೂ ಗುರುತಿಸಲಾಗದ ಪರಿಸ್ಥಿತಿಗೆ ತಲುಪಿದ್ದರು. ಆದರೂ ಅಂತಹ ಸ್ಥಿತಿಯಲ್ಲೂ ಅವರಲ್ಲಿದ್ದ ತಾಯಿತನ ಮಾಸಿರಲಿಲ್ಲ. ಮನೆಗೆ ಯಾರೇ ಬಂದರೂ ‘ಊಟ ಮಾಡಿದೀರಾ? ಊಟ ಮಾಡಿ’ ಎಂಬ ಎರಡು ಮಾತುಗಳನ್ನು ಬಿಟ್ಟರೆ ಅವರು ಬೇರೇನೂ ಮಾತನಾಡುತ್ತಿರಲಿಲ್ಲ. ನೆನಪುಗಳು ಮರೆಯಾಗುತ್ತಿದ್ದ ಸಂದರ್ಭದಲ್ಲೂ ನನ್ನನ್ನು ಹಾಗೂ ನನ್ನಿಬ್ಬರು ತಂಗಿಯರನ್ನು ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದರು ಎನ್ನುತ್ತಾ ಭಾವುಕರಾದರು.
ಅಲ್ಲದೆ, ಹಿಂದೆ ತಾಯಿಯ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಹಳೆಯ ಕಹಿ ನೆನಪನ್ನೂ ಸಹ ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಹರದನಹಳ್ಳಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಗೌಡರ ಕುಟುಂಬದ ಆಪ್ತರು ಹಾಗೂ ನಾಯಕರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ