
ಬೆಂಗಳೂರು (ಜು.22): ಪಡಿತರ ಚೀಟಿ (Ration Card) ಹೊಂದಿರುವ ರಾಜ್ಯದ ಜನತೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಜುಲೈ ತಿಂಗಳ ಪಡಿತರ ವಿತರಣೆಯನ್ನು (Ration Distribution) ಚುರುಕುಗೊಳಿಸಲು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ (Fair Price Shops) ಕೆಲಸದ ಅವಧಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದೆ.
ಆಹಾರ ಇಲಾಖೆಯ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಹೊಸ ಸುತ್ತೋಲೆಯ ಪ್ರಕಾರ, ರಾಜ್ಯಾದ್ಯಂತ ಜುಲೈ-2026 ರ ಮಾಹೆಯ ಪಡಿತರ ಹಂಚಿಕೆಯನ್ನು ಪೂರ್ಣಗೊಳಿಸಲು ಪ್ರತಿ ದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿಡಲು ಆದೇಶಿಸಲಾಗಿದೆ.
ಜುಲೈ ತಿಂಗಳ ಎನ್ಎಫ್ಎಸ್ಎ (NFSA) ಮತ್ತು ಅನ್ನಭಾಗ್ಯ (Anna Bhagya) ಯೋಜನೆಯಡಿ ಪಡಿತರ ಹಂಚಿಕೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಭಾರತೀಯ ಆಹಾರ ನಿಗಮದಿಂದ (FCI) ಓಎಂಎಸ್ಎಸ್ (D) ಅಕ್ಕಿಯ ಎತ್ತುವಳಿ ಪ್ರಕ್ರಿಯೆಯು ನಡೆಯುತ್ತಿರುವುದರಿಂದ, ಪಡಿತರವು ನ್ಯಾಯಬೆಲೆ ಅಂಗಡಿಗಳಿಗೆ ತಲುಪಿದ ಕೂಡಲೇ ವಿಳಂಬವಿಲ್ಲದೆ ಸಾರ್ವಜನಿಕರಿಗೆ ತಲುಪಿಸಬೇಕಿದೆ. ಜುಲೈ ತಿಂಗಳ ಅಂತ್ಯದೊಳಗೆ ಎಲ್ಲಾ ಫಲಾನುಭವಿಗಳಿಗೆ ಪಡಿತರ ತಲುಪಿಸುವ ಗುರಿಯನ್ನು (Target) ಇಲಾಖೆ ಹೊಂದಿದೆ.
ನಿರಂತರ ವಿತರಣೆ: ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳು ಲಭ್ಯವಾಗುತ್ತಿದ್ದಂತೆಯೇ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ವಿತರಣೆ ಪ್ರಾರಂಭಿಸಬೇಕು.
ರಜೆ ಇಲ್ಲದೆ ಕೆಲಸ: ಪಡಿತರ ಹಂಚಿಕೆ ಬಾಕಿ ಇರುವವರೆಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳೂ ನಿಗದಿತ ಸಮಯದವರೆಗೆ (ಬೆಳಿಗ್ಗೆ 6 ರಿಂದ ರಾತ್ರಿ 10) ಕಾರ್ಯನಿರ್ವಹಿಸುವುದು ಕಡ್ಡಾಯ.
ಅಧಿಕಾರಿಗಳಿಗೆ ಸೂಚನೆ: ಜಿಲ್ಲಾ ಜಂಟಿ ಮತ್ತು ಉಪ ನಿರ್ದೇಶಕರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಸುಗಮವಾಗಿ ಪಡಿತರ ವಿತರಣೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಸಾರ್ವಜನಿಕರಿಗೆ ಅನುಕೂಲ: ಕೆಲಸಕ್ಕೆ ಹೋಗುವವರು ಅಥವಾ ಹಗಲು ಹೊತ್ತಿನಲ್ಲಿ ರೇಷನ್ ಪಡೆಯಲು ಸಾಧ್ಯವಾಗದವರಿಗೆ ಈ ಹೊಸ ಸಮಯವು ಬಹಳ ಸಹಕಾರಿಯಾಗಲಿದೆ.
ಯಾವುದೇ ಪಡಿತರ ಚೀಟಿದಾರರು ಆಹಾರ ಧಾನ್ಯಗಳಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪಡಿತರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಯುಕ್ತರು (Commissioner) ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಆದ್ದರಿಂದ, ಪಡಿತರ ಚೀಟಿದಾರರು ಜುಲೈ ತಿಂಗಳ ಅಂತ್ಯದವರೆಗೆ ಈ ವಿಸ್ತರಿಸಿದ ಸಮಯದ ಸದುಪಯೋಗ ಪಡಿಸಿಕೊಂಡು ತಮ್ಮ ಪಾಲಿನ ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ